ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ದೇಹತ್ಯಾಗ ಮಾಡಿರುವ ಶಂಕೆ, ಸ್ಥಳಕ್ಕೆ ಪೊಲೀಸರ ಭೇಟಿ

Last Updated 10 ಜೂನ್ 2020, 11:28 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಸಹಸ್ರಳ್ಳಿ ಗ್ರಾಮದ ಕೊಂಕಣಕೊಪ್ಪದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಮಂಗಳವಾರ ರಾತ್ರಿ ದೇಹತ್ಯಾಗ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕೊಂಕಣಕೊಪ್ಪದ ಶಿವರಾಮ ರಾಮಕೃಷ್ಣ ಹೆಗಡೆ (65) ಮೃತ ವ್ಯಕ್ತಿ. ಸಾಯುವ ಮುನ್ನ ಅವರು ಬರೆದಿಟ್ಟಿರುವ ಪತ್ರ ಲಭ್ಯವಾಗಿದೆ. ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಮುಕ್ತಿಗಾಗಿ ದೇವರ ಬಳಿ ತೆರಳುತ್ತಿದ್ದೇನೆ. ನಾನು ಎಂಬುದು ಯಾವುದೂ ಇಲ್ಲ. ಎಲ್ಲ ಬರೀ ಮಾಯೆ. ನನಗೆ ಇನ್ನು ಹುಟ್ಟು ಸಾವು ಇಲ್ಲ’ ಎಂದು ಪತ್ರದಲ್ಲಿ ಬರೆದಿರುವ ಅವರು, ಜೊತೆಗೆ ಭಗವದ್ಗೀತೆಯ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ. ಮತ್ತೊಂದು ಪುಟದಲ್ಲಿ, ‘ಸೊಪ್ಪಿನ ಬೆಟ್ಟದಿಂದ ನೂರಾರು ಮಾರು ದೂರದಲ್ಲಿ ನಾರಾಯಣ ಗೌಡನ ವಕ್ಕೆರೆ ಹತ್ತಿರ ಅಗ್ನಿಪ್ರವೇಶ’ ಎಂದು ಬರೆದಿಟ್ಟಿದ್ದಾರೆ.

‘ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ, ಇತ್ತೀಚೆಗೆ ರೋಗ ಉಲ್ಬಣಗೊಂಡಿತ್ತು. ಪತ್ನಿ ಕಳೆದ ವರ್ಷ ಮೃತಪಟ್ಟಿದ್ದರು. ತನಗೆ ಬಂದಿರುವ ಕಾಯಿಲೆಯಿಂದ ಕುಟುಂಬದ ಸದಸ್ಯರಿಗೆ ತೊಂದರೆಯಾಗಬಾರದು ಎಂಬ ಭಾವನೆ ಅವರಲ್ಲಿತ್ತು. ವ್ಯಕ್ತಿ ತನ್ನ ಕ್ರಿಯಾಕರ್ಮಗಳನ್ನು ತಾನೇ ಮಾಡಿಕೊಂಡು ಮೃತಪಟ್ಟರೆ, ಮುಕ್ತಿ ಸಿಗುವುದು ಎಂಬ ನಂಬಿಕೆಯನ್ನು ಅವರು ಹೊಂದಿದ್ದರು. ಹೀಗಾಗಿ, ಕಟ್ಟಿಗೆಗಳನ್ನು ಪೇರಿಸಿಟ್ಟು, ಶಾಸ್ತ್ರೋಕ್ತ ಕ್ರಿಯಾಕರ್ಮ ಮಾಡಿ, ಸೀಮೆಎಣ್ಣೆ ಸುರಿದುಕೊಂಡು, ಕಟ್ಟಿಗೆ ರಾಶಿಗೆ ಅವರೇ ಬೆಂಕಿ ಹಚ್ಚಿಕೊಂಡಿರಬಹುದು’ ಎಂದು ಕುಟುಂಬಸ್ಥರು ಅಂದಾಜಿಸಿದ್ದಾರೆ.

ಬುಧವಾರ ಬೆಳಿಗ್ಗೆ ಬೆಟ್ಟದಲ್ಲಿ ಬೂದಿ ರಾಶಿ, ಮೃತ ವ್ಯಕ್ತಿಯ ಬಟ್ಟೆ–ಬರೆ ಕಂಡಾಗ ಈ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಘವೇಂದ್ರ ಶಿವರಾಮ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT