‘ಸಿಮ್‌ ಸ್ವ್ಯಾಪ್‌’ ಬಲೆಗೆ ಬೀಳದಿರಿ

7

‘ಸಿಮ್‌ ಸ್ವ್ಯಾಪ್‌’ ಬಲೆಗೆ ಬೀಳದಿರಿ

Published:
Updated:
Deccan Herald

ನೆಚ್ಚಿನ ನಂಬರ್ ಎಂತಲೋ ಅಥವಾ ಗೆಳೆಯರ, ಸಂಬಂಧಿಕರ ಸಂಪರ್ಕಕ್ಕೆ ಅದೇ ನಂಬರ್ ನೀಡಿದ್ದೇವೆ ಎನ್ನುವ ಕಾರಣಕ್ಕೊ, ನಾವೆಲ್ಲಾ ಒಂದೇ ಸಿಮ್‌ಕಾರ್ಡನ್ನು ಹಲವು ವರ್ಷಗಳಿಂದ ಬಳಸುತ್ತಿರುತ್ತೇವೆ. ನಮ್ಮ ಈ ಅನಿವಾರ್ಯ ಸ್ಥಿತಿಯೇ ಹ್ಯಾಕರ್‌ಗಳಿಗೆ ವರವಾಗುತ್ತಿದೆ ಎನ್ನುತ್ತದೆ ಅಧ್ಯಯನವೊಂದು.

ಸಿಮ್ ಕಾರ್ಡ್ ಮೊಬೈಲ್ ಫೋನ್‌ನಲ್ಲೇ ಇರುತ್ತದೆ. ಆನ್‌ಲೈನ್‌ ಬ್ಯಾಂಕಿಂಗ್ ಸೇವೆಗೂ ಅದೇ ಆಧಾರವಾಗಿರುತ್ತದೆ. ವಾಲೆಟ್‌ಗಳಿಗೂ ಆ ಸಂಖ್ಯೆಯನ್ನೇ ಜೋಡಿಸಿರುತ್ತೇವೆ. ಕನ್ನ ಹಾಕುವವರ ಕುತಂತ್ರದಿಂದಾಗಿ ಇದ್ದಕ್ಕಿದ್ದಂತೆಯೇ ಸಿಮ್ ಬೇರೊಬ್ಬರ ಕೈಗೆ ಸೇರುತ್ತದೆ. ಯಾವ ಸೂಚನೆಯೂ ಇಲ್ಲದೇ ನೆಟ್‌ವರ್ಕ್ ಡಿಸೇಬಲ್ ಆಗುತ್ತದೆ.

ಬಹಳಷ್ಟು ಜನರು ಇಂತಹ ಸಮಸ್ಯೆಗಳನ್ನು ಎದುರಿಸಿರುತ್ತಾರೆ. ಹಲವು ವರ್ಷಗಳಿಂದ ನಾವು ಬಳಸುತ್ತಿರುವ ಸಿಮ್ ಬೇರೊಬ್ಬರ ಕೈಗೆ ಹೋಗಲು ಹೇಗೆ ಸಾಧ್ಯ, ಎಂದು ತಲೆ ಕೆಡಿಸಿಕೊಂಡಿರುತ್ತಾರೆ. ಇದನ್ನೇ ತಂತ್ರಜ್ಞಾನ ಭಾಷೆಯಲ್ಲಿ ‘ಸಿಮ್‌ ಸ್ವ್ಯಾಪ್‌’ ಎನ್ನುತ್ತಾರೆ. ಇದು ಕನ್ನ ಹಾಕುವುದಕ್ಕೆ ಹ್ಯಾಕರ್‌ಗಳಿಗೆ ನೆರವಾಗುತ್ತಿರುವ ಮೋಸದ ದಾಳ.

ಹೇಗೆ ಮಾಡುತ್ತಾರೆ?

ಸಿಮ್‌ ಸ್ವ್ಯಾಪ್‌ ಮಾಡುವುದಕ್ಕಾಗಿ, ಹ್ಯಾಕರ್ಸ್‌ ಯೋಜನಾ ಬದ್ಧವಾಗಿ ರಂಗಕ್ಕೆ ಇಳಿಯುತ್ತಾರೆ. ನಿರ್ದಿಷ್ಟವಾಗಿ ಕೆಲವರನ್ನು ಗುರಿಯಾಗಿಸಿಕೊಂಡು, ಅವರ ‘ಸೋಷಿಯಲ್ ಲೈಫ್’ ಮೇಲೆ ನಿಗಾ ಇಡುತ್ತಾರೆ. ಅವರ ಪ್ರೊಫೈಲ್‌ಗಳನ್ನು ಜಾಲಾಡುತ್ತಾರೆ. ವೈಯಕ್ತಿಕ ವಿವರಗಳು ಎಲ್ಲಿ ಕಾಣಿಸಿದರೂ ಅವನ್ನು ಉಪಯೋಗಿಸಿಕೊಳ್ಳುತ್ತಾರೆ.

ಒಂದು ವೇಳೆ, ನೀವು ಬಳಸುತ್ತಿರುವ  ಖಾತೆಗಳಲ್ಲಿ ನಿಮ್ಮ ಪ್ರೈವಸಿ ಸೆಟ್ಟಿಂಗ್ಸ್ ಸರಿಯಾಗಿದ್ದರೆ, ನಿಮ್ಮ ಸಂಪರ್ಕದಲ್ಲಿರುವ ಸ್ನೇಹಿತರ ಪ್ರೊಫೈಲ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ಪ್ರೈವಸಿ ಸೆಟ್ಟಿಂಗ್ಸ್ ಸರಿಯಾಗಿ ಇಲ್ಲದಿದ್ದರೆ, ನಿಮಗೆ ಸಂಬಂಧಿಸಿದ ಮಾಹಿತಿ ಶೇಖರಿಸುವುದು ಹ್ಯಾಕರ್ಸ್‌ಗೆ ಕಷ್ಟವೇನಲ್ಲ.

ಮೇಲ್ ಐಡಿ, ಕುಟುಂಬದ ವಿವಿರ, ವಿಳಾಸ… ಇತ್ಯಾದಿ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯುತ್ತಾರೆ. ಸಂಗ್ರಹಿಸಿದ ಈ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು, ನೀವು ಯಾವ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸುತ್ತಿರಬಹುದು ಎಂದು ಊಹಿಸುತ್ತಾರೆ. ಅಗತ್ಯ ಮಾಹಿತಿ ದೊರೆತ ಕೂಡಲೇ ರಂಗ ಪ್ರವೇಶ ಮಾಡುವ ಹ್ಯಾಕರ್ಸ್‌, ಕೂಡಲೇ ಕರೆ ಮಾಡುತ್ತಾರೆ.

‘ನೀವು ಬಳಸುತ್ತಿರುವ ನೆಟ್‌ವರ್ಕ್‌ನ ಕಸ್ಟಮರ್ ಕೇರ್ ವಿಭಾಗದಿಂದ ಮಾತನಾಡುತ್ತಿದ್ದೇವೆ’ ಎಂದು ಮಾತು ಆರಂಭಿಸುತ್ತಾರೆ. ನೆಟ್‌ವರ್ಕ್‌ ಸಮಸ್ಯೆ ಇಲ್ಲದಿದ್ದರೂ ಇದೆ ಎಂದು ನಂಬಿಸುತ್ತಾರೆ. ಅದು ವಿಫಲವಾದರೆ, ನಿಮಗಿಷ್ಟವಾಗುವ ಕಾಲರ್ ಟ್ಯೂನ್‌ ಉಚಿತವಾಗಿ ಪಡೆಯಿರಿ ಎಂದು ಆಮಿಷ ಒಡ್ಡುತ್ತಾರೆ. ಹೊಸ ಕಾಲರ್‌ ಟ್ಯೂನ್ ಆ್ಯಕ್ಟಿವೇಟ್ ಮಾಡಲು, ವಿಶೇಷ ಕೋಡ್ ಒಂದನ್ನು ಕಸ್ಟಮರ್ ಕೇರ್‌ಗೆ ಕಳುಹಿಸುವಂತೆ ಕೋರುತ್ತಾರೆ.

ಸಾಮಾನ್ಯವಾಗಿ ಹ್ಯಾಕರ್ಸ್‌ ಕೇಳುವ ಕೋಡ್‌ಗಳು ಯಾವುದು ಎಂದರೆ, ನೀವು ಬಳಸುತ್ತಿರುವ ಸಿಮ್‌ಕಾರ್ಡ್‌ ಹಿಂಬದಿಯಲ್ಲಿ ಮುದ್ರಿಸಿರುವ ಅಂಕಿಗಳು. ಮೈಮರೆತು ಈ ಸಂಖ್ಯೆಗಳನ್ನೇ ಕೋಡ್‌ ಎಂದು ಕಳುಹಿಸಿದರೆ, ನಿಮ್ಮ ಸಿಮ್‌ಕಾರ್ಡ್‌ ಮೇಲೆ ನೀವು ಹಿಡಿತ ಕಳೆದುಕೊಂಡಂತೆಯೇ. 

ಸುರಕ್ಷಿತವಾಗಿ ಆನ್‌ಲೈನ್‌ ವ್ಯವಹಾರ ನಡೆಸಲು ಬ್ಯಾಂಕಿಂಗ್ ಸೇವಾ ಸಂಸ್ಥೆಗಳು ಒಟಿಪಿಗಳನ್ನು (ಒನ್‌ ಟೈಮ್‌ ಪಾಸ್‌ವರ್ಡ್‌) ಬಳಕೆಗೆ ತಂದಿರುವುದರಿಂದ ವ್ಯವಹಾರ ನಡೆಸುವ ಮುನ್ನ ಅನುಮತಿಗಾಗಿ ಸಂದೇಶಗಳು ಬರುತ್ತವೆ. ಹೀಗಾಗಿಯೇ ಕನ್ನ ಹಾಕುವವರು ಸಿಮ್‌ ಸ್ವ್ಯಾಪ್‌ ಮಾಡಿದ ಕೂಡಲೇ, ನಿಮ್ಮ ಮೊಬೈಲ್‌ ಫೋನ್‌ನಲ್ಲಿರುವ ಸಿಮ್‌ ನಿಷ್ಕ್ರಿಯಗೊಳಿಸಿ, ನಕಲಿ ಸಿಮ್‌ ಪಡೆದು ತಾವು ಬಳಸುತ್ತಿರುವ ಸಾಧನಗಳಲ್ಲಿ ಅದನ್ನು ಸಕ್ರಿಯಗೊಳಿಸುತ್ತಾರೆ. ಸಂಗ್ರಹಿಸಿದ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು, ಹಣ ದೋಚಲು ಶುರುಮಾಡುತ್ತಾರೆ. 

ಎಚ್ಚರಿಕೆ ಇರಲಿ

ಯಾವ ಕಾರಣವೂ ಇಲ್ಲದೇ ಸಿಮ್‌ ನಿಷ್ಕ್ರೀಯಗೊಂಡರೆ ಅಥವಾ ನೆಟ್‌ವರ್ಕ್‌ ಡಿಸೇಬಲ್ ಆಗಿದ್ದರೆ, ಕೂಡಲೇ ನಿಮ್ಮ ನೆಟ್‌ವರ್ಕ್‌ ಟೆಲಿಕಾಂ ಅಪರೇಟರ್‌ಗಳನ್ನು ಸಂಪರ್ಕಿಸಿ ಸಿಮ್‌ ‘ಬ್ಲಾಕ್’ ಮಾಡಿ ಎಂದು ಮನವಿ ಮಾಡಿ.

* ಆನ್ ಲೈನ್ ಬ್ಯಾಂಕಿಂಗ್‌ಗೆ ಬಳಸುವ ಮೇಲ್ ಐಡಿ ಪ್ರತ್ಯೇಕವಾಗಿರಲಿ. ಇದನ್ನು ಇತರೆ ಸಾಮಾಜಿಕ ಜಾಲತಾಣಗಳಿಗೆ ಬಳಸಬೇಡಿ.

* ಆಗಾಗ್ಗೆ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಜನರೇಟ್ ಮಾಡಿಕೊಂಡು ಕೂಲಂಕಷವಾಗಿ ಪರಿಶೀಲಿಸಿ. ನಿಮ್ಮ ಗಮನಕ್ಕೆ ಬರದೇ ಹಣ ರವಾನೆಯಾಗಿದ್ದರೆ ಅಥವಾ ಖಾತೆಯಿಂದ ಕಡಿತವಾಗಿದೆಯೇ ಎನ್ನುವುದನ್ನು ಗಮನಿಸಿ.

* ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳಿಗೆ, ನಿಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ. ಯಾವುದೇ ಆನ್‌ಲೈನ್‌ ಬ್ಯಾಂಕಿಂಗ್ ಸೇವಾ ಸಂಸ್ಥೆಗಳು ಫೋನ್ ಕರೆ ಮೂಲಕ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.

* ಕಸ್ಟಮೇರ್ ಕೇರ್‌ ವಿಭಾಗದಿಂದ ಮಾತನಾಡುತ್ತಿದ್ದೇವೆ. ನಿಮ್ಮ ಸಿಮ್ ಹಿಂಬದಿ ಇರುವ 20 ಅಂಕಿಗಳ ಸಂಖ್ಯೆ ತಿಳಿಸಿ ಎಂದು ಯಾರಾದರೂ ಕೇಳಿದರೆ ಕೂಡಲೇ ಅವರ ವಿರುದ್ಧ ದೂರು ನೀಡಿ.

* ಆನ್‌ಲೈನ್ ಸೇವೆಗಳಿಗಾಗಿ ಬಳಸುವ ಸುರಕ್ಷತಾ ಪ್ರಶ್ನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅನಿವಾರ್ಯವಾದರೂ ಸಾರ್ವಜನಿಕ ಪ್ರದೇಶಗಳಲ್ಲಿ ಅದರ ಬಗ್ಗೆ ಚರ್ಚಿಸಬೇಡಿ.

* ಅಪರಿಚಿತ ವ್ಯಕ್ತಿಗಳು, ಸಂಸ್ಥೆಗಳಿಂದ ಬರುವ ಮೇಲ್‌ಗಳಿಗೆ ಸ್ಪಂದಿಸಬೇಡಿ. ಅವರು ಕಳುಹಿಸುವ ಲಿಂಕ್‌ಗಳನ್ನು ಓಪನ್‌ ಮಾಡಬೇಡಿ.

* ವಾಟ್ಸ್‌ಆ್ಯಪ್‌ಗೆ ಬರುವ ಆಫರ್ ಮೆಸೇಜ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಆ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ಹ್ಯಾಕರ್ಸ್‌ ಗಾಳಕ್ಕೆ ಬಿದ್ದಂತೆಯೇ.

* ಎಲ್ಲ ಬ್ಯಾಂಕಿಂಗ್ ಸೇವೆಗಳಿಗೆ ಒಂದೇ ಫೋನ್ ನಂಬರ್ ಬಳಸಬೇಡಿ. ಬೇರೆ ಬೇರೆ ಫೋನ್‌ ನಂಬರ್‌ಗಳನ್ನು ಜೋಡಿಸಿ.

* ಹುಟ್ಟಿದ ದಿನ, ಮದುವೆಯಾದ ದಿನ, ಇಷ್ಟವಾದ ಬಣ್ಣಗಳು, ಅಡ್ಡ ಹೆಸರುಗಳು, ಸಾಕು ಪ್ರಾಣಿಗಳ ಹೆಸರುಗಳು, ಇತ್ಯಾದಿ ವೈಯಕ್ತಿಕ ಸಮಾಚಾರಗಳನ್ನು ಸಾಮಾಜಿಕ ಜಾಲತಾಣಗಳ ಗೋಡೆಗಳ ಮೇಲೆ ಪ್ರಕಟಿಸಬೇಡಿ.

* ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರ ನಡೆದರೂ ಆ ಬಗ್ಗೆ ನಿಮ್ಮ ಮೊಬೈಲ್‌ಫೋನ್‌ಗೆ ಸಂದೇಶ ಮತ್ತು ಇ-ಮೇಲ್ ಬರುವ ಹಾಗೆ ನೋಡಿಕೊಳ್ಳಿ.

* ಬ್ಯಾಂಕ್‌ಗಳು ಹೊಸದಾಗಿ ಬಳಕೆಗೆ ತರುತ್ತಿರುವ ಸ್ಮಾರ್ಟ್ ಪಿನ್, ಸ್ಮಾರ್ಟ್ ಪಾಸ್‌ಗಳನ್ನು ಬಳಸುವುದು ರೂಢಿಸಿಕೊಳ್ಳಿ.

* ಆಗಾಗ್ಗೆ ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ.

Tags: 

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !