ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ವೀರ್‌ ಸೇಠ್‌ ಪ್ರಕರಣಕ್ಕೆ ವಿಭಿನ್ನ ತಿರುವು; ಐವರು ನ್ಯಾಯಾಂಗ ಬಂಧನಕ್ಕೆ

ದಾಖಲಾತಿಗಳ ಪರಿಶೀಲನೆಯಲ್ಲಿ ವಿಶೇಷ ತಂಡ; ಬೇರೆ ಬೇರೆ ಆಯಾಮದಲ್ಲಿ ತನಿಖೆ
Last Updated 23 ನವೆಂಬರ್ 2019, 10:23 IST
ಅಕ್ಷರ ಗಾತ್ರ

ಮೈಸೂರು: ಶಾಸಕ ತನ್ವೀರ್ ಸೇಠ್‌ ಹತ್ಯೆ ಯತ್ನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವಿಚಾರಣೆಯ ಆಳಕ್ಕಿಳಿದಷ್ಟು ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗುತ್ತಿವೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಫರ್ಹಾನ್ ಪಾಷಾ ಪೊಲೀಸರ ವಶದಲ್ಲಿಯೇ ಇದ್ದು, ಸತತ ವಿಚಾರಣೆಗೊಳಪಟ್ಟಿದ್ದಾನೆ. ವಿಭಿನ್ನ ಆಯಾಮದಲ್ಲಿ ತನಿಖೆ ನಡೆದಿದ್ದು, ಸ್ಫೋಟಕ ಮಾಹಿತಿ ಬೆಳಕಿಗೆ ಬರುತ್ತಿವೆ ಎಂಬುದು ಗೊತ್ತಾಗಿದೆ.

ಆರೋಪಿ ಫರ್ಹಾನ್ ಪಾಷಾ ನೀಡಿದ ಸುಳಿವಿನ ಮೇರೆಗೆ ಅಕ್ರಂ, ಅಬೀದ್ ಪಾಷಾ, ನೂರ್ ಖಾನ್, ಮುಜೀಬ್, ಮುಜಾಮಿಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಸೈದ್ಧಾಂತಿಕವಾಗಿ ವಿಭಿನ್ನ ನಿಲುವು ಹೊಂದಿದ್ದ, ಹಿಂದೂಗಳ ಪರ ಹೆಚ್ಚು ಒಲವನ್ನು ತೋರುತ್ತಿದ್ದ ತನ್ವೀರ್‌ ಸೇಠ್‌ ಎನ್‌.ಆರ್.ಕ್ಷೇತ್ರದಲ್ಲಿ ಪ್ರಭಾವಿಯಾಗಿದ್ದರು. ದಿನ ಕಳೆದಂತೆ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದರು. ಇದನ್ನು ಸಹಿಸದವರು, ಭವಿಷ್ಯದಲ್ಲಿ ರಾಜಕೀಯ ಕಷ್ಟಸಾಧ್ಯ ಎಂಬುದನ್ನು ಅರಿತೇ ಹತ್ಯೆಯ ಹುನ್ನಾರ ನಡೆಸಿದ್ದರು. ಇದಕ್ಕಾಗಿ ತಂಡವೊಂದನ್ನು ರಚಿಸಿಕೊಂಡಿದ್ದರು’ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.

ತನ್ವೀರ್ ಹತ್ಯೆಗಾಗಿ ಆರೋಪಿ ಹಲವೆಡೆ ಯತ್ನಿಸಿದ್ದ. ತರಬೇತಿಯನ್ನು ಪಡೆದಿದ್ದ. ಈಚೆಗೆ ಟಿಪ್ಪು ಜಯಂತಿ ಪರ ಮುಡಾ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲೂ ಫರ್ಹಾನ್ ಹಾಜರಿದ್ದ. ಬಂಧಿತರ ಪೈಕಿ ಅಬೀದ್ ಪಾಷಾ ಎಂಬಾತ, ಆರ್‌ಎಸ್‌ಎಸ್‌ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಹತ್ಯೆಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ.

ಪ್ರಮುಖ ಆರೋಪಿ ಫರ್ಹಾನ್ ಪಾಷಾನ ಮೊಬೈಲ್ ಕರೆಗಳ ಜಾಡು ಹಿಡಿದು, ವಿಶೇಷ ತಂಡ ತನಿಖೆ ಕೈಗೊಂಡಿದ್ದು, ಪಾಷಾನಿಗೆ ಪದೇ ಪದೇ ಫೋನ್ ಕರೆ ಮಾಡಿದ್ದ ಹಾಗೂ ಹೆಚ್ಚಿನ ಸಮಯ ಮಾತನಾಡಿರುವವರ ಸಂಖ್ಯೆ ಪತ್ತೆ ಹಚ್ಚಿ, ಅನುಮಾನ ಬಂದವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಬಿಜೆಪಿ ಮುಖಂಡನಿಗೆ ಪೊಲೀಸ್ ಭದ್ರತೆ

ಎನ್‌.ಆರ್‌.ಕ್ಷೇತ್ರ ವ್ಯಾಪ್ತಿಯ ಕಲ್ಯಾಣಗಿರಿಯ ನಿವಾಸಿ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್‌.ಜಿ.ಗಿರಿಧರ್‌ಗೆ ನಗರ ಪೊಲೀಸರು ಗನ್‌ಮ್ಯಾನ್‌ ಭದ್ರತೆ ನೀಡಿದ್ದಾರೆ. ಇದು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ತನ್ವೀರ್‌ ಹತ್ಯೆ ಯತ್ನ ನಡೆಸಿದ ಆರೋಪಿಗಳು, ಗಿರಿಧರ್ ಹತ್ಯೆಗೂ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸ್ಫೋಟಕ ಮಾಹಿತಿ ಬಹಿರಂಗಗೊಂಡ ಬೆನ್ನಿಗೆ ನಗರ ಪೊಲೀಸರು ಮೂರು ದಿನದ ಹಿಂದೆಯೇ ಬಿಜೆಪಿ ಮುಖಂಡನಿಗೆ ಭದ್ರತೆ ಒದಗಿಸಿದ್ದಾರೆ.

‘ಎರಡೂವರೆ ದಶಕದಿಂದಲೂ ಹಿಂದೂ ಪರಿವಾರದೊಟ್ಟಿಗೆ ಗುರುತಿಸಿಕೊಂಡಿರುವೆ. ಯಾವೊಬ್ಬ ಹಿಂದೂವಿಗೆ ಸಂಕಷ್ಟ ಎದುರಾದರೂ ಮುಂಚೂಣಿಯಲ್ಲಿ ನಾನೇ ನಿಲ್ಲುತ್ತಿದ್ದೆ. ಆರಂಭದಲ್ಲಿ ಬಜರಂಗ ದಳದ ಸಂಚಾಲಕನಿದ್ದೆ. ನಂತರ ವಿಎಚ್‌ಪಿ ಪ್ರಖಂಡ ಅಧ್ಯಕ್ಷನಿದ್ದೆ. ಹಿಂದೂ ಜಾಗರಣ ವೇದಿಕೆಯ ಸಂಚಾಲಕನಾಗಿಯೂ ಕೆಲಸ ಮಾಡಿದ್ದೆ’ ಎಂದು ಗಿರಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಶಕದ ಹಿಂದೆ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲ ನಿರ್ಮಿಸಲಾಗಿದೆ. ದೇಗುಲದಲ್ಲಿ ಗಂಟೆ ಹೊಡೆಯಬಾರದು, ಗೋವಿಂದ ಎಂದು ಕೂಗಬಾರದು ಎಂದು 25ಕ್ಕೂ ಹೆಚ್ಚು ಮುಸ್ಲಿಮರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ನಾನೂ ಕೆಚ್ಚೆದೆಯಿಂದ ಹೋರಾಟ ನಡೆಸಿರುವೆ.’

‘ಏಳೆಂಟು ವರ್ಷದ ಹಿಂದೆಯೇ ಹಲವು ಕಮಿಷನರ್, ಡಿಸಿಪಿಗಳು ನನ್ನನ್ನು ಕರೆಸಿ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು. ಅಧಿಕೃತವಾಗಿ ನೋಟಿಸ್ ಸಹ ನೀಡಿದ್ದಾರೆ. ಒಮ್ಮೆ ಗನ್‌ಮ್ಯಾನ್‌ ಸಹ ನಿಯೋಜಿಸಿದ್ದರು. ಆದರೆ ಭದ್ರತೆಗಾಗಿ ಆತ ಬರಲಿಲ್ಲ. ಈ ಬಾರಿ ಏಕಾಏಕಿ ಭದ್ರತಾ ಸಿಬ್ಬಂದಿ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT