ನೈರ್ಮಲ್ಯ ಜಾಗೃತಿಗೆ ‘ಸ್ವಚ್ಛ ಮೇವ ಜಯತೇ’

ಸೋಮವಾರ, ಜೂನ್ 17, 2019
25 °C
ಜೂನ್‌ 11ರಿಂದ ಜಿಲ್ಲೆಯಾದ್ಯಂತ ಒಂದು ತಿಂಗಳ ಅಭಿಯಾನ, ಜನರಿಗೆ ಸ್ವಚ್ಛತೆಯ ಪಾಠ

ನೈರ್ಮಲ್ಯ ಜಾಗೃತಿಗೆ ‘ಸ್ವಚ್ಛ ಮೇವ ಜಯತೇ’

Published:
Updated:
Prajavani

ಚಾಮರಾಜನಗರ: ಶೌಚಾಲಯ ಬಳಕೆ, ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪಂಚಾಯಿತಿಯು ಒಂದು ತಿಂಗಳ ಕಾಲ ‘ಸ್ವಚ್ಛ ಮೇವ ಜಯತೇ’ ಎಂಬ ವಿಶೇಷ ಆಂದೋಲನ ಹಮ್ಮಿಕೊಂಡಿದೆ. 

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೇ 11ರಿಂದ ಜುಲೈ 10ರ ವರೆಗೆ ಆಂದೋಲನ ನಡೆಯಲಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಯುವ ಆಂದೋಲನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ಜಿಲ್ಲೆಯನ್ನು ಈಗಾಗಲೇ ಬಯಲು ಶೌಚಾಲಯ ಮುಕ್ತ (ಒಡಿಎಫ್‌) ಎಂದು ಘೋಷಿಸಲಾಗಿದೆ. ಹಾಗಿದ್ದರೂ ನಗರ ಹಾಗೂ ಗ್ರಾಮೀಣಭಾಗಗಳಲ್ಲಿ ಶೇ 100ರಷ್ಟು ಮಂದಿ ಶೌಚಾಲಯಗಳನ್ನು ಬಳಸುತ್ತಿಲ್ಲ. ಶೌಚಾಲಯಗಳ ಬಳಕೆಗೆ ಜನರನ್ನು ಪ್ರೇರೇಪಿಸುವುದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಘನತ್ಯಾಜ್ಯದ ಸಮರ್ಪಕ ವಿಲೇವಾರಿ, ಜಲಮೂಲಗಳ ಸುತ್ತ ನೈರ್ಮಲ್ಯ ಕಾಪಾಡುವುದು, ನೀರಿನ ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಜನರಿಗೆ ತಿಳಿ ಹೇಳುವುದು ಆಂದೋಲನದ ಒಟ್ಟಾರೆ ತಿರುಳು.

ಈ ಅಭಿಯಾನದಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಕಲ್ಯಾಣ, ಪಂಚಾಯತ್‌ ರಾಜ್‌, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಭಾಗವಹಿಸಲಿವೆ. ಜೊತೆಗೆ ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಮತ್ತು ಇತರೆ ಸಂಘ ಸಂಸ್ಥೆಗಳು ಜಿಲ್ಲಾ ಪಂಚಾಯಿತಿಯೊಂದಿಗೆ ಕೈಜೋಡಿಸಲಿವೆ. ಶಾಲಾ ಮಕ್ಕಳೂ ಸಕ್ರಿಯರಾಗಿ ಪಾಲ್ಗೊಳ್ಳಲಿದ್ದಾರೆ. 

ಹೇಗಿರಲಿದೆ ಆಂದೋಲನ?: ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲದಕ್ಕೂ ದಿನಾಂಕ ನಿಗದಿಪಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಕಲಾವಿದರು ರಚಿಸಲಿದ್ದಾರೆ. ಮನೆ ಮನೆಗೆ ಹೋಗಿ ಕರಪತ್ರಗಳನ್ನು ಹಂಚುವ ಕೆಲಸವೂ ನಡೆಯಲಿದೆ. 

ಸ್ವಚ್ಛತಾ ರಥ: ಆಂದೋಲನ ನಡೆಯುವ ಒಂದು ತಿಂಗಳ ಕಾಲ, ಸ್ವಚ್ಛತೆಯ ಸಂದೇಶ ಸಾರುವ ಸ್ವಚ್ಛತಾ ರಥ ಜಿಲ್ಲೆಯಾದ್ಯಂತ ಸಂಚರಿಸಲಿದೆ. 

ಶೌಚಾಲಯಗಳ ಬಳಕೆ ಘನ ತ್ಯಾಜ್ಯ ನಿರ್ವಹಣೆಯ ವಿಧಾನಗಳು, ಹಸಿ ಕಸ ಹಾಗೂ ಒಣಕಸ ಬೇರ್ಡಿಸುವಿಕೆ, ಶೌಚ ಗುಂಡಿಯ ನಿರ್ಮಾಣ ಮತ್ತು ಉಪಯೋಗ, ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶೌಚಾಲಯಗಳ ಉಪಯೋಗ, ಮಕ್ಕಳಲ್ಲಿ ಶುಚಿತ್ವದ ಅಭ್ಯಾಸಗಳನ್ನು ರೂಢಿ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ವಚ್ಛತಾ ರಥ ಮಾಡಲಿದೆ.

ಮಕ್ಕಳಿಗೆ ಸ್ಪರ್ಧೆ, ಜಾಥಾ: ಶಾಲಾ ಮಕ್ಕಳ ಮೂಲಕ ಪೋಷಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಪ್ರಯತ್ನವನ್ನೂ ಜಿಲ್ಲಾ ಪಂಚಾಯಿತಿ ಮಾಡಲಿದೆ. ಇದೇ ಉದ್ದೇಶದಿಂದ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಿದೆ. ಇದರ ಜೊತೆಗೆ ಶಾಲಾ ಮಕ್ಕಳ ಜಾಥಾ, ರ‍್ಯಾಲಿಗಳನ್ನೂ ಹಮ್ಮಿಕೊಳ್ಳಲಾಗಿದೆ.

ಗ್ರಾಮಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕ ಯುವತಿಯರು, ಸಂಘ ಸಂಸ್ಥೆಗಳ ಸ್ವಯಂ ಸೇವಕರು, ಗ್ರಾಮಸ್ಥರ ನೆರವಿನಿಂದ ಶ್ರಮದಾನವೂ ನಡೆಯಲಿದೆ. 

ರೇಡಿಯೊ, ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ಸಂವಹನ ಮಾಧ್ಯಮಗಳ ಮೂಲಕವೂ ಜನರಿಗೆ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯ ಒಂದು ತಿಂಗಳಲ್ಲಿ ನಡೆಯಲಿದೆ.

‘ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಗ್ರಾಮ ನಿರ್ಮಾಣ ಗುರಿ’
‘ಸ್ವಚ್ಛ ಮೇವ ಜಯತೇ’ ಆಂದೋಲನದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೆ.ಎಸ್‌.ಲತಾಕುಮಾರಿ ಅವರು, ‘ಕುಡಿಯುವ ನೀರು ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದಕ್ಕೆ ನಾವು ಹೆಚ್ಚು ಗಮನ ಕೊಡಬೇಕಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ತ್ಯಾಜ್ಯ ನಿರ್ವಹಣೆ ಬಗ್ಗೆ ತಿಳಿ ಹೇಳಬೇಕಾದ ಅಗತ್ಯವಿದೆ. ಗ್ರಾಮಗಳಲ್ಲಿ ಹಸಿ ಕಸದ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಪ್ಲಾಸ್ಟಿಕ್‌ ಸೇರಿದಂತೆ ಇತರ ಒಣ ಕಸಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಅಗತ್ಯವಿದೆ’ ಎಂದರು. 

‘ನಮ್ಮ ಜಿಲ್ಲೆಯಲ್ಲಿ ಸುಮಾರು 70 ಗ್ರಾಮಗಳಲ್ಲಿ 5000ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಇಲ್ಲೆಲ್ಲ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೆ ಬರಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪ್ಲಾಸ್ಟಿಕ್‌ನಿಂದ ಮುಕ್ತವಾದ ಸ್ವಚ್ಛ ಗ್ರಾಮಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ’ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !