ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OnePlus Pad Go: ಕೈಗೆಟಕುವ ಬೆಲೆಯ ಉತ್ತಮ ಟ್ಯಾಬ್

Published 9 ನವೆಂಬರ್ 2023, 19:12 IST
Last Updated 9 ನವೆಂಬರ್ 2023, 19:12 IST
ಅಕ್ಷರ ಗಾತ್ರ

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಒನ್‌ಪ್ಲಸ್‌ ಕಂಪನಿಯು ಇದೀಗ ಟ್ಯಾಬ್ಲೆಟ್‌ ವಿಭಾಗದಲ್ಲಿ ತನ್ನ ವಹಿವಾಟನ್ನು ನಿಧಾನವಾಗಿ ವಿಸ್ತರಿಸಲು ಆರಂಭಿಸಿದೆ. ಈ ಹಿಂದೆ ಒನ್‌ಪ್ಲಸ್‌ ಪ್ಯಾಡ್‌ ಬಿಡುಗಡೆ ಮಾಡಿದ್ದ ಕಂಪನಿಯು, ಇದೀಗ ಒನ್‌‍ಪ್ಲಸ್ ಪ್ಯಾಡ್‌ ಗೋ (OnePlus Pad Go) ಬಿಡುಗಡೆ ಮಾಡಿದೆ. ಕೈಗೆಟಕುವ ಬೆಲೆಗೆ ಗುಣಮಟ್ಟದ ಟ್ಯಾಬ್ಲೆಟ್‌ ಆಗಿರುವುದೇ ಇದರ ಹೈಲೈಟ್.

ದೊಡ್ಡ ಪರದೆ, ದೀರ್ಘಬಾಳಿಕೆಯ ಬ್ಯಾಟರಿ ಮತ್ತು ಬೆಲೆಗೆ ತಕ್ಕುದಾದ ಕಾರ್ಯಸಾಮರ್ಥ್ಯದಿಂದ ಇದು ಹಿಡಿಸುತ್ತದೆ. ಒನ್‌ಪ್ಲಸ್‌ ಪ್ಯಾಡ್‌ ರೀತಿಯಲ್ಲಿಯೇ ಇದು ಸಹ ವಿನ್ಯಾಸದಲ್ಲಿ ತೆಳುವಾಗಿದೆ. ಹಗುರಾಗಿ ಇರುವುದರಿಂದ ಹೆಚ್ಚು ಹೊತ್ತು ಕೈಯಲ್ಲಿ ಇಟ್ಟುಕೊಳ್ಳಲು ಸಮಸ್ಯೆ ಆಗುವುದಿಲ್ಲ. ಯುಎಸ್‌ಬಿ ಟೈಪ್‌–ಸಿ ಚಾರ್ಜಿಂಗ್‌ ವ್ಯವಸ್ಥೆ ಇದ್ದು, ಎಲ್‌ಟಿಇ ಆವೃತ್ತಿಯು ಸಿಮ್‌ ಸ್ಲಾಟ್ ಒಳಗೊಂಡಿದೆ.

ವಿನ್ಯಾಸವು ಒನ್‌ಪ್ಲಸ್‌ ಪ್ಯಾಡ್‌ಗೆ ಬಹುತೇಕ ಹೋಲುತ್ತದೆ. ಟ್ಯಾಬ್‌ನ ಮೇಲ್ಭಾಗದಲ್ಲಿ ವಾಲ್ಯುಮ್ ಬಟನ್‌ ಮತ್ತು ಎಡಭಾಗದಲ್ಲಿ ಪವರ್‌ ಬಟನ್‌ ನೀಡಲಾಗಿದೆ. ಟ್ಯಾಬ್‌ನ ಬಲ ಭಾಗದಲ್ಲಿ ಎರಡು ಮತ್ತು ಎಡ ಭಾಗದಲ್ಲಿ ಎರಡೂ ಹೀಗೆ ಒಟ್ಟು ನಾಲ್ಕು ಸ್ಪೀಕರ್‌ಗಳಿವೆ. ಡಾಲ್ಬಿ ಅಟ್ಮೋಸ್‌ ಸ್ಪೀಕರ್‌ಗೆ ಬೆಂಬಲಿಸುವುದರಿಂದ ಆಡಿಯೊ ಗುಣಮಟ್ಟ ಉತ್ತಮವಾಗಿದೆ.

11.3 ಇಂಚು 2.4ಕೆ ಎಲ್‌ಸಿಡಿ ಪ್ಯಾನಲ್‌ 90 ಹರ್ಟ್ಸ್ ರಿಫ್ರೆಷ್ ರೇಟ್ ಇದೆ. 400 ನಿಟ್ಸ್‌ ಬ್ರೈಟ್‌ನೆಸ್‌ ಇರುವುದರಿಂದ ಬಿಸಿಲಿನಲ್ಲಿಯೂ ಬಳಸಬಹುದು. ಸ್ಪ್ಲಿಟ್‌ ಸ್ಕ್ರೀನ್‌ ಇದ್ದು, ಏಕಕಾಲಕ್ಕೆ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಆಟೊ–ಕನೆಕ್ಟ್‌ ಸೌಲಭ್ಯ ಸಹ ಸ್ಮಾರ್ಟ್‌ಫೋನ್‌ ಜೊತೆ ಸಂಪರ್ಕಿಸಲು ನೆರವಾಗುತ್ತದೆ. ಟೈಪ್‌ ಸಿ ಯುಎಸ್‌ಬಿ ಪೋರ್ಟ್‌, ಆಡಿಯೊ ಡಿವೈಸ್‌ ಪೋರ್ಟ್‌ ಒಳಗೊಂಡಿದೆ. 

ಮೀಡಿಯಾ ಟೆಕ್ ಹೀಲಿಯೊ ಜಿ99 ಪ್ರೊಸೆಸ್‌ ಇದ್ದು ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್‌ ಒಎಸ್ 13.2ನಿಂದ ಕಾರ್ಯಾಚರಿಸುತ್ತದೆ. ಮಧ್ಯಮ ಹಂತದ ಪ್ರೊಸೆಸರ್ ಇದಾಗಿದ್ದರೂ ಬ್ರೌಸಿಂಗ್‌, ಇ–ಮೇಲ್‌ ನೋಡುವುದು, ವಿಡಿಯೊ ನೋಡುವುದು, ಹೆಚ್ಚಿನ ರೆಸಲ್ಯೂಷನ್‌ ಇಲ್ಲದೆ ಗೇಮ್‌ ಆಡುವುದು... ಹೀಗೆ ನಿತ್ಯದ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೆ ಮಾಡಬಹುದು. 8ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸ್ಟೊರೇಜ್‌ ಹಾಗೂ 8ಜಿಬಿ ರ್‍ಯಾಮ್‌ ಮತ್ತು 128 ಜಿಬಿ ಸ್ಟೊರೇಜ್‌ನ (1ಟಿಬಿ ವರೆಗೆ ವಿಸ್ತರಣೆ) ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

ಕ್ಯಾಮೆರಾದ ಕಡೆಗೆ ಹೆಚ್ಚು ಗಮನ ಕೊಟ್ಟಿರುವ ಟ್ಯಾಬ್ಲೆಟ್‌ ಇದಲ್ಲ. ಹೀಗಾಗಿ 8ಎಂಪಿ ರಿಯರ್ ಮತ್ತು 8ಎಂಪಿ ಫ್ರಂಟ್‌ ಕ್ಯಾಮೆರಾ ಇರುವುದರಿಂದ ತಕ್ಕ ಮಟ್ಟಿಗೆ ಒಳ್ಳೆಯ ಚಿತ್ರ ಮತ್ತು ವಿಡಿಯೊ ಮಾಡಬಹುದು. ಫ್ರಂಟ್ ಕ್ಯಾಮೆರಾ ವಿಡಿಯೊ ಕಾಲ್‌ಗೆ ಬಳಸಲು ಅಡ್ಡಿ ಇಲ್ಲ. ಆದರೆ, ಸೆಲ್ಫಿಗೆ ಉತ್ತಮ ಅನ್ನಿಸುವುದಿಲ್ಲ. 

ಒನ್‌ಪ್ಲಸ್‌ ಪ್ಯಾಡ್‌ನಂತೆ ಇದರ ಜೊತೆ ಮ್ಯಾಗ್ನೆಟಿಕ್‌ ಕೀಬೋರ್ಡ್‌ ಮತ್ತು ಸ್ಮಾರ್ಟ್‌ ಪೆನ್‌ ಸ್ಟೈಲೊ ಬಿಡುಗಡೆ ಮಾಡಿಲ್ಲ. ಕೇಸ್ ಮಾತ್ರ ಬಿಡುಗಡೆ ಮಾಡಿದ್ದು ಅದರ ಬೆಲೆ ₹99 ಇದೆ. ಒನ್‌ಪ್ಲಸ್‌ ಪ್ಯಾಡ್‌ ಗೊ ವೈ–ಫೈ ಆಯ್ಕೆ ಇರುವುದರ ಬೆಲೆ 8ಜಿಬಿ+128 ಜಿಬಿಗೆ ₹19,999 ಇದೆ. ಸಿಮ್‌ ಆಯ್ಕೆ (ಎಲ್‌ಟಿಇ) ಇರುವುದರ ಬೆಲೆ 8ಜಿಬಿ+128ಜಿಬಿಗೆ ₹21,999 ಮತ್ತು 8ಜಿಬಿ+256ಜಿಬಿಗೆ ₹23,999 ಇದೆ.

8 ಸಾವಿರ ಎಂಎಎಚ್‌ ಬ್ಯಾಟರಿ ಇದ್ದು, 33 ಡಬ್ಲ್ಯು ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. 40 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್‌ ಮತ್ತು 500 ಗಂಟೆ ಸ್ಟ್ಯಾಂಡ್‌ಬೈ ಸಾಮರ್ಥ್ಯ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ. ಆದರೆ, ಸರಾಸರಿ ಬಳಕೆಯಲ್ಲಿ ಎರಡು ದಿನಕ್ಕಂತೂ ಸಮಸ್ಯೆ ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT