ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit: ಬೆಂಗಳೂರು ಅರಮನೆ ಆವರಣದಲ್ಲಿ ಚಂದ್ರಯಾನ ಯೋಜನೆಯ ಅನಾವರಣ

Published 29 ನವೆಂಬರ್ 2023, 12:44 IST
Last Updated 29 ನವೆಂಬರ್ 2023, 12:44 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–3ರ ಯಶಸ್ಸು ಇಡೀ ಜಗತ್ತನ್ನೇ ಭಾರತದತ್ತ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ)ದತ್ತ ಕುತೂಹಲದಿಂದ ನೋಡುವಂತೆ ಮಾಡಿದೆ. ಇದರ ಸಂಪೂರ್ಣ ಮಾಹಿತಿಗಾಗಿ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಪ್ರತ್ಯೇಕ ಆವರಣವನ್ನೇ ಸಜ್ಜುಗೊಳಿಸಲಾಗಿದೆ.

ಗೋಲಾಕಾರದ ಟೆಂಟ್‌ನೊಳಗೆ ಬಾಹ್ಯಾಕಾಶದ ಪ್ರತಿಕೃತಿಯನ್ನೇ ಸಿದ್ಧಪಡಿಸಲಾಗಿದೆ. ಅದರೊಳಗೆ ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್‌ನ ನೈಜ ಗಾತ್ರದ ಪ್ರತಿಕೃತಿಗಳನ್ನೇ ಇಡಲಾಗಿದೆ. ಚಂದ್ರನ ಮೇಲೆ ಕಳೆದ ಆ. 23ರಂದು ಸುರಕ್ಷಿತವಾಗಿ ಇಳಿದ ವಿಕ್ರಂ ಲ್ಯಾಂಡರ್‌ನ ಚಿತ್ರಣವೇ ಇಲ್ಲಿ ಕಣ್ಣಮುಂದೆ ಬಂದು ನಿಲ್ಲುವಂತಿದೆ. ಜತೆಗೆ ಮರು ದಿನ ಲ್ಯಾಂಡರ್‌ನಿಂದ ರ‍್ಯಾಂಪ್ ಮೂಲಕ ಹೊರಬಂದ ರೋವರ್‌ನ ಚಿತ್ರಣವೂ ಇಲ್ಲಿ ಕಾಣ ಸಿಗಲಿದೆ.

ಇಲ್ಲೇ ಇರುವ ಇಸ್ರೊದ ತಂತ್ರಜ್ಞರು ಚಂದ್ರಯಾನದ ಮಾಹಿತಿ ನೀಡುತ್ತಾರೆ. ಜತೆಗೆ ಗೋಡೆಗಳಿಗೆ ಚಂದ್ರಯಾನ ಯೋಜನೆಯ ಪ್ರತಿ ಹಂತದ ಚಿತ್ರಗಳು, ಅದರ ಮಾಹಿತಿಗಳು ಲಭ್ಯ.

ಇದರ ಜತೆಯಲ್ಲೇ ಇಸ್ರೊ ತನ್ನ ಯೋಜನೆಗಳಲ್ಲಿ ಬಳಸುವ ಪ್ರಮುಖ ರಾಕೆಟ್‌ಗಳ ಪ್ರತಿಕೃತಿಯನ್ನು ನೋಡುವುದರ ಜತೆಗೆ ತಂತ್ರಜ್ಞಾನದ ಮಾಹಿತಿಯೂ ಇಲ್ಲಿ ಲಭ್ಯ. ಜತೆಗೆ ರಾಕೇಟ್‌ ನಿರ್ಮಾಣದಲ್ಲಿ ಇತರ ಬಿಡಿಭಾಗಗಳನ್ನು ಪೂರೈಕೆ ಮಾಡುವ ಕೆಲ ಕಂಪನಿಗಳೂ ಇದರಲ್ಲಿ ಮಾಹಿತಿ ನೀಡುತ್ತಿವೆ.

ಇದರೊಂದಿಗೆ ಯುವ ಸಮುದಾಯವನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು, ‘ತಾರೇ ಜಮೀನ್‌ ಪರ್‌’ ಎಂಬ ತಾರಾಲಯ. ಇದರೊಳಗೆ ಬಾಹ್ಯಾಕಾಶದ ಚಿತ್ರಣದ ಜತೆಗೆ, ಮಾಹಿತಿ ಲಭ್ಯ. ಇದರೊಳಗೆ ಹೋಗಿ ಬಾಹ್ಯಾಕಾಶದ ಪ್ರವಾಸ ಮಾಡಲು ಯುವಕ ಹಾಗೂ ಯುವತಿಯರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಚಂದ್ರಯಾನ ವಿಭಾಗಕ್ಕೆ ಭೇಟಿ ನೀಡಿದವರೆಲ್ಲರೂ ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್‌ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT