ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಿಎಸ್ ಆಧಾರಿತ ಡಿಜಿಟಲ್ ಗಡಿಯಾರ

Last Updated 4 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಜಿಪಿಎಸ್ ಸಂಕೇತಗಳನ್ನು ಆಧರಿಸಿದ ಡಿಜಿಟಲ್ ಗಡಿಯಾರವನ್ನು ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗ ಅಭಿವೃದ್ಧಿಪಡಿಸಿದೆ.

ಈ ಗಡಿಯಾರದ ವೈಶಿಷ್ಟ್ಯತೆ ಎಂದರೆ ಉಪಗ್ರಹದ ಜಿಪಿಎಸ್ ಮೂಲಕ ಸಮಯದ ಸಂಕೇತ ಪಡೆಯಲಿದೆ. ಡಿಜಿಟಲ್ ತಾಂತ್ರಿಕ ವ್ಯವಸ್ಥೆ ಮೂಲಕ ಸಿದ್ಧಪಡಿಸಲಾಗಿದ್ದು, ನಿಖರ ಸಮಯ ತೋರಿಸುತ್ತದೆ.

ಎಲ್.ಇ.ಡಿ ತಂತ್ರಜ್ಞಾನದ ಬೆಳಕಿನ ಮೂಲಕ ನಿಖರ ಸಮಯ ತೋರಿಸುವ ಗಡಿಯಾರದ ಮುಳ್ಳುಗಳು ಇತರೆ ಸಾಮಾನ್ಯ ಗಡಿಯಾರಗಳಂತೆ ಚಲಿಸುವುದಿಲ್ಲ. ವಿಶೇಷವೆಂದರೆ ಸಮಯ ಸರಿಪಡಿಸುವ ಪ್ರಮೇಯವೇ ಇಲ್ಲಿ ಉದ್ಭವಿಸುವುದಿಲ್ಲ. ಗಡಿಯಾರದ ಸ್ವಿಚ್ ಒತ್ತಿದರೆ ಕಾಂಪೆಕ್ಟ್ ಆಂಟೇನಾದಿಂದ ಕನಿಷ್ಠ ಮೂರು ಉಪಗ್ರಹಗಳಿಂದ ಜಿಪಿಎಸ್ ಸಂಕೇತ ಸ್ವೀಕರಿಸುತ್ತದೆ. ಆಗ ಸ್ವಯಂ ಚಾಲಿತವಾಗಿ ಜಿಎಂಟಿ ಅಂದರೆ ಗ್ರೀನ್‍ವಿಚ್ ಸರಾಸರಿ ಕಾಲಮಾನ ಸೂಚಿಸುತ್ತದೆ.

ಗ್ರೀನ್‍ವಿಚ್ ಎಂದರೆ ಲಂಡನ್‌ನಲ್ಲಿರುವ ರಾಯಲ್ ವೀಕ್ಷಣಾಲಯದಲ್ಲಿ ಸರಾಸರಿ ಸೌರ ಕಾಲವನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಜಿಎಂಟಿ ಆಧಾರದ ಮೇಲೆ ಭಾರತೀಯ ಕಾಲಮಾನ ಐಎಸ್‍ಟಿ ತೋರಿಸುತ್ತದೆ. ಮೂಲಕ ಜಿಪಿಎಸ್ ಬೋರ್ಡ್‌ಗೆ ಉಪಗ್ರಹ ಸಂಕೇತಗಳು ದೊರೆಯಲಿದ್ದು, ಬಳಿಕ ಗಡಿಯಾರ ಕಾರ್ಯನಿರ್ವಹಿಸುತ್ತದೆ.

ಗಡಿಯಾರ ಕಾರ್ಯನಿರ್ವಹಣೆಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಇರಬೇಕಾಗುತ್ತದೆ. ಹೀಗಾಗಿ ಈ ಗಡಿಯಾರದ ವಿನ್ಯಾಸದಲ್ಲಿಯೇ ಸೌರಶಕ್ತಿ ಪ್ಯಾನಲ್‍ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ವಿದ್ಯುತ್ ಕಡಿತ ಸಮಸ್ಯೆ ಉದ್ಭವಿಸಿದರೂ ತೊಂದರೆ ಇಲ್ಲ.

ಈ ಗಡಿಯಾರ ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿದ್ದು, ವಿಮಾನ, ರೈಲ್ವೆ, ಬಸ್ ನಿಲ್ದಾಣ, ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ನಿಖರ ಸಮಯ ತಿಳಿಯಲು ಇದು ಸಹಕಾರಿಯಾಗಲಿದೆ. ಎಲ್ಲರಿಗೂ ಕಣ್ಣಿಗೆ ಕಾಣುವಂತೆ ದೊಡ್ಡದಾಗಿ ಡಿಜಿಟಲ್ ಗಡಿಯಾರ ಹಾಕಬಹುದು. ಪ್ರತಿ 60 ನಿಮಿಷಕ್ಕೊಮ್ಮೆ ಸರಿಯಾಗಿ ಸಮಯ ಇಷ್ಟು ಗಂಟೆಯಾಗಿದೆ ಎಂದು ಸ್ಪಷ್ಟವಾಗಿ ಧ್ವನಿ ಹೊಮ್ಮುವುದು ಇದರ ಮತ್ತೊಂದು ವಿಶೇಷ. ಗಡಿಯಾರವನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದ್ದು, ನಿರ್ವಹಣೆ ದುಬಾರಿ ಅಲ್ಲವೇ ಅಲ್ಲ.

ಗಡಿಯಾರದಲ್ಲಿ ಸಮಯ ಸೂಚಿಸಲು ಬಳಸಿರುವ ಮುಳ್ಳುಗಳಿಗೆ ಎಲ್‍ಇಡಿ ತಂತ್ರಜ್ಞಾನದ ಮೂಲಕ ಕೆಂಪು, ನೀಲಿ ಮತ್ತು ಹಸಿರು ದೀಪ ಅಳವಡಿಸಲಾಗಿದೆ. ಎಲ್‍ಇಡಿ ದೀಪ ಪ್ರಕಾಶಮಾನವಾಗಿದ್ದರೆ ಸಮಯ ಸೂಚಿಸುವ ಗಡಿಯಾರದ ಕೈಗಳು ಹಗಲು ಹೊತ್ತಿನಲ್ಲೂ ಸ್ಪಷ್ಟವಾಗಿ ಕಾಣುತ್ತವೆ. ಜತೆಗೆ ಗಡಿಯಾರದ ಗಾತ್ರವನ್ನು ಕಡಿಮೆ ಮಾಡಬಹುದಾಗಿದ್ದು, ಕನಿಷ್ಠ ಒಂದು ಅಡಿ ಗಡಿಯಾರ ತಯಾರಿಸಿ ಮನೆಗಳಲ್ಲೂ ಸಹ ಬಳಸಬಹುದಾಗಿದೆ. ಮನೆಗಳ ಗೋಡೆಗಳಿಗೂ ಡಿಜಿಟಲ್ ತಂತ್ರಜ್ಞಾನದ ಗಡಿಯಾರ ಆಕರ್ಷಣೀಯವಾಗಿರುತ್ತದೆ.

ಸಪ್ತಗಿರಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ ವಿಭಾಗದ ಡಾ. ದಿನೇಶ್ ಅನ್ವೇಕರ್, ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ನಂದಿನಿ ಎಸ್, ಅನುಷ ಎಸ್.ವಿ, ಭೂಮಿಕ ಕೆ.ಎಸ್., ದಿವ್ಯಶ್ರೀ ಆರ್.ಎ. ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ದಿವಿಜ್ ಎನ್. ಮತ್ತು ದಿವ್ಯ ಕೆ. ನೇತೃತ್ವದ ತಂಡ ಪರೀಕ್ಷೆ ಮುಗಿದ ಬಳಿಕ ಮೂರು ವಾರಗಳ ರಜೆ ಸಂದರ್ಭದಲ್ಲಿ ಈ ಗಡಿಯಾರವನ್ನು ಅವಿಷ್ಕರಿಸಿದೆ.

ಮೂರು ಅಡಿ ವ್ಯಾಸದ ಮತ್ತು ಮೂರು ಇಂಚು ಆಳದ ಗಡಿಯಾರ ನಿರ್ಮಿಸಲು ಹತ್ತು ಸಾವಿರ ರೂಪಾಯಿ ಮತ್ತು ಒಂದು ಇಂಚು ವ್ಯಾಸದ ಗಡಿಯಾರಕ್ಕೆ ನಾಲ್ಕು ಸಾವಿರ ರೂಪಾಯಿ ವೆಚ್ಚವಾಗಲಿದೆ.

ನವೋದ್ಯಮದ ಮೂಲಕ ಡಿಜಿಟಲ್ ಗಡಿಯಾರ ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಇದಕ್ಕೆ ವಾಣಿಜ್ಯ ಆಯಾಮವನ್ನೂ ನೀಡಲಿದ್ದಾರೆ.ಪ್ರಾಂಶುಪಾಲ ಡಾ. ಕೆ.ಎಲ್. ಶಿವಬಸಪ್ಪ ಮತ್ತು ಆಡಳಿತಾಧಿಕಾರಿ ಡಾ. ಕೆ.ಆರ್. ನಾಗಭೂಷಣ್ ಬೆಂಬಲ ನೀಡಿದ್ದಾರೆ.ಯೋಜನೆಗೆ ಸಪ್ತಗಿರಿ ಕಾಲೇಜಿನ ಆಡಳಿತ ಮಂಡಳಿ ಪ್ರಾಯೋಜಕತ್ವ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT