ಮೃತರ ಕುಟುಂಬಗಳಿಗೆ ತಲಾ ₹10 ಸಾವಿರ ಧನಸಹಾಯ

7
ಸುಳ್ವಾಡಿ ದುರಂತ: ಮೃತಪಟ್ಟವರಿಗೆ ಜಿ. ‌ಪಂ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ

ಮೃತರ ಕುಟುಂಬಗಳಿಗೆ ತಲಾ ₹10 ಸಾವಿರ ಧನಸಹಾಯ

Published:
Updated:
Prajavani

ಚಾಮರಾಜನಗರ: ಶುಕ್ರವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಸುಳ್ವಾಡಿ ದುರಂತ ಪ್ರಕರಣ ಪ್ರಸ್ತಾಪವಾಯಿತು. ಸಂತ್ರಸ್ತರ ಕುಟುಂಬಗಳಿಗೆ ಯಾವ ರೀತಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ನೆರವು ನೀಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಿತು.

ದುರ್ಘಟನೆಯಲ್ಲಿ ಮೃತಪಟ್ಟ 17 ಕುಟುಂಬಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ವತಿಯಿಂದ ತಲಾ ₹ 10 ಸಾವಿರ ಧನಸಹಾಯ ನೀಡುವ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

ಸಭೆ ಆರಂಭವಾಗುತ್ತಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ ಅವರು ಸುಳ್ವಾಡಿ ದುರಂತ ವಿಚಾರವನ್ನು ಪ್ರಸ್ತಾಪಿಸಿದರು. 

ಇದೊಂದು ಅಮಾನವೀಯ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಬಂಧನದಲ್ಲಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಸಂತ್ರಸ್ತ ಕುಟುಂಬದ ಸದಸ್ಯರು ಹೊಂದಿರುವ ಶೈಕ್ಷಣಿಕ ಅರ್ಹತೆಗೆ ಅನುಸಾರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಕೊಡಿಸಬೇಕು ಎಂದು ಆಗ್ರಹಿಸಿದರು.

ದುರಂತ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ಕ್ಷಿಪ್ರವಾಗಿ ಕೈಗೊಂಡ ಕ್ರಮಗಳಿಗೂ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಸದಸ್ಯ ಬಸವರಾಜು ಮಾತನಾಡಿ, ‘ದುರಂತ ನಡೆದ ನಂತರ ಜಿಲ್ಲಾಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ, ಹಲವು ಜೀವಗಳನ್ನು ರಕ್ಷಿಸಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು. ಈಗ ಪ್ರಾಣಾಪಾಯದಿಂದ ಪಾರಾಗಿ ಬಂದವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಜಿಲ್ಲಾ ಪಂಚಾಯಿತಿ ತನ್ನ ಕೈಲಾದ ಸಹಾಯ ಮಾಡಬೇಕು’ ಎಂದರು.

ಕಾಂಗ್ರೆಸ್‌ನ ಸದಾಶಿವಮೂರ್ತಿ ಮಾತನಾಡಿ, ‘ಇಂತಹ ಪೈಶಾಚಿಕ ಕೃತ್ಯಕ್ಕೆ ಕಾರಣರಾದವರಿಗೆ ಸಂವಿಧಾನದ ಅಡಿಯಲ್ಲಿ ನೀಡಬಹುದಾದ ಅತ್ಯಂತ ಕಠಿಣ ಶಿಕ್ಷೆಯೇ ವಿಧಿಸಬೇಕು. ಈಗ ಬದುಕಿ ಬಂದವರಿಗೆ ಜೀವನ ನಡೆಸಲು ಕಷ್ಟವಿದೆ. ಅವರಿಗೆ ನೆರವಾಗುವ ಕೆಲಸ ಆಗಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಎಂ.ರಾಮಚಂದ್ರ ಮಾತನಾಡಿ, ‘ಆ ಕ್ರಿಮಿನಾಶಕದ ಮಾರಾಟಕ್ಕೆ ಬೇರೆ ರಾಜ್ಯಗಳಲ್ಲಿ ನಿರ್ಬಂಧ ಇದೆ. ಅಂತಹದನ್ನು ಕರ್ನಾಟಕದಲ್ಲಿ ಯಾಕೆ ಮಾರಾಟ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕೃಷಿ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಘಟನೆಯಲ್ಲಿ ಸಂತ್ರಸ್ತರಾದವರಿಗೆ ಉದ್ಯೋಗ ಕೊಡಿಸುವ ಕೆಲಸ ಜಿಲ್ಲಾ ‌ಪಂಚಾಯಿತಿಯಿಂದ ಆಗಬೇಕು’ ಎಂದು ಒತ್ತಾಯಿಸಿದರು.

‘ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಭಾಗಿಯಾಗಿರುವುದು ದುರದೃಷ್ಟಕರ. ಸಂತ್ರಸ್ತರಾದವರಲ್ಲಿ ಹಲವರಿಗೆ ಮನೆಗಳಿಲ್ಲ. ಜಿಲ್ಲಾ ಪಂಚಾಯಿತಿ ಮೂಲಕ ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕು. ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಆಂಬುಲೆನ್ಸ್‌, ವೈದ್ಯರ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಸದಸ್ಯೆ ಶಶಿಕಲಾ ಹೇಳಿದರು. 

ಬಿಜೆಪಿಯ ಮಂಜುಳಾ ಕೌದಳ್ಳಿ ಮಾತನಾಡಿ, ‘ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಜಿಲ್ಲಾಡಳಿತ ಕ್ರಮ ‌ವಹಿಸಬೇಕು’ ಎಂದರು.

ಕಾಂಗ್ರೆಸ್‌ನ ಕೆರೆಹಳ್ಳಿ ನವೀನ್‌ ಮಾತನಾಡಿ, ‘ಜಿಲ್ಲಾ ಪಂಚಾಯಿತಿಯು ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು’ ಎಂದು ಹೇಳಿದರು.

ಸದಸ್ಯರಾದ ಜಯಂತಿ, ಉಮಾವತಿ, ನಾಗರಾಜ್‌, ಚೆನ್ನಪ್ಪ, ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಜಕ್ಷ ಜಗದೀಶ್‌ಮೂರ್ತಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೇಶ್‌ ಅವರು ಮಾತನಾಡಿ, ‘ಸಂತ್ರಸ್ತರಿಗೆ ಆರೋಗ್ಯ ಕಾರ್ಡ್‌ ವಿತರಿಸಿ, ಅವರಿಗೆ ಸರಿಯಾಗಿ ಔಷಧೋಪಚಾರ ಆಗುವಂತೆ ನೋಡಿಕೊಳ್ಳಬೇಕು. ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು’ ಎಂದರು.

‘ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಈಗಾಗಲೇ ಜಿಲ್ಲೆಯ ಹಾಗೂ ಮೈಸೂರು ವಕೀಲರು ಘೋಷಿಸಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ಕಡೆಗಳಲ್ಲೂ ವಕೀಲರು ಇದೇ ನಿರ್ಣಯ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾಗದೆ ಶೀಘ್ರ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಪರಿಹಾರ: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೆಲ್ಲ ಸೇರಿ ತಾತ್ಕಾಲಿಕ ಪರಿಹಾರವಾಗಿ ಮೃತಪಟ್ಟ ಕುಟುಂಬಗಳಿಗೆ ತಲಾ ₹ 10 ಸಾವಿರ ನೀಡಲಿದ್ದೇವೆ’ ಎಂದು ಘೋಷಿಸಿದರು. 

‘ಕೃಷಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಚಿಂತನೆ’
ಸುಳ್ವಾಡಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ, ಆರೋಪಿ ಅಂಬಿಕಾ‌ಗೆ ಕ್ರಿಮಿನಾಶಕ ಪೂರೈಸಿದ್ದ ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಕೃಷಿ ಇಲಾಖೆ ಚಿಂತನೆ ನಡೆಸಿದೆ.

ಸಭೆಯಲ್ಲಿ ಈ ವಿಷಯ ತಿಳಿಸಿದ ಹರೀಶ್‌ ಕುಮಾರ್‌ ಅವರು,ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರು ಈ ಬಗ್ಗೆ ವರದಿ ನೀಡುವಂತೆ ನನಗೆ ಸೂಚಿಸಿದ್ದಾರೆ’ ಎಂದು ಹೇಳಿದರು.

ಮೊದಲೇ ವರ್ಗ: ‘ಕೃಷಿ ಅಧಿಕಾರಿಯನ್ನು ಹರದನಹಳ್ಳಿಗೆ ಮೊದಲೇ ವರ್ಗಾಯಿಸಲಾಗಿತ್ತು. ಆದರೆ ಅಲ್ಲಿಗೆ ಬೇರೆ ಅಧಿಕಾರಿಗಳು ಬಾರದೇ ಇದ್ದುದರಿಂದ ಇವರು ಅಲ್ಲೇ ಇದ್ದರು. ಈ ಘಟನೆ ನಡೆದ ನಂತರ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಅವರು ಹೇಳಿದರು.

‘ಅಧಿಕಾರಿಯನ್ನು ವಜಾ ಮಾಡಿ’
ಬಿಜೆಪಿ ಸದಸ್ಯ ಬಾಲರಾಜು ಅವರು ಮಾತನಾಡಿ, ‘ಕೃಷಿ ಅಧಿಕಾರಿಯೊಬ್ಬರು ಆರೋಪಿ ಕೇಳಿದ ತಕ್ಷಣ ಅತ್ಯಂತ ವಿಷಕಾರಿಯಾದ ಕ್ರಿಮಿನಾಶಕವನ್ನು ಕೊಟ್ಟಿದ್ದಾರೆ. ಯಾಕೆ ಕೇಳಿದ್ದಾರೆ ಎಂಬುದನ್ನೂ ಪರಿಶೀಲಿಸದೆ ಕ್ರಿಮಿನಾಶಕ ಕೊಟ್ಟಿದ್ದು ಅಪರಾಧ. ಹೀಗಿರುವಾಗಲೇ ಅವರನ್ನು ಇಲಾಖೆ ಕೇಂದ್ರ ಸ್ಥಾನಕ್ಕೆ ವರ್ಗಾವಣೆ ಮಾಡಿದೆ. ಇದು ತಪ್ಪು. ಅವರನ್ನು ಕೆಲಸದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !