ಹಾರಂಗಿ ಜಲಾಶಯ ಭರ್ತಿ: ನದಿಗೆ ನೀರು

7

ಹಾರಂಗಿ ಜಲಾಶಯ ಭರ್ತಿ: ನದಿಗೆ ನೀರು

Published:
Updated:
ವಿಟ್ಲ ಸಮೀಪ ತೋಟಗಳಿಗೆ ನೀರು ನುಗ್ಗಿರುವುದು

ಬೆಂಗಳೂರು: ಕಾವೇರಿ ಕಣಿಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು ಶನಿವಾರ ಸಂಜೆ ನದಿಗೆ ನೀರು ಬಿಡಲಾಗಿದೆ.

ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಒಳಹರಿವಿನಲ್ಲಿ 24,300 ಕ್ಯುಸೆಕ್‌ಗೆ ಏರಿಕೆಯಾಗಿದೆ. ನಾಲ್ಕು ಕ್ರಸ್ಟ್‌ಗೇಟ್‌ಗಳ ಮೂಲಕ 1,200 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, 2,854.50 ಅಡಿ ನೀರಿದೆ.

ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಭಾಗಮಂಡಲ ಜಲಾವೃತವಾಗಿದೆ. ತ್ರಿವೇಣಿ ಸಂಗಮದ ಸ್ನಾನಘಟ್ಟದಲ್ಲಿ ಅಪಾರ ಪ್ರಮಾಣ ನೀರು ಸಂಗ್ರಹವಾಗಿದ್ದು ಭಗಂಡೇಶ್ವರ ದೇಗುಲಕ್ಕೆ ತೆರಳಲು ಭಕ್ತರಿಗೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಸೇತುವೆ ಮುಳುಗಡೆ

ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದ್ದು, ಚಿಕ್ಕೋಡಿ ತಾಲ್ಲೂಕಿನ ಎರಡು ಸೇತುವೆಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ಗಡಿಯಲ್ಲಿರುವ ರಾಜಾಪುರ ಬ್ಯಾರೇಜ್‌ನಿಂದ 52,031 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಇದರಿಂದ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಳವಾಗಿದೆ.

ಮುಂಬೈ ಜಲಾವೃತ

ಮುಂಬೈ(ಪಿಟಿಐ): ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮುಂಗಾರು ಮಳೆಗೆ ಮಹಾರಾಷ್ಟ್ರ ಮತ್ತು ಕೊಂಕಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಲ್ಯಾಣ್‌ನ ಖಾಡವಲಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಇಬ್ಬರು ಅಪರಿತ ವ್ಯಕ್ತಿಗಳ ಶವವನ್ನು ವಿಪತ್ತು ನಿರ್ವಹಣಾ ಸಿಬ್ಬಂದಿ ಹೊರ ತಂದಿದ್ದಾರೆ. ಘಾಟ್‌ಕೋಪರ್‌ನಲ್ಲಿ ವಿದ್ಯುತ್‌ ಆಘಾತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮುಂಬೈ, ಠಾಣೆ, ಮಲಾಡ್‌, ಬೊರಿವಿಲಿ, ಪೊವಾಯ್‌, ಭಾಂಡುಪ್‌, ಬದ್ಲಾಪುರ್‌ ಹಾಗೂ ಕಲ್ಯಾಣ್‌ನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. 

ರೈಲು ಸಂಚಾರ ವ್ಯತ್ಯಯ:

ಹಳಿಗಳ ಮೇಲೆ ನೀರು ನಿಂತಿದ್ದರಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕೆಲವು ರೈಲುಗಳಿಗೆ ಬೇರೆ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಯಿತು. ಬೆಳಿಗ್ಗೆ 11.30ರ ನಂತರ ಉಪನಗರ ರೈಲು ಸಂಚಾರ ಸೇವೆ ಸಹಜ ಸ್ಥಿತಿಗೆ ಬಂತು.

 ನಾಗ್ಪುರದಲ್ಲಿ 265 ಮಿ.ಮೀ. ಬಿದ್ದಿದೆ. ನಗರದ ಬಹಳಷ್ಟು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಲ್ಲಿ ಮುಂದಿನ 24 ತಾಸುಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 

ಠಾಣೆಯಲ್ಲಿ ಕಳೆದ 24 ತಾಸುಗಳಲ್ಲಿ ದಾಖಲೆ ಪ್ರಮಾಣದಲ್ಲಿ 40 ಸೆಂ.ಮೀ ಮಳೆ ಬಿದ್ದಿದೆ. ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಜಿಲ್ಲಾ ಆಡಳಿತ ವಿಪತ್ತು ನಿರ್ವಹಣೆ ಸಿಬ್ಬಂದಿಗೆ ಸೂಚನೆ ನೀಡಿದೆ.

ಮುಂಬೈ ಮತ್ತು ಕೊಂಕಣ ಗೋವಾದಲ್ಲಿ ಇನ್ನು ಐದು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಅಜಿತ್‌ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !