ಘಟನೆಗೂ ನನಗೂ ಸಂಬಂಧ ಇಲ್ಲ: ಶಿವಪ್ಪ

7
ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ

ಘಟನೆಗೂ ನನಗೂ ಸಂಬಂಧ ಇಲ್ಲ: ಶಿವಪ್ಪ

Published:
Updated:
Deccan Herald

ಚಾಮರಾಜನಗರ: ‘ಬೇಡರಪುರ ಗ್ರಾಮದ ಮಲ್ಲಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅವರು ನನಗೇ ಕಿರುಕುಳ ನೀಡುತ್ತಿದ್ದಾರೆ’ ಎಂದು ಅದೇ ಗ್ರಾಮದ ನಿವಾಸಿ ಶಿವಪ್ಪ ಶನಿವಾರ ಹೇಳಿದರು.

‘ಮಲ್ಲಯ್ಯ ಜಮೀನಿನ ಪಕ್ಕದಲ್ಲೇ, ಸರ್ವೆ ನಂ. 33ರಲ್ಲಿ ನನ್ನ 30 ಗುಂಟೆ ಜಮೀನಿದೆ. 1977–78ರಲ್ಲೇ ಈ ಜಾಗ ನನ್ನ ಹೆಸರಿಗೆ ನೋಂದಣಿಯಾಗಿದೆ. ಇದಕ್ಕೆ ಸಂಬಂಧಿಸಿದ ಪಹಣಿ ಹಾಗೂ ಇತರ ದಾಖಲೆಗಳು ಇವೆ. ಅವರ ಕುಟುಂಬ ಪ್ರಸ್ತಾಪಿಸಿರುವ ಉಳಿದ ಮೂರೂವರೆ ಎಕರೆ ಜಾಗದಲ್ಲಿ ನಾನೇ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇನೆ. ಇದನ್ನು ಸಕ್ರಮ ಮಾಡಿಕೊಡಬೇಕು ಎಂದು 1999ರಲ್ಲೇ ನಾನು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ, ನನ್ನ ಜಮೀನಿಗೆ ಹೋಗಲು ಅವರು ಬಿಡುತ್ತಿಲ್ಲ. ನನ್ನ ವಿರುದ್ಧ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು.

‘ಸೆಪ್ಟೆಂಬರ್‌ 28ರಂದು ಜಮೀನಿನಲ್ಲಿ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದಾಗ, ಮಲ್ಲಯ್ಯ–ದೊಡ್ಡಮ್ಮನ ಮಗ ಎಂ. ಕುಮಾರ್‌, 2ನೇ ಮಗ ಮಹೇಶ ಮತ್ತು ಅವರ ಸಂಬಂಧಿ ಮಹದೇವಸ್ವಾಮಿಯ ತಮ್ಮ ರಾಜು ಎಂಬುವವರು ಬಂದು ಬಿತ್ತನೆ ಮಾಡದಂತೆ ಜಗಳ ಮಾಡಿದ್ದಾರೆ. ನನ್ನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿದ್ದಾರೆ. ಹಾಗಾಗಿ ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದೆ. ಪೊಲೀಸರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದರು. ಅವರ ಬಳಿ ಕೇಳುವಾಗ ದಾಖಲೆಗಳಿಲ್ಲ ಎಂದು ಹೇಳಿದರು. ಇದು ಸಿವಿಲ್‌ ಪ್ರಕರಣ ಆದ ಕಾರಣ, ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ. ಅವರು ಕೂಡ ಯಾವುದೇ ರೀತಿಯ ಬೆದರಿಕೆ ಹಾಕುವುದಿಲ್ಲ ಎಂದು ಲಿಖಿತವಾಗಿ ಹೇಳಿದ್ದಾರೆ. ಹಾಗಿದ್ದರೂ ಈ ರೀತಿ ಮಾಡಿದ್ದಾರೆ’ ಎಂದರು.

ಆಸ್ತಿ ಮಾರಾಟ ಮಾಡಿಲ್ಲ: ‘ನಾನು ಆಸ್ತಿಯನ್ನು ನಂಜುಂಡಸ್ವಾಮಿ ಅವರಿಗೆ ಅಥವಾ ಬೇರೆಯವರಿಗೆ ಆಗಲಿ ಮಾರಾಟ ಮಾಡಿಲ್ಲ. ಆರೋಪ ಸುಳ್ಳು. ನಂಜುಂಡಸ್ವಾಮಿ ಅವರ ಅಕ್ಕನ ಮಕ್ಕಳು ಹಾಗೂ ಮಲ್ಲಯ್ಯನ ಕುಟುಂಬದವರು ಸಂಬಂಧಿಕರು’ ಎಂದು ಅವರು ಹೇಳಿದರು.

ಸ್ಥಳೀಯ ಮುಖಂಡ ರಾಜ್‌ ಗೋಪಾಲ್, ಬೇಡರಪುರ ನಿವಾಸಿ ಶ್ರೀನಿವಾಸ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !