ಸೋಮವಾರ, ಅಕ್ಟೋಬರ್ 21, 2019
26 °C
ಆಹಾರ ಸರಬರಾಜು ಕಂಪನಿಗಳ ಡೆಲಿವರಿ ಬಾಯ್‌ಗಳ ಸಮಾವೇಶ

ಕಾನೂನು ರಚನೆಗೆ ಡೆಲಿವರಿ ಪಾರ್ಟನರ್‌ಗಳ ಆಗ್ರಹ

Published:
Updated:
Prajavani

ಬೆಂಗಳೂರು: ಹೆಸರಿಗೆ ‘ಸ್ವತಂತ್ರ ಸೇವಾದಾರರು’. ದಿನಕ್ಕೆ 16ರಿಂದ 18 ಗಂಟೆ ಕೆಲಸ. ಉದ್ಯೋಗ ಭದ್ರತೆ ಇಲ್ಲ. ನಿಗದಿತ ವೇತನವೂ ಇಲ್ಲ...

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್‌(ಎಐಡಿವೈಒ) ಹಾಗೂ ಫುಡ್ ಡೆಲಿವರಿ ಪಾರ್ಟನರ್ಸ್ ಹೋರಾಟ ಸಮಿತಿ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಆಹಾರ ವಿತರಕ ಪಾಲುದಾರರ (ಫುಡ್ ಡೆಲಿವರಿ ಪಾರ್ಟನರ್‌ಗಳು) ಸಮಾವೇಶದಲ್ಲಿ ಆ್ಯಪ್ ಆಧಾರಿತ ಆಹಾರ ಪೂರೈಕೆಯ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಸಂಕಷ್ಟ ಹೇಳಿಕೊಂಡಿದ್ದು ಹೀಗೆ.

‘ಬೇಕಾದಾಗ ಲಾಗಿನ್ ಮತ್ತು ಲಾಗ್‌ ಔಟ್ ಮಾಡಬಲ್ಲ ‘ಸ್ವತಂತ್ರ ಸೇವಾದಾರರು’ ನಾವು ಎಂಬುದು ಕಂಪನಿಗಳ ವಾದ. ಹೀಗೆ ನೋಂದಾಯಿಸಿಕೊಂಡು ದುಡಿಯುತ್ತಿರುವ ನಮಗೆ ಕಂಪನಿಗಳು ಸಂಬಳವನ್ನೇ ನೀಡುವುದಿಲ್ಲ. ಬದಲಾಗಿ ನೀಡುವ ಪೇ–ಔಟ್, ಡೆಲಿವರಿ ಚಾರ್ಜ್‌ ಮತ್ತು ಪ್ರೋತ್ಸಾಹ ಧನದ ಪ್ರಮಾಣ ಪದೇ ಪದೇ ಬದಲಾಗುತ್ತಿದೆ’ ಎಂದು ವಿವರಿಸಿದರು.

‘ನಿಗದಿತ ಕೆಲಸದ ಅವಧಿಯೂ ಇಲ್ಲ, ನಿಗದಿತ ವೇತನವೂ ಇಲ್ಲ. ಹಗಲಿರುಳು ದುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಸ್ವತಂತ್ರ ಸೇವಾದಾರರು ಎಂದು ಕರೆಸಿಕೊಳ್ಳುವ ನಮಗೆ ಸ್ವಾತಂತ್ರ್ಯವೇ ಇಲ್ಲ. ನಮ್ಮ ಹಿತ ಕಾಪಾಡುವ ಕಾನೂನೂ ಈ ದೇಶದಲ್ಲಿ ಇಲ್ಲ’ ಎಂದು ಅಳಲು ತೋಡಿಕೊಂಡರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಜಿ.ಎಸ್. ಕುಮಾರ್, ‘ಹೋಟೆಲ್ ಮತ್ತು ಗ್ರಾಹಕರಿಂದ ಲಾಭ ಮಾಡಿಕೊಳ್ಳುವ ಕಂಪನಿಗಳು ಅವರ ಪರವಾಗಿ ಕೆಲಸ ಮಾಡುವ ಹುಡುಗರನ್ನು ಉದ್ಯೋಗಿಗಳೆಂದೇ ಪರಿಗಣಿಸಿಲ್ಲ. ನಿರಂತರ ಶೋಷಣೆ ಅನುಭವಿಸುತ್ತಿರುವ ಇವರಿಗಾಗಿ ಸರ್ಕಾರ ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ವಕೀಲ ಕೆ.ಸುಬ್ಬರಾವ್, ‘ಜಾಗತೀಕರಣದ ನೀತಿಗಳಿಂದಾಗಿ ಕಾರ್ಮಿಕರ ಶೋಷಣೆ ತಾರಕಕ್ಕೇರಿದೆ. ಹೀಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ’ ಎಂದು ಹೇಳಿದರು.

‘ವಿತರಕ ಪಾಲುದಾರರ ಉದ್ಯೋಗ ಕಾಯಂಗೊಳಿಸಬೇಕು, ವೇತನ ನಿಗದಿ ಮಾಡಬೇಕು ಹಾಗೂ ಕಂಪನಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಡೆಲಿವರಿ ಪಾರ್ಟನರ್ಸ್ ಹೋರಾಟ ಸಮಿತಿ ಅಧ್ಯಕ್ಷ ವಿನಯ್ ಸಾರಥಿ ‘‍ಪ್ರಜಾವಾಣಿ’ಗೆ ತಿಳಿಸಿದರು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)