ಮಂಗಳವಾರ, ಜುಲೈ 5, 2022
27 °C

ಫೀಚರ್‌ ಫೋನ್‌ಗಳಲ್ಲಿ ಯುಪಿಐ ಸೇವೆಗೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಸ್ಮಾರ್ಟ್‌ಫೋನ್ ಮೂಲಕ ಹಣ ‍ಪಾವತಿಗೆ ಅವಕಾಶ ಕಲ್ಪಿಸುವ ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) ಆರಂಭಿಸಿ ಸರಿಸುಮಾರು ಆರು ವರ್ಷಗಳ ನಂತರದಲ್ಲಿ, ಈ ಸೌಲಭ್ಯದ ಬಳಕೆಯನ್ನು ಫೀಚರ್ ಫೋನ್‌ಗಳಲ್ಲಿಯೂ ಸಾಧ್ಯವಾಗಿಸುವ ಹೊಸ ಸೇವೆಯೊಂದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.

ದೇಶದಲ್ಲಿ ಫೀಚರ್ ಫೋನ್ ಬಳಸುವವರ ಸಂಖ್ಯೆಯು 40 ಕೋಟಿಗಿಂತ ಹೆಚ್ಚು ಎಂಬ ಅಂದಾಜು ಇದೆ. ಯುಪಿಐ ವ್ಯವಸ್ಥೆಯನ್ನು ರೂಪಿಸಿರುವ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ), ಯುಎಸ್‌ಎಸ್‌ಡಿ ಆಧಾರಿತ ಯುಪಿಐ ವ್ಯವಸ್ಥೆಯನ್ನು ಫೀಚರ್‌ ಫೋನ್‌ಗಳಿಗೆ ಈಗಾಗಲೇ ನೀಡಿತ್ತು. ಆದರೆ, ಯುಎಸ್‌ಎಸ್‌ಡಿ ಮೂಲಕ ಇದನ್ನು ಬಳಕೆ ಮಾಡುವುದು ತ್ರಾಸದಾಯಕ ಆಗಿತ್ತು.

‘ಈ ಸೌಲಭ್ಯವನ್ನು ಎಲ್ಲ ದೂರಸಂಪರ್ಕ ಕಂಪನಿಗಳು ಬಳಕೆದಾರರಿಗೆ ನೀಡಿರಲಿಲ್ಲ’ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ. ರವಿಶಂಕರ್ ಹೇಳಿದರು. ‘ಯುಪಿಐ 123ಪೇ ಸೇವೆಯು ಇದುವರೆಗೆ ಡಿಜಿಟಲ್ ಪಾವತಿ ಜಗತ್ತಿನಿಂದ ಹೊರಗುಳಿದಿದ್ದವರಿಗೂ ಯುಪಿಐ ಸೌಲಭ್ಯವು ಇನ್ನು ಮುಂದೆ ಸಿಗಲಿದೆ’ ಎಂದು ದಾಸ್ ತಿಳಿಸಿದರು.

ಐವಿಆರ್ ಸಂಖ್ಯೆಗೆ ಕರೆಮಾಡಿ, ಕೆಲವು ಫೀಚರ್‌ ಫೋನ್‌ಗಳಲ್ಲಿ ಇರುವ ಆ್ಯಪ್ ಬಳಸಿ ಅಥವಾ ಮಿಸ್ಡ್‌ ಕಾಲ್ ನೀಡಿ ಹಣ ಪಾವತಿಸಲು ಇನ್ನು ಸಾಧ್ಯವಾಗಲಿದೆ ಎಂದು ಆರ್‌ಬಿಐ ಹೇಳಿದೆ. ಫೀಚರ್ ಫೋನ್ ಬಳಸಿ ಸ್ನೇಹಿತರಿಗೆ ಹಣ ವರ್ಗಾವಣೆ ಮಾಡಬಹುದು, ಬಿಲ್ ಪಾವತಿಸಬಹುದು, ವಾಹನಗಳ ಫಾಸ್ಟ್‌ಟ್ಯಾಗ್‌ಗೆ ಹಣ ಭರ್ತಿ ಮಾಡಿಕೊಳ್ಳಬಹುದು, ಬ್ಯಾಂಕ್ ಖಾತೆಯಲ್ಲಿರುವ ಹಣ ಎಷ್ಟು ಎಂಬುದನ್ನು ಪರಿಶೀಲಿಸಬಹುದು ಎಂದು ಆರ್‌ಬಿಐ ಹೇಳಿದೆ.

ದಾಸ್ ಅವರು ಇದೇ ಸಂದರ್ಭದಲ್ಲಿ ಡಿಜಿಸಾಥಿ ಹೆಸರಿನ ಸಹಾಯವಾಣಿಗೆ ಚಾಲನೆ ನೀಡಿದರು. ಡಿಜಿಟಲ್ ‍ಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದರ ಮೂಲಕ ನೆರವು ಪಡೆಯಬಹುದು. ವೆಬ್‌ಸೈಟ್ ವಿಳಾಸ: www.digisaathi.info. ದೂರವಾಣಿ ಸಂಖ್ಯೆ: 14431 ಮತ್ತು 1800 891 3333.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು