ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸೇನಾ ಭರ್ತಿ ರ್‍ಯಾಲಿ ಆರಂಭ

ಮೊದಲ ದಿನ 800 ಅಭ್ಯರ್ಥಿಗಳ ಪರೀಕ್ಷೆ
Last Updated 1 ಆಗಸ್ಟ್ 2019, 12:14 IST
ಅಕ್ಷರ ಗಾತ್ರ

ಬೆಳಗಾವಿ: ದೇಶದಲ್ಲಿಯೇ ಮೊದಲ ಬಾರಿಗೆ ಇಲ್ಲಿನ ಎಂಎಲ್‌ಐಆರ್‌ಸಿ (ಮರಾಠಾ ಲಘು ಪದಾತಿ ದಳ) ಶಿವಾಜಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮಹಿಳಾ ಸೇನಾ ಭರ್ತಿ (ಮಹಿಳಾ ಮಿಲಿಟರಿ ಪೊಲೀಸ್‌) ರ‍್ಯಾಲಿ ಗುರುವಾರ ಆರಂಭಗೊಂಡಿತು. ಮೊದಲ ದಿನ ಕರ್ನಾಟಕ ಹಾಗೂ ಕೇರಳದ ವಿವಿಧ ಜಿಲ್ಲೆಗಳ 800 ಮಂದಿ ದೈಹಿಕ ಪರೀಕ್ಷೆಗೆ ಹಾಜರಾದರು. ರ‍್ಯಾಲಿ ಆ. 5ರವರೆಗೆ ನಡೆಯಲಿದೆ.

ಸೇನೆಯ ನೇಮಕಾತಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳೀಯ ಪೊಲೀಸರ ಸಹಕಾರದಲ್ಲಿ ತೂಕ ಮತ್ತು ಎತ್ತರ, 1600 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮೊದಲಾದ ಪರೀಕ್ಷೆಗಳನ್ನು ನಡೆಸಿದರು. ಆಗಾಗ ಬೀಳುತ್ತಿದ್ದ ಜೋರು ಮಳೆ ನಡುವೆಯೂ ಪರೀಕ್ಷೆಗಳು ಮುಂದುವರಿದದ್ದು ವಿಶೇಷ. ಟ್ರ್ಯಾಕ್‌ನಲ್ಲಿ ಕೆಸರು ಉಂಟಾಗದಂತೆ ಸಿಬ್ಬಂದಿ ನೋಡಿಕೊಂಡರು. ಅಭ್ಯರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ಮಿಲಿಟರಿ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆಗೆ ಕಳುಹಿಸಲಾಯಿತು. ಸೇನಾ ಅಧಿಕಾರಿಗಳೊಂದಿಗೆ ಕೆಎಸ್‌ಆರ್‌ಪಿಯ ಮಹಿಳಾ ಸಿಬ್ಬಂದಿಯನ್ನು ಕೂಡ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ನೂರಾರು ಯುವತಿಯರು ಬೆಳಗಿನ ಜಾವವೇ ಕ್ಯಾಂಪ್‌ನ ಎಂಎಲ್‌ಐಆರ್‌ಸಿ (ಎಂಎಲ್‌ಐಆರ್‌ಸಿ) ಆವರಣದಲ್ಲಿ ಜಮಾಯಿಸಿದ್ದರು. ಅಭ್ಯರ್ಥಿಗಳು ಪ್ರವೇಶಪತ್ರ ಹೊಂದಿದ್ದಾರೆಯೇ ಇಲ್ಲವೇ ಎನ್ನುವುದನ್ನು ಖಾನಾಪುರ ರಸ್ತೆಯ ಗ್ಲೋಬ್ ಚಿತ್ರಮಂದಿರದ ಬಳಿಯ ದ್ವಾರದಲ್ಲೇ ಸೇನಾ ಸಿಬ್ಬಂದಿ ಪರಿಶೀಲಿಸಿದರು. ಪ್ರವೇಶಪತ್ರ ಇಲ್ಲದವರಿಗೆ ಪ್ರವೇಶ ನಿರಾಕರಿಸಿದರು.

ಉಪಾಹಾರ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಆಕ್ರೋಶ: ಮುಕ್ತ ಅವಕಾಶವಿದೆ ಎಂದು ಭಾವಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಯುವತಿಯರು ಬಂದಿದ್ದರು. ಕೆಲವರು ಬುಧವಾರ ಸಂಜೆ, ತಡರಾತ್ರಿ ಹಾಗೂ ಗುರುವಾರ ಬೆಳಗಿನ ಜಾವವೇ ಪಾಲಕರೊಂದಿಗೆ ಬಂದು ಎಂಎಲ್‌ಐಆರ್‌ಸಿ ಕಡೆಗೆ ಹೋಗಲು ಕಾಯುತ್ತಿದ್ದರು. ಆದರೆ, ಪ್ರವೇಶಪತ್ರ ಪಡೆದವರಿಗೆ ಮಾತ್ರ ಪ್ರವೇಶ ಎಂದು ಸಿಬ್ಬಂದಿ ತಿಳಿಸಿದ್ದರಿಂದ ಅವರು ನಿರಾಸೆಗೆ ಒಳಗಾದರು. ತಮ್ಮನ್ನು ತಡೆದ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಚಕಮಕಿಯೂ ನಡೆಯಿತು. ಆಕಾಂಕ್ಷಿಗಳಿಗೆ ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ಸಂಬಂಧಿಸಿದ ಅಧಿಕರಿಗಳು ವಿಫಲವಾಗಿದ್ದಾರೆ ಎಂದು ದೂರಿದರು. ನೂರಾರು ಮಂದಿ ರಸ್ತೆಯಲ್ಲಿ ಸೇರಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬಳಿಕ ಸೇನೆ ಅಧಿಕಾರಿಗಳು ಬಂದು ತಿಳಿವಳಿಕೆ ಹೇಳಿ, ಪ್ರವೇಶಪತ್ರ ಇಲ್ಲದವರನ್ನು ವಾಪಸ್‌ ಕಳುಹಿಸಿದರು. ಇದರಿಂದಾಗಿ ನೂರಾರು ಮಂದಿ ಬೇಸರದಿಂದ ತಮ್ಮ ಊರುಗಳತ್ತ ತೆರಳಿದರು.

‘ರ್‍ಯಾಲಿ ಕುರಿತು ಅಧಿಕಾರಿಗಳು ಸರಿಯಾಗಿ ಪ್ರಚಾರ ಮಾಡಿಲ್ಲ. ಮೊದಲಿಗೆ ಮುಕ್ತ ಅವಕಾಶವಿದೆ ಎಂದೇ ಎಲ್ಲೆಡೆಯೂ ಸುದ್ದಿ ಹಬ್ಬಿಸಲಾಗಿತ್ತು. ಹೀಗಾಗಿ, ನಾವು ಪ್ರತಿ ದಿನ ತಯಾರಿ ಮಾಡಿಕೊಂಡಿದ್ದೆವು. ಇಲ್ಲಿ ಬಂದ ಮೇಲೆಯೇ ಪ್ರವೇಶಪತ್ರ ಕೇಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ನೋಂದಾಯಿಸಿ ಪ್ರವೇಶಪತ್ರ ಪಡೆದವರಿಗೆ ಮಾತ್ರ ಅವಕಾಶ ಎದು ಹೇಳುತ್ತಿದ್ದಾರೆ. ದೂರದ ಊರುಗಳಿಂದ ರೈಲು ಹಾಗೂ ಬಸ್ಸಿಗೆ ಹಣ ಖರ್ಚು ಮಾಡಿಕೊಂಡು ನಾವು ಇಲ್ಲಿಗೆ ಬಂದಿದ್ದೆವು. ಪರೀಕ್ಷೆಗೆ ಹಾಜರಾಗುವ ಅವಕಾಶ ಸಿಗದೇ ನಿರಾಸೆಯಾಗಿದೆ’ ಎಂದು ಯುವತಿಯರು ಅಳಲು ತೋಡಿಕೊಂಡರು.

‘ರ‍್ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸಿದ್ದವರ ಪೈಕಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 86ರಷ್ಟು ಅಂಕ ಗಳಿಸಿದವರನ್ನು ರ‍್ಯಾಲಿಯ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ಇದು ಮುಕ್ತ ರ್‍ಯಾಲಿಯಲ್ಲ. ಪ್ರವೇಶಪತ್ರ ಇದ್ದವರಿಗಷ್ಟೇ ಅವಕಾಶ’ ಎಂದು ಸೇನಾ ನೇಮಕಾತಿ ವಿಭಾಗದ ಉಪಮಹಾನಿರ್ದೇಶಕ ದಿಪೇಂದ್ರ ರಾವತ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT