ಗೆಸ್ಚರ್‌ ಕಂಟ್ರೋಲ್‌ ವಾಚ್‌!

7
ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ವೇವ್ ಮಾರುಕಟ್ಟೆಗೆ

ಗೆಸ್ಚರ್‌ ಕಂಟ್ರೋಲ್‌ ವಾಚ್‌!

Published:
Updated:
Deccan Herald

ಇದು ಸ್ಮಾರ್ಟ್‌ ಜಗತ್ತು. ಕೈಗಡಿಯಾರದ ಜಾಗದಲ್ಲಿ ಸ್ಮಾರ್ಟ್‌ ಬ್ಯಾಂಡ್‌, ವಾಚ್‌ಗಳು ಕೈಯನ್ನು ಅಪ್ಪಿಕೊಳ್ಳುತ್ತಿವೆ. ಇವು ಕೇವಲ ಸಮಯವನ್ನಷ್ಟೇ ಅಲ್ಲದೆ, ದಿನಕ್ಕೆಷ್ಟು ಹೆಜ್ಜೆ ನಡೆದಿದ್ದೇವೆ, ಎಷ್ಟು ಹೊತ್ತು ನಿದ್ರೆ ಮಾಡಿದ್ದೇವೆ... ಹೀಗೆ ಹಲವು ಸೂಕ್ಷ್ಮ ಅಂಶಗಳ ನಿಖರ ಮಾಹಿತಿ ನೀಡುತ್ತವೆ. ಇಂತಹ ಬ್ಯಾಂಡ್‌ಗಳ ಸಾಲಿಗೆ ಹೊಸದಾಗಿ ಫಾಸ್ಟ್‌ಟ್ರ್ಯಾಕ್‌ ರಿಫ್ಲೆಕ್ಸ್ ವೇವ್ ಸೇರಿಕೊಂಡಿದೆ. ಗೆಸ್ಚರ್‌ ಕಂಟ್ರೋಲ್‌ ಅಂದರೆ ಕೈಯನ್ನು ಎಡ/ಬಲಕ್ಕೆ ತಿರುಗಿಸಿ ಇದರ ಚಟುವಟಿಕೆಗಳನ್ನು ನಿಯಂತ್ರಿಸಬಹುದು.

ಕೇವಲ ಆರೋಗ್ಯ ಕಾಳಜಿಯ ಉದ್ದೇಶದಿಂದ ಇದನ್ನು ತಯಾರಿಸಿಲ್ಲ. ಕಾಲ್‌ ರಿಜೆಕ್ಟ್‌, ಮ್ಯೂಸಿಕ್‌ ಕಂಟ್ರೋಲ್‌, ಪವರ್‌ ಪಾಯಿಂಟ್‌ ಪ್ರೆಸಂಟೇಷನ್‌ (ಪಿಪಿಟಿ) ಸೌಲಭ್ಯಗಳನ್ನೂ ಒಳಗೊಂಡಿದೆ. ಹೀಗಾಗಿ ವೃತ್ತಿಪರರಿಗೂ ಇದು ಇಷ್ಟವಾಗಲಿದೆ. 

ಇದರ ಬೆಲೆ ₹4,995. ಬೆಲೆ ಕೇಳಿದಾಕ್ಷಣ ಜಾಸ್ತಿ ಆಯ್ತು ಅನ್ನಿಸುತ್ತದೆ. ಆದರೆ, ಬ್ರ್ಯಾಂಡ್‌, ಕಾರ್ಯಾಚರಣೆ, ಗುಣಮಟ್ಟದ ದೃಷ್ಟಿಯಿಂದ ದುಬಾರಿಯಾದರೂ ಕೊಟ್ಟ ಬೆಲೆಗೆ ಮೋಸ ಆಗುವುದಿಲ್ಲ. ಬೆಲೆ ಮತ್ತು ವಿನ್ಯಾಸದ ದೃಷ್ಟಿಯಿಂದ ಮೇಲ್ನೋಟಕ್ಕೆ ಸ್ಮಾರ್ಟ್ರಾನ್‌ ಕಂಪನಿಯ ಟಿ ಬ್ಯಾಂಡ್‌ಗೆ ಹೋಲುತ್ತದೆ. ಆದರೆ, ರಿಫ್ಲೆಕ್ಸ್ ವೇವ್‌ನಲ್ಲಿ  ರಕ್ತದೊತ್ತಡ ಮತ್ತು ಇಸಿಜಿ ಮಾಪನ ಸೌಲಭ್ಯವಿಲ್ಲ. 

ಮುಖ್ಯವಾಗಿ ತೂಕ ಮತ್ತು ಗಾತ್ರದಲ್ಲಿ ಉಳಿದೆಲ್ಲಾ ಸ್ಮಾರ್ಟ್‌ ಬ್ಯಾಂಡ್‌ಗಳಿಗಿಂತಲೂ ಹಗುರವಾಗಿದೆ. ಕೈಯಲ್ಲಿದೆ ಎಂದೇ ಅನಿಸುವುದಿಲ್ಲ. ಇದರ ದಪ್ಪ‍ 8.9 ಎಂಎಂ ಇದೆ. ಹೀಗಾಗಿ ಇದು ವಿಶ್ವದಲ್ಲಿಯೇ ಅತಿ ತೆಳುವಾದ ಸ್ಮಾರ್ಟ್‌ ಬ್ಯಾಂಡ್‌ ಎನ್ನುವುದು ಕಂಪನಿಯ ಅಭಿಮತ. ಇದರ ಕೇಸ್‌ ರೆಕ್ಟ್‌ಆ್ಯಂಗಲ್ ಆಕಾರದಲ್ಲಿದ್ದು, ಒಎಲ್‌ಇಡಿ ಡಿಸ್‌ಪ್ಲೇ ಟಚ್‌ ಸ್ಕ್ರೀನ್‌ ಹೊಂದಿದೆ. ಪರದೆಯ ಕೆಳಗಿನ ಭಾಗದಲ್ಲಿ ‌ಸ್ವೈಪ್‌ ಮಾಡುವ ಮೂಲಕ ಹಂತಗಳನ್ನು ಗಮನಿಸಬಹುದು. 

ಪರದೆಯಲ್ಲಿ ದಿನಾಂಕ ಮತ್ತು ಸಮಯ, ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೇವೆ, ಈವೆಂಟ್‌ ರಿಮೈಂಡರ್, ಹವಾಮಾನ ವಿವರ ಹಾಗೂ ಅಡ್ವಾನ್ಸ್ ಸೆಟ್ಟಿಂಗ್ಸ್‌ನ ಹಂತಗಳಿವೆ. ವಾಕಿಂಗ್‌ ಹೋಗುವಾಗ ಹೆಜ್ಜೆ ಲೆಕ್ಕ ಹಾಕುವುದು, ಅದನ್ನು ಕಿ.ಮೀ ಲೆಕ್ಕದಲ್ಲಿ ತೋರಿಸುವುದು, ಅದರಿಂದ ಎಷ್ಟು ಕ್ಯಾಲರಿ ಬರ್ನ್ ಆಗುತ್ತಿದೆ ಎನ್ನುವ ಮಾಹಿತಿ ಪರದೆಯಲ್ಲಿ ಕಾಣಿಸುತ್ತಿರುತ್ತದೆ. ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕೂತರೆ ಅಥವಾ ಚಲಿಸದೇ ಇದ್ದರೆ, ಇಷ್ಟು ಹೊತ್ತಿನಿಂದ ಐಡಲ್‌ ಆಗಿದ್ದೀರಿ ಎನ್ನುವ ಎಚ್ಚರಿಕೆ ಸಂದೇಶವನ್ನೂ ನೀಡುವಂತೆ ಸೆಟ್ಟಿಂಗ್ಸ್‌ ಇದೆ. ಮೀಟಿಂಗ್‌ ರಿಮೈಂಡರ್‌ ಇಟ್ಟುಕೊಂಡರೆ ಸಮಯಕ್ಕೆ ಸರಿಯಾಗಿ ಅಲರ್ಟ್‌ ಪಡೆಯಬಹುದು. 

ಫೋನಿಗೆ ಪ್ಲೇ ಸ್ಟೋರ್‌ನಿಂದ ರಿಫ್ಲೆಕ್ಸ್‌ ವೇವ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬ್ಲೂಟೂತ್‌ ಮೂಲಕ ಬ್ಯಾಂಡ್‌ಗೆ ಕನೆಕ್ಟ್‌ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಇಂಟರ್‌ನೆಟ್‌ ಸಂಪರ್ಕ ಅಗತ್ಯ. ಆ್ಯಪ್‌ಗೆ ಸಂಪರ್ಕಿಸದೇ ಇದ್ದರೂ ಬ್ಯಾಂಡ್‌ ಕೆಲಸ ಮಾಡುತ್ತದೆ. ಆದರೆ, ಪಿಪಿಟಿ, ಮ್ಯೂಸಿಕ್‌ ಕಂಟ್ರೋಲ್‌, ಸೆಲ್ಫಿ, ರಿಮೈಂಡರ್‌, ನೋಟಿಫಿಕೇಷನ್‌ ಆಯ್ಕೆಗಳು ಸಿಗುವುದಿಲ್ಲ. 

ಕಂಪನಿಯ ರಿಫ್ಲೆಕ್ಸ್‌ ವೇವ್‌ ಆ್ಯಪ್‌ನೊಂದಿಗೆ ಸಂಪರ್ಕಿಸಿದರೆ ಹೆಚ್ಚಿನ ಆಯ್ಕೆಗಳು ಸಿಗಲಿವೆ. ಉತ್ತಮ ಸೆಲ್ಫಿ, ಪಿಪಿಟಿ ನಿರ್ವಹಣೆ, ಹಾಡನ್ನು ಫಾರ್ವರ್ಡ್‌, ಬ್ಯಾಕ್‌ವರ್ಡ್‌ ಆಯ್ಕೆಗಳು ಲಭ್ಯವಾಗುತ್ತವೆ. ಕೈಯನ್ನು ಬಲಕ್ಕೆ ತಿರುಗಿಸಿದರೆ ಹಾಡು ಫಾರ್ವರ್ಡ್‌ ಆಗುತ್ತದೆ. ಎಡಕ್ಕೆ ತಿರುಗಿಸಿದರೆ ಬ್ಯಾಕ್‌ವರ್ಡ್‌ ಆಗುತ್ತದೆ.

ಬೇಡದೇ ಇರುವ ಕರೆಗಳು ಅಥವಾ ಮೀಟಿಂಗ್‌ನಲ್ಲಿದ್ದಾಗ ಬರುವ ಕರೆಗಳನ್ನು ರಿಜೆಕ್ಟ್‌ ಮಾಡಲು ಕೈಯನ್ನು ಎಡಕ್ಕೆ ತಿರುಗಿಸಿದರೆ ಕಾಲ್‌ ಕಟ್ ಆಗುತ್ತದೆ. ಆ್ಯಪ್‌ನಲ್ಲಿ ಕ್ವಿಕ್‌ ರಿಪ್ಲೆ ಆಯ್ಕೆ ಸಕ್ರಿಯಗೊಳಿಸಿದ್ದರೆ, ನೀವು ಸಿದ್ದಪಡಿಸಿ ಇಟ್ಟಿರುವ ಸಂದೇಶವು ಕಾಲ್‌ ರಿಜೆಕ್ಟ್‌ ಆದ ನಂಬರ್‌ಗೆ ರವಾನೆಯಾಗುತ್ತದೆ. ಮೊಬೈಲ್‌ಗೆ ಬರುವ ಎಲ್ಲಾ ಸಂದೇಶಗಳೂ ನಮ್ಮ ಅರಿವಿಗೆ ಬರುವಂತೆ ಆ್ಯಪ್‌ನಲ್ಲಿ ಸೆಟ್‌ ಮಾಡಿಕೊಳ್ಳಬಹುದು. ಆಗ ಸ್ಮಾರ್ಟ್‌ ಬ್ಯಾಂಡ್‌ ವೈಬ್ರೇಟ್‌ ಆಗುವುದರಿಂದ ಸುಲಭವಾಗಿ ಗಮನಿಸಬಹುದು.

ಅಡ್ವಾನ್ಸ್ ಸೆಟ್ಟಿಂಗ್ಸ್‌ ಆಯ್ಕೆಯಲ್ಲಿ ಸ್ಲೀಪ್‌ ಮೋಡ್‌ ಆಯ್ಕೆಯನ್ನು ಸಕ್ರಿಯಗೊಳಿಸಿದರೆ ನಾವು ಹೇಗೆ ನಿದ್ರೆ ಮಾಡಿದ್ದೇವೆ, ಎಷ್ಟು ಬಾರಿ ಗೊರಕೆ ಹೊಡೆದಿದ್ದೇವೆ ಎನ್ನುವ ವಿವರಗಳು ದಾಖಲಾಗುತ್ತವೆ.‌ 

ಇದಕ್ಕೆ ಚಾರ್ಜರ್‌ ನೀಡಿಲ್ಲ. ಬ್ಯಾಂಡ್‌ಗೆ ಜೋಡಿಸಲು ಒಂದು ಕೇಬಲ್‌ ನೀಡಿದ್ದಾರೆ. ಅದರ ಇನ್ನೊಂದು ತುದಿಯನ್ನು ಯುಎಸ್‌ಬಿ ಚಾರ್ಜರ್‌ಗೆ ಸಂಪರ್ಕಿಸಿ ಚಾರ್ಜ್‌ ಮಾಡಬಹುದು. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು ಎರಡು ಗಂಟೆ ಬೇಕು. ಐದು ದಿನಗಳವರೆಗೆ ಕೆಲಸ ಮಾಡುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !