ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಕದ್ದಾಲಿಕೆ: ಎಸಿಪಿ, ಇನ್‌ಸ್ಪೆಕ್ಟರ್‌ಗಳಿಗೆ ಸಿಬಿಐ ನೋಟಿಸ್‌

ಎರಡನೇ ಹಂತದ ವಿಚಾರಣೆ
Last Updated 4 ನವೆಂಬರ್ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ 8 ಎಸಿಪಿಗಳು ಹಾಗೂ 54 ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕೆಲವು ದಿನಗಳ ವಿರಾಮದ ಬಳಿಕ ಪ್ರಕರಣ ಕುರಿತು ತನಿಖೆ ಪುನರಾರಂಭಿಸಿರುವ ಸಿಬಿಐ ಅಧಿಕಾರಿಗಳ ತಂಡ ಮುಂದಿನ ಮೂರು ದಿನ ಸತತವಾಗಿ ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳನ್ನು ಪ್ರಶ್ನಿಸಲಿದೆ. ಈಗ ನಡೆಯುತ್ತಿರುವುದು ಎರಡನೇ ಹಂತದ ವಿಚಾರಣೆ ಎಂದು ಮೂಲಗಳು ತಿಳಿಸಿವೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಪ್ರಭಾವಿ ಮಠಗಳ ಮಠಾಧಿಪತಿಗಳು, ಆಡಳಿತ–ವಿರೋಧ ಪಕ್ಷಗಳ ನಾಯಕರು ಮತ್ತು ಶಾಸಕರ ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣದಲ್ಲಿ 254 ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಸಿಬಿಐ ಅಧಿಕಾರಿಗಳು ಅನೇಕ ತಂಡಗಳಲ್ಲಿ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಮೊದಲು ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳನ್ನು ಸಿಬಿಐ ಪ್ರಶ್ನಿಸಿತ್ತು. ಈಗ ಪ್ರತಿ ಸಂಖ್ಯೆಯನ್ನು ಇಟ್ಟುಕೊಂಡು ಯಾವ ಕಾರಣಕ್ಕೆ, ಯಾವ ಸಂದರ್ಭದಲ್ಲಿ ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎಂದು ಪ್ರಶ್ನಿಸುವ ಸಾಧ್ಯತೆಯಿದೆ. ಇದಾದ ಬಳಿಕ ಈ ವಿವಾದದ ಸುಳಿಗೆ ಸಿಕ್ಕಿರುವ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರನ್ನು ಪುನಃ ವಿಚಾರಣೆಗೆ ಕರೆಯುವ ಸಂಭವವಿದೆ.

ಫೋನ್‌ ಕರೆಗಳ ಕದ್ದಾಲಿಕೆ ನಡೆದ ಸಮಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು.

ಇಂಜಾಜ್‌ ಇಂಟರ್‌ನ್ಯಾಷನಲ್‌ ಕಂಪನಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಿಸ್ಬಾವುದ್ದೀನ್‌ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾದ ಫರಾಜ್‌ ಎಂಬಾತನ ಫೋನ್‌ ಕರೆಗಳ ಕದ್ದಾಲಿಕೆಯಿಂದ ಇಡೀ ಪ್ರಕರಣ ಬಯಲಿಗೆ ಬಂದಿತ್ತು. ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಜೊತೆ ಫರಾಜ್‌ ಮಾತನಾಡಿದ್ದಾನೆ ಎನ್ನಲಾದ ಸಂಭಾಷಣೆ ಟಿ.ವಿಗಳಿಗೆ ಸೋರಿಕೆಯಾಗಿತ್ತು.

ಇದಾದ ಬಳಿಕ ಅಲೋಕ್‌ ಕುಮಾರ್‌ ಅವರ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ಕೆಲವು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಆನಂತರ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT