ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಕೊಳೆ ತೊಳೆಯಲು ಬಳಕೆಯಾಗಲಿದೆ ಬೆಳಕು’

Last Updated 2 ಜೂನ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಮಾನವ ತ್ಯಾಜ್ಯ ಹಾಗೂ ರಾಸಾಯನಿಕ ತ್ಯಾಜ್ಯ ಬೆರೆತು ಕಲುಷಿತಗೊಂಡ ನೀರನ್ನು ಬೆಳಕು ಹಾಯಿಸುವ ಮೂಲಕ ಶುದ್ಧೀಕರಿಸಲು ಸಾಧ್ಯವೇ?

ಖಂಡಿತಾ ಸಾಧ್ಯವಿದೆ ಎನ್ನುತ್ತಾರೆ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಹಿರಿಯ ರಿಸರ್ಚ್‌ ಫೆಲೊ ಪ್ರದೀಪ ಶಾನಭಾಗ. ಮುನ್ನೋಟ ಪುಸ್ತಕ ಮಳಿಗೆಯು ಭಾನುವಾರ ಏರ್ಪಡಿಸಿದ್ದ ‘ಅರಿಮೆ ಮುನ್ನೋಟ’ ಕಾರ್ಯಕ್ರಮದಲ್ಲಿ ಅವರು ಸೂರ್ಯನ ಶಕ್ತಿಯ ಬಳಕೆ ಕುರಿತು ವಿವರಿಸಿದರು.

‘ಬೆಳಕಿನ ಶಕ್ತಿ ಬಳಸಿ ರಾಸಾಯನಿಕ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುವುದನ್ನು ಫೋಟೊ–ಕೆಟಲಿಸಿಸ್‌ ಎನ್ನುತ್ತಾರೆ. ಇದಕ್ಕೆ ಬಳಸುವ ವಸ್ತುವನ್ನು ಫೋಟೊ–ಕೆಟಲಿಸ್ಟ್‌ ಎನ್ನುತ್ತಾರೆ. ಕಲುಷಿತ ನೀರಿಗೆ ಸೂರ್ಯನ ಬೆಳಕನ್ನು ಹಾಯಿಸಿ, ಫೋಟೊ ಕೆಟಲಿಸ್ಟ್‌ ನೆರವಿನಿಂದ ಅದನ್ನುಶುದ್ಧೀಕರಿಸಬಹುದು’ ಎಂದರು.

‘ಒಳಚರಂಡಿಯ ಕೊಳಚೆ ನೀರಿನಲ್ಲಿರುವ ಮಾನವ ತ್ಯಾಜ್ಯವನ್ನು ಬ್ಯಾಕ್ಟೀರಿಯಾಗಳು ಬೇರ್ಪಡಿಸುತ್ತವೆ. ಆದರೆ, ಅದರಲ್ಲಿ ಸೇರಿಕೊಂಡ ರಾಸಾಯನಿಕಗಳನ್ನು ಬೇರ್ಪಡಿಸಲು ಅವುಗಳಿಗೆ ಸಾಧ್ಯವಾಗುವುದಿಲ್ಲ. ಫೊಟೊ–ಕೆಟಲಿಸ್ಟ್‌ ಬಳಸಿ ರಾಸಾಯನಿಕಗಳನ್ನೂ ಬೇರ್ಪಡಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಹಾನಗರಗಳ ತ್ಯಾಜ್ಯ ನೀರನ್ನು ಈ ತಂತ್ರಜ್ಞಾನ ಬಳಸಿ ಶುದ್ಧೀಕರಿಸುವ ದಿನಗಳು ದೂರವಿಲ್ಲ’ ಎಂದರು.

‘ಟೈಟಾನಿಯಂ ಡಯಾಕ್ಸೈಡ್‌ ಎಂಬ ಫೋಟೊ–ಕೆಟಲಿಸ್ಟ್‌ ಸಹಾಯದಿಂದ ನೀರಿನ ಅಣುವನ್ನು ವಿಭಜಿಸಿ ಹಸಿರು ಇಂಧನವಾದ ಜಲಜನಕವನ್ನು ಪಡೆಯಲು ಸಾಧ್ಯವಿದೆ. ಅಕಿರ ಫುಜಿಶಿಮ ಮತ್ತು ಕೆನಿಚಿ ಹೋಂಡಾ ಎಂಬ ವಿಜ್ಞಾನಿಗಳು 1972ರಲ್ಲೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಈ ತಂತ್ರಜ್ಞಾನದ ಪೂರ್ಣ ಪ್ರಮಾಣದ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ’ ಎಂದು ತಿಳಿಸಿದರು.

‘ವಾತಾವರಣದಲ್ಲಿ ಇಂಗಾಲದ ಡಯಾಕ್ಸೈಡ್‌ ಪ್ರಮಾಣ ಹೆಚ್ಚಳದಿಂದ ಉಂಟಾಗುವ ಹಸಿರುಮನೆ ಪರಿಣಾಮ ತಗ್ಗಿಸುವಲ್ಲಿಯೂ ಫೋಟೊ ಕೆಟಲಿಸ್ಟ್‌ಗಳು ನೆರವಿಗೆ ಬರುತ್ತವೆ. ಆರ್ಗ್ಯಾನಿಕ್‌ ರಾಸಾಯನಿಕಗಳ ರೂಪಾಂತರ ಮಾಡುವುದಕ್ಕೂ ಇವು ಬಳಕೆಯಾಗುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT