ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನ ಮೇಲೆ ಉಗ್ರರ ದಾಳಿ: 29 ಸಾವು

ಅಫ್ಗಾನಿಸ್ತಾನದ ಜಲಾಲಾಬಾದ್‌ನಲ್ಲಿ ಘಟನೆ
Last Updated 3 ಆಗಸ್ಟ್ 2020, 22:09 IST
ಅಕ್ಷರ ಗಾತ್ರ

ಜಲಾಲಾಬಾದ್ ‌(ಅಫ್ಗಾನಿಸ್ತಾನ): ತನ್ನ ನೂರಾರು ಸದಸ್ಯರು ಬಂಧಿಯಾಗಿರುವ ಪೂರ್ವ ಅಫ್ಗಾನಿಸ್ತಾನದ ಜೈಲೊಂದರ ಮೇಲೆ ಇಸ್ಲಾಮಿಕ್‌ ಸ್ಟೇಟ್ ಉಗ್ರ ಸಂಘಟನೆ ಭಾನುವಾರ ರಾತ್ರಿ ದಾಳಿ ನಡೆಸಿದ್ದು, ಘಟನೆಯಲ್ಲಿ 29 ಜನರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಸೋಮವಾರವೂ ಉದ್ರಿಕ್ತ ಸ್ಥಿತಿ ಮುಂದುವರಿದಿತ್ತು.

ದಾಳಿಯಲ್ಲಿ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಆತ್ಮಾಹುತಿ ದಾಳಿಕೋರನೊಬ್ಬ, ಸ್ಫೋಟಕ ತುಂಬಿದ್ದ ಕಾರನ್ನು ನೇರವಾಗಿ ಜೈಲಿನ ಪ್ರವೇಶ ದ್ವಾರಕ್ಕೆ ನುಗ್ಗಿಸಿ, ಸ್ಫೋಟಿಸಿದ್ದ. ಇದರ ಬೆನ್ನಲ್ಲೇ ಜೈಲಿನ ಆವರಣದೊಳಗೆ ನುಗ್ಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಖೊರಾಸನ್‌ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್‌ ಸ್ಟೇಟ್‌ ತಂಡ ಭಾಗವಾಗಿರುವ ‘ಐಎಸ್’ ಹೆಸರಿನ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.

‘ಮೃತಪಟ್ಟವರ ಪೈಕಿ ಕೈದಿಗಳು, ನಾಗರಿಕರು, ಜೈಲಿನ ಸಿಬ್ಬಂದಿ ಹಾಗೂ ಅಫ್ಗಾನಿಸ್ತಾನ ಭದ್ರತಾ ಪಡೆಯ ಸಿಬ್ಬಂದಿ
ಯಿದ್ದಾರೆ. ಇಲ್ಲಿಯವರೆಗೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ’ ಎಂದು ನನ್‌ಗರ್‌ಹಾರ್‌ ಪ್ರಾಂತ್ಯದ ಗವರ್ನರ್‌ ಅವರ ವಕ್ತಾರ ಅತ್ತಾವುಲ್ಲ ಖ್ಯೊಗ್ಯಾನಿ ತಿಳಿಸಿದರು.

ಸೋಮವಾರ ಮಧ್ಯಾಹ್ನದ ವೇಳೆಗೆ ಭದ್ರತಾ ಪಡೆ ಸಿಬ್ಬಂದಿ ಜೈಲನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆದಿದ್ದಾರೆ. ಜೈಲಿನೊಳಗೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಇಬ್ಬರು ತಾಲಿಬಾನ್‌ ಕೈದಿಗಳ ಶವ ದೊರೆತಿದೆ. ಇಸ್ಲಾಮಿಕ್‌ ಸ್ಟೇಟ್‌ ಹಾಗೂ ತಾಲಿಬಾನ್‌ ನಡುವಿನ ಬಿಕ್ಕಟ್ಟನ್ನು ಇದು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

‘ಹಲವು ಉಗ್ರರು ಜೈಲಿನಿಂದ ಹತ್ತಿರದ ಕಟ್ಟಡದೊಳಗೆ ನುಗ್ಗಿದ್ದಾರೆ. ಹೀಗಾಗಿ ಕಾರ್ಯಾಚರಣೆ ಕಷ್ಟವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ಕೈದಿಗಳು ಪರಾರಿ‌: ದಾಳಿಯ ಲಾಭ ಪಡೆದು ಹಲವು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ‘ಪರಾರಿಯಾಗಿ ನಗರದೊಳಗೇ ಅವಿತಿದ್ದಸಾವಿರಕ್ಕೂ ಅಧಿಕ ಕೈದಿಗಳನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ’ ಎಂದು ಖ್ಯೊಗ್ಯಾನಿ ತಿಳಿಸಿದರು.

ಜೈಲಿನಲ್ಲಿ 1,500ಕ್ಕೂ ಅಧಿಕ ಕೈದಿಗಳಿದ್ದು, ಈ ಪೈಕಿ ನೂರಾರು ಕೈದಿಗಳು ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ಭಾಗವಾಗಿದ್ದಾರೆ.

ಜಲಾಲಾಬಾದ್‌ನಲ್ಲಿ ಇತ್ತೀಚೆಗಷ್ಟೇ ಈ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್‌ ಒಬ್ಬನನ್ನು ಅಫ್ಗಾನಿಸ್ತಾನ‌ ವಿಶೇಷ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು. ಭಾನುವಾರವಷ್ಟೇ ಈ ಮಾಹಿತಿಯನ್ನು ಅಫ್ಗಾನಿಸ್ತಾನ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿತ್ತು. ಇದಾದ ಮರುದಿನವೇ ಜೈಲಿನ ಮೇಲೆ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT