ಯುವ ದಿನ: ನಿವೃತ್ತ ಸೇನಾನಿಯ ಯುದ್ಧಾನುಭವ

7
ಬದ್ಧತೆಯಿಂದ ಕೆಲಸ ಮಾಡಿ: ಐ.ಎನ್‌. ರೈ ಸಲಹೆ

ಯುವ ದಿನ: ನಿವೃತ್ತ ಸೇನಾನಿಯ ಯುದ್ಧಾನುಭವ

Published:
Updated:
Prajavani

ಮಂಗಳೂರು: ‘ಜಗತ್ತಿನಲ್ಲಿ ಭಾರತವು ಬಲಿಷ್ಠ ರಾಷ್ಟ್ರವಾಗಬೇಕಾದರೆ ಯುವಜನತೆಯು ಬದ್ಧತೆಯಿಂದ ಕೆಲಸ ಮಾಡಬೇಕು. ಸೈನಿಕನಿಗೆ ದೇಶದ ಸುರಕ್ಷತೆಯೇ ಮುಖ್ಯ. ಸ್ವಯಂ ಸುರಕ್ಷತೆ ಎರಡನೇ ಆದ್ಯತೆ ಆಗಿರುತ್ತದೆ. ಅಂಥ ಸೈನಿಕರ ತ್ಯಾಗವನ್ನು ಯುವಜನರು ಸ್ಮರಿಸಬೇಕು. ನಮ್ಮ ನೆಲದ ಸಂಸ್ಕೃತಿ, ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಮರೆಯಬಾರದು’ ಎಂದು ನಿವೃತ್ತ ಸೇನಾನಿ, ಬ್ರಿಗೇಡಿಯರ್‌ ಐ. ಎನ್‌. ರೈ ಹೇಳಿದರು.

ರಾಮಕೃಷ್ಣ ಮಠದಲ್ಲಿ ಶನಿವಾರ ವಿವೇಕಾನಂದ ಜಯಂತಿಯ ಅಂಗವಾಗಿ ರಾಷ್ಟ್ರೀಯ ಯುವ ದಿನಾ ಚರಣೆ ಅಂಗವಾಗಿ ಆಯೋ ಜಿಸಿದ ಕಾರ್ಯಕ್ರಮದಲ್ಲಿ ತಮ್ಮ ಯುದ್ಧಾ ನುಭವದ ಕತೆಗಳನ್ನು ಹೇಳಿದರು.  

ಜಗತ್ತಿನಲ್ಲಿಯೇ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿದೆ. ಅಲ್ಲಿ ಭಾರತೀಯ ಯೋಧರು 24 ಗಂಟೆಗಳ ಕಾಲ ಪಹರೆ ನಿಂತು ದೇಶ ಕಾಯುತ್ತಾರೆ. ಕಾವಲು ಮಾಡುವ ಸೈನಿಕರ ಆರೋಗ್ಯ ದಿನೇ ದಿನೇ ಕುಸಿಯುತ್ತದೆ. ಆದರೂ ಎಳೆವಯಸ್ಸಿನ ಸೈನಿಕರು ಬದ್ಧತೆಯಿಂದ ಕರ್ತವ್ಯ ನಿಭಾಯಿಸುತ್ತಾರೆ. ಕರ್ತವ್ಯ ನಿಭಾಯಿಸಿ ಸಿಯಾಚಿನ್‌ ಇಳಿದು ಬಂದು ಟೀವಿ ನೋಡುವಾಗ ಅಲ್ಲಿ ‘ರಾಷ್ಟ್ರಗೀತೆಗೆ 54 ಸೆಕೆಂಡ್‌ಗಳ ಕಾಲ ನಿಲ್ಲಬೇಕೇ ಬೇಡವೇ’ ಎಂದು ಬುದ್ಧಿಜೀವಿಗಳೆನಿಸಿಕೊಂಡವರು ಚರ್ಚಿಸುವುದನ್ನು ನೋಡಬೇಕಾದ ಸ್ಥಿತಿ ಬರುತ್ತದೆ ಎಂದು ಹೇಳಿದರು.

19ನೇ ವಯಸ್ಸಿಲ್ಲಿಯೇ ಯುದ್ಧಕ್ಕಾಗಿ ಹೊರಡುವ ಅನೇಕ ಸೈನಿಕರಿಗೆ 20ನೇ ವರ್ಷದ ಹುಟ್ಟುಹಬ್ಬ ಆಚರಿಸುವುದು ಸಾಧ್ಯವಾಗುವುದಿಲ್ಲ. 20 ಸಾವಿರ ಅಡಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ತಲುಪುವುದಕ್ಕೇ 35ದಿನಗಳ ಪ್ರಯಾಣ ಮಾಡಬೇಕು. ಹಿಮದ ಬೆಟ್ಟವನ್ನು ಏರುವಾಗ ಅಲ್ಲಲ್ಲಿ ನಿಂತು, ಹವಾಮಾನ ಹೊಂದಾಣಿಕೆ ಮಾಡಿಕೊಂಡು ಶೀತಲ ಪ್ರದೇಶಕ್ಕೆ ಅವರು ತೆರಳಬೇಕು. ಅಲ್ಲಿ ಒಬ್ಬ ಸೈನಿಕ ನಿದ್ದೆ ಮಾಡುವಾಗ ಇಬ್ಬರು ಎಚ್ಚರದಲ್ಲಿದ್ದುಕೊಂಡು ಕಣ್ಣಲ್ಲಿ ಕಣ್ಣಿಟ್ಟು ಗಡಿ ಕಾಯಬೇಕು. ಅಷ್ಟೇ ಅಲ್ಲ, ಮಲಗಿದಾತನನ್ನು ಅಲುಗಾಡಿಸಿ ಎಬ್ಬಿಸಬೇಕಾಗುತ್ತದೆ. ತೀವ್ರಚಳಿಯಲ್ಲಿ ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗಿ ಆತ ಏಳುವುದು ಸಾಧ್ಯವಾಗದೇ ಇರಬಹುದು. ಹೀಗೆ ಜೀವ ಒತ್ತೆ ಇಟ್ಟು ಕೆಲಸ ಮಾಡುವ ಸೈನಿಕರ ಸಾಹಸ ಕತೆಗಳನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸದೇ ಇರುವುದು ಬೇಸರದ ಸಂಗತಿ ಎಂದರು.

ಸಿಯಾಚಿನ್‌ನಲ್ಲಿ ಆಹಾರ ತಯಾರಿಸುವುದೇ ಸವಾಲು. ಕುಕ್ಕರ್‌ಗೆ ಅಕ್ಕಿಬೇಳೆ, ಉಪ್ಪುಮೆಣಸು ಹಾಕಿ ಬೇಯಿಸಿದ ಬಳಿಕ ಅದನ್ನು ಬಟ್ಟಲಿಗೆ ಹಾಕಿಕೊಂಡು ತಿನ್ನುಷ್ಟರಲ್ಲಿ ಮಂಜುಗಡ್ಡೆಯಾಗಿಬಿಡುತ್ತದೆ. ಹಾಗಾಗಿ ಕುಕ್ಕರ್‌ನಿಂದಲೇ ಎಲ್ಲರೂ ಒಟ್ಟಾಗಿ ತಿನ್ನಬೇಕು. ದೇಶಕ್ಕಾಗಿ ಜಾತಿ, ಮತದ ಹಂಗನ್ನು ತೊರೆದು ಜೀವಿಸುವ ಸೈನಿಕನಿಗೆ ದೇಶದೊಳಗೆ ಜಾತಿ ಕಲಹ ಕಂಡರೆ ಎಷ್ಟು ಬೇಸರವಾಗಬಹುದು ಎಂದು ಊಹಿಸಬಹುದು ಎಂದು ಅವರು ಪ್ರಶ್ನಿಸಿದರು.

ಆದ್ದರಿಂದ ಯುವಜನತೆ ದೇಶದ ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಶ್ರದ್ಧೆಯಿಂದ ದೇಶದ ಏಳಿಗೆಗಾಗಿ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಈ ಸಂದರ್ಭ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ, ಮಾಜಿ ಶಾಸಕ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಪ್ರೊ. ರಘೋತ್ತಮ ರಾವ್, ಶ್ರೀಶ ಭಟ್, ಶ್ರೀಕೃಷ್ಣ ಉಪಾಧ್ಯಾಯ, ರಮ್ಯ ಐತಾಳ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !