ಮಂಗಳವಾರ, ಜೂನ್ 2, 2020
27 °C
ಸ್ಥಳೀಯವಾಗಿ ಹೊಸ ಪರಿಹಾರ ಕಂಡುಕೊಂಡ ಬೆಂಗಳೂರು ಸಂಸ್ಥೆಗಳು

ಕೊರೊನಾ ಸೋಂಕು ತಡೆಯಲು ಬಂತು ಅಗ್ಗದ ನಿಲುವಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ 19 ಸೋಂಕು ಹರಡದಂತೆ ತಡೆಯಲು ನಡೆದಿರುವ ಹೋರಾಟದ ಮುಂಚೂಣಿಲ್ಲಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಬೆಂಗಳೂರಿನ ಸಿಎಸ್ಐಆರ್ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯವು (ಸಿಎಸ್ಐಆರ್-ಎನ್ಎಎಲ್)  ಕೊರೊನಾ ಸೋಂಕು ನಿರೋಧಕ ನಿಲುವಂಗಿ ಅಭಿವೃದ್ಧಿಪಡಿಸಿದೆ. 

ಬೆಂಗಳೂರಿನ ಎಂಎಎಫ್ ಕ್ಲೋದಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಸಹಯೋಗದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಈ ವೈಯಕ್ತಿಕ ಸುರಕ್ಷತಾ ನಿಲುವಂಗಿಗಳನ್ನು ತಯಾರಿಸುತ್ತಿದೆ.   

ಸ್ಥಳೀಯವಾಗಿ ದೊರೆಯುವ ಸಂಪೂರ್ಣ ದೇಶೀಯ ಲ್ಯಾಮಿನೇಟೆಡ್‌ ಬಟ್ಟೆ ಬಳಸಿ ತಯಾರಿಸಲಾದ ಈ ಸೋಂಕು ನಿರೋಧಕ ನಿಲುವಂಗಿಗಳಿಗೆ ಕೊಯಮತ್ತೂರಿನ ಎಸ್.ಐ.ಟಿ.ಆರ್.ಎ. ಸಂಸ್ಥೆಯ ಪ್ರಮಾಣಪತ್ರ ಕೂಡ ದೊರೆತಿದೆ ಎಂದು ಸಿಎಸ್ಐಆರ್-ಎನ್ಎಎಲ್ ತಿಳಿಸಿದೆ. 

ಜೀವದ ಹಂಗು ತೊರೆದು ಕೋವಿಡ್-19 ವಿರುದ್ಧ ಹಗಲಿರುಳು ಹೋರಾಡುತ್ತಿರುವ ವೈದ್ಯರು,ದಾದಿಯರು,ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರನ್ನು ಇವು ಸದಾ ಸುರಕ್ಷಾ ಕವಚದಂತೆ ಕಾಪಾಡುತ್ತವೆ. 

ಸಿಎಸ್ಐಆರ್-ಎನ್ಎಎಲ್ ಮುಖ್ಯವಿಜ್ಞಾನಿ ಡಾ.ಹರೀಶ್ ಸಿ. ಬರ್ಸಿಲಿಯಾ ನೇತೃತ್ವದಲ್ಲಿ ಹಿರಿಯ ಪ್ರಧಾನ ವಿಜ್ಞಾನಿ ಡಾ. ಹೇಮಂತ್ ಕುಮಾರ್ ಶುಕ್ಲ ಮತ್ತು ಎಂಎಎಫ್‌ನ ಎಂ.ಜೆ. ವಿಜು ಅವರನ್ನು ಒಳಗೊಂಡ ತಂಡ ಈ ನಿಲುವಂಗಿಗಳನ್ನು ಅಭಿವೃದ್ಧಿಪಡಿಸಿದೆ.  

ಸಿಎಸ್ಐಆರ್-ಎನ್ಎಎಲ್ ಮತ್ತು ಎಂಎಎಫ್ ಪ್ರತಿ ನಿತ್ಯ 30ಸಾವಿರದಂತೆ ನಾಲ್ಕು ವಾರಗಳ ಅವಧಿಯಲ್ಲಿ ಸಾವಿರಾರು ನಿಲುವಂಗಿಗಳನ್ನು ಉತ್ಪಾದಿಸುತ್ತಿವೆ ಎಂದು ಸಿಎಸ್ಐಆರ್-ಎನ್ಎಎಲ್ ನಿರ್ದೇಶಕ ಜೀತೇಂದ್ರ ಜಾಧವ್‌ ತಿಳಿಸಿದ್ದಾರೆ. 

ಸಿಎಸ್ಐಆರ್-ಎನ್ಎಎಲ್ ಮತ್ತು ಎಂಎಎಫ್ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಸೋಂಕು ನಿರೋಧಕ ನಿಲುವಂಗಿಗಳ ಕೊರತೆ ತಗ್ಗಿಸಿದ್ದಾರೆ. ವಿದೇಶದಿಂದ ಆಮದಾಗುವ ಅಥವಾ ಇತರ ನಿಲುವಂಗಿಗಳಿಗೆ ಹೋಲಿಸಿದರೆ ಇವುಗಳ ಬೆಲೆ ತುಂಬಾ ಅಗ್ಗ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು