ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ, ದೇಶ, ಲೋಕ, ಜೀವನ, ಧೀ

2020ರ ಕೆಲವು ಹಗಲುಗನಸು
Last Updated 30 ಡಿಸೆಂಬರ್ 2019, 9:03 IST
ಅಕ್ಷರ ಗಾತ್ರ

‘ವರ್ಷ’ ಅನ್ನುವುದು, ‘ಆಕಾರವಿಲ್ಲದ್ದು, ಅಮೂರ್ತವಾದದ್ದು’ ಎಂದು ನಮಗೆ ತೋರುವ ಕಾಲವೆಂಬ ಪ್ರವಾಹವನ್ನು ನಮ್ಮ ಮನಸ್ಸಿಗೆ ಮತ್ತು ಬದುಕಿಗೆ ನಿಲುಕಿಸಿಕೊಳ್ಳಲು ನಾವು ಮನುಷ್ಯರು ಮಾಡಿಕೊಂಡಿರುವ ಒಂದು ಆಕೃತಿ, ಅಳತೆಯ ಒಂದು ಘಟಕ.

ಅಸಲು, ಯಾವುದೇ ಬಗೆಯ ಆಕೃತಿಯನ್ನು ತೆಗೆದುಕೊಂಡರೂ, ಅದು, ಕಡೆಗೂ ನಮ್ಮ ಅಳವಿಗಾಗಲಿ, ಬುದ್ಧಿಗಾಗಲಿ ಎಂದೂ ಸಂಪೂರ್ಣ ನಿಲುಕದ ಅಖಂಡ-ನಿರ್ಗುಣ-ನಿರಾಕಾರ ಬ್ರಹ್ಮ ತತ್ತ್ವದ ಒಂದು ಘಟಕ - ತೋರಿಕೆಯ ಘಟಕ - ಅಷ್ಟೆ.

ತೋರಿಕೆಯ ಅಂಥ ಆಕೃತಿ ಮತ್ತು ಘಟಕವಾದ ಈ ವರ್ಷ, ಕಾಲ – ವರ್ಷಕಾಲ - ಅನ್ನುವುದು ನಮಗೆ ನಿಜಕ್ಕೂ ಅನುಭವಕ್ಕೆ ಬರುವುದು ಭೌತ ವಿಜ್ಞಾನವು ಹೇಳುವ ಸ್ಪೇಸ್, ತಾವು, ಠಾವು ಎಂಬ ಅರ್ಥದಲ್ಲಿನ ದೇಶ ಅನ್ನುವುದರಲ್ಲಿ; ಮತ್ತು, ಅಲ್ಲಿಂದ ಮುಂದಕ್ಕೆ, ನಾವು ಭಾರತ, ಪಾಕಿಸ್ತಾನ, ಸೋಮಾಲಿಯಾ ಮುಂತಾದ ಹೆಸರುಗಳನ್ನು ಕೊಟ್ಟು, ಮಾಡಿಕೊಂಡಿರುವ ರಾಜಕೀಯ ವಸ್ತು-ವಿಶೇಷ-ವಿದ್ಯಮಾನಗಳಾದ ‘ನಮ್ಮ ನಮ್ಮ’ ದೇಶಗಳಲ್ಲಿ.

ನಮ್ಮ ಅಂಥ ಬಿಡಿಬಿಡಿ ದೇಶಗಳೆಲ್ಲ ಇರುವುದು, ನಾವೆಲ್ಲ ಇರುವ, ಭೂಮಿ ಎಂಬ ಈ ದೊಡ್ಡ ದೇಶದಲ್ಲಿ, ಅರ್ಥಾತ್ ಭೂಲೋಕದಲ್ಲಿ. ಇಲ್ಲಿ ನಾವೆಲ್ಲ ನಡೆಸುತ್ತಿರುವುದು, ಸವೆಸುತ್ತಿರುವುದು ಬಿಡಿಬಿಡಿಯೂ ವ್ಯಕ್ತಿಗತವೂ ಆದ, ಸ್ವ-ಅರ್ಥದ, ನಮ್ಮ ನಮ್ಮ ಜೀವನಗಳನ್ನು ತಾನೆ? ಆ ಜೀವನಗಳ ಪ್ರೇರಣೆ ಮತ್ತು ಗುರಿ, ಎರಡೂ, ಆಗಿರುವುದು ಮತ್ತು ಆಗಬೇಕಾಗಿರುವುದು ಧೀ, ಧೀಶಕ್ತಿ ಅನ್ನುವುದು. ಆ ಧೀಶಕ್ತಿಯ ತಡೆಯಿಲ್ಲದ, ಎಗ್ಗಿಲ್ಲದ ಜಾಗೃತಿ ಮತ್ತು ವಿಸ್ತರಣೆಯೇ ಲೌಕಿಕ ಜೀವನದ ಉತ್ತುಂಗ. ಉತ್ತುಂಗದ ಆ ಸ್ಥಿತಿ ಸಾಧ್ಯವಾಗುವುದು ಲೋಕವನ್ನು ಕುರಿತಾದ ಕಾಳಜಿಯಲ್ಲಿ– ಭಾವ, ಧ್ಯಾನ, ಚಿಂತನೆ ಮತ್ತು ಕ್ರಿಯೆ, ಎಲ್ಲದರಲ್ಲಿಯೂ.

ಇದು ಹೀಗಿರುವಾಗ, ‘ಕಾಲ ಕೆಟ್ಟಿದೆ, ಇದು ಕೆಟ್ಟ ಕಾಲ’ ಎಂದು ನಾವು ಹೇಳುವುದು ನಮ್ಮ ಜೀವನವು ಕೆಟ್ಟಾಗ. ಜೀವನ ಕೆಟ್ಟಿದೆ ಎಂದು ನಮಗನ್ನಿಸುವುದು ದೇಶ, ಲೋಕಗಳು ಕೆಟ್ಟಿವೆ ಅನ್ನಿಸಿದಾಗ. ಆದರೆ, ನಿಜಕ್ಕೂ, ದೇಶ, ಲೋಕಗಳ ರೀತಿನೀತಿ ಮತ್ತು ಗುಣ ಹಾಗೂ ನಮ್ಮದೇ ವ್ಯಕ್ತಿಗತ-ಸಾಂಘಿಕ ರೀತಿನೀತಿ ಮತ್ತು ಗುಣ, ಇವು ಒಂದನ್ನೊಂದು ರೂಪಿಸುತ್ತಿರುತ್ತವೆ.

ಈಗ, ಇಲ್ಲಿ, ಹೊಣೆಗಾರಿಕೆಯ ಪ್ರಶ್ನೆ ಏಳುತ್ತದೆ. ಹೊಣೆಗಾರಿಕೆ ಯಾರದ್ದು ಹೆಚ್ಚು, ಯಾವುದರದ್ದು ಹೆಚ್ಚು? ಮನುಷ್ಯರ ರೀತಿನೀತಿ ಮತ್ತು ಗುಣವನ್ನು ರೂಪಿಸುವಲ್ಲಿ ದೇಶ ಮತ್ತು ಲೋಕಗಳ ಹೊಣೆಗಾರಿಕೆಯು ದೇಶ ಮತ್ತು ಲೋಕಗಳನ್ನು ರೂಪಿಸುವಲ್ಲಿ ಮನುಷ್ಯರು ಹೊರುವ ಹಾಗೂ ಹೊರಬೇಕಾಗಿರುವ ಹೊಣೆಗಿಂತ ಹೆಚ್ಚೋ, ಅಥವಾ ಕಡಿಮೆಯೋ? ಈ ಪ್ರಶ್ನೆಗೆ ನನಗೆ ತೋರುವ ಉತ್ತರ ಹೀಗಿದೆ.

ಯಾವುದೇ ದೇಶ-ಪ್ರದೇಶ-ಭೌಗೋಳಿಕ ಪರಿಸರಕ್ಕೆ, ಮನುಷ್ಯಜೀವಿಗಿರುವಂತೆ, ಪ್ರಜ್ಞೆ, ಧೀ ಅನ್ನುವುದು ಇರುವುದಿಲ್ಲ. ಅಂಥ ಯಾವುದೇ ಪರಿಸರವು ಪಾಲಿಸುವುದು ಋಗ್ವೇದವು ಹೇಳುವ ಋತ ಅನ್ನುವುದನ್ನು. ಸರ್ವವ್ಯಾಪಿಯಾದ ಆ ಋತ ತತ್ತ್ವ ಮತ್ತು ವ್ಯಾಪಾರದ ಮೂರ್ತರೂಪವಾಗಿದ್ದು ನಮ್ಮ ಅಳವಿಗೆ ನಿಲುಕುವ ಲೋಕಾಕೃತಿಯೇ ಸತ್: ನಮ್ಮ ಜೀವ, ಜೀವನ, ಮತ್ತು ಅವುಗಳು ಇರುವ ಪರಿಸರ. ಈಗ, ಅಂಥ ಯಾವುದೇ ಪರಿಸರವು ‘ನಾನು ನಿನ್ನನ್ನು ಪೊರೆಯುತ್ತೇನೆ’ ಎಂದು ಮನುಷ್ಯಜೀವಿಗೆ ಮಾತು ಕೊಟ್ಟಿಲ್ಲ, ಮತ್ತು ಆ ಜೀವಿಯನ್ನು ಪೊರೆಯುವುದು ಅದರ ಜವಾಬ್ದಾರಿಯೂ ಅಲ್ಲ. ಬದಲಾಗಿ, ಮನುಷ್ಯಜೀವಿಯೇ ಪರಿಸರವನ್ನು ಪೊರೆಯಬೇಕು; ಮತ್ತು, ಅದರಿಂದಾಗಿ, ತನ್ನ ಜೀವನವನ್ನು ಹಸನಾಗಿಟ್ಟುಕೊಳ್ಳಬೇಕು.

ಋತ ತತ್ತ್ವವನ್ನು ಹೀಗೆ ಲೌಕಿಕವಾಗಿ ಧಾರಣ ಮಾಡುವ, ಅದಕ್ಕೆ ಹೊಂದಿಕೊಂಡು ನಡೆಯುವ, ಮತ್ತು ಅದನ್ನು ಪೊರೆಯುವ ಈ ಶಕ್ತಿ ಮತ್ತು ಜವಾಬ್ದಾರಿಯನ್ನೇ ನಾವು ಸತ್‍ ಪಾಲನೆ, ಸತ್ಯಪಾಲನೆ, ಧರ್ಮಪಾಲನೆ, ಸದ್ಧರ್ಮದ ಪಾಲನೆ ಅನ್ನುವುದು ಮತ್ತು ಅನ್ನಬೇಕಾದದ್ದು. ಸದ್ಧರ್ಮವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು (ಕೂಡಕೂಡಲೇ ಅಲ್ಲದಿದ್ದರೂ ಮತ್ತು ಢಾಳುಢಾಳಾಗಿ ಅಲ್ಲದಿದ್ದರೂ, ಒಟ್ಟಂದದಲ್ಲಿ) ರಕ್ಷಿಸುತ್ತದೆ. ಅಂಥ ಆ ಸದ್ಧರ್ಮವನ್ನು ಪಾಲಿಸುವ ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ಪೂರೈಸದಿದ್ದಾಗ ಸತ್ ಅನ್ನುವುದು - ಲೋಕ, ಇರುವಿಕೆ, ಬದುಕು, ಜೀವನ ಅನ್ನುವುದು – ಕೆಡುತ್ತದೆ; ನಮ್ಮ ಎಲ್ಲವೂ ಕೆಡುತ್ತದೆ. ನಾವೋ, ‘ಕಾಲ ಕೆಟ್ಟಿದೆ, ಲೋಕ ಕೆಟ್ಟಿದೆ’ ಎಂದು ಗೊಣಗುತ್ತ, ನಮ್ಮನಮ್ಮನ್ನು ನಾವು ನಿಜಕ್ಕೂ ತಿದ್ದಿಕೊಳ್ಳದೆ, ಎಲ್ಲವನ್ನೂ ಇನ್ನಷ್ಟು ಹಾಳುಗೆಡವುತ್ತ ಸಾಗುತ್ತೇವೆ.

ಹಾಗಾಗಿ, ಈಗ, ಮತ್ತು ಯಾವತ್ತಿಗೂ, ಆಗಬೇಕಾದದ್ದು ಇದು.ನಮ್ಮನ್ನು ನಾವು ನಿರ್ದಾಕ್ಷಿಣ್ಯವಾಗಿ ತಿದ್ದಿಕೊಳ್ಳುತ್ತ, ಸದ್ಧರ್ಮವನ್ನು ಪಾಲಿಸುತ್ತಿರುವುದು. ಅಂಥದು ಸಾಧ್ಯವಾಗುವುದು ಧೀ ಅನ್ನುವುದು ಎಡೆಬಿಡದೆ ಎಚ್ಚತ್ತಿದ್ದಾಗ ಮಾತ್ರ.

ಆದರೆ, ನನಗೀಗ ಹೆಚ್ಚುಹೆಚ್ಚು ಅನ್ನಿಸುತ್ತಿದೆ.ಅಷ್ಟೇಕೆ, ಖಾತ್ರಿಯೇ ಆಗಿಬಿಟ್ಟಿದೆ.ಮನುಷ್ಯಜೀವಿ ಎಚ್ಚತ್ತುಕೊಳ್ಳುವುದಿಲ್ಲ; ಎಚ್ಚತ್ತುಕೊಳ್ಳುವುದರ ಚೇಷ್ಟೆ, ಹ್ಯಾಂವಾ ಮಾಡುತ್ತದೆ, ಅಷ್ಟೆ. ಅದರ ಧೀ ಅನ್ನುವುದು ನಂದುತ್ತಿದೆ, ಮತ್ತು ನಂದುತ್ತಲೇ ಹೋಗುತ್ತದೆ. ನಾವು, ಮನುಷ್ಯರು, ವಿನ್ಯಾಸಗೊಂಡಿರುವುದೇ, ಪ್ರೊಗ್ರಾಮ್ ಆಗಿರುವುದೇ, ಅಂಥ ಒಂದು ಐಬನ್ನು ಹೊತ್ತು. ಆ ಐಬು ಮುಂದಿನ ವರ್ಷವೋ, ಆಮೇಲೆಯೋ ಕೊಂಚವಾದರೂ ಕಮ್ಮಿಯಾಗುತ್ತದೆ ಎಂಬ ಭರವಸೆ ನನಗಂತೂ ಇಲ್ಲ; ಕಮ್ಮಿಯಾಗಲಿ ಎಂಬ ಆಸೆ ಇದೆ, ಭರವಸೆ ಇಲ್ಲ. ಕಾದಿರುವುದು ಪ್ರಳಯವೇ, ಸರ್ವನಾಶವೇ. ಆದರೂ, ಇಸವಿ 2020 ಕುರಿತು ಹಗಲುಗನಸು ಕಾಣಲು ಅಡ್ಡಿಯೇನು? ಆದ್ದರಿಂದ…

* ಪೌರತ್ವ ತಿದ್ದುಪಡಿ ಕಾಯ್ದೆ 2019, ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ಯೋಜನೆಗಳು ಸಂಪೂರ್ಣ ರದ್ದಾಗಲಿ.

* ಕಾಶ್ಮೀರದಲ್ಲಿ ಮತ್ತೆ ಪ್ರಜಾಪ್ರಭುತ್ವದ ಸ್ಥಾಪನೆಯಾಗಿ, ಅಲ್ಲಿನ ಜನರು ಭಾರತದ ಜೊತೆ ಎಂಥ ಸಂಬಂಧ ಇಟ್ಟುಕೊಳ್ಳಬೇಕೆಂದಿದ್ದಾರೆ ಎಂಬ ವಿಷಯದಲ್ಲಿ ಅವರ ಮತಯಾಚನೆ - ನಿಜವಾದ ರೆಫರೆಂಡಮ್, ಪ್ಲೆಬಿಸೈಟ್– ಆಗಲಿ, ಮತ್ತು ಆ ಜನಮತವನ್ನು ನಮ್ಮ ಸರಕಾರವು ಶಿರಸಾವಹಿಸುವಂತಾಗಲಿ.

* ಬಾಬ್ರೀ ಮಸೀದಿ ಇದ್ದ ಜಾಗದ ಬಗೆಗಿನ ವಿವಾದ ಮತ್ತೊಮ್ಮೆ ವಿಚಾರಣೆಗೆ ಒಳಗಾಗಿ, ನ್ಯಾಯಯುತವಾಗಿ ಬಗೆಹರಿಯಲಿ. ಸುನ್ನಿ ವಕ್ಫ್ ಬೋರ್ಡ್‍ನವರಿಗೆ ನ್ಯಾಯ ಸಿಕ್ಕಲಿ. ಈ ಬಾರಿಯ ವಿಚಾರಣೆಯಲ್ಲಿ ನಿಜಕ್ಕೂ ಸಂವಿಧಾನದ ಮೌಲ್ಯಗಳನ್ನು, ಮತ್ತು ಅಸಲಿ ವಿವೇಕ-ವಿವೇಚನೆಯ ಶುದ್ಧತೆಯನ್ನು ಎತ್ತಿ ಹಿಡಿದಿರುವುದು ಕಾಣಲಿ.

* ಸಿಪಿಐ, ಸಿಪಿಎಮ್‍ನಂಥ ಎಡಪಕ್ಷಗಳು ದೊಡ್ಡಮಟ್ಟದಲ್ಲಿ ಚೇತರಿಸಿಕೊಳ್ಳುವ ವಿದ್ಯಮಾನವು ದೊಡ್ಡಮಟ್ಟದಲ್ಲಿಯೇ ಕಾಣಿಸಿಕೊಳ್ಳಲಿ.

* ರೊಹಿಂಗ್ಯಾ ಮುಸ್ಲಿಮರು, ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬರುತ್ತಿರುವ ಕಡುಬಡವರು, ಇವರ ಬವಣೆ ಕುರಿತು, ಕ್ರಮವಾಗಿ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ ಜೊತೆ ಸಾವಧಾನವಾದ ಮಾತುಕತೆ ಆಗಿ, ಆ ಸಂತ್ರಸ್ತರಿಗೆ ಮತ್ತು ಬಡವರಿಗೆ, ಅವರ ಆ ದೇಶಗಳಲ್ಲಿಯೇ, ನಿಜಕ್ಕೂ ನ್ಯಾಯ ಸಲ್ಲುವಂತೆ ಅಂತಾರಾಷ್ಟ್ರೀಯ ಒತ್ತಡವನ್ನು ಬೀರುವಲ್ಲಿ ಭಾರತವು ಮುಂಚೂಣಿಯಲ್ಲಿರಲಿ. ಆ ದೇಶಗಳ ಮೇಲೆ ನಮ್ಮ ದೇಶವು ಒತ್ತಡ ಹೇರುವುದು ಮಾತ್ರವಲ್ಲದೆ, ಹಿರಿಯಕ್ಕನಾಗಿ ಅವುಗಳಿಗೆ ನೆರವು ಮತ್ತು ಒತ್ತಾಸೆಯನ್ನು ಕೂಡ ನೀಡುವಂತಾಗಲಿ.

* ಯುಎಪಿಎ ಕಾಯ್ದೆಯ ಅಡಿ ಸೆರೆಯಾಗಿರುವ ಸುಧಾ ಭಾರದ್ವಾಜ್ ಮುಂತಾದವರು, ಮತ್ತು ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿಗಳು – ಇವರೆಲ್ಲರೂ ತಮ್ಮ ಮೇಲಿನ ಖಟ್ಲೆಗಳಿಂದ ಬೇಷರತ್ ಖುಲಾಸೆಗೊಳ್ಳಲಿ.

* ಝಾರ್ಖಂಡದಲ್ಲಿ ಹತ್ತು ಸಾವಿರ ಆದಿವಾಸಿಗಳ ಮೇಲೆ ಹೂಡಲಾಗಿರುವ ದೇಶದ್ರೋಹದ ಆಪಾದನೆಯ ಕೇಸನ್ನು ಸರಕಾರವು ವಾಪಸ್ ತೆಗೆದುಕೊಂಡು, ಅವರ ಕ್ಷಮೆ ಕೇಳಲಿ.

* ನಮ್ಮ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರದ ವತಿಯಿಂದಲೂ, ಗಾರ್ಮೆಂಟ್ ಕೆಲಸಗಾರರಿಗೆ ಆ ಉದ್ಯಮದ ಮಾಲಿಕರುಗಳಿಂದಲೂ ಸಂಪೂರ್ಣ ನ್ಯಾಯ ದೊರಕಿ, ಅವರು ತಮ್ಮ ದುಡಿಮೆಗೆ ತಕ್ಕ ವೇತನ ಮತ್ತು ಸವಲತ್ತುಗಳನ್ನು ಪಡೆಯುವಂತಾಗಲಿ.

* ಜನರು ಮೋಟಾರು ಗಾಡಿಗಳನ್ನು ಕೊಳ್ಳುವುದು ಕಮ್ಮಿ ಆಗಿ, ಅವುಗಳ ಉತ್ಪಾದನೆಯ ಉದ್ಯಮಕ್ಕೆ ಹೊಡೆತಬಿದ್ದಿದೆ ಎಂಬ ಸುದ್ದಿಯಿಂದ ನನಗೆ ಸಂತೋಷವೇ ಆಗಿದೆ! ಆ ಉದ್ಯಮ ಬಹಳವಾಗಿ ಚೇತರಿಸಿಕೊಳ್ಳದಿರಲಿ. ಮೋಟಾರುಗಾಡಿಗಳ ಉತ್ಪಾದನೆ ತೀರ ಕಮ್ಮಿಯಾಗಲಿ. ಆದರೆ, ಅಲ್ಲಿನ ಕೆಲಸಗಾರರಿಗೆ ಬೇರೆ ಕೆಲಸಗಳು ಸಿಕ್ಕುವ ವ್ಯವಸ್ಥೆಯಾಗಲಿ. ಜೊತೆಗೆ, ಬಸ್ಸು, ರೈಲ್ವೇ ಮತ್ತು ಮೆಟ್ರೋಗಳ ವ್ಯವಸ್ಥೆಗಳು ಹತ್ತು,ಇಪ್ಪತ್ತು ಪಟ್ಟು ಬೆಳೆಯುವತ್ತ ದೊಡ್ಡಹೆಜ್ಜೆಗಳು ಮೂಡುವಂತಾಗಲಿ.

* ಎತ್ತಿನಹೊಳೆ ಯೋಜನೆ ಸಂಪೂರ್ಣ ರದ್ದಾಗಲಿ. ನಾಡಿನಾದ್ಯಂತ, ಅದರಲ್ಲಿಯೂ ಬೆಂಗಳೂರು ಜಿಲ್ಲೆಯಲ್ಲಿ, ಕೆರೆಗಳೆಲ್ಲ ಚೊಕ್ಕವಾಗಲಿ. ಬೆಂಗಳೂರಿಗರಿಗೆ ಕುಡಿಯುವ ನೀರು, ಮತ್ತು ಬೇರೆ ಬಳಕೆಗಾಗಿನ ನೀರು, ಇವುಗಳ ಬಹುಭಾಗವು ಜಿಲ್ಲೆಯ ಕೆರೆಗಳಿಂದಲೇ ಸಿಕ್ಕುಬೇಕು ಎಂಬ ಸಂಕಲ್ಪ ಬರುವ ವರ್ಷದಲ್ಲಿಯಾದರೂ ಮೂಡಲಿ.

* ಕೆಸಿ ಕಣಿವೆ ಯೋಜನೆ ಸಂಪೂರ್ಣ ರದ್ದಾಗಲಿ. ಬೆಂಗಳೂರಿನ ಜನ, ಬೆಂಗಳೂರು ನಗರ, ಹಾಗೂ ಜಿಲ್ಲಾಡಳಿತಗಳು ತಮ್ಮ ಎಲ್ಲ ಬಗೆಯ ಉಚ್ಛಿಷ್ಟದ ಪರಿಣಾಮವನ್ನು ತಾವೇ ಹೊತ್ತುಕೊಂಡು, ಅದರ ಕಷ್ಟಸುಖಗಳನ್ನು ತಾವೇ ಭೋಗಿಸುವಂತಾಗಲಿ.

* ನಮ್ಮ ರಾಜ್ಯದಲ್ಲಿ ತಲೆಗೊಂದರಂತೆ ಎದ್ದಿರುವ ವಿಷಯಕೇಂದ್ರಿತ ವಿಶ್ವವಿದ್ಯಾಲಯಗಳು ತಮಗಿರುವ ವಿಶ್ವವಿದ್ಯಾಲಯ ಎಂಬ ಪಟ್ಟವನ್ನು ಕಳೆದುಕೊಳ್ಳಲಿ. ಅವುಗಳು ಕೇವಲ ಅಧ್ಯಯನ ಸಂಸ್ಥೆಗಳಾಗಿ, ಸಂಶೋಧನ ಸಂಸ್ಥೆಗಳಾಗಿ ಮಾರ್ಪಡಲಿ. ಆದರೆ, ಅದರಿಂದ ಈಗ ಅವುಗಳಲ್ಲಿ ಕೆಲಸಮಾಡುತ್ತಿರುವವರ ಸಂಬಳ-ಸಾರಿಗೆಗೆ ತೊಂದರೆಯಾಗದಿರಲಿ. ಅವುಗಳ ಕುಲಪತಿಗಳಿಗೆ ತೊಂದರೆಯಾಗಲಿ, ಬೇಕಾದರೆ!

* ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವು ಊರ್ಜಿತಗೊಳ್ಳಲಿ. ಅದನ್ನು ಶಾಸ್ತ್ರೀಯ ಎಂದು ಕರೆಯದೆ, ಅಭಿಜಾತ ಎಂದು ನಾವು ಕರೆಯುವಂತಾಲಿ. ಎಲ್ಲ ಹಳಗನ್ನಡ, ನಡುಗನ್ನಡ ಕೃತಿಗಳು, ಹಾಗೂ ಕಾಪಿರೈಟ್ ತೀರಿರುವ ಅರ್ವಾಚೀನ ಮತ್ತು ಆಧುನಿಕ ಕೃತಿಗಳೆಲ್ಲವೂ, ಅಂತರಜಾಲದಲ್ಲಿ ಯೂನಿಕೋಡ್‍ನಲ್ಲಿ, ಸರ್ಚಬಲ್ ಆಗಿ ಲಭ್ಯವಾಗುವಂತಾಗಲಿ.

* ನಮ್ಮ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳು ಮತ್ತೆ ತಲೆದೋರಲಿ. ಆ ವಿದ್ಯಾರ್ಥಿ ಸಂಘಗಳು ಮತ್ತು ನಮ್ಮ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘಗಳು ಪ್ರಖರವಾದ ಸಮಾಜವಾದೀ ಆಶಯಗಳುಳ್ಳವರ ನೇತೃತ್ವದಲ್ಲಿದ್ದು ಸಮಾಜವನ್ನು ಎಚ್ಚರಿಸಲಿ. ಸಮಾಜವೊಂದರ ವಿಶ್ವವಿದ್ಯಾಲಯಗಳು ಸಮಾಜವಾದೀ ರಾಜಕೀಯ ಪ್ರಜ್ಞೆಯಿಲ್ಲದ, ತೀವ್ರ ತತ್ತ್ವಶೋಧ ಮಾಡದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ತುಂಬಿದ್ದರೆ, ಅದೊಂದು ದರಿದ್ರ ಸಮಾಜವೇ ಹೌದಲ್ಲವೇ?

* ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಡೋನಾಲ್ಡ್ ಟ್ರಂಪ್ ಅಲ್ಲಿನ ಸದನಗಳ ಬಿಗಿಯಾದ ವಾಗ್ದಂಡನೆಗೆ ಗುರಿಯಾಗಿ, ಅಧ್ಯಕ್ಷ ಪಟ್ಟದಿಂದ ತೊಲಗುವಂತಾಗಲಿ. 2020ರ ನವೆಂಬರ್‌ನಲ್ಲಿ ಅಲ್ಲಿ ಜರುಗಲಿರುವ ಚುನಾವಣೆಯಲ್ಲಿ ಬರ್ನೀ ಸ್ಯಾಂಡರ್ಸ್ ಇಲ್ಲವೆ ಎಲಿಜ಼ಬೆಥ್ ವಾರೆನ್ – ಸ್ಯಾಂಡರ್ಸ್ ಅವರೇ ಆದರೆ ಒಳ್ಳೆಯದು- ಗೆದ್ದು ಬರುವಂತಾಗಲಿ. ಲ್ಯಾಟಿನ್ ಅಮೇರಿಕಾದಲ್ಲಿ ಮತ್ತೆ ಸಮಾಜವಾದೀ ಸರಕಾರಗಳು ಅಧಿಕಾರಕ್ಕೆ ಬರಲಿ, ಬಲಗೊಳ್ಳುವಂತಾಗಲಿ. ಸೌದಿ ಅರೇಬಿಯಾದ ರಾಜಮನೆತನ ಮತ್ತು ಅವರ ವಹಾಬಿ ಆಡಳಿತಗಳ ಪತನವಾಗಿ, ಅಲ್ಲಿ ನಿಜಕ್ಕೂ ಉದಾರವಾದಿಯಾದ ಪ್ರಜಾಪ್ರಭುತ್ವ ನೆಲಸುವಂತಾಗಲಿ. ಇನ್ನು, ಆಫ್ರಿಕಾ… ನನಗೀಗ ಮಾತು ಸೋಲುತ್ತಿದೆ. ಆ ನತದೃಷ್ಟ, ದುಃಖತಪ್ತ ಭೂಭಾಗದಲ್ಲಿ ಶಾಂತಿ ಮತ್ತು ಸಮೃದ್ಧತೆಗಳು ನೆಲಸುವತ್ತ ಮೊದಲ ಹೆಜ್ಜೆಗಳು ಮೂಡುವಂತಾಗಿ, ಅದಕ್ಕೆ ಜಗತ್ತಿನ ಉಳಿದೆಲ್ಲ ದೇಶಗಳು (ವಿಶೇಷವಾಗಿ ಯೂರೋಪು ಹಾಗೂ ಉತ್ತರ ಅಮೆರಿಕೆಯ ದೇಶಗಳು) ಬಾಧ್ಯವಾಗಲಿ.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ. ಸಂಚಿಕೆ: 2 ಜನವರಿ, 2020)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT