ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಮಾತ್ರ ಕಡ್ಡಾಯ ವರ್ಗ: ಸುರೇಶ್‌ ಕುಮಾರ್‌

ವರ್ಗಾವಣೆ ಕೌನ್ಸೆಲಿಂಗ್‌ ಇಂದಿನಿಂದ ಮತ್ತೆ ಆರಂಭ/ ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ
Last Updated 3 ಸೆಪ್ಟೆಂಬರ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ‘ಕಡ್ಡಾಯ ವರ್ಗಾವಣೆ’ ಯನ್ನು ರದ್ದುಪಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಆದರೆ, ಈಗಾಗಲೇ ಆರಂಭಿಸಿ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಕಡ್ಡಾಯ ವರ್ಗಾವಣೆಯೂ ಸೇರಿ ಎಲ್ಲ ಬಗೆಯ ವರ್ಗಾವಣೆಗಳ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಬುಧವಾರದಿಂದ ಪುನರಾರಂಭಿಸಿ, ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

2020–21 ರ ಶೈಕ್ಷಣಿಕ ವರ್ಷದಿಂದಲೇ ಹೊಸ ವರ್ಗಾವಣೆ ನೀತಿ ಜಾರಿ ಬರಲಿದೆ. ಇದಕ್ಕಾಗಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ.

ಏನಿದು ಕಡ್ಡಾಯ ವರ್ಗಾವಣೆ: ರಾಜ್ಯ ಸರ್ಕಾರ 2017 ರಲ್ಲಿ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ’ ಕಾಯ್ದೆ ಜಾರಿಗೆ ತಂದಿತು. ಇದರ ಪ್ರಕಾರ ‘ಎ’ ವಲಯದಲ್ಲಿ ಅಂದರೆ, ನಗರ ಪ್ರದೇಶಗಳಲ್ಲಿ ಸತತ ಹತ್ತಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಗಳಿಗೆ ಕಡ್ಡಾಯವಾಗಿ ವರ್ಗಾವಣೆ ಮಾಡುವ ನೀತಿ ಇದಾಗಿತ್ತು.

ಮಹಾನಗರ, ನಗರ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದವರು ಗ್ರಾಮೀಣ ಪ್ರದೇಶದ ಶಾಲೆಗೆ ವರ್ಗಾಯಿಸುವುದನ್ನು ಕಡ್ಡಾಯಗೊಳಿಸಿದ್ದಕ್ಕೆ ಶಿಕ್ಷಕರ ವಲಯದಿಂದ ವಿರೋಧ ಬಂದಿತ್ತು. ಶೇ 4 ರಷ್ಟು ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆಗೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆಗೊಂಡು ಹೋಗುವ ಶಿಕ್ಷಕರ ವೇತನವೂ ಕಡಿಮೆ ಆಗುತ್ತಿತ್ತು. ನಗರ ಪರಿಹಾರ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಕಡಿತಗೊಳಿಸಲಾಗುತ್ತಿತ್ತು.

ಆದರೆ, ಗ್ರಾಮೀಣ ಪ್ರದೇಶದಲ್ಲೇ ಸುದೀರ್ಘ ವರ್ಷ ಕೆಲಸ ಮಾಡಿದ ಶಿಕ್ಷಕರ ಸಮುದಾಯ, ಕಡ್ಡಾಯ ವರ್ಗಾವಣೆ ನೀತಿ ಮುಂದುವರಿಸಿ, ತಮಗೆ ನ್ಯಾಯ ಕೊಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು.

ಕಗ್ಗಂಟಾದ ಸಮಸ್ಯೆ: ವರ್ಗಾವಣೆ ಸಮಸ್ಯೆ ಕುರಿತು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಇಲಾಖೆ ಅಧಿಕಾರಿಗಳ ಜತೆಗೆ 15 ರಿಂದ 20 ಗಂಟೆ ನಿರಂತರ ಸಭೆ ನಡೆಸಿದರು. ಎಲ್ಲ ಗೊಂದಲಗಳಿಗೆ 2017 ರ ಕಡ್ಡಾಯ ವರ್ಗಾವಣೆ ಕಾಯ್ದೆಯೇ ಕಾರಣ ಎಂಬುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಈ ಕುರಿತು ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸುರೇಶ್‌ ಕುಮಾರ್‌, ‘ಕಾಯ್ದೆ ತಿದ್ದುಪಡಿ ಮಾಡದೇ ಎಲ್ಲರಿಗೂ ನ್ಯಾಯ ಸಿಗುವುದಿಲ್ಲ. ಕಡ್ಡಾಯ ವರ್ಗಾವಣೆ ಹೆಸರಿನಲ್ಲಿ ಶಿಕ್ಷಕರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಬೇರೆ ಇಲಾಖೆಗಳಲ್ಲಿ ಇಲ್ಲದ ಕಡ್ಡಾಯ ವರ್ಗಾವಣೆ ಇಲ್ಲಿ ಏಕೆ. ಅದನ್ನು ಕೈಬಿಡುತ್ತೇವೆ’ ಎಂದು ಹೇಳಿದರು.

‘ಎಲ್ಲ ಶಿಕ್ಷಕರಿಗೂ ನ್ಯಾಯ ಒದಗಿಸುವ ಮತ್ತು ನೆಮ್ಮದಿಯಿಂದ ಕೆಲಸ ಮಾಡಲು ಸಹಾಯಕವಾಗುವ ಶಿಕ್ಷಕರ ಸ್ನೇಹಿ ವರ್ಗಾವಣೆ ನೀತಿಯನ್ನು ಜಾರಿ ಮಾಡುತ್ತೇವೆ. ಆದರೆ, ನಮ್ಮ ಸರ್ಕಾರ ಬರುವುದಕ್ಕೆ ಮೊದಲೇ ಆರಂಭವಾಗಿರುವ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಬೇರೆ ಮಾರ್ಗವಿಲ್ಲ. ಇದರಿಂದ ಹಲವರಿಗೆ ತೊಂದರೆ ಆಗುತ್ತದೆ ಎಂಬುದು ಗೊತ್ತು. ಕಾನೂನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ. ತೊಂದರೆ ಆದವರಿಗೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸುತ್ತೇವೆ’ ಎಂದರು.

ಕಾಯ್ದೆ ತಿದ್ದುಪಡಿಗಾಗಿ ಅಧಿಕಾರಿಗಳು, ಸಂಘಟನೆಗಳು ಮತ್ತು ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನಪರಿಷತ್‌ ಸದಸ್ಯರ ಜತೆಗೆ ಚರ್ಚಿಸುವುದಾಗಿ ಸುರೇಶ್‌ ಕುಮಾರ್‌ ತಿಳಿಸಿದರು.

ಕಣ್ಣೀರಿಟ್ಟು ಸಚಿವರ ಬೆನ್ನಿಗೆ ಬಿದ್ದ ಶಿಕ್ಷಕರು

‘ಪ್ಲೀಸ್‌ ಸರ್‌ ಕಡ್ಡಾಯ ವರ್ಗಾವಣೆ ಮಾಡಬೇಡಿ. ನಮಗೆ ಬಹಳ ಕಷ್ಟವಿದೆ’ ಎಂದು ಶಿಕ್ಷಕಿಯೊಬ್ಬರು ಕಣ್ಣೀರು ಹಾಕುತ್ತಾ ಸಚಿವ ಸುರೇಶ್‌ ಕುಮಾರ್ ಅವರ ಬೆನ್ನಿಗೆ ಬಿದ್ದ ಪ್ರಕರಣ ನಡೆಯಿತು.

ವಿಧಾನಸೌಧದಲ್ಲಿ ಸಭೆ ನಡೆಸುತ್ತಾರೆ ಎಂಬ ಮಾಹಿತಿ ಪಡೆದ ಸಾಕಷ್ಟು ಶಿಕ್ಷಕರು ಶಿಕ್ಷಣ ಸಚಿವರ ಕಚೇರಿ ಬಳಿ ಸೇರಿದ್ದರು. ಇದು ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸ್ಥಳ ಬದಲಿಸಿದರು. ಅಲ್ಲಿಗೂ ಶಿಕ್ಷಕರು ದೌಡಾಯಿಸಿದರು.

ಶಿಕ್ಷಕರ ಜತೆಗೆ ಬಂದಿದ್ದ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್‌ಕುಮಾರ್‌, ಹಲವು ಶಿಕ್ಷಕರ ಕರುಣಾಜನಕ ಸಮಸ್ಯೆಗಳು ಗಮನಕ್ಕೆ ಬಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT