ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಯಿಂದ ತೊಂದರೆಯೇ ಇಲ್ಲ

ದೇಶದ ಅಭಿವೃದ್ಧಿ, ಭದ್ರತೆಗೆ ಮತದಾರರ ಆದ್ಯತೆ: ಮೋದಿ ಸುನಾಮಿಗೆ 2 ಲಕ್ಷ ಅಂತರದ ಜಯ ನಿಶ್ಚಿತ
Last Updated 3 ಮೇ 2019, 17:22 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧಿಸುವ ಉಮೇದಿನಲ್ಲಿರುವ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಸಂಘಟನಾತ್ಮಕವಾಗಿ ಬಲಿಷ್ಠವಾಗಿರುವ ಬಿಜೆಪಿ ಈ ಬಾರಿ ಅತಿಹೆಚ್ಚು ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವನ್ನು ಹೊಂದಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ತಾರಾ ಪ್ರಚಾರಕರು ನಳಿನ್‌ ಪರ ಪ್ರಚಾರ ನಡೆಸಿದ್ದಾರೆ. ಈ ಬಾರಿಯೂ ಜಯ ಸಾಧಿಸುವ ಉತ್ಸಾಹದಲ್ಲಿರುವ ನಳಿನ್‌, ತಾವು ಮಾಡಿರುವ ಅಭಿವೃದ್ಧಿ ಕಾರ್ಯ, ಮುಂದೆ ಮಾಡಲಿರುವ ಕೆಲಸಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಸತತ ಮೂರನೇ ಬಾರಿಗೆ ಸ್ಪರ್ಧೆ ಮಾಡುತ್ತಿದ್ದೀರಿ. ಕ್ಷೇತ್ರದಲ್ಲಿ ನಿಮ್ಮ ಪರವಾಗಿ ಅಲೆ ಕಾಣುತ್ತಿದೆಯೇ?

ಪ್ರಧಾನಿ ನರೇಂದ್ರ ಮೋದಿ ನೇತೃ ತ್ವದ ಕೇಂದ್ರ ಸರ್ಕಾರದ ಕೆಲಸಗ ಳನ್ನು ಜನರು ಮೆಚ್ಚುತ್ತಿದ್ದಾರೆ. ದೇಶದೆಲ್ಲೆಡೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಇಚ್ಛೆ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಮೋದಿ ಅಲೆ ಯಲ್ಲ, ಸುನಾಮಿ ಇದೆ. ಕಳೆದ ಎರಡು ಚುನಾವಣೆಗಳಿಗಿಂತ ಹೆಚ್ಚಿನ ಅಂತರ ಅಂದರೆ 2 ಲಕ್ಷ ಮತಗಳಿಂದ ಈ ಬಾರಿ ಗೆಲುವು ಸಾಧಿಸುವುದು ನಿಶ್ಚಿತ.

ಈ ಬಾರಿಯ ಪ್ರಚಾರದಲ್ಲಿ ತಾವು ಪ್ರಾಮುಖ್ಯತೆ ನೀಡುತ್ತಿರುವ ಅಂಶಗಳು ಯಾವುವು?

ಕಳೆದ ಐದು ವರ್ಷಗಳಲ್ಲಿ ನಾನು ಮಾಡಿರುವ ಕೆಲಸ ಕಾರ್ಯಗಳು, ಒಳ್ಳೆಯ ಆಡಳಿತವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇನೆ. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅತ್ಯುನ್ನತ ಕಾರ್ಯ ಮಾಡಿದ್ದಾರೆ. ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿಯೂ ಸಾಕಷ್ಟು ಯೋಜನೆಗಳು ಕಾರ್ಯಗತವಾಗಿವೆ. ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರವಾದ, ದೇಶದ ಹಿತಕ್ಕೆ ಸಂಬಂಧಿಸಿದ ವಿಷಯಗಳೇ ಪ್ರಮುಖವಾಗಿದ್ದು, ದೇಶದ ಹಿತ ಕಾಪಾಡಲು ಮತದಾರರು ಬದ್ಧರಾಗಿದ್ದು, ಬಿಜೆಪಿಗೆ ಮತ ನೀಡಲಿದ್ದಾರೆ.

ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿರುವುದು ಚುನಾವಣೆಯಲ್ಲಿ ಪ್ರಭಾವ ಬೀರಲಿದೆಯೇ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌, ಸಿಪಿಎಂ ಪಕ್ಷಗಳು ಎಲ್ಲಿವೆ? ಕಳೆದ ಹಲವು ವರ್ಷಗಳಿಂದ ಅವರು ಒಟ್ಟಾಗಿಯೇ ಚುನಾವಣೆ ಎದುರಿಸುತ್ತಿದ್ದಾರೆ. ಈ ಬಾರಿಯೂ ಯಾವುದೇ ತೊಂದರೆ ಇಲ್ಲ. ಬದಲಾಗಿ ಬಿಜೆಪಿಗೆ ಮತ್ತಷ್ಟು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಮೈತ್ರಿಕೂಟದ ಪರಿಣಾಮ ಕ್ಷೇತ್ರದಲ್ಲಿ ಆಗುವುದಿಲ್ಲ. ದಕ್ಷಿಣ ಕನ್ನಡದ ಮತದಾರರು ಬಿಜೆಪಿ ಹಾಗೂ ಮೋದಿ ಅವರಿಗೆ ಮತ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ.

ಪ್ರಚಾರದಲ್ಲಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ?

ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ಇದೆ. ಈಗಾಗಲೇ 3–4 ಸುತ್ತಿನ ಪ್ರಚಾರ ಮುಗಿಸಿದ್ದೇನೆ. ನಾನು ಭೇಟಿ ಮಾಡಿದ ಶೇ 99 ರಷ್ಟು ಜನರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಇದೇ 18ರಂದು ನಡೆಯುವ ಮತದಾನದಲ್ಲಿ ಜನರು ಬಿಜೆಪಿಗೆ ಮತ ನೀಡಲಿದ್ದಾರೆ.

ಯುವ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆಯಲ್ಲ? ಇದು ಪರಿಣಾಮ ಬೀರಬಹುದೇ?

ನಾನು ಕೂಡ ಯುವಕನೇ. ಚುನಾವಣೆಯಲ್ಲಿ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ. ಮತದಾರರು, ಅದರಲ್ಲೂ ಯುವ ಮತದಾರರು ಕ್ಷೇತ್ರದ ಅಭಿವೃದ್ಧಿ ಹಾಗೂ ದೇಶದ ಹಿತಕ್ಕೆ ಆದ್ಯತೆ ನೀಡುತ್ತಾರೆ. ಅದಾಗ್ಯೂ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕತ್ವವನ್ನು ನೋಡಿ ಮತ ಹಾಕುತ್ತಾರೆ. ಹೀಗಾಗಿ ಬಿಜೆಪಿ ಜಯ ಖಚಿತ.

ಕಾಂಗ್ರೆಸ್ ಬದಲಾವಣೆಗಾಗಿ ಮತ ನೀಡುವಂತೆ ಕೇಳುತ್ತಿದೆಯಲ್ಲ?

ಕಾಂಗ್ರೆಸ್ಸಿಗರು ಇದುವರೆಗೆ ಮಾಡಿದ್ದಾದರೂ ಏನು?

ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪರಿವರ್ತನೆ ತಂದಿರುವ ಮೋದಿ ಹಾಗೂ ಬಿಜೆಪಿಗೆ ಮತದಾರರು ಮನ್ನಣೆ ನೀಡಲಿದ್ದಾರೆ.

ಈ ಬಾರಿ ಆಯ್ಕೆಯಾದಲ್ಲಿ, ಮುಂದಿನ ಯೋಜನೆಗಳು ಏನು?

ಈಗಾಗಲೇ ಕ್ಷೇತ್ರಕ್ಕೆ ₹ 16,500 ಕೋಟಿ ಅನುದಾನವನ್ನು ತರಲಾಗಿದ್ದು, ಕಾಮಗಾರಿ ಆರಂಭವಾಗಿವೆ. ಕುಳಾಯಿ ಜೆಟ್ಟಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ.

ಕರಾವಳಿ ಕಾವಲು ಪಡೆಯ ತರಬೇತಿ ಕೇಂದ್ರ, ತೆಂಗಿನ ಪಾರ್ಕ್‌, ಕೆಐಒಸಿಲ್‌ನಲ್ಲಿ ಡಿಐ ಪೈಪ್‌ ಉತ್ಪಾದನಾ ಘಟಕ, ಕುಲಶೇಖರ–ಕಾರ್ಕಳ ರಾಷ್ಟ್ರೀಯ ಹೆದ್ದಾರಿ, ಭಾರತಮಾಲಾ ಯೋಜನೆಯಡಿ ಮೂಲ್ಕಿ–ಬಿ.ಸಿ. ರೋಡ್– ತೊಕ್ಕೊಟ್ಟು ರಿಂಗ್‌ ರಸ್ತೆ ಕಾಮಗಾರಿಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT