ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೀಜರ್‌’ ತೆರೆಮರೆಯ ಪ್ರೀತಿ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿ ಎಂದರೆ ನಟ, ನಟಿಯರ ಸೌಂದರ್ಯದ ಹೊಳಪು, ಪೋಷಕ ನಟರ ಮಾತಿನ ಝಲಕ್. ಜತೆಗೆ ನಿರ್ಮಾಪಕ ಮತ್ತು ನಿರ್ದೇಶಕರ ಒಕ್ಕಣಿಕೆಯಲ್ಲಿಯೇ ಮುಗಿದುಹೋಗುತ್ತದೆ. ಆದರೆ, ಅಂದು ಸಂಜೆಯ ಪತ್ರಿಕಾಗೋಷ್ಠಿಯಲ್ಲಿ ತಾರೆಯರ ಹೊಳಪಿರಲಿಲ್ಲ. ಪೋಷಕ ನಟರ ಝಲಕ್ಕೂ ಇರಲಿಲ್ಲ. ಅಲ್ಲಿದ್ದವರು ಸಿನಿಮಾ ತೆರೆಮರೆಯಲ್ಲಿ ಕೆಲಸ ಮಾಡುವವರೇ.

ಇಂಥದ್ದೊಂದು ವಿಭಿನ್ನ ಪತ್ರಿಕಾಗೋಷ್ಠಿ ನಡೆಸಿದ್ದು ‘ಸೀಜರ್‌’ ಚಿತ್ರತಂಡ. ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಅಲ್ಲಿ ಮುಖ್ಯ ಆಕರ್ಷಣೆಯಾಗಿದ್ದರು. ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಸಂಕಲನಕಾರ, ಸಂಭಾಷಣೆಕಾರ, ಛಾಯಾಗ್ರಾಹಕ ಎಲ್ಲರೂ ಅಂದು ವೇದಿಕೆಯ ಮೇಲಿದ್ದರು.

‘ಬಿಗ್‌ಬಾಸ್‌ ನಂತರ ಎದುರಿಸುತ್ತಿರುವ ಮೊದಲ ಪತ್ರಿಕಾಗೋಷ್ಠಿ’ ಎಂದೇ ಮಾತಿಗೆ ಆರಂಭಿಸಿದ ಚಂದನ್‌, ‘ಇದು ನಾಲ್ಕು ವರ್ಷಗಳ ಹಿಂದೆಯೇ ನಾನು ಒಪ್ಪಿಕೊಂಡಿರುವ ಚಿತ್ರಕಥೆ. ಆದರೆ, ಆಗಲೇ ಇನ್ನು ಐದು ವರ್ಷಗಳ ನಂತರ ಕನ್ನಡದಲ್ಲಿ ಎಂಥ ಹಾಡುಗಳು ಬರಬಹುದು ಎಂಬುದನ್ನು ಯೋಚಿಸಿ ಟ್ಯೂನ್‌ ಹಾಕಿದ್ದೆವು. ಆದ್ದರಿಂದ ಈ ಚಿತ್ರದ ಹಾಡುಗಳು ಇಂದಿನ ಹಾಡುಗಳಾಗಿಯೇ ನಮಗೆ ಕೇಳಿಸುತ್ತವೆ’ ಎಂದು ಹೇಳಿದರು.

ಈ ಚಿತ್ರದಲ್ಲಿನ ನಾಲ್ಕು ಹಾಡುಗಳಲ್ಲಿ ಎಲ್ಲವನ್ನೂ ಚಂದನ್‌ ಅವರೇ ಹಾಡಿದ್ದಾರೆ. ಮೂರು ಹಾಡುಗಳನ್ನು ಅವರೇ ಬರೆದಿದ್ದಾರೆ. ಇನ್ನೊಂದು ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದಾರೆ. ರವಿಚಂದ್ರನ್‌ ಮತ್ತು ಚಿರಂಜೀವಿ ಸರ್ಜಾ ಅವರ ಮೇಲೆಯೇ ಕಥೆ ಹೋಗುವುದರಿಂದ ಹಾಡುಗಳಿಗೆ ಮಹಿಳಾ ಧ್ವನಿಯ ಅವಶ್ಯಕತೆಯೂ ಬೀಳಲಿಲ್ಲವಂತೆ.

ಮಾರ್ಚ್‌ 29ಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿದೆ.  ಈ ಚಿತ್ರ ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ವಿನಯ್‌ ಕೃಷ್ಣ ಮಾತನಾಡಿ ‘ನಾಲ್ಕೂ ಭಾಷೆಗಳ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರ ಇದು’ ಎಂದರು. ‘ಕಾರ್‌ ಸೀಜಿಂಗ್‌, ಹಣಕಾಸಿನ ವ್ಯವಹಾರವನ್ನೇ ವಸ್ತುವಾಗಿಟ್ಟುಕೊಂಡಿರುವ ಇಂತಹ ಸಿನಿಮಾ ಇದುವರೆಗೆ ಬಂದಿಲ್ಲ’ ಎಂದರು ಸಂಕಲನಕಾರ ಶ್ರೀಕಾಂತ್‌. ರಾಜೇಶ್‌ ಕಟ್ಟ ಮತ್ತು ಆಂಜಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT