ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐ ಮಿಷನ್‌ಗಾಗಿ 5 ವರ್ಷಗಳಲ್ಲಿ ₹10,372 ಕೋಟಿ: ಕೇಂದ್ರ ಸಂಪುಟ ಅಸ್ತು

Published 7 ಮಾರ್ಚ್ 2024, 16:33 IST
Last Updated 7 ಮಾರ್ಚ್ 2024, 16:33 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಸಚಿವ ಸಂಪುಟ ಸಭೆಯು ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಿಷನ್‌ಗಾಗಿ ₹10,372 ಕೋಟಿ ಒದಗಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಅನುಮೋದನೆಗೊಂಡಿರುವ ಮೊತ್ತವನ್ನು ಬೃಹತ್ ಕಂಪ್ಯುಟಿಂಗ್ ಮೂಲಸೌಕರ್ಯ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಎಐ ವ್ಯವಸ್ಥೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅದರ ಪಾಲುದಾರರ ಅನುಕೂಲಕ್ಕಾಗಿ 10,000 ಸಿಪಿಯು ಒಳಗೊಂಡ ಸೂಪರ್ ಕಂಪ್ಯುಟಿಂಗ್ ಘಟಕವನ್ನು ಸ್ಥಾಪಿಸಲಾಗುವುದು. ಇದರಿಂದ ಎಐ ತಂತ್ರಜ್ಞರಿಗೆ ಅನುಕೂಲವಾಗಲಿದೆ ಎಂದು ಗೋಯಲ್ ತಿಳಿಸಿದ್ದಾರೆ.

ಎಐ ಮಿಷನ್ ಅಡಿ ನಿರ್ಮಾಣಗೊಳ್ಳುವ ಸೂಪರ್‌ ಕಂಪ್ಯುಟಿಂಗ್ ವ್ವವಸ್ಥೆಯಲ್ಲಿ ನವೋದ್ಯಮ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕೈಗಾರಿಕೋದ್ಯಮಿಗಳಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ರಾಷ್ಟ್ರೀಯ ದತ್ತಾಂಶ ಕಚೇರಿ ತೆರೆಯಲಾಗುವುದು. ಅದು ದತ್ತಾಂಶದ ಗುಣಮಟ್ಟ ವೃದ್ಧಿ ಮತ್ತು ಎಐ ಅಭಿವೃದ್ಧಿ ಹಾಗೂ ನಿಯೋಜನೆಗೆ ಅಂಕಿ ಅಂಶದ ಲಭ್ಯತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಜೊತೆ ಸಮನ್ವಯ ಸಾಧಿಸುವ ಕೆಲಸ ಮಾಡುತ್ತದೆ ಸಚಿವರು ಹೇಳಿದ್ದಾರೆ.

ಯೋಜನೆ ಅನುಷ್ಠಾನ ಹೇಗೆ?

ಡಿಜಿಟಲ್‌ ಇಂಡಿಯಾ ಕಾರ್ಪೋರೇಷನ್‌ನ(ಡಿಐಸಿ) ಅಂಗಸಂಸ್ಥೆಯಾಗಿರುವ ‘ಇಂಡಿಯಾ ಎಐ ಇಂಡಿಪೆಂಡೆಂಟ್ ಡಿಜಿಜನ್’ (ಐಬಿಡಿ) ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

ಸಚಿವ ಸಂಪುಟ ಸಭೆ ಬಳಿಕ ಈ ವಿಷಯ ತಿಳಿಸಿದ ಕೇಂದ್ರ ಸಚಿವ ಪೀಯೂಷ್‌ ಗೋಯೆಲ್, ‘ಐದು ವರ್ಷಗಳ ಅವಧಿಯ ಈ ಯೋಜನೆಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವ ವಿಧಾನದಲ್ಲಿ ಅನುಷ್ಠಾನಗೊಳಿಸಲಾಗುವುದು. ದೇಶದಲ್ಲಿ ಉತ್ಕೃಷ್ಟ ‘ಕೃತಕ ಬುದ್ಧಿಮತ್ತೆ ವ್ಯವಸ್ಥೆ’ಯನ್ನು ನಿರ್ಮಿಸಲಾಗುವುದು ಎಂದರು.

‘ಕೃತಕ ಬುದ್ಧಿಮತ್ತೆ ಜೊತೆಗೆ, ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗೂ ಈ ಮಹತ್ವಾಕಾಂಕ್ಷೆ ಯೋಜನೆ ಉತ್ತೇಜನ ನೀಡಲಿದೆ’ ಎಂದರು.

‘ಪ್ರಸ್ತುತ ದಿನಗಳಲ್ಲಿ ಜಿಪಿಯು(ಗ್ರಾಫಿಕ್ಸ್‌ ಪ್ರೊಸೆಸಿಂಗ್‌ ಯುನಿಟ್‌) ಆಧರಿತ ಸರ್ವರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಬಳಕೆಯಲ್ಲಿರುವ ಸಿಪಿಯು ಆಧರಿತ ಸರ್ವರ್‌ಗಳಿಗಿಂತ ಜಿಪಿಯು ಆಧರಿತ ಸರ್ವರ್‌ಗಳು ಅಧಿಕ ವೇಗದಲ್ಲಿ ದತ್ತಾಂಶ ಪ್ರೊಸೆಸಿಂಗ್ ಕಾರ್ಯ ನೆರವೇರಿಸುತ್ತಿರುವುದು ಇದಕ್ಕೆ ಕಾರಣ. ಹೀಗಾಗಿ, ಕೃತಕ ಬುದ್ಧಿಮತ್ತೆ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಭಾಗೀದಾರರಿಗೆ 10 ಸಾವಿರ ಜಿಪಿಯುಗಳನ್ನು (ಗ್ರಾಫಿಕ್ಸ್‌ ಪ್ರೊಸೆಸಿಂಗ್‌ ಯುನಿಟ್‌) ಒಳಗೊಂಡ ಸೂಪರ್‌ ಕಂಪ್ಯೂಟಿಂಗ್ ಸಾಮರ್ಥ್ಯ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ವಿವರಿಸಿದರು.

‘ಕೃತಕಬುದ್ಧಿಮತ್ತೆ ಸೂಪರ್‌ ಕಂಪ್ಯೂಟಿಂಗ್‌ ಮೂಲಸೌಕರ್ಯವನ್ನು ದೇಶದ ಸ್ಟಾರ್ಟ್‌ಅಪ್‌ಗಳಿಗೆ, ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಹಾಗೂ ಸಂಶೋಧಕರಿಗೂ ಒದಗಿಸಲಾಗುವುದು. ಈ ಯೋಜನೆಯಡಿ ‘ಇಂಡಿಯಾ ಎಐ ಇನ್ನೋವೇಷನ್ ಸೆಂಟರ್(ಐಎಐಸಿ), ನ್ಯಾಷನಲ್ ಡೇಟಾ ಮ್ಯಾನೇಜ್‌ಮೆಂಟ್‌ ಆಫೀಸ್‌ ಸ್ಥಾಪಿಸಲಾಗುವುದು’ ಎಂದರು.

ಸಚಿವ ರಾಜೀವ್‌ ಚಂದ್ರಶೇಖರ್ ಪೋಸ್ಟ್‌: ಈ ಯೋಜನೆ ಕುರಿತು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ‘ಭಾರತದ ಡಿಜಿಟಲ್‌ ಆರ್ಥಿಕತೆಗೆ ಕೃತಕಬುದ್ಧಿಮತ್ತೆ ಮತ್ತಷ್ಟು ವೇಗ ನೀಡಲಿದೆ’ ಎಂದಿದ್ದಾರೆ.

‘ಹಲವು ವರ್ಷಗಳಿಂದ ತಂತ್ರಜ್ಞಾನ ವಿಷಯದಲ್ಲಿ ಸುಸಜ್ಜಿತ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾಗಿರುವ ಕೇರಳದಂತಹ ರಾಜ್ಯಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT