ಆದಿವಾಸಿಗಳ ಕಥೆ–ವ್ಯಥೆ: ಪುನರ್ವಸತಿ ಪ್ರದೇಶಗಳ ಕರುಣಾಜನಕ ಕತೆ

ಬುಧವಾರ, ಏಪ್ರಿಲ್ 24, 2019
27 °C

ಆದಿವಾಸಿಗಳ ಕಥೆ–ವ್ಯಥೆ: ಪುನರ್ವಸತಿ ಪ್ರದೇಶಗಳ ಕರುಣಾಜನಕ ಕತೆ

Published:
Updated:

ಮೈಸೂರು: ಖಾಕಿ ಬಟ್ಟೆಯವ್ರ ಕಂಡ್ರೆ ಭಯ. ಅವರು ಬೆದರಿಸಿದ್ದಕ್ಕೆ ಇಲ್ಲಿಗೆ ಬಂದ್ಬಿಟ್ವಿ. ಕಾಡಲ್ಲಿ ಗೆಡ್ಡೆ ಗೆಣಸು ತಿಂದ್ಕೊಂಡು ಹಾಯಾಗಿ ಇದ್ವಿ. ಅಯ್ಯಾ ಆಗಿನ ಜೀವನವೇನು? ಯಾತಕ್ಕೆ ಇಲ್ಲಿಗೆ ಎತ್ತಿ ಹಾಕಿದರೋ? ನಮ್ಮನ್ನು ಎಕ್ಕುಡಿಸಿ ಮಲಗಿಸಿಬಿಟ್ರು, ಹಿಂಸಿಸಿ ಬಿಟ್ರು...

ಎಚ್‌.ಡಿ.ಕೋಟೆ ತಾಲ್ಲೂಕಿನ ಸೋನಹಳ್ಳಿ ಹಾಡಿಯ ಮಾರಯ್ಯ ಒಂದೇ ಉಸಿರಿನಲ್ಲಿ ಮಾತು ಮುಗಿಸಿದರು. ವಯಸ್ಸು ಎಷ್ಟೆಂದು ಕೇಳಿದಾಗ ‘ಸುಮಾರು 80’ ಎಂದರು. ಕಾಡಿನಿಂದ ಆಚೆ ಬಂದು ನಾಲ್ಕು ದಶಕಗಳು ಕಳೆದಿವೆಯಾದರೂ ಒಕ್ಕಲೆಬ್ಬಿಸಿದವರ ಮೇಲಿನ ಆಕ್ರೋಶ ತಗ್ಗಿಲ್ಲ. ಅವರಲ್ಲಿದ್ದ ಕೋಪ ಆ ತೀಕ್ಷ್ಣ ನೋಟದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಲ್ಲಿದ್ದ ನೂರಾರು ಆದಿವಾಸಿ ಕುಟುಂಬಗಳು ಇಂದು ಪುನರ್ವಸತಿ ಪ್ರದೇಶಗಳಲ್ಲಿವೆ. ಯಾವುದೇ ಮೂಲಸೌಲಭ್ಯಗಳಿಲ್ಲದೆ ಅವರ ಬದುಕು ಅಡಕತ್ತರಿಯಲ್ಲಿ ಸಿಲುಕಿದೆ.

ಪುನರ್ವಸತಿ ಪ್ರದೇಶಗಳಲ್ಲಿ ವಾಸಿಸುವ ಒಬ್ಬೊಬ್ಬ ರದು ಒಂದೊಂದು ಕರುಣಾಜನಕ ಕತೆ. ಕಾಡಿನ ಅವಲಂಬನೆಯಿಂದ ಹೊರಬಂದಿದ್ದು, ಅವರ ಹತಾಶ, ಅಸಹಾಯಕ ಸ್ಥಿತಿಯನ್ನು ಕೇಳುವವರು ಯಾರೂ ಇಲ್ಲ.

ಇತ್ತೀಚಿನ ದಿನಗಳಲ್ಲಿ ಸ್ವಲ್ಪ ವ್ಯವಸ್ಥಿತವಾಗಿ ಪುನ ರ್ವಸತಿ ನಡೆಯುತ್ತಿದೆಯಾದರೂ, ದಶಕಗಳ ಹಿಂದೆ ಕಾಡಿನಿಂದ ಬಲವಂತವಾಗಿ ನಾಡಿಗೆ ಬಂದು ಬಿದ್ದವರ ಪರಿಸ್ಥಿತಿ ಶೋಚನೀಯವಾಗಿ ಮುಂದುವರಿದಿದೆ. 1970–73ರ ಅವಧಿಯಲ್ಲಿ ಬಂಡೀಪುರ ಅರಣ್ಯ ವ್ಯಾಪ್ತಿಯಿಂದ ಹೊರಕ್ಕೆ ಬಿದ್ದಿದ್ದ ಎಷ್ಟೋ ಕುಟುಂಬಗಳಿಗೆ ಇನ್ನೂ ನ್ಯಾಯ ಲಬಿಸಿಲ್ಲ. ಸರ್ಕಾರದ ಹೊಸ ‘ಪ್ಯಾಕೇಜ್‌’ನಡಿ ಜಮೀನು ಹಂಚಿಕೆಯಾಗಿಲ್ಲ. ಇಂದು ಅಥವಾ ನಾಳೆ ಮುರಿದು ಬೀಳುವ ಸ್ಥಿತಿಯಲ್ಲಿರುವ ಮನೆಗಳಲ್ಲಿ ಅವರ ವಾಸ.

ಹಲವು ಕುಟುಂಬಗಳು ಬೆಳೆದು ದೊಡ್ಡದಾಗಿವೆ. ಮಕ್ಕಳು ದೊಡ್ಡವರಾಗಿ ವಿವಾಹಿತರಾದರೂ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಮನೆ ನಿರ್ಮಿಸಲು ತಾಕತ್ತಿಲ್ಲ. ನಾಲ್ಕೈದು ಕುಟುಂಬಗಳು ಒಂದೇ ಸೂರನ್ನು ಆಶ್ರಯಿಸಬೇಕಾಗಿದೆ. ಮಳೆ, ಚಳಿಯೆನ್ನದೆ ಮನೆಯ ಹೊರಗಡೆಯೇ ಮಲಗುವ ಪರಿಸ್ಥಿತಿ. ಬಹುತೇಕ ಮನೆಗಳಲ್ಲಿ ಶೌಚಾಲಯ, ಸ್ನಾನಗೃಹಗಳಿಲ್ಲ. ಎಲ್ಲದಕ್ಕೂ ಬಯಲನ್ನೇ ಆಶ್ರಯಿಸಬೇಕು. ಪಂಚಾಯಿತಿಯಲ್ಲಿ ಕೇಳಲು ಹೋದರೆ ಒಂದೊಂದು ನೆಪ ಹೇಳಿ ದಬಾಯಿಸಿ ಕಳುಹಿಸುತ್ತಾರೆ.

ಎಚ್‌.ಡಿ.ಕೋಟೆಯ ಮೇಟಿಕುಪ್ಪೆ ಹಾಡಿ, ಸೊಳ್ಳೆಪುರ, ಹುಣಸೂರಿನ ನಾಗಾಪುರ ಪುನರ್ವಸತಿ ಕೇಂದ್ರದ ವಿವಿಧ ಬ್ಲಾಕ್‌ಗಳಲ್ಲಿ ಸುತ್ತಾಡಿದರೆ ನೈಜ ಚಿತ್ರಣ ಕಣ್ಣಮುಂದೆ ಬರುತ್ತದೆ. ಕೆಲವೆಡೆ ಕಾಂಕ್ರೀಟ್‌ ರಸ್ತೆಗಳು, ನೀರಿನ ಟ್ಯಾಂಕ್‌, ವಿದ್ಯುತ್‌ ಕಂಬಗಳನ್ನು ಕಂಡಾಗ ಹೊರನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದೇ ಭಾವಿಸಬೇಕು. ಆದರೆ ಅಲ್ಲಿನ ನಿವಾಸಿಗಳನ್ನು ಮಾತನಾಡಿಸಿದರೆ ಸತ್ಯ ಹೊರಬರುತ್ತದೆ.

 

ಪಟ್ಟಣದ ಜತೆಗೆ ಸಂಪರ್ಕಕ್ಕೆ ಉತ್ತಮ ರಸ್ತೆ, ಸಾರಿಗೆ ಸೌಲಭ್ಯಗಳಿಲ್ಲ. ಆಸ್ಪತ್ರೆಗೆ ಹೋಗಬೇಕಾದರೆ ಹಲವು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಡಿಯ ಜನರನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ. ಆದಿವಾಸಿಗಳು ಕಾಡಿನಲ್ಲಿದ್ದಾಗ ಗಿಡಮೂಲಿಕೆಗಳಿಂದಲೇ ಔಷಧಿ ತಯಾರಿಸಿ ಸೇವಿಸುತ್ತಿದ್ದರು. ಆದರೆ ಇಲ್ಲಿ ಗಿಡಮೂಲಿಕೆಗಳು ಲಭ್ಯವಿಲ್ಲ.

ಜಮೀನು ಎಲ್ಲೋ ಇದೆ: ಸರ್ಕಾರದ ಪ್ಯಾಕೇಜ್‌ನಡಿ ಜಮೀನು ಸಿಕ್ಕಿದವರ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಹಲವರು ಭೂಮಿ ಬಿಟ್ಟು ಹೊರಟುಹೋಗಿದ್ದಾರೆ. ಕೆಲವರಿಗೆ ಕೇವಲ ಕಾಗದದಲ್ಲಿ ಮಾತ್ರ ಭೂಮಿಯಿದೆ. ಅರಣ್ಯದಿಂದ ಹೊರಬಂದು ಹಲವು ವರ್ಷಗಳು ಕಳೆದರೂ ಲಭಿಸಿದ ಭೂಮಿ ಎಲ್ಲಿದೆ ಎಂಬುದು ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಯಾರಿಗೆ ಎಲ್ಲಿ ಭೂಮಿ ಹಂಚಿದ್ದೇವೆ ಎಂಬುದು ಅಧಿಕಾರಿಗಳಿಗೂ ಸರಿಯಾಗಿ ತಿಳಿದಿಲ್ಲ. ಜಮೀನು ಇದ್ದರೂ ಕೃಷಿ ಮಾಡಲು ತಿಳಿದಿಲ್ಲ. ಕೃಷಿಗೆ ಸಂಬಂಧಪಟ್ಟ ಯಾವುದೇ ತರಬೇತಿಯನ್ನೂ ನೀಡಿಲ್ಲ.

ಆಶ್ರಮ ಶಾಲೆಗಳ ಶೋಚನೀಯ ಸ್ಥಿತಿ: ಗಿರಿಜನರ ಮತ್ತು ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಆರಂಭಿಸಿರುವ ಆಶ್ರಮ ಶಾಲೆಗಳು ಗುರಿ ತಪ್ಪಿ ಎತ್ತಲೋ ಹೋಗಿವೆ. ರಾಜ್ಯದಲ್ಲಿ ಒಟ್ಟು 116 ಆಶ್ರಮ ಶಾಲೆಗಳಿದ್ದು, 14,210 ಮಕ್ಕಳು ಇದ್ದಾರೆ. ಸರ್ಕಾರದ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಶಾಲೆಗಳು ಬೆರಳೆಣಿಯೆಷ್ಟು ಮಾತ್ರ.

ಶಿಕ್ಷಕರ ಕೊರತೆ ಸಮಸ್ಯೆಗಂತೂ ಕೊನೆಯಿಲ್ಲ. ಮಕ್ಕಳು ಬಂದ ದಿನ ಶಿಕ್ಷಕರು ಇರುವುದಿಲ್ಲ. ಶಿಕ್ಷಕರು ಇದ್ದಾಗ ಮಕ್ಕಳಿರುವುದಿಲ್ಲ. ಪುನರ್ವಸತಿ ಪ್ರದೇಶಗಳಲ್ಲಿ ವಾಸವಿರುವ ಬಹುತೇಕ ಮಂದಿ ಕೊಡಗಿನಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಾರೆ. ಹಾಗೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ.

ವಿವಿಧ ಕಲ್ಯಾಣ ಕಾರ್ಯಕ್ರಮಗಳ ಹೆಸರಿನಲ್ಲಿ ಬಜೆಟ್‌ನಲ್ಲಿ ದೊಡ್ಡ ಮೊತ್ತ ಮೀಸಲಿಟ್ಟರೂ ದಿಕ್ಕೆಟ್ಟ ಸ್ಥಿತಿಯಲ್ಲಿಯೇ ಇದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬರಲಾಗದೆ, ಹಿಂದಿನ ಸುಂದರ ಜೀವನಕ್ಕೆ ಮರಳಲಾಗದೆ ಶೂನ್ಯದತ್ತ ದೃಷ್ಟಿ ನೆಟ್ಟಿದ್ದಾರೆ. ‘ನಮ್ಮ ಬದುಕು ನಾಶವಾಯಿತು. ನಮ್ಮ ಮಕ್ಕಳು, ಮೊಮ್ಮಕ್ಕಳೂ ನರಕಯಾತನೆ ಅನುಭವಿಸಬೇಕೇ’ ಎಂದು ತಾಯಂದಿರು ಕೇಳುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.

‘ಅಪರಾಧಿಗೆ ಶಿಕ್ಷೆಯಾಗದಿದ್ದರೂ ಸರಿ ನಿರಪರಾಧಿಗೆ ಶಿಕ್ಷೆಯಾಗಕೂಡದು’ ಎಂದು ನ್ಯಾಯ ಸಂಹಿತೆ ಹೇಳುತ್ತದೆ. ಮಾಡದ ತಪ್ಪಿಗೆ ಪುನರ್ವಸತಿ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ‘ಶಿಕ್ಷೆ’ ಅನುಭವಿಸುತ್ತಿರುವ ಆದಿವಾಸಿಗಳಿಗೆ ಈ ನ್ಯಾಯ ಸಂಹಿತೆ ಅನ್ವಯಿಸುವುದಿಲ್ಲವೇ?

ಪುನರ್ವಸತಿಗೆ ಮಾನವೀಯ ಸ್ಪರ್ಶವಿರಲಿ
ಆದಿವಾಸಿಗಳ ಪುನರ್ವಸತಿಗೆ ಸಂಬಂಧಿಸಿದಂತೆ ಎರಡು ವಾದಗಳು ಇವೆ. ಅವರು ಕಾಡಲ್ಲೇ ಇರಲಿ ಎಂದು ಒಂದು ಗುಂಪು ವಾದಿಸಿದರೆ, ಕಾಡಿನಿಂದ ಹೊರಗಿರಬೇಕು ಎಂಬುದು ಇನ್ನೊಂದು ಗುಂಪಿನ ವಾದ. ಇವೆರಡೂ ಸಂಪೂರ್ಣ ತಪ್ಪು ಎಂಬುದು ನಮ್ಮ ಅಭಿಪ್ರಾಯ.

ಅವರು ಗೆಡ್ಡೆ ಗೆಣಸು ತಿಂದುಕೊಂಡು ಕಾಡಲ್ಲೇ ಇರಬೇಕು ಎಂಬುದು ಸರಿಯಲ್ಲ. ವಯಸ್ಸಾದವರು ಕಾಡಲ್ಲೇ ಇದ್ದರೂ ಪರವಾಗಿಲ್ಲ. ಯುವಕರು ಮತ್ತು ಹೊಸ ತಲೆಮಾರಿನ ಮಂದಿ ಮುಖ್ಯವಾಹಿನಿಗೆ ಬರಬೇಕು. ನಮಗೆ ಕಾಡು ಮುಖ್ಯ, ಆದಿವಾಸಿಗಳು ಮುಖ್ಯವಲ್ಲ ಎಂಬ ಭಾವನೆ ವನ್ಯಜೀವಿಗಳ ಪರವಾಗಿರುವವರಲ್ಲಿ ಇದೆ. ಆದರೆ ಕಾಡಿನಷ್ಟೇ ಮನುಷ್ಯ ಜೀವವೂ ಮುಖ್ಯ ಎಂಬ ಭಾವನೆ ಎಲ್ಲರಲ್ಲಿ ಮೂಡಬೇಕು.

ಆದಿವಾಸಿ ಮಕ್ಕಳು, ಯುವಕರನ್ನು ಹೊರಜಗತ್ತಿಗೆ ಪರಿಚಯಿಸುವಾಗ ಅತ್ಯುತ್ತಮ ಯೋಜನೆಯನ್ನು ಸಿದ್ಧಪಡಿಸಬೇಕು. ನಮಗೂ ಬುಡಕಟ್ಟು ಸಮಾಜಕ್ಕೂ ಎಲ್ಲ ವಿಚಾರಗಳಲ್ಲೂ ತುಂಬಾ ಅಂತರ ಇದೆ. ಸ್ಪರ್ಧಾತ್ಮಕ ಜಗತ್ತಿಗೆ ಬೇಗನೇ ತೆರೆದುಕೊಳ್ಳಲು ಅವರಿಗೆ ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು.

ಕಾಡಿನಿಂದ ಹೊರಗೆ ಬಂದವರು ಏನನ್ನೋ ತ್ಯಾಗ ಮಾಡಿ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕೆ ತಕ್ಕುದಾಗಿ ಪರಿಹಾರ, ಪುನರ್ವಸತಿ ನೀಡಬೇಕು. ಕೇವಲ ಹಣ, ಮನೆ, ಜಮೀನು ನೀಡುವುದರಿಂದ ಅದು ಸಾಧ್ಯವಿಲ್ಲ. ಪುನರ್ವಸತಿ ಯೋಜನೆಯಲ್ಲಿ ಮಾನವೀಯ ಸ್ಪರ್ಶವಿರಬೇಕು.

ಬುಡಕಟ್ಟು ಸಮುದಾಯಕ್ಕೆ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಚೆನ್ನಾಗಿವೆ. ಆದರೆ ಅದನ್ನು ಕಾರ್ಯರೂಪಕ್ಕೆ ಇಳಿಸುವ ವ್ಯಕ್ತಿಗಳಲ್ಲಿ ಲೋಪವಿದೆ. ಆದಿವಾಸಿಗಳ ಕುರಿತ ನಮ್ಮ ಮನೋಭಾವ ಬದಲಾಗಬೇಕು. ಆಗ ಪುನರ್ವಸತಿ ಎಂಬುದಕ್ಕೆ ಒಂದು ಅರ್ಥ ಬರುತ್ತದೆ.

–ಕೃಪಾಕರ ಸೇನಾನಿ, ವನ್ಯಜೀವಿ ಛಾಯಾಚಿತ್ರಕಾರರು

ಇನ್ನಷ್ಟು ಸುದ್ದಿಗಳು
ಆದಿವಾಸಿಗಳ ಕಥೆ–ವ್ಯಥೆ: ‘ನಮ್ಮ ಪಾಡಿಗೆ ನಾವಿದ್ದ ದಿನಗಳು ಉಳಿದಿಲ್ಲ’ 
ಆದಿವಾಸಿಗಳ ಕಥೆ–ವ್ಯಥೆ: ಬೇಕಾಗಿರುವುದು ಅನುದಾನವಲ್ಲ, ಪ್ರೀತಿ 
ಆದಿವಾಸಿಗಳ ಕಥೆ–ವ್ಯಥೆ: ಮಾನವೀಯತೆಯ ಕಗ್ಗೊಲೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !