ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರವೇ ದೇಶದಲ್ಲಿ ಸಂಘರ್ಷ ಆಹ್ವಾನಿಸುತ್ತಿದೆ: ಎಂ.ವೀರಪ್ಪ ಮೊಯಿಲಿ ಆರೋಪ

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಆರೋಪ
Last Updated 25 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯಂತಹ (ಎನ್‌ಆರ್‌ಸಿ) ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವೇ ದೇಶದಲ್ಲಿ ಸಂಘರ್ಷ ಆಹ್ವಾನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಇತಿಹಾಸದಲ್ಲಿ ಒಂದು ಧರ್ಮ ಅಥವಾ ಒಂದು ಸಮುದಾಯದ ಜನರನ್ನು ಹೊರಗಿಟ್ಟು ಯಾವುದೇ ಕಾಯ್ದೆಯನ್ನೂ ಮಾಡಿರಲಿಲ್ಲ. ಆದರೆ, ಈಗ ಸಿಎಎ ಮತ್ತು ಎನ್‌ಆರ್‌ಸಿಯಲ್ಲಿ ಅಂತಹ ಅಂಶವನ್ನು ಅಳವಡಿಸುವ ಮೂಲಕ ಕೇಂದ್ರ ಸರ್ಕಾರವೇ ದೇಶದ ಜನರನ್ನು ವಿಭಜಿಸುತ್ತಿದೆ’ ಎಂದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲೇ ಆರಂಭವಾದ ಪ್ರಕ್ರಿಯೆ. ಎನ್‌ಪಿಆರ್‌ ಅನ್ನು ಎನ್‌ಆರ್‌ಸಿ ಜೊತೆ ಜೋಡಿಸುವ ಪ್ರಸ್ತಾವವೇ ಇರಲಿಲ್ಲ. ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಂತಹ ಪ್ರಯತ್ನಕ್ಕೆ ಕೈಹಾಕಿದೆ. ಕೇಂದ್ರ ಗೃಹ ಸಚಿವಾಲಯದ ದಾಖಲೆಗಳೇ ಇದನ್ನು ಖಚಿತಪಡಿಸುತ್ತವೆ. ಇದು ದೇಶದ ಬಹುಪಾಲು ಜನರನ್ನು ಸಂಕಷ್ಟಕ್ಕೆ ತಳ್ಳುವ ಸಂಚು ಎಂದರು.

40 ಬಂಧನ ಕೇಂದ್ರಗಳು:

‘ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ದಾಖಲೆ ಸಲ್ಲಿಸದ ಜನರನ್ನು ಬಂಧನದಲ್ಲಿಡಲು ದೇಶದಾದ್ಯಂತ 40 ಬಂಧನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ನೆಲಮಂಗಲದ ಸಮೀಪದ ಸೊಂಡೆಕೊಪ್ಪದಲ್ಲಿ ಈಗಾಗಲೇ ಬಂಧನ ಕೇಂದ್ರ ಸಿದ್ಧವಾಗಿದೆ’ ಎಂದು ಮೊಯಿಲಿ ಹೇಳಿದರು.

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಅಸ್ಸಾಂ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಮಾತ್ರ ಹಿಂಸಾಚಾರ ನಡೆದಿದೆ. ಗಲಭೆ ಮತ್ತು ಗೋಲಿಬಾರ್‌ ಮೂಲಕ ಸರ್ಕಾರವೇ ಜನರಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿರುವುದಕ್ಕೆ ಇದು ಸಾಕ್ಷಿ ಎಂದು ದೂರಿದರು.

ನ್ಯಾಯಾಂಗ ತನಿಖೆಯೇ ಆಗಲಿ:

‘ಮಂಗಳೂರು ಗೋಲಿಬಾರ್‌ನಲ್ಲಿ ಪೊಲೀಸರು ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವೈಫಲ್ಯ ಮುಚ್ಚಿಹಾಕಲು ಈಗ ಬೇರೆ ಕತೆಗಳನ್ನು ಹೇಳುತ್ತಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ನೇರವಾಗಿ ಗುಂಡಿಕ್ಕಿರುವುದು ವಿಡಿಯೊಗಳಲ್ಲಿದೆ. ಸತ್ತವರ ಮೇಲೂ ಎಫ್‌ಐಆರ್‌ ದಾಖಲಿಸುವ ಮೂಲಕ ಭಾರತೀಯ ದಂಡ ಸಂಹಿತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಘಟನೆಯ ಕುರಿತು ಸಿಐಡಿ ಪೊಲೀಸ್‌ ತನಿಖೆ ನಡೆಸಿದರೆ ಸತ್ಯಾಂಶ ಹೊರಬರುವುದಿಲ್ಲ. ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಪಕ್ಷದ ಮುಖಂಡ ಇಬ್ರಾಹಿಂ ಕೋಡಿಜಾಲ್‌, ಮಹಾನಗರ ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ್‌ ಕೆ. ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT