ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತಪ್ಪಿಸಿಕೊಂಡು ಸಿಕ್ಕಿಬಿದ್ದ ಆರೋಪಿ!

ವಾರ್ಡ್‌ನಿಂದ ಎರಡನೇ ಬಾರಿ ಪರಾರಿಯಾಗಿದ್ದ ಕೋವಿಡ್ 19 ಪೀಡಿತ
Last Updated 1 ಜುಲೈ 2020, 14:14 IST
ಅಕ್ಷರ ಗಾತ್ರ

ಕಾರವಾರ: ನಗರದ ‘ಕ್ರಿಮ್ಸ್’ನ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಕಳವು ಆರೋಪಿ (ಪಿ 12057), ಮಂಗಳವಾರ ತಡರಾತ್ರಿ ಮತ್ತೊಮ್ಮೆ ಪರಾರಿಯಾಗಿದ್ದ. ರಾತ್ರಿಯಿಡೀ ಕಾರ್ಯಾಚರಣೆ ಮಾಡಿದ ಪೊಲೀಸರು, ಕೊನೆಗೂ ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಜೂನ್ 29ರಂದುವಾರ್ಡ್‌ನ ಬಾಗಿಲಿನ ಗಾಜನ್ನು ಸರಿಸಿ ತಪ್ಪಿಸಿಕೊಂಡಿದ್ದ 38 ವರ್ಷದ ಆತನನ್ನು ಪೊಲೀಸರು ಕದ್ರಾ ಬಳಿ ವಶಕ್ಕೆ ಪಡೆದಿದ್ದರು. ಬಳಿಕ ಪುನಃ ಚಿಕಿತ್ಸೆಗೆಂದು ‘ಕ್ರಿಮ್ಸ್’ಗೆ ದಾಖಲಿಸಿದ್ದರು. ಆದರೆ, ಮಂಗಳವಾರ ರಾತ್ರಿ 11.20ರ ಸುಮಾರಿಗೆ ವಾರ್ಡ್‌ನ ಹಿಂಬದಿಯ ಬಾಗಿಲಿನಿಂದ ತಪ್ಪಿಸಿಕೊಂಡ ಆತ, ಆಸ್ಪತ್ರೆಯ ಎದುರು ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳ ನಡುವಿನ ಸಣ್ಣ ಜಾಗದಿಂದ ಹೊರಹೋಗಿದ್ದ.

ಈ ವಿಚಾರ ತಿಳಿದ ಪೊಲೀಸರು, ನಗರದಾದ್ಯಂತ ಹುಡುಕಾಟ ಶುರುಮಾಡಿದ್ದರು. ಕಪ್ಪು ಟಿ ಶರ್ಟ್ ಧರಿಸಿದ್ದ ಆತನನ್ನು ನೋಡಿದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು. ಕೆಲವು ಗಂಟೆಗಳ ಶೋಧ ಕಾರ್ಯದ ಬಳಿಕ ಆರೋಪಿಯು, ಶಿರವಾಡ ರೈಲು ನಿಲ್ದಾಣದ ಬಳಿಯ ಗ್ಯಾಸ್ ಸಿಲಿಂಡರ್ ಗೋದಾಮಿನ ಹತ್ತಿರ ಸಿಕ್ಕಿಬಿದ್ದ.

ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದಾಗ ವಾರ್ಡ್‌ನಲ್ಲಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಆತ ಕದ್ದುಕೊಂಡು ಹೋಗಿದ್ದ. ಬುಧವಾರ ಪುನಃ ತಪ್ಪಿಸಿಕೊಂಡು ಸಿಕ್ಕಿಬಿದ್ದ ಅವನ ಅಂಗಿ, ಪ್ಯಾಂಟ್ ಜೇಬುಗಳನ್ನು ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ತನ್ನ ಚಿಕಿತ್ಸೆಗೆ ನೀಡಿದ್ದ ಗುಳಿಗೆಗಳು ಸಿಕ್ಕಿದವು.

‘ಪುನರಾವರ್ತನೆಯಾದರೆ ಕ್ರಮ’:‘ಚಿಕಿತ್ಸೆ ಪಡೆಯುತ್ತಿರುವ ಆರೋಪಿಯು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುವುದು ಆಸ್ಪತ್ರೆಯ ಆಡಳಿತ ನೋಡಿಕೊಳ್ಳುವವರ ಜವಾಬ್ದಾರಿಯೂ ಆಗಿದೆ. ಈ ರೀತಿಯ ಪ್ರಕರಣಗಳು ಪುನರಾವರ್ತನೆಯಾದರೆ ಪ್ರಕರಣದಲ್ಲಿ ಅವರನ್ನೂ ಸೇರಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿಯ ಮನಸ್ಥಿತಿಯೂ ಸರಿಯಿಲ್ಲ. ವಿಚಾರಣೆಯ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ. ಮಳೆಯ ನಡುವೆಯೂ ಆತನನ್ನು ಪೊಲೀಸ್ ಸಿಬ್ಬಂದಿ ಶ್ರಮಪಟ್ಟು ಪತ್ತೆ ಹಚ್ಚಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT