ಶುಕ್ರವಾರ, ಡಿಸೆಂಬರ್ 6, 2019
21 °C

ಕಳ್ಳತನ ಮಾಡಿ ಹೊಸಮನೆಗೆ ಫೌಂಡೇಶನ್: ಮೇಲ್ಛಾವಣಿ ಹಾಕಿಸುವಷ್ಟರಲ್ಲಿ ಅರೆಸ್ಟ್ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲೊಬ್ಬ ಐನಾತಿ ಕಳ್ಳ ಇದ್ದಾನೆ. ಆತ ಹಲವು ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದಾನೆ. ಕಳವು ಮಾಡಿದ ಹಣದಲ್ಲಿ ಹೊಸ ಮನೆ ಕಟ್ಟಲು  ಫೌಂಡೇಶನ್ ಹಾಕಿದ್ದಾನೆ. ಮೇಲ್ಛಾವಣಿ ಹಾಕಿಸುವಷ್ಟರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆತ ಯಾರು ಎಲ್ಲಿ ಕಳ್ಳತನ ಮಾಡುತ್ತಿದ್ದ ವಿವರ ಇಲ್ಲಿದೆ, ಆರೋಪಿ ಕಿತ್ತನಹಳ್ಳಿ ಸಂತೋಷ ಅಲಿಯಾಸ್ ಎಮ್ಮೆ(32) ಮನೆಗಳ ಬೀಗ ಮುರಿದು ಕಳವು ಮಾಡುವುದು, ಕದ್ದ ಚಿನ್ನಾಭರಣಗಳನ್ನು ಗಿರವಿ ಅಂಗಡಿಗಳಲ್ಲಿ ಇಟ್ಟು ಎಷ್ಟು ಸಾಧ್ಯವೋ ಅಷ್ಟು ಹಣ ಪಡೆಯುವುದು.

ಮೊದಲೆಲ್ಲಾ ಕಳ್ಳತನ ಮಾಡಿದ ಹಣವನ್ನು ತೆಗೆದುಕೊಂಡು ಖರ್ಚು ಮಾಡುತ್ತಿದ್ದ. ಇತ್ತೀಚೆಗೆ ಸಂತೋಷ ಮದುವೆಯಾಗಿದ್ದ. ಕಳ್ಳತನದ ಪ್ರಕರಣದಲ್ಲಿ ಜೈಲಿಗೂ ಹೋಗಿದ್ದ. ಜೈಲಿನಿಂದ ಬಂದ ತಕ್ಷಣ ಮತ್ತೆ ಕಳ್ಳತನ ಮಾಡಿದ್ದ. ಈ ಬಾರಿ ಕದ್ದ ಹಣವನ್ನು ವ್ಯರ್ಥ ಮಾಡದೆ, ತನ್ನ ಗ್ರಾಮದ ಖಾಲಿ ನಿವೇಶನದಲ್ಲಿ ಮನೆ ಕಟ್ಟಲು ಫೌಂಡೇಶನ್ ಹಾಕಿಸಿದ. ಆ ನಂತರ ಕಳ್ಳತನದ ಹಣದಲ್ಲಿಯೇ ಗೋಡೆಗಳನ್ನೂ ಕಟ್ಟಿಸಿದ್ದಾನೆ. ಇನ್ನೇನೋ ಮೇಲ್ಛಾವಣಿ ಹಾಕಿಸಬೇಕು ಅನ್ನುವಷ್ಟರಲ್ಲಿ ತಲಘಟ್ಟಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈಗ ಮನೆ ಅರ್ಧಕ್ಕೆ ನಿಂತಿದೆ.

ಸಂತೋಷ ಅಲಿಯಾಸ್ ಎಮ್ಮೆ (32) ಈತನ ಎಲ್ಲಿ ವಾಸವಿರುತ್ತಾನೆ ಎಂಬುದು ಗೊತ್ತಿಲ್ಲ. ಆದರೆ, ಮಾಚೋಹಳ್ಳಿ ಸಮೀಪ ಕಿತ್ತನಹಳ್ಳಿ ಈತ ಹುಟ್ಟಿದ ಊರು. ಈತನ ಅಪ್ಪ ಅಮ್ಮ ಅದೇ ಊರಿನಲ್ಲಿ ವಾಸವಿದ್ದಾರೆ. ಈತನ ಹೆಂಡತಿ ಮಕ್ಕಳು ನಗರದಲ್ಲಿ ವಾಸವಿದ್ದಾರೆ. ಅಲ್ಲಿಯೇ ಮನೆ ಕಟ್ಟಿಸಲು ಆರಂಭಿಸಿದ್ದಾನೆ. 

ಕಬ್ಬಿಣದ ಸಲಾಕೆ ಸಿಕ್ಕರೆ ಸಾಕು ಬೀಗ ಉಡೀಸ್

ಈತನ ಕೆಲಸವೇ ಬೀಗ ಮುರಿದು ಕಳ್ಳತನ ಮಾಡುವುದು. ಕಳ್ಳತನ ಮಾಡುವ ರೀತಿ ಓದಿದರೆ ನಿಮಗೆ ಆಶ್ಚರ್ಯವಾಗುತ್ತೆ. ಒಂದು ಪ್ರದೇಶದಲ್ಲಿ ಈತ ಸುತ್ತು ಹೊಡೆದರೆ ಸಾಕು ಆ ಏರಿಯಾದಲ್ಲಿ ಎರಡು ಮನೆಗಳಲ್ಲಿ ಬೀಗ ಮುರಿದು ಕಳ್ಳತನವಾಗಿರುತ್ತೆ. ಒಂದೇ ರಾತ್ರಿಯಲ್ಲಿ ಕೃತ್ಯ ಎಸಗುವ ಈತ ಯಾರನ್ನೂ ಜೊತೆಗೆ ಸೇರಿಸಿಕೊಳ್ಳುವುದಿಲ್ಲ. ತಾನೊಬ್ಬನೇ ಕಳ್ಳತನ ಮಾಡುತ್ತಾನೆ. ಈತನ ಕೈಯಲ್ಲಿ ಒಂದು ಅಡಿ ಉದ್ದದ ಕಬ್ಬಿಣದ ಸಲಾಕೆ ಸಿಕ್ಕಿದರೆ ಸಾಕು. ಅದೇ ಈತನ ಆಯುಧ. ಇಷ್ಟರಲ್ಲಿಯೇ ಬೀಗ ಮುರಿದು ಕೃತ್ಯ ಮುಗಿಸುತ್ತಾನೆ.

ಈತ ರಾತ್ರಿ 8 ಗಂಟೆಗೆ ಒಂದು ಸುತ್ತು ಬರುತ್ತಾನೆ. ಯಾವ ಮನೆ ಬೀಗ ಹಾಕಿರುತ್ತಾರೋ ಆ ಮನೆಗಳನ್ನೇ ಟಾರ್ಗೆಟ್ ಮಾಡುತ್ತಾನೆ. ಬೀಗ ಹಾಕಿದ ಮನೆಗಳನ್ನು ಗುರುತು ಮಾಡಿಕೊಳ್ಳುವ ಈತ ಮತ್ತೆ ರಾತ್ರಿ 11 ಗಂಟೆಗೆ ಮತ್ತೆ ಅದೇ ರಸ್ತೆಗೆ ಹೋಗುತ್ತಾನೆ. ಆಗಲೂ ಮನೆ ಬೀಗ ಹಾಕಿದ್ದು, ಮನೆಯಲ್ಲಿ ಬೆಳಕು ಕಾಣಿಸದಿದ್ದರೆ, 12.30ಕ್ಕೆ ಮೂರನೇ ಸುತ್ತು ಬರುತ್ತಾನೆ. ಆಗಲೂ ಮನೆಯಲ್ಲಿ ಯಾರೂ ಇರದೆ, ಬೀಗ ಹಾಕಿದ್ದರೆ ಆ ಮನೆಯ ಬೀಗ ಮುರಿದು ಮನೆಯಲ್ಲಿರುವ ಚಿನ್ನಾಭರಣ ದೋಚಿ ಬ್ಯಾಗಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಾನೆ. ನಂತರ ಕಳ್ಳತನದ ಮಾಲುಗಳಲ್ಲಿ ಚಿನ್ನದ ಸರ ಉಂಗುರಗಳಾದರೆ, ಈತನೇ ಹೋಗಿ ಗಿರವಿ ಇಡುತ್ತಾನೆ. ಓಲೆ, ಜುಮುಕಿ, ನೆಕ್ಲೆಸ್‌‌ಗಳಂತಹ ಮಹಿಳೆಯರ ಸಂಬಂಧಿಸಿದ ಆಭರಣಗಳನ್ನು ತನಗೆ ಪರಿಚಯ ಇರುವ ಮಹಿಳೆಯರ ಮೂಲಕ ಗಿರವಿ ಅಂಗಡಿಗಳಲ್ಲಿ ಇಟ್ಟು ಹಣ ಪಡೆಯುತ್ತಾನೆ.

ಇದೇ ರೀತಿ ತಲಘಟ್ಟಪುರ ವ್ಯಾಪ್ತಿಯಲ್ಲಿ ನಿಕೇತನ್ ಹಾಗೂ ಹನುಮಂತಪ್ಪ ಎಂಬುವರ ಮನೆಗಳೂ ಸೇರಿದಂತೆ ಮೂರು ಮನೆಗಳಲ್ಲಿ ಬೀಗ ಮುರಿದು ಕಳವು ಮಾಡಿದ್ದ ಈತ ಎಸಿಪಿ ಮಹಾದೇವ್ ಹಾಗೂ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತೇದಾರ್ ಅವರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ವಶದಿಂದ ಸುಮಾರು 700 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು