ಸಹಾಯಕ್ಕೂ ಸುರಕ್ಷೆಗೂ ‘ರಾಜ್ಯ ಪೊಲೀಸ್‌’ಆ್ಯಪ್

7

ಸಹಾಯಕ್ಕೂ ಸುರಕ್ಷೆಗೂ ‘ರಾಜ್ಯ ಪೊಲೀಸ್‌’ಆ್ಯಪ್

Published:
Updated:

ಪೊಲೀಸ್‌ ಠಾಣೆಗೆ ಹೋದೊಡನೆ ‘ಏನು ನಿಮ್ಮ ದೂರು’ ಎಂದು ಕೇಳಿ, ಕೈಯಲ್ಲಿ ಪೆನ್ನು ಹಿಡಿದು ಪುಟಗಟ್ಟಲೇ ಬರೆದುಕೊಳ್ಳುವ ಕಾಲವೊಂದಿತ್ತು. ಯಾವುದೇ ಕೆಲಸವಿದ್ದರೂ ಠಾಣೆಗೆ ಅಲೆಯಲೇ ಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಲು ಬಯಸಿರುವ ರಾಜ್ಯದ ಪೊಲೀಸರು, ಹೊಸದೊಂದು ಆ್ಯಪ್‌ ಸಿದ್ಧಪಡಿಸಿದ್ದಾರೆ.  

ಜನ ಸಾಮಾನ್ಯರ ಸುರಕ್ಷತೆಗಾಗಿ, ಉಪಯೋಗಕ್ಕಾಗಿ ‘Karnataka State Police (Official)’ ಹೆಸರಿನ  ಆಂಡ್ರಾಯ್ಡ್ ಆ್ಯಪ್‌ನ್ನು ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ. ಈ ಒಂದೇ ಆ್ಯಪ್‌ನಲ್ಲಿ ಇಲಾಖೆಯಿಂದ ಸಾಕಷ್ಟು ಮಾಹಿತಿ ಲಭ್ಯವಾಗಲಿದೆ. ಇಂಟರ್‌ನೆಟ್‌ ಸಂಪರ್ಕ ಇರುವ ಮೊಬೈಲ್‌ಗಳಲ್ಲಿ ಈ ಆ್ಯಪ್‌ ಕಾರ್ಯನಿರ್ವಹಣೆ ಮಾಡಲಿದೆ. ಜತೆಗೆ, ಸಾರ್ವಜನಿಕರು ಇರುವ ಜಾಗದ ನಿಖರವಾದ ಸ್ಥಳ ಗುರುತಿಸಲು ಮೊಬೈಲ್‌ನಲ್ಲಿ ಜಿಪಿಎಸ್ ಆನ್‌ ಆದ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈ ಆ್ಯಪ್ ಬಳಸಬಹುದಾಗಿದೆ. ಗೂಗಲ್‌ ಪ್ಲೇಸ್ಟೋರ್‌ನಿಂದ ಆ್ಯಪ್ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಒಂದು ಬಾರಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ (ಒನ್ ಟೈಂ ಪಾಸ್‌ವರ್ಡ್‌) ಪಡೆದು ಆ್ಯಪ್‌ ಬಳಕೆ ಮಾಡಬಹುದಾಗಿದೆ.

ಸಾರ್ವಜನಿಕರು ಯಾವುದಾದರೂ ಅಪರಿಚಿತ ಜಾಗದಲ್ಲಿದ್ದರೆ, ಆ ಜಾಗಕ್ಕೆ ಸಮೀಪವಿರುವ ಪೊಲೀಸ್ ಠಾಣೆ ಯಾವುದು? ಅದು ಎಷ್ಟು ದೂರವಿದೆ? ಆ ಠಾಣೆಗೆ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆ ಯಾವುದು? ಎಂಬ ಮಾಹಿತಿಯನ್ನು ಈ ಆ್ಯಪ್‌ ನೀಡಲಿದೆ.

ಕಾಣೆಯಾದವರ ಮಾಹಿತಿ: ಕಾಣೆಯಾದ ವ್ಯಕ್ತಿಗಳು, ಕಳುವಾದ ವಾಹನಗಳ ಬಗ್ಗೆಯೂ ಈ ಆ್ಯಪ್‌ನಿಂದ ಮಾಹಿತಿ ತಿಳಿದುಕೊಳ್ಳಬಹುದು. ರಾಜ್ಯದ ಯಾವುದೇ ಸ್ಥಳಗಳಲ್ಲಿ ವಾಹನ ಕಳುವಾದರೂ ಆ್ಯಪ್‌ ಮೂಲಕವೇ ಪೊಲೀಸರಿಗೆ ಮಾಹಿತಿ ನೀಡಬಹುದು. ಜತೆಗೆ, ಪೊಲೀಸರು ಜಪ್ತಿ ಮಾಡುವ ವಾಹನಗಳ ಬಗ್ಗೆಯೂ ಆ್ಯಪ್‌ನಲ್ಲಿ ಮಾಹಿತಿ ಇರಲಿದೆ. 

ಎಫ್‌ಐಆರ್‌ ಲಭ್ಯ: ರಾಜ್ಯದ ಯಾವುದೇ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ ಪ್ರತಿಗಳು ಈ ಆ್ಯಪ್‌ನಲ್ಲಿ ಲಭ್ಯವಿವೆ. ಸಾರ್ವಜನಿಕರು, ತಾವು ದೂರು ನೀಡಿದ ಠಾಣೆ ಹೆಸರು ಹಾಗೂ ಪ್ರಕರಣದ ಸಂಖ್ಯೆಯನ್ನು ನಮೂದಿಸಿದರೆ ಎಫ್‌ಐಆರ್ ಸಿಗಲಿದೆ.
ಮೊಬೈಲ್‌ನಲ್ಲೇ ಆ್ಯಪ್‌ ತೆರೆದು ಎಫ್‌ಐಆರ್ ನೋಡಬಹುದು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

**

ಆ್ಯಪ್‌ ವಿವರ
ಆ್ಯಪ್ ಹೆಸರು: Karnataka State Police (Official)
ಗಾತ್ರ: 5.9 ಎಂ.ಬಿ 
ಲಭ್ಯವಿರುವ ಸ್ಥಳ: ಗೂಗಲ್ ಪ್ಲೇ ಸ್ಟೋರ್‌.   ರೇಟಿಂಗ್: 4.6  (5ಕ್ಕೆ) 

ಆ್ಯಪ್‌ನ ವಿಶೇಷತೆ:
* ತಮ್ಮ ಸುತ್ತಮುತ್ತ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ತ್ವರಿತವಾಗಿ ಮಾಹಿತಿ ನೀಡಬಹುದು.
* ಎಫ್ಐಆರ್‌, ಕಾಣೆಯಾದ ವ್ಯಕ್ತಿಗಳು, ಕಳುವಾದ ವಾಹನಗಳ ಮಾಹಿತಿ ಸಿಗಲಿದೆ
* ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು 
* ಪೊಲೀಸ್‌ ಇಲಾಖೆಯ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಬಹುದು
* ನಂಬಿಕಸ್ಥರ ಮೊಬೈಲ್ ನಂಬರ್ ನಮೂದಿಸಬಹುದು. ಅಪಾಯದ ಸಂದರ್ಭಗಳಲ್ಲಿ ಎಲ್ಲರಿಗೂ ಸಂದೇಶಗಳು ಹೋಗಲಿವೆ.

**

ಮಹಿಳೆಯರ ಸುರಕ್ಷೆಗೆ ‘ಎಸ್‌ಓಎಸ್‌’ ಬಟನ್

ರಾಜ್ಯದ ಯಾವುದೇ ಸ್ಥಳದಲ್ಲಾದರೂ ಮಹಿಳೆಯರು ತೊಂದರೆ ಅನುಭವಿಸಿದರೆ, ತ್ವರಿತವಾಗಿ ಪೊಲೀಸರನ್ನು ಸಂಪರ್ಕಿಸಲು ಈ ಆ್ಯಪ್‌ ನೆರವಾಗಲಿದೆ.

ಯಾವುದೇ ರೀತಿಯ ಅಪಾಯ ಸಂಭವಿಸಿದ್ದಲ್ಲಿ ಹಾಗೂ ಸಂಭವಿಸುವ ಸಾಧ್ಯತೆ ಇದ್ದಾಗ ‘ಎಸ್ಓಎಸ್’(ತುರ್ತು ಬಟನ್) ಒತ್ತುವ ಮೂಲಕ ಪೊಲೀಸರಿಗೆ ಮಾಹಿತಿ ನೀಡುವ ಸೌಲಭ್ಯ  ಈ ಆ್ಯಪ್‌ನಲ್ಲಿದೆ. ಗುಂಡಿ ಒತ್ತುತ್ತಿದ್ದಂತೆ ಸಂಬಂಧಪಟ್ಟ ಠಾಣೆಗೆ ತುರ್ತು ಮಾಹಿತಿ ಹೋಗಲಿದೆ. ಅಲ್ಲಿಯ ಪೊಲೀಸರು, ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಬರಲಿದ್ದಾರೆ.

**

ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಜನರು, ಈ ಆ್ಯಪ್ ಬಳಸಿಕೊಂಡು ಪೊಲೀಸ್ ಸೇವೆಗಳನ್ನು ಪಡೆಯಬಹುದು
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !