ಶನಿವಾರ, ಡಿಸೆಂಬರ್ 7, 2019
25 °C
ಕರ್ಣಂಗೇರಿಗೆ ಕಾಗದ ಪತ್ರಗಳ ಸಮಿತಿ ಭೇಟಿ: ಶಾಸಕ ಯು.ಟಿ.ಖಾದರ್‌ ಬಣ್ಣನೆ

‘ಮೈತ್ರಿ’ ಅವಧಿ ಪರಿಹಾರ: ದೇಶಕ್ಕೇ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ತಾಲ್ಲೂಕಿನ ಕರ್ಣಂಗೇರಿ ಗ್ರಾಮದಲ್ಲಿ 2018ರ ನೆರೆ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳನ್ನು ವಿಧಾನಮಂಡಲದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್‌ ಅವರ ನೇತೃತ್ವದಲ್ಲಿ ಸಮಿತಿ ಸದಸ್ಯರು ಮಂಗಳವಾರ ವೀಕ್ಷಿಸಿದರು.

ಅಧ್ಯಕ್ಷರೂ ಸೇರಿದಂತೆ ಸಮಿತಿಯಲ್ಲಿ 18 ಮಂದಿ ಸದಸ್ಯರು. ಅದರಲ್ಲಿ 6 ಮಂದಿ ಸದಸ್ಯರು ಸಂತ್ರಸ್ತರ ಮನೆಗಳನ್ನು ವೀಕ್ಷಿಸಿದರು. ಕೆಲವು ಮನೆಯ ಒಳಕ್ಕೂ ತೆರಳಿ, ವೀಕ್ಷಣೆ ಮಾಡಿದರು. ಸಮಿತಿ ಸದಸ್ಯರಾದ ಸುನಿಲ್‌ ಬಿಳಿಯನಾಯ್ಕ್‌, ಟಿ.ರಘುಮೂರ್ತಿ, ಎಂ.ಶ್ರೀನಿವಾಸ್‌, ಸಿ.ಎಂ.ಲಿಂಗಪ್ಪ, ಜಯಮ್ಮ ಇದ್ದರು. ಶಾಸಕ ಯು.ಟಿ.ಖಾದರ್‌ ಸಹ ಮನೆಗಳನ್ನು ವೀಕ್ಷಿಸಿದರು.

ಬಳಿಕ ಶಾಸಕ ಯು.ಟಿ.ಖಾದರ್‌ ಮಾತನಾಡಿ, ‘ಕೊಡಗಿನ ಜನರ ನೋವಿಗೆ ಅಂದಿನ ‘ಮೈತ್ರಿ’ ಸರ್ಕಾರ ಸಕಾಲದಲ್ಲಿ ಸ್ಪಂದಿಸಿತ್ತು. ಅಂದು ನಾನು ವಸತಿ ಸಚಿವನಾಗಿದ್ದೆ. ಸಾ.ರಾ.ಮಹೇಶ್‌ ಅವರು ಕೊಡಗು ಉಸ್ತುವಾರಿ ಸಚಿವರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರೂ ತಕ್ಷಣವೇ ಸ್ಪಂದಿಸಿದ್ದರು’ ಎಂದು ಹೇಳಿದರು.

‘ಸಂತ್ರಸ್ತರಿಗೆ ಮನೆ ನಿರ್ಮಾಣವಾಗುವ ತನಕ ಪ್ರತಿ ತಿಂಗಳು ₹ 10 ಸಾವಿರ ಬಾಡಿಗೆ ಹಣ ಪಾವತಿ ಮಾಡಲಾಗಿತ್ತು. ಇದು ದೇಶದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿತ್ತು’ ಎಂದು ಖಾದರ್‌ ಹೇಳಿದರು.

‘ಸಂತ್ರಸ್ತರು ಮನವಿ ಆಲಿಸಿಯೇ ಎರಡು ಮಲಗುವ ಕೋಣೆಯುಳ್ಳ ಮನೆ ನಿರ್ಮಿಸಲು ನಿರ್ಧಾರ ಮಾಡಲಾಗಿತ್ತು. ಅಲ್ಲದೇ ಮೂಲಸೌಲಭ್ಯ ಕಲ್ಪಿಸಲು ₹ 30 ಕೋಟಿ ಹಣವನ್ನು ಅಂದೇ ಬಿಡುಗಡೆ ಮಾಡಲಾಗಿತ್ತು. ವಿಧಾನಸಭೆ ಅಧಿವೇಶನ ವೇಳೆ ಅಂದು ವಿರೋಧ ಪಕ್ಷದ ಸ್ಥಾನದಲ್ಲಿ ಬಿಜೆಪಿ ಸದಸ್ಯರು (ಈಗ ಆಡಳಿತ ಪಕ್ಷದಲ್ಲಿ) ಒಂದೂ ಮನೆಯೂ ನಿರ್ಮಾಣವಾಗಿಲ್ಲ ಎಂದು ಆರೋಪ ಮಾಡುತ್ತಿದ್ದರು. ಅವರ ಆರೋಪ ಸತ್ಯವೋ ಸುಳ್ಳೋ ಎಂಬುದನ್ನು ಪರಿಶೀಲಿಸಲು ಖುದ್ದು ಸ್ಥಳಕ್ಕೆ ಬಂದಿದ್ದೇವೆ’ ಎಂದು ಹೇಳಿದರು.

‘ಇಲ್ಲಿ ಮತ್ತೇನಾದರೂ ಕಂದುಕೊರತೆಗಳು ಇವೆಯೇ ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ’ ಎಂದು ಮಾಹಿತಿ ನೀಡಿದರು.

ಮಾದರಿ ಕಾರ್ಯ: ‘ಕೊಡಗು ನೆರೆಯಿಂದ ತತ್ತರಿಸಿದಾಗ ಸಾಕಷ್ಟು ಪರಿಹಾರ ನೀಡಲಾಯಿತು. ಪ್ರತಿ ಮನೆಗೆ ₹ 9.85 ಲಕ್ಷ ವೆಚ್ಚ ಮಾಡಲಾಯಿತು. ಪ್ರತಿ ತಿಂಗಳು ₹ 10 ಸಾವಿರ ಬಾಡಿಗೆ ನೀಡಲಾಯಿತು. ತಕ್ಷಣದ ಪರಿಹಾರವಾಗಿ ₹ 1 ಲಕ್ಷ ಪರಿಹಾರ ನೀಡಲಾಯಿತು. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ ₹ 50 ಸಾವಿರ ಪರಿಹಾರ ವಿತರಣೆ ಮಾಡಲಾಗಿತ್ತು. ಈ ರೀತಿಯ ಪರಿಹಾರ ಇಡೀ ದೇಶಕ್ಕೆ ಮಾದರಿಯಾಗಿತ್ತು’ ಎಂದು ಖಾದರ್‌ ತಿಳಿಸಿದರು.

ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್‌ ಮಾತನಾಡಿ, ‘ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಸ್ಥಳಕ್ಕೆ ತೆರಳಿ ಮನೆ ವೀಕ್ಷಣೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆಯೇ ಮನೆಗಳನ್ನು ಪರಿಶೀಲನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರ ಯಾವುದೇ ಇರಲಿ ಸಂಕಷ್ಟದಲ್ಲಿ ಇರುವ ಜನರ ಕಣ್ಣೀರು ಒರೆಸಬೇಕು. ಸರ್ಕಾರವೂ ನೈತಿಕವಾಗಿ ಬೆಂಬಲ ನೀಡಬೇಕು’ ಎಂದು ಮಹೇಶ್‌ ಹೇಳಿದರು.

ಪ್ರತಿಕ್ರಿಯಿಸಿ (+)