ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಕೃತಕ ಬುದ್ಧಿಮತ್ತೆಗಾಗಿ ಭಾರತದತ್ತ ಜಗದ ಚಿತ್ತ: ರಾಜೀವ್ ಚಂದ್ರಶೇಖರ್

Published 30 ನವೆಂಬರ್ 2023, 15:43 IST
Last Updated 30 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃತಕ ಬುದ್ಧಿಮತ್ತೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ಸುರಕ್ಷಿತ ಹಾಗೂ ನಂಬಲರ್ಹ ತಂತ್ರಾಂಶಕ್ಕಾಗಿ ಇಡೀ ಜಗತ್ತು ಭಾರತದತ್ತ ತನ್ನ ನಿರೀಕ್ಷೆಯ ನೋಟ ನೆಟ್ಟಿದೆ. ಇದು ಪರಿಣಿತ ತಂತ್ರಜ್ಞರ ಬೇಡಿಕೆಯನ್ನು ಹೆಚ್ಚಿಸಿದೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ರಾಜ್ಯ ಮಂತ್ರಿ ರಾಜೀವ್ ಚಂದ್ರಶೇಖರ್ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದ 2ನೇ ದಿನವಾದ ಗುರುವಾರದಂದು ನಡೆದ ಫೈರ್‌ಸೈಡ್‌ ಚಾಟ್‌ನಲ್ಲಿ ಎಎಂಡಿ ಇಂಡಿಯಾ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥೆ ಜಯಾ ಜಗದೀಶ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಈ ವಿಷಯ ಹಂಚಿಕೊಂಡರು.

‘ಪ್ರಧಾನಮಂತ್ರಿ ಅವರ ಯೋಜನೆಯಂತೆ ಮುಂದಿನ ಕೆಲವೇ ವರ್ಷಗಳಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಹಾಗೂ ಹೆಚ್ಚಿನ ಪದವಿ ಪಡೆದ 2 ಲಕ್ಷ ಪರಿಣತರನ್ನು ಸಜ್ಜುಗೊಳಿಸುವ ಅಗತ್ಯವಿದೆ. ಇದರೊಂದಿಗೆ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವ ಭಾರತ, ಚಿಪ್‌ ತಯಾರಿಕೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಸೃಷ್ಟಿಯಾಗಲಿವೆ’ ಎಂದರು.

‘ಬೆಳೆಯುತ್ತಿರುವ ಈ ಕ್ಷೇತ್ರವನ್ನೇ ಗುರಿಯಾಗಿಟ್ಟುಕೊಂಡು ಜ. 10 ರಂದು ಇಂಡಿಯಾ ‘ಎಐ ಸಮ್ಮಿಟ್‌’ ಅನ್ನು ಆಯೋಜಿಸಲಾಗುತ್ತಿದೆ. ಐಟಿ ಹಾಗೂ ಐಟಿಇಎಸ್‌ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮರೆದಿದ್ದ ಭಾರತ, ಭವಿಷ್ಯದಲ್ಲಿ ಎಐ, ಸೆಮಿಕಂಡಕ್ಟರ್‌, ವೆಬ್‌3, ಸೂಪರ್‌ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್‌, ಮೈಕ್ರೊ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅನುಕೂಲವಾಗಲಿದೆ. ಇದು ಈ ಕ್ಷೇತ್ರವನ್ನು ನಿರೀಕ್ಷಿತ 1.3 ಟ್ರಿಲಿಯನ್ ಡಾಲರ್‌ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯುವ ವಿಶ್ವಾಸವಿದೆ’ ಎಂದರು.

‘ಭಾರತದ ಇಂದಿನ ಸಾಧನೆಯು ಯುವ ತಂತ್ರಜ್ಞರಲ್ಲಿನ ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದಾಗಿದೆ. ಹಿಂದೆ ಕೇವಲ 9 ದೊಡ್ಡ ಉದ್ಯಮಿಗಳ ಬಳಿ ಶೇ 97ರಷ್ಟು ಆರ್ಥಿಕತೆ ಇತ್ತು. ಆದರೆ ಹೊಸ ನೀತಿಯ ಪರಿಣಾಮವಾಗಿ ದೇಶದ ಆರ್ಥಿಕತೆಯಲ್ಲಿ ನವೋದ್ಯಮಗಳ ಪಾಲು ಪಡೆಯುವಂತಾಗಿದೆ. 1960 ರಲ್ಲೇ ಜಗತ್ತಿನ ಅತಿ ದೊಡ್ಡ ಸೆಮಿಕಂಡಕ್ಟರ್ ಕಂಪನಿ ಭಾರತವನ್ನು ಆಯ್ಕೆ ಮಾಡಿತ್ತು. ಆದರೆ ಆಗಿನ ಸಮಾಜವಾದಿಗಳು ಅದನ್ನು ವಿರೋಧಿಸಿದ್ದರು. ಆದರೆ ಈಗ ಒಂದು ತಲೆಮಾರನ್ನೇ ದಾಟಿ ಸರ್ಕಾರ ಮುಂದೆ ಹೋಗಿರುವ ಪರಿಣಾಮ ಜಗತ್ತು ಭಾರತದಲ್ಲಿ ಕಂಪನಿ ಸ್ಥಾಪಿಸುವ ಉತ್ಸುಕತೆ ತೋರುತ್ತಿವೆ’ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಬೆಂಗಳೂರು ಈಗ ನಿವೃತ್ತರ ಸ್ವರ್ಗವಲ್ಲ, ಸಂಶೋಧನಾ ಕೇಂದ್ರ : 

‘ಒಂದು ಕಾಲದಲ್ಲಿ ಬೆಂಗಳೂರು ನಿವೃತ್ತರ ಸ್ವರ್ಗ ಎನ್ನಲಾಗುತ್ತಿತ್ತು. ಆದರೆ, ಕ್ಷಿಪ್ರಗತಿಯಲ್ಲಿ ಆದ ಬದಲಾವಣೆಯಿಂದ ಇಡೀ ಜಗತ್ತೇ ಬೆಂಗಳೂರನ್ನು ಬಯಸುವಂತಾಗಿದೆ. ಇಲ್ಲಿರುವ ಅತ್ಯುದ್ಭುತ ಪ್ರತಿಭೆಗಳು ಇಡೀ ತಂತ್ರಜ್ಞಾನ ಕ್ಷೇತ್ರದ ದಿಕ್ಕನ್ನೇ ಬದಲಿಸಿದ್ದಾರೆ. ಜತೆಗೆ ಜಗತ್ತಿನ ಮುಂಚೂಣಿ ಎಲೆಕ್ಟ್ರಾನಿಕ್ಸ್ ಕಂಪನಿಗಳು ಈಗ ಬೆಂಗಳೂರಿನಲ್ಲಿ ತಮ್ಮ ಸಂಶೋಧನಾ ಕೇಂದ್ರ ತೆರೆಯುತ್ತಿರುವುದೂ ಈ ನಗರದ ಮುಂದಿನ ಬೆಳವಣಿಗೆಗೆ ಸಹಕಾರಿ’ ಎಂದು ರಾಜೀವ್ ಚಂದ್ರಶೇಖರ್ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT