ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಾಮುಖ್ಯತೆ ಇಲ್ಲ: ಚೀನಾ

ಮೋದಿ– ಷಿ ಜಿನ್‌ಪಿಂಗ್‌ ನಡುವೆ ಅನೌಪಚಾರಿಕ ಮಾತುಕತೆ
Last Updated 23 ಏಪ್ರಿಲ್ 2018, 19:37 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದ ಪ್ರಮುಖ ವಾಣಿಜ್ಯ ನಗರ ವೂಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಇದೇ 27 ಮತ್ತು 28ರಂದು ಅನೌಪಚಾರಿಕ ಮಾತುಕತೆ ನಡೆಯಲಿದೆ. ಇದಕ್ಕೆ ಯಾವುದೇ ರಾಜಕೀಯ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಚೀನಾ ತಿಳಿಸಿದೆ.

ಎರಡು ದೇಶಗಳ ಮುಖ್ಯಸ್ಥರ ನಡುವಿನ ಅನೌಪಚಾರಿಕ ಸಭೆಗೆ ಅಂತಿಮ ಹಂತದ ಸಿದ್ಧತೆಗಾಗಿ ಎರಡು ರಾಷ್ಟ್ರಗಳ ಪ್ರಮುಖರು ಸಮಾಲೋಚನೆ ನಡೆಸಿದರು. ನಂತರ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ಇಬ್ಬರು ನಾಯಕರ ಭೇಟಿಗೆ ವೂಹಾನ್ ನಗರವನ್ನು ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ, ‘ಏಕೆ ಈ ಪ್ರಶ್ನೆಗೆ ಇಷ್ಟೊಂದು ಆಸಕ್ತಿ ತೋರುತ್ತಿದ್ದೀರಿ ಎನ್ನುವುದು ನನಗಂತೂ ಗೊತ್ತಿಲ್ಲ. ಮಾತುಕತೆಗೆ ವೂಹಾನ್‌ ಆಯ್ಕೆ ಮಾಡಿರುವುದಕ್ಕೆ ನಮ್ಮ ಬಳಿ ನಿರ್ದಿಷ್ಟ ಕಾರಣಗಳೂ ಇಲ್ಲ’ ಎಂದರು.

‘ಉಭಯ ನಾಯಕರ ಭೇಟಿಗೂ ಮುನ್ನ ಎರಡೂ ದೇಶಗಳ ಸಂಬಂಧವನ್ನು ಬಲಪಡಿಸಿ, ಮಾತುಕತೆಗೆ ಉತ್ತಮ ವಾತಾವರಣ ಸೃಷ್ಟಿಸುವ ಆಶಯ ಹೊಂದಿದ್ದೇವೆ’ ಎಂದರು.

ಕಳೆದ ಬಾರಿ ಈ ಇಬ್ಬರು ನಾಯಕರು ಷಿ ಜಿನ್‌ಪಿಂಗ್‌ ಅವರ ಹುಟ್ಟೂರು ಪಶ್ಚಿಮ ಚೀನಾದ ಷಿಯಾನ್‌ನಲ್ಲಿ ಭೇಟಿಯಾಗಿದ್ದರು. ಈ ಐತಿಹಾಸಿಕ ನಗರ, ಭಾರತ-ಚೀನಾ ನಡುವಿನ ಸಂಬಂಧವನ್ನು ಗಾಢವಾಗಿ ಬೆಸೆಯಲು ವೇದಿಕೆ ಒದಗಿಸಿತ್ತು.

‘ಜಗತ್ತು ಆಲಿಸಲಿದೆ ಸಕಾರಾತ್ಮಕ ಧ್ವನಿ’
ಬಲಾಢ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ‘ಸ್ವರಕ್ಷಣಾ ನೀತಿ’ಯ ವಿರುದ್ಧ ಸಕಾರಾತ್ಮಕ ಧ್ವನಿಯನ್ನು ಜಗತ್ತು ಆಲಿಸಲಿದೆ ಎಂದು ಚೀನಾ ವಿಶ್ವಾಸ ವ್ಯಕ್ತಪಡಿಸಿದೆ. 

ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಉಭಯ ನಾಯಕರು ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಭಾನುವಾರ ಘೋಷಿಸಿದ್ದರು.

ಕಳೆದ 100 ವರ್ಷಗಳಿಂದ ಹೆಚ್ಚುತ್ತಿರುವ ಸ್ವರಕ್ಷಣಾ ನೀತಿಯ ಅಪಾಯ ಮತ್ತು ವಿಶ್ವದಲ್ಲಿನ ಅತಿದೊಡ್ಡ ಬದಲಾವಣೆಗಳ ಬಗ್ಗೆ ಷಿ ಮತ್ತು ಮೋದಿ ಚರ್ಚಿಸಲಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT