ಶನಿವಾರ, ಜೂನ್ 25, 2022
24 °C
ಪೊಲೀಸರಿಗೆ ಹುಸಿ ಕರೆ ಮಾಡಿದ್ದ ಮಾಜಿ ಸೈನಿಕ ಬಂಧನ

ಧ್ಯಾನದಲ್ಲಿ ಉಗ್ರರ ಕಂಡು ಕರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತಮಿಳುನಾಡಿನ ರಾಮನಾಥಪುರದಲ್ಲಿ 19 ಉಗ್ರರು ಅವಿತುಕೊಂಡಿದ್ದಾರೆ’ ಎಂದು ಹೇಳಿ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ಆರೋಪದಡಿ ಸುಂದರಮೂರ್ತಿ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸೈನಿಕರಾದ ಸುಂದರಮೂರ್ತಿ, ನಿವೃತ್ತಿ ಬಳಿಕ ನಗರದಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹೊಸಕೋಟೆ ತಾಲ್ಲೂಕಿನ ಆವಲಹಳ್ಳಿಯ ಮುನಿವೆಂಕಟೇಶ್ವರ ಲೇಔಟ್‌ನಲ್ಲಿ ವಾಸವಿದ್ದರು.

‘ಶುಕ್ರವಾರ ಸಂಜೆ 4.42ರ ಸುಮಾರಿಗೆ ಬೆಂಗಳೂರು ನಗರ ಪೊಲೀಸರ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಸುಂದರಮೂರ್ತಿ, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಮಾತನಾಡಿದ್ದರು. ‘ಈಗಾಗಲೇ ಪುಲ್ವಾಮಾ ದಾಳಿ ಆಗಿದೆ. ಶ್ರೀಲಂಕಾದಲ್ಲೂ ಬಾಂಬ್ ಸ್ಫೋಟವಾಗಿದೆ. ದಕ್ಷಿಣ ಭಾರತಕ್ಕೆ 19 ಉಗ್ರರು ನುಸುಳಿದ್ದಾರೆ. ಅವರೆಲ್ಲರೂ ತಮಿಳುನಾಡಿನ ರಾಮನಾಥಪುರದಲ್ಲಿ ಅವಿತುಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ದಾಳಿ ಮಾಡಲು ಉಗ್ರರು ಹೊಂಚು ಹಾಕುತ್ತಿದ್ದು, ಅವರನ್ನು ಹಿಡಿಯಿರಿ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರೆಯಿಂದ ಗಾಬರಿಗೊಂಡ ಸಿಬ್ಬಂದಿ, ಪೊಲೀಸ್ ಕಮಿಷನರ್ ಅವರಿಗೆ ವಿಷಯ ತಿಳಿಸಿದ್ದರು. ಕರೆ ಮಾಡಿದ್ದ ವ್ಯಕ್ತಿಯ ಪತ್ತೆಗಾಗಿ ಸಿಸಿಬಿಯ ಎಸಿಪಿ ಎ.ವಿ. ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆ ತಂಡವೇ ಶುಕ್ರವಾರ ತಡರಾತ್ರಿ ಆರೋಪಿಯ ಮನೆಗೆ ಹೋಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದರು.

‘ಆರೋಪಿ ಸುಂದರಮೂರ್ತಿ, ನಿತ್ಯವೂ ಧ್ಯಾನ ಮಾಡುತ್ತಿದ್ದರು. ಮುಂದಾಗುವ ಘಟನೆಗಳು ಧ್ಯಾನದಲ್ಲಿ ಕಾಣಿಸುತ್ತವೆ ಎಂದು ಹೇಳಿಕೊಳ್ಳುತ್ತಿದ್ದರು. ಶುಕ್ರವಾರ ಧ್ಯಾನ ಮಾಡುತ್ತಿದ್ದಾಗ, ಉಗ್ರರು ದೇಶದೊಳಗೆ ನುಸುಳಿದ್ದ ದೃಶ್ಯವನ್ನು ಕಂಡು ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಈ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ನಾನು ಹಲವು ಬಾರಿ ರಾಮನಾಥಪುರಕ್ಕೆ ಹೋಗಿ ಬಂದಿದ್ದೇನೆ. ಅದೇ ಸ್ಥಳದಲ್ಲಿ ಉಗ್ರರು ಅವಿತುಕೊಂಡು ಕರ್ನಾ
ಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರಗಳಲ್ಲಿ ಬಾಂಬ್‌ ಸ್ಫೋಟಿಸುವ ಬಗ್ಗೆ ಹೊಂಚು ಹಾಕುತ್ತಿದ್ದ ದೃಶ್ಯ ಧ್ಯಾನದಲ್ಲಿ ಕಾಣಿಸಿತ್ತು. ಜನರ ಜೀವ ಉಳಿಸುವುದಕ್ಕಾಗಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶ ನನಗಿರಲಿಲ್ಲ’ ಎಂದು ಆರೋಪಿ ಹೇಳಿಕೆ
ಯಲ್ಲಿ ತಿಳಿಸಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ಈ ಹಿಂದೆಯೂ ಆರೋಪಿ, ಚೆನ್ನೈ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ಬಗ್ಗೆ ಮಾಹಿತಿ ಇದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು. 

ಯುದ್ಧದಲ್ಲಿ ಹುತಾತ್ಮನಾಗಿದ್ದ ಪುತ್ರ

‘ಇಪ್ಪತ್ತು ವರ್ಷ ಸೇನೆಯಲ್ಲಿ ಕೆಲಸ ಮಾಡಿದ್ದ ಸುಂದರಮೂರ್ತಿ, ನಿವೃತ್ತಿ ಬಳಿಕ ಬೆಂಗಳೂರಿಗೆ ಬಂದು ಉಳಿದುಕೊಂಡಿದ್ದರು. ಅವರು ತಮ್ಮಿಬ್ಬರು ಮಕ್ಕಳನ್ನು ಸೈನಿಕರಾಗಿ ಮಾಡಿದ್ದರು. ಒಬ್ಬ ಪುತ್ರ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇನ್ನೊಬ್ಬ ಸದ್ಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸುಂದರಮೂರ್ತಿ ಅವರು ಧ್ಯಾನದಲ್ಲಿ ಕಂಡಿದ್ದನ್ನು ನಿಜವೆಂದು ತಿಳಿದು ಕರೆ ಮಾಡಿದ್ದರು’ ಎಂದು ಹೇಳಿದರು.

ತುರ್ತು ಸಂದೇಶ ಕಳುಹಿಸಿದ್ದ ಡಿಜಿಪಿ

ಸುಂದರಮೂರ್ತಿ ಅವರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದ ವಿಷಯ ನಿಜವೆಂದು ತಿಳಿದಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ‘ಉಗ್ರರು ನುಸುಳಿರುವ ಮಾಹಿತಿ ಇದೆ. ಸೂಕ್ತ ಭದ್ರತೆ ಕೈಗೊಳ್ಳಿ’ ಎಂದು ನೆರೆ ರಾಜ್ಯಗಳಿಗೆ ತುರ್ತು ಸಂದೇಶ ಕಳುಹಿಸಿದ್ದರು. ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು