ಭಾನುವಾರ, ನವೆಂಬರ್ 17, 2019
24 °C

ಮಹಾರಾಷ್ಟ್ರಕ್ಕೆ ನೀರು: ಚರ್ಚೆ ಹಂತದಲ್ಲಿ – ಯಡಿಯೂರಪ್ಪ

Published:
Updated:

ಕಲಬುರ್ಗಿ: ‘ಬೇಸಿಗೆಯಲ್ಲಿ ರಾಜ್ಯದ ಕೃಷ್ಣಾ ಹಾಗೂ ಭೀಮಾ ನದಿಗೆ ಮಹಾರಾಷ್ಟ್ರ 4 ಟಿಎಂಸಿ ಅಡಿ ನೀರನ್ನು ಹರಿಸಿದರೆ ಪ್ರತಿಯಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ–ತುಬಚಿ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ತಾಲ್ಲೂಕಿಗೆ ನೀರು ಬಿಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದ್ದೇನೆ. ಈ ಬಗ್ಗೆ ಅಪಾರ್ಥ ಮಾಡಿಕೊಳ್ಳುವುದು ಬೇಡ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದ ಜತ್ತ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡುವ ಕುರಿತು ನೀಡಿದ ಹೇಳಿಕೆಗೆ ನಗರದಲ್ಲಿ ಅವರು ಗುರುವಾರ ಸ್ಪಷ್ಟನೆ ನೀಡಿದರು.

‘ಮಹಾರಾಷ್ಟ್ರದವರು ನಮಗೆ ದಾಯಾದಿಗಳೇನೂ ಅಲ್ಲ. ಆ ರಾಜ್ಯದ ಮುಖ್ಯಮಂತ್ರಿ ಮಹಾರಾಷ್ಟ್ರದಿಂದ ನೀರು ಕೊಟ್ಟಿದ್ದಕ್ಕೆ ಪ್ರತಿಯಾಗಿ ಕರ್ನಾಟಕದಿಂದ ಉಜನಿ ಜಲಾಶಯಕ್ಕೆ ನೀರು ಕೊಡುವಂತೆ ಕೇಳಿದ್ದರು. ಇದು ಇನ್ನೂ ಚರ್ಚೆಯ ಹಂತದಲ್ಲಿದೆಯೇ ಇದೆಯೇ ಹೊರತು ನಿರ್ಧಾರವಾಗಿಲ್ಲ’ ಎಂದರು.

ನೀರು ಬಿಡುವುದಾಗಿ ಹೇಳುವ ಮೂಲಕ ರಾಜಕೀಯ ಗಿಮಿಕ್‌ ಮಾಡಿದ್ದಾರೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಗಿಮಿಕ್‌ ಮಾಡಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ ವಿರೋಧ

ಬೆಂಗಳೂರು: ಬೆಳಗಾವಿ ಜಿಲ್ಲೆಯ ತುಬಚಿ– ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಮಹಾರಾಷ್ಟ್ರಕ್ಕೆ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

‘ರಾಜ್ಯದ ಹಿತವನ್ನು ಮರೆತು ಮತಗಳಿಗಾಗಿ ಮಹಾರಾಷ್ಟ್ರಕ್ಕೆ ನೀರು ಕೊಡುವುದಾಗಿ ಹೇಳಿದ್ದು ರಾಜ್ಯಕ್ಕೆ ಮಾಡಿದ ದ್ರೋಹ’ ಎಂದು ಕಾಂಗ್ರೆಸ್ ಟೀಕಿಸಿದೆ. ‘ಈಗಾಗಲೇ ಮಹದಾಯಿ ವಿಚಾರದಲ್ಲಿ ಬಿಜೆಪಿಯ ಬೇಜವಾಬ್ದಾರಿತನದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಮುಖ್ಯಮಂತ್ರಿಯಾಗಿ ನಿಮ್ಮ ನಡೆ ಖಂಡನೀಯ. ನಿಮ್ಮ ಹೇಳಿಕೆ ವಾಪಸ್ ಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಟ್ವೀಟ್ ಮೂಲಕ ಒತ್ತಾಯಿಸಿದೆ.

ಜೆಡಿಎಸ್ ಟೀಕೆ: ‘ಯಡಿಯೂರಪ್ಪ ಅವರಿಗೆ ನಾಚಿಕೆ ಆಗಬೇಕು. ರಾಜ್ಯಕ್ಕೆ ಮೋಸ ಮಾಡಿದ ಮಹಾರಾಷ್ಟ್ರಕ್ಕೆ ನೀರು ಹರಿಸಲು ಮುಂದಾಗಿದ್ದಾರೆ. ಮೊದಲು ರಾಜ್ಯದ ಜನರ ಬಗ್ಗೆ ಯೋಚನೆ ಮಾಡಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘ನೀರಾವರಿ ಯೋಜನೆಗಳಿಗೆ ಸಹಕಾರ ನೀಡಲಿಲ್ಲವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಶ್ರೀಮಂತ ಪಾಟೀಲ ಹೇಳಿದ್ದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿದರೂ ರಾಜ್ಯಕ್ಕೆ ನೀರು ಬಿಡಲಿಲ್ಲ. ಇಂತಹ ಸರ್ಕಾರದ ಪರ ಮತ ಕೇಳಲು ಹೋಗಿದ್ದಾರೆ’ ಎಂದು ಟೀಕಿಸಿದ್ದಾರೆ. ‘ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ನೀರು ಬಿಡುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಮನವಿ ಮಾಡಿದ್ದೆ. ಆದರೂ ನೀರು ಬಿಡಲಿಲ್ಲ. ಮಾತುಕತೆಗೂ ಅವಕಾಶ ಕೊಡಲಿಲ್ಲ. ರಾಜ್ಯದ ಜನರ ಜೀವನದ ಜತೆ ಚೆಲ್ಲಾಟವಾಡಿದವರ ಪರವಾಗಿ ಮತ ಕೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)