ಗುರುವಾರ , ನವೆಂಬರ್ 21, 2019
21 °C

‘ಸ್ಟಂಟ್‌ ನನ್ನ ಜೀವಾಳ’ ನಟ ಸುನಿಲ್ ಶೆಟ್ಟಿ

Published:
Updated:

ಬಾಲಿವುಡ್‌ನಲ್ಲಿ ಆ್ಯಕ್ಷನ್‌ ಹೀರೊ ಎಂದು ಗುರುತಿಸಿಕೊಂಡವರು ನಟ ಸುನಿಲ್‌ ಶೆಟ್ಟಿ. ಸ್ಟಂಟ್‌ ದೃಶ್ಯಗಳಿಂದಲೇ ಅವರು ಹೆಸರುವಾಸಿ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಪಾಯಕಾರಿಯಾದ ಸ್ಟಂಟ್‌ ದೃಶ್ಯಗಳನ್ನು ಮಾಡಲು ಕಾರಣಗಳೇನು ಎಂಬುದನ್ನು ಅವರು ಹೊರ ಹಾಕಿದ್ದಾರೆ. 

‌‘ನಟನೆಯಲ್ಲಿ ನನ್ನನ್ನು ನಾನು ಸಾಬೀತು ಮಾಡಿಕೊಳ್ಳಲು ಸ್ಟಂಟ್‌ಗಳನ್ನು ಮಾಡುತ್ತಿದ್ದೆ. ಆದರೆ ತುಂಬ ಅಪಾಯಕಾರಿಯಾದ ಸ್ಟಂಟ್‌ಗಳನ್ನು ಪ್ರಯೋಗ ಮಾಡುತ್ತಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ. 

‘ನನ್ನ ಮೊದಲ ಸಿನಿಮಾ ಸಂದರ್ಭದಲ್ಲಿ ಒಬ್ಬರು ನನ್ನನ್ನು ‘ಮರದ ವಸ್ತು’ ಎಂದು ಕರೆದು, ನನ್ನ ಕುಟುಂಬದ ವ್ಯಾಪಾರ ಹೋಟೆಲ್‌ ಉದ್ಯಮಕ್ಕೆ ವಾಪಸ್‌ ಮರಳುವಂತೆ ತಿಳಿಸಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ಅದಕ್ಕೆ ನಾನು ವಿಭಿನ್ನವಾಗಿ ಏನಾದರೂ ಮಾಡಬೇಕಿತ್ತು. ಸ್ಟಂಟ್‌ಗಳ ಮೂಲಕ ನನ್ನ ಪ್ರತಿಭೆ ಪ್ರದರ್ಶಿಸಿದೆ. ಇದನ್ನು ಪ್ರೇಕ್ಷಕರು ಒಪ್ಪಿಕೊಂಡರು’ ಎಂದು ಅವರು ಹೇಳಿಕೊಂಡಿದ್ದಾರೆ. 

‘ನನ್ನ ಮೊದಲ ಸಿನಿಮಾದ ಚಿತ್ರೀಕರಣದ ನೆನಪು ಈಗಲೂ ಇದೆ. ಈಜುಕೊಳ ಸಮೀಪ ಬೈಕ್‌ನಲ್ಲಿ ಕುಳಿತು ಬೆಂಕಿ ನಡುವೆ ಸ್ಟಂಟ್‌ ಮಾಡಬೇಕಿತ್ತು. ಇದು ತುಂಬ ಅಪಾಯಕಾರಿಯಾಗಿತ್ತು. ಆದರೆ ನಟನೆಯಲ್ಲಿ ನನ್ನನ್ನು ನಾನು ಸಾಬೀತು ಮಾಡಿಕೊಳ್ಳಬೇಕಿದ್ದರಿಂದ ನಟಿಸಿದೆ’ ಎಂದು ಹೇಳಿದ್ದಾರೆ. 

ಸುನಿಲ್‌ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ ‘ಆರ್‌ಎಕ್ಸ್‌ 100’ ಹಿಂದಿ ರಿಮೇಕ್‌ ಮೂಲಕ ಬಾಲಿವುಡ್‌ ಪ್ರವೇಶಕ್ಕೆ ಸಜ್ಜಾಗಿದ್ದಾರೆ. 

‘ನಾನು ಅಹಾನ್‌ಗೆ ಸಿನಿಮಾ ಬಿಡುಗಡೆಯಾಗುವಾಗ ತುಂಬ ಭಯಪಡಬೇಡ. ಕೆಲವೊಮ್ಮೆ ಯಶಸ್ಸು ಸಿಗುತ್ತದೆ. ಇನ್ನು ಕೆಲವು ಬಾರಿ ಸೋಲಾಗುತ್ತದೆ ಎಂದು ಯಾವಾಗಲೂ ಹೇಳುತ್ತಿರುತ್ತೇನೆ. ನನ್ನ ಮಗನಿಗೆ ಯಶಸ್ಸನ್ನು ನಿಭಾಯಿಸಲು ತಿಳಿದಿದೆ ಎಂಬುದು ನನಗೆ ಗೊತ್ತಿದೆ. ಆದರೆ ಸೋಲನ್ನು ನಿಭಾಯಿಸಲು ಅವನು ಸಿದ್ಧವಾಗಬೇಕು. ಜನರು ಅವನ ಬಗ್ಗೆ ಒಳ್ಳೆಯದು, ಕೆಟ್ಟದ್ದು ಎರಡನ್ನೂ ಬರೆಯಬಹುದು. ಅದನ್ನು ಅವನು ಸವಾಲಾಗಿ ತೆಗೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. 

ನಟ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಚಿತ್ರದಲ್ಲಿ ಸುನಿಲ್‌ ಶೆಟ್ಟಿ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)