ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೆಡ್‌ಮಿ ಗೊ’

Last Updated 17 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದರಲ್ಲಿ ಸದ್ಯ ಮುಂಚೂಣಿಯಲ್ಲಿರುವ ಶಿಯೋಮಿ ಕಂಪನಿ, ಭಾರತದ ಮಾರುಕಟ್ಟೆಗೆ ಸದಾ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದರ ಅಂಗ ಸಂಸ್ಥೆಯಾಗಿರುವ ರೆಡ್‌ಮಿ ಕಡಿಮೆ ಬೆಲೆಯ ‘ರೆಡ್‌ಮಿ ಗೊ’ ಹೆಸರಿನ ಉತ್ತಮ ಫೋನ್‌ ಅನ್ನು ಈಚೆಗಷ್ಟೇ ಹೊರತಂದಿದೆ.

ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಿಗೆಂದೇ ಗೂಗಲ್‌ ಅಭಿವೃದ್ಧಿಪಡಿಸಿರುವ ‘ಆಂಡ್ರಾಯ್ಡ್‌ ಗೊ’ ಕಾರ್ಯಾಚರಣೆ ವ್ಯವಸ್ಥೆ (ಒಎಸ್‌) ಒಳಗೊಂಡಿರುವ ಮೊದಲ ಫೋನ್‌ ಇದಾಗಿದೆ. ಹೀಗಾಗಿಯೇ ‘ರೆಡ್‌ಮಿ ಗೊ’ ಎಂದು ಹೆಸರಿಡಲಾಗಿದೆ.

ಇದರ ಬೆಲೆ ₹5,999. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದಂತಿದೆ. ಕಡಿಮೆ ಬೆಲೆ ಎಂದಾಕ್ಷಣ ಹೆಚ್ಚಿನದ್ದು ನಿರೀಕ್ಷೆ ಮಾಡಲಾಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದುಬಿಡುವುದು ಸರಿಯಲ್ಲ. ಇದರಲ್ಲಿ ಹಲವು ಉತ್ತಮ ವೈಶಿಷ್ಟ್ಯಗಳಿವೆ.

ಫೋನ್‌ ಹಗುರಾಗಿದ್ದು, 137 ಗ್ರಾಂ ಇದೆ. 8.5ಎಂಎಂ ದಪ್ಪ ಇದ್ದು ಒಂದೇ ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳಬಹುದು. ಮೊದಲೇ ಹೇಳಿದಂತೆ ಕಡಿಮೆ ಬೆಲೆಯದ್ದಾಗಿರುವುದರಿಂದ ಫಿಂಗರ್‌ ಪ್ರಿಂಟ್‌, ಫೇಸ್‌ ಸ್ಕ್ಯಾನ್‌ನಂತಹ ಸ್ಮಾರ್ಟ್‌ ಅನ್‌ಲಾಕ್‌ ಆಯ್ಕೆಗಳು ಇದರಲ್ಲಿ ಇಲ್ಲ.

1 ಜಿಬಿ ರ‍್ಯಾಮ್‌ + 8 ಜಿಬಿ ರೋಮ್. 128 ಜಿಬಿಯವರೆಗೆ ಮೆಮೊರಿ ವಿಸ್ತರಣಾ ಸಾಮರ್ಥ್ಯ ಹೊಂದಿದೆ. ಒಎಸ್‌ (ಆಪರೇಟಿಂಗ್ ಸಿಸ್ಟಮ್‌) ಮತ್ತು ಪ್ರಿ ಇನ್‌ಸ್ಟಾಲ್ಡ್‌ ಆ್ಯಪ್‌ಗಳು ಇರುವುದರಿಂದ ರ‍್ಯಾಮ್‌ನಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ 128 ಜಿಬಿವರೆಗಿನ ಎಸ್‌ಡಿ ಕಾರ್ಡ್‌ ಆಯ್ಕೆ ನೀಡಿದ್ದು, ಹೆಚ್ಚಿನ ಡೇಟಾಗಳನ್ನು ಅದರಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ.

ಫೋನ್‌ನಲ್ಲಿ ಎರಡು ಸಿಮ್‌ ಮತ್ತು ಒಂದು ಎಸ್‌ಡಿ ಕಾರ್ಡ್‌ ಆಯ್ಕೆ ಇದೆ. ಒಂದು ಸ್ಲಾಟ್‌ನಲ್ಲಿ ಒಂದು ಸಿಮ್‌ ಮತ್ತು ಎಸ್‌ಡಿ ಕಾರ್ಡ್‌ ಆಯ್ಕೆ ನೀಡಲಾಗಿದೆ. ಇನ್ನೊಂದು ಸ್ಲಾಟ್‌ನಲ್ಲಿ ಎರಡನೇ ಸಿಮ್‌ ಹಾಕಬೇಕು.

ಕ್ಯಾಮೆರಾ

ಈಚೆಗೆ ಸ್ಮಾರ್ಟ್‌ಫೋನ್‌ ಎಂದಾಕ್ಷಣ ಎಲ್ಲರೂ ಗಮನ ನೀಡುವುದು ಅದರ ಕ್ಯಾಮೆರಾಕ್ಕೆ. ಅದರಲ್ಲಿಯೂ ಸೆಲ್ಫಿ ಹೇಗೆ ಬರುತ್ತದೆ ಎಂದು ನೋಡುತ್ತಾರೆ. ಕಡಿಮೆ ಬೆಲೆಯದ್ದಾದರೂ ಇದರಲ್ಲಿ ತೃಪ್ತಿ ನೀಡುವ ಮಟ್ಟಿಗೆ ಗುಣಟ್ಟದ ಚಿತ್ರಗಳನ್ನು, ಸೆಲ್ಫಿ ತೆಗೆಯಬಹುದು.

ಫೋನ್‌ನ ಆಡಿಯೊ ಮತ್ತು ವಿಡಿಯೊ ಗುಣಮಟ್ಟ ಉತ್ತಮವಾಗಿವೆ. 4ಕೆ ವಿಡಿಯೊಗಳನ್ನು ಸಹ ಯಾವುದೇ ತೊಡಕಿಲ್ಲದೆ ನೋಡಬಹುದು. ವಿಡಿಯೊ ಚಿತ್ರೀಕರಣ ಮಾಡುವಾಗ ಚಿತ್ರ ಮತ್ತು ಧ್ವನಿ ಬಹಳ ಸ್ಪಷ್ಟವಾಗಿ ದಾಖಲಾಗುತ್ತದೆ.

ಏನಿದು ಆಂಡ್ರಾಯ್ಡ್‌ ಗೊ

ಆಂಡ್ರಾಯ್ಡ್‌ ಗೊ, ಆಂಡ್ರಾಯ್ಡ್‌ ಓರಿಯೊ (ಗೊ ಎಡಿಷನ್‌) ಎಂದೂ ಕರೆಯಲಾಗುತ್ತದೆ. ಆರಂಭಿಕ ಹಂತದ (ಎಂಟ್ರಿ ಲೆವೆಲ್‌) ಸ್ಮಾರ್ಟ್‌ಫೋನ್‌ಗಳಿಗಾಗಿ ವಿನ್ಯಾಸಗೊಳಿಸಿರುವ ಆಂಡ್ರಾಯ್ಡ್‌ನ ಆವೃತ್ತಿ ಇದಾಗಿದೆ. ಕಡಿಮೆ ಸ್ಥಳಾವಕಾಶ ಇರುವ ಫೋನ್‌ಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವ ಸಲುವಾಗಿ, ಕಾರ್ಯಾಚರಣೆ ವ್ಯವಸ್ಥೆ, ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಗೂಗಲ್‌ ಆ್ಯಪ್‌ಗಳನ್ನು ಮರುವಿನ್ಯಾಸಗೊಳಿಸಲಾಗಿದೆ.

ಆಂಡ್ರಾಯ್ಡ್‌ ಓರಿಯೊ ಆಧಾರಿತ ಒಎಸ್ ಇದಾಗಿದ್ದು, 512 ಎಂಬಿ ಯಿಂದ 1 ಜಿಬಿ ರ‍್ಯಾಮ್‌ ಇರುವ ಸ್ಮಾರ್ಟ್‌ಫೋನ್‌ಗಳಿಗಾಗಿ ಮಾಡಲಾಗಿದೆ. ಆಂಡ್ರಾಯ್ಡ್‌ ನೊಗಟ್‌ನ ಅರ್ಧದಷ್ಟು ಜಾಗ ಇದಕ್ಕೆ ಸಾಕು.

ಬೇರೆ ಒಎಸ್‌ಗಳಿಗಿಂತಲೂ ಈ ಒಎಸ್‌ ಇರುವ ಫೋನ್‌ಗಳಲ್ಲಿ ಆ್ಯಪ್‌ಗಳು ಶೇ 15ರಷ್ಟು ವೇಗವಾಗಿ ತೆರೆದುಕೊಳ್ಳುತ್ತವೆ. ಮೊಬೈಲ್ ಡೇಟಾ ಉಳಿಸಲು ಡೇಟಾ ಸೇವರ್‌ ಆಯ್ಕೆ ಉಪಯುಕ್ತವಾಗಿದೆ.

ಇದರಲ್ಲಿ Google Go, Google Assistant Go, YouTube Go, Google Maps Go, Gmail Go, Gboard Go, Google Play Store, Chrome, Files Go ಎನ್ನುವ ಒಂಬತ್ತು ಪ್ರಿ ಇನ್‌ಸ್ಟಾಲ್ಡ್‌ ಆ್ಯಪ್‌ಗಳಿವೆ. ಈ ಆ್ಯಪ್‌ಗಳು ಗಾತ್ರದಲ್ಲಿ ಹಗುರಾಗಿದ್ದು, ವೇಗವಾಗಿ ಕೆಲಸ ಮಾಡುತ್ತವೆ. ಆದರೆ, ಅಸಿಸ್ಟಂಟ್‌ ಗೊ ದಿಂದ ಅಲಾರಾಂ ಸೆಟ್ ಮಾಡಲು ಅಥವಾ ಸ್ಮಾರ್ಟ್‌ ಹೋಂ ಡಿವೈಸ್‌ ಕಂಟ್ರೋಲ್‌ ಮಾಡಲು ಸಾಧ್ಯವಿಲ್ಲ. ಹೀಗೆ ಕೆಲವು ಮಿತಿಗಳು ಇವೆಯಾದರೂ ಆ್ಯಪ್‌ ಬಳಕೆ ಮೂಲ ಕಾರ್ಯಾಚರಣೆಗೆ ಧಕ್ಕೆಯಾಗುವುದಿಲ್ಲ.

ಆಂಡ್ರಾಯ್ಡ್‌ ಗೊ ಪ್ಲೇ ಸ್ಟೋರ್‌ನಲ್ಲಿ ಇರುವ ಎಲ್ಲಾ ಕಂಟೆಂಟ್‌ಗಳೂ ಲಭ್ಯವಾಗಲಿವೆ. ಕಡಿಮೆ ಸಂಗ್ರಹಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಆ್ಯಪ್‌ಗಳನ್ನು ನೀಡಲಾಗಿದೆ. ಹ್ಯಾಂಡ್‌ಸೆಟ್‌ಗಳಿಗೆ ಹೊಂದುವಂತಹ ಆ್ಯಪ್‌ಗಳನ್ನು ಆಂಡ್ರಾಯ್ಡ್‌ ಗೊ ಶಿಫಾರಸು ಮಾಡುತ್ತದೆ.

ವೈಶಿಷ್ಟ್ಯ

ಪರದೆ: 5.0 ಇಂಚು ಎಚ್‌ಡಿ
ಒಸ್‌: ಆಂಡ್ರಾಯ್ಡ್‌ ಗೊ
ಪ್ರೊಸೆಸರ್‌: ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 425 ಪ್ರೊಸೆಸರ್ ಕ್ವಾಡ್‌ ಕೋರ್‌ 1.4ಗಿಗಾಹರ್ಟ್ಸ್‌
ರೆಸಲ್ಯೂಷನ್‌: 1280X720
ಮೆಮೊರಿ: 1ಜಿಬಿ+8ಜಿಬಿ ಮತ್ತು 1ಜಿಬಿ+16ಜಿಬಿ. 128ಜಿಬಿವರೆಗೆ ವಿಸ್ತರಣೆ ಸಾಧ್ಯ.
ಕ್ಯಾಮೆರಾ: 8 ಎಂಪಿ ರಿಯರ್‌, 5 ಎಂಪಿ ಪ್ರಂಟ್‌
ಬ್ಯಾಟರಿ: 3,000 ಎಂಎಎಚ್‌
ಇಯರ್‌ ಫೋನ್‌ ಇಲ್ಲ
ಫೇಸ್‌ ಅನ್‌ಲಾಕ್‌, ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಇಲ್ಲ.
ಸಿಮ್‌: ನ್ಯಾನೊ ಸಿಮ್‌, ನ್ಯಾನೊ ಸಿಮ್‌+ ಮೈಕ್ರೊ ಎಸ್‌ಡಿ ಕಾರ್ಡ್‌
ಒಂದು ಸಿಮ್‌ ಮಾತ್ರವೇ 4ಜಿ ಆಯ್ಕೆ ಸಾಧ್ಯ.
3.5ಎಂಎಂ ಆಡಿಯೊ ಪೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT