ಮಕ್ಕಳೇ ಎಡಿಟರ್!

ಮಂಗಳವಾರ, ಏಪ್ರಿಲ್ 23, 2019
31 °C

ಮಕ್ಕಳೇ ಎಡಿಟರ್!

Published:
Updated:
Prajavani

ಮಕ್ಕಳಿಗೆ ಜ್ಞಾನ ವೃದ್ಧಿಸುವ, ಪತ್ರಿಕೆ ಓದಿಸುವ, ದೈನಂದಿನ ಪಠ್ಯವಲ್ಲದ ಹೊಸ ಸಂಗತಿ ತಿಳಿಪಡಿಸುವ ವಿಷಯ ಬಂದಾಗಲೆಲ್ಲ, ಪೋಷಕರು ವ್ಯಕ್ತಪಡಿಸುವ ಮೊದಲ ಪ್ರಶ್ನೆ: ಮಕ್ಕಳನ್ನು ಕೂರಿಸಿ, ಪಠ್ಯಪುಸ್ತಕ ಓದಿಸುವುದೇ ಕಷ್ಟ. ಇನ್ನು ಪತ್ರಿಕೆ ಓದಿಸಲು ಆದೀತೆ?

ಆದರೆ, ಇದಕ್ಕೆಲ್ಲ ಅಪವಾದ ಎಂಬಂತೆ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಬೆಳಗುರ್ಕಿ ಎಂಬ ಪುಟ್ಟ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪತ್ರಿಕೆ ಓದುವುದು, ಹೊರತರುವುದು ಅಲ್ಲದೇ ರಾಜ್ಯವ್ಯಾಪಿ ಎಲ್ಲರಿಗೂ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಪೆನ್ಸಿಲ್’ ಎಂಬ ಚಂದನೆಯ ಹೆಸರಿನಲ್ಲಿ ನಾಲ್ಕು ಪುಟಗಳ ದ್ವೈಮಾಸಿಕ ಪತ್ರಿಕೆ ಹೊರತರುತ್ತಿರುವ ಪುಟಾಣಿಗಳು, ಅದರಲ್ಲಿ ಅಪ್ಪಟ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ತಮ್ಮ ಭಾವನೆ ಹರಿಬಿಡುತ್ತಾರೆ. ಕಥೆ, ಕವನ, ಚಿತ್ರಕಲೆ, ಶಾಲೆ ಚಟುವಟಿಕೆ, ಒಗಟು, ಜ್ಞಾನ ಕುರಿತು ತರಹೇವಾರಿ ಮಾಹಿತಿ ನೀಡುವುದರ ಜೊತೆಗೆ ಗ್ರಾಮದ ಸಂಸ್ಕೃತಿ, ಜೀವನಶೈಲಿ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.

5 ವರ್ಷಗಳಿಂದ ‘‍‍ಪೆನ್ಸಿಲ್’ ಪತ್ರಿಕೆ ಪ್ರಕಟವಾಗುತ್ತಿದ್ದು, ಇದಕ್ಕೆ ಸ್ಫೂರ್ತಿಯ ಸೆಲೆ ಶಾಲೆಯ ಶಿಕ್ಷಕ ಕೊಟ್ರೇಶ ಬಿ. ಪತ್ರಿಕೆ ಕುರಿತು ಕಲ್ಪನೆ ಮೂಡಿಸುವುದರ ಜೊತೆಗೆ ಮಕ್ಕಳ ಪುಟ್ಟ ಬರಹಗಳು ಏನೆಲ್ಲ ಮಾಡಬಹುದು ಮತ್ತು ಹೇಗೆಲ್ಲ ಪರಿಣಾ ಮಕಾರಿ ಪಾತ್ರ ನಿಭಾಯಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಪತ್ರಿಕೆಗೆ ಮಕ್ಕಳೇ ಸಂಪಾದಕರು-ಸಹಸಂಪಾದಕರು. ಪ್ರಸ್ತುತ ಸಂಚಿಕೆಗೆ ಯಾವ್ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಸಹಸಂಪಾದಕರ ಮಂಡಳಿ ಸದಸ್ಯರು ಚರ್ಚಿಸುತ್ತಾರೆ. ಅಂಕಣಕಾರರಿಗೆ ಇಂತಿಷ್ಟು ದಿನದೊಳಗೆ ಅಂಕಣ ನೀಡಲು ಸೂಚಿಸಿ, ಪತ್ರಿಕೆಯ ಯಾವ ಪುಟಗಳಿಗೆ ಯಾವ್ಯಾವ ವಿಷಯಗಳು ಸೂಕ್ತ ಎಂಬುದನ್ನು ನಿರ್ಧರಿಸುತ್ತಾರೆ. ಇದೆಲ್ಲದರ ಮಧ್ಯೆ ಪತ್ರಿಕೆಯ ಹಿಂದಿನ ಸಂಚಿಕೆಯಲ್ಲಿ ಆದ ಲೋಪದೋಷ, ಕೊರತೆ, ಪರಿಹಾರ ಮುಂತಾದವುಗಳ ಬಗ್ಗೆಯೂ ಚರ್ಚಿಸುತ್ತಾರೆ.

ಬರಹಗಳು ಸಿಕ್ಕ ಕೂಡಲೇ ಪತ್ರಿಕೆ ಪ್ರಕಟಿಸಲು ಸಹಸಂಪಾದಕರು ಹಾತೊರೆಯುವುದಿಲ್ಲ. ಪ್ರತಿಯೊಂದು ಲೇಖನದ ಪ್ರೂಫ್ ರೀಡಿಂಗ್ (ಬರಹ ತಿದ್ದುವಿಕೆ) ಮಾಡುತ್ತಾರೆ. ಕಾಗುಣಿತದ ತಪ್ಪುಒಪ್ಪು, ವಿಷಯ ಗ್ರಹಿಕೆ, ಮಾಹಿತಿ ಸಂಗ್ರಹಣೆ ಮುಂತಾದ ಅಂಶಗಳನ್ನು ಬರೆದವರಿಗೆ ತಿಳಿಪಡಿಸುತ್ತಾರೆ. ಬರಹವನ್ನು ಹೇಗೆ ಇನ್ನಷ್ಟು ಆಕರ್ಷಕ ಅಥವಾ ಸರಳ ಮಾಡಬಹುದು ಎಂಬುದರ ಬಗ್ಗೆ ತಿಳಿ ಹೇಳುತ್ತಾರೆ. ಅಂತಿಮವಾಗಿ ಶಿಕ್ಷಕರು ಒಮ್ಮೆ ಪ್ರೂಫ್ ರೀಡಿಂಗ್ ನಡೆಸಿ, ಪತ್ರಿಕೆಯನ್ನು ಮುದ್ರಣಕ್ಕೆ ಕಳುಹಿಸಿಕೊಡುತ್ತಾರೆ.

ಪತ್ರಿಕೆಯು ಪ್ರಕಟಗೊಂಡ ಬಳಿಕ ಅದು ಶಾಲೆ ಆವರಣಕ್ಕೆ ಮಾತ್ರವೇ ಸೀಮಿತ ಗೊಳ್ಳುವುದಿಲ್ಲ. ಗ್ರಾಮದಲ್ಲಿ ಪತ್ರಿಕೆಯನ್ನು ಉಚಿತವಾಗಿ ವಿತರಿಸುವುದರ ಜೊತೆಗೆ ತಾಲ್ಲೂಕು-ಜಿಲ್ಲಾ ವ್ಯಾಪ್ತಿಯ ಶಾಲೆಗಳಿಗೆ ಅಂಚೆ ಮುಖಾಂತರ ತಲುಪಿಸಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ, ಬೆಂಗಳೂರಿನ ಸಂಘಸಂಸ್ಥೆಗಳಿಗೆ ಮತ್ತು ಪ್ರಮುಖರಿಗೆ ಪತ್ರಿಕೆ ಉಚಿತವಾಗಿ ರವಾನಿಸಲಾಗುತ್ತದೆ. ಈ ಎಲ್ಲವನ್ನೂ ಮಕ್ಕಳೇ ನಿಭಾಯಿಸುತ್ತಾರೆ.

‘ಪತ್ರಿಕೆಯ ಮೊದಲ ಸಂಚಿಕೆಯನ್ನು 2013ರ ಸೆಪ್ಟೆಂಬರ್ 28ರಂದು ಬಿಡುಗಡೆ ಮಾಡಲಾಯಿತು. ಪತ್ರಿಕೆ ಹೊರತರಲೆಂದೇ ವೇತನದಲ್ಲಿನ ಇಂತಿಷ್ಟು ಹಣ ಮೀಸಲಿಟ್ಟಿರುವೆ. ಕೆಲವೊಮ್ಮೆ ದಾನಿಗಳು ಮತ್ತು ಸ್ನೇಹಿತರು ಆರ್ಥಿಕ ನೆರವು ನೀಡುತ್ತಾರೆ. ಕಳೆದೊಂದು ವರ್ಷದಿಂದ ‘ಇಂಡಿಯನ್ ಫೌಂಡೇಷನ್ ಫಾರ್ ಆರ್ಟ್ಸ್‌’ ಸಂಸ್ಥೆ ನೆರವು ನೀಡಿದೆ. ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಹೆಚ್ಚುತ್ತಿದೆ. ಪತ್ರಿಕೆಯು ಸದ್ಯಕ್ಕೆ ಸಾವಿರ ಪ್ರತಿಗಳಲ್ಲಿ ಪ್ರಕಟವಾಗುತ್ತಿದ್ದು, ಪ್ರತಿಗಳ ಸಂಖ್ಯೆ ಇನ್ನೂ ವೃದ್ಧಿಸಬಹುದು’ ಎಂದು ಕೊಟ್ರೇಶ ಬಿ. ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಅಂದ ಹಾಗೆ, ಪತ್ರಿಕೆಯ ಒಂದು ಸಂಚಿಕೆ ಹೊರತರಲು ₹ 4,500 ಖರ್ಚು ಆಗುತ್ತದೆ. ಶಾಲೆಯಲ್ಲಿ 292 ಮಕ್ಕಳು ಮತ್ತು 8 ಶಿಕ್ಷಕರಿದ್ದಾರೆ. ಪತ್ರಿಕೆಯು ಯಾವುದೇ ಅಡತಡೆಯಿಲ್ಲದೇ ನಿಗದಿತ ಅವಧಿಯಲ್ಲಿ ಓದುಗರಿಗೆ ತಲುಪಿಸಲು ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಶ್ರಮಿಸುತ್ತಾರೆ. ಪತ್ರಿಕೆ ಬಗ್ಗೆ ಇನ್ನಷ್ಟು ತಿಳಿಯಲು ಅಥವಾ ನೆರವಾಗಲು ಬಯಸುವವರು ಶಾಲೆಯ ಶಿಕ್ಷಕ ಕೊಟ್ರೇಶ ಬಿ. ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 8310020942

ಚಿತ್ರಗಳು: ಲೇಖಕರವು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !