ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಲ್‌ವಿ ಉಡ್ಡಯನ ವಿಫಲ

ಪೂರ್ವ ನಿಗದಿಯಂತೆ ಕೆಲಸ ಮಾಡದ ಕ್ರಯೋಜೆನಿಕ್‌ ಎಂಜಿನ್‌
Last Updated 12 ಆಗಸ್ಟ್ 2021, 18:50 IST
ಅಕ್ಷರ ಗಾತ್ರ

ಶ್ರೀಹರಿಕೋಟಾ (ಆಂಧ್ರಪ್ರದೇಶ) (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಭೂ ಸರ್ವೇಕ್ಷಣೆ ಉಪಗ್ರಹ-03 ಅನ್ನು ಹೊತ್ತು ಗುರುವಾರ ಬೆಳಿಗ್ಗೆ 5.43ರಲ್ಲಿ ನಭಕ್ಕೆ ಜಿಗಿದಿದ್ದ ಜಿಎಸ್‌ಎಲ್‌ವಿ-ಎಫ್‌10 ನೌಕೆಯು, ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿದೆ. ನೌಕೆಯ ಕ್ರಯೋಜೆನಿಕ್ ಹಂತವು ಪೂರ್ವನಿಗದಿಯಂತೆ ಕೆಲಸ ಮಾಡದೇ ಇದ್ದ ಕಾರಣ, ಕಾರ್ಯಾಚರಣೆ ವಿಫಲವಾಗಿದೆ ಎಂದು ಇಸ್ರೊ ಹೇಳಿದೆ.

ಈ ಕಾರ್ಯಾಚರಣೆ ವಿಫಲವಾದುದ್ದರ ಬಗ್ಗೆ ವೈಜ್ಞಾನಿಕ ಮತ್ತು ರಾಜಕೀಯ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಪೂರ್ವನಿಗದಿಯಂತೆ ಜಿಎಸ್‌ಎಲ್‌ವಿ ನೌಕೆಯು 5.43ಕ್ಕೆ ನ ಭದತ್ತ ಜಿಗಿಯಿತು. ನೌಕೆಯ ಮೊದಲ ಹಂತದ ಬೂಸ್ಟರ್‌ ರಾಕೆಟ್‌ಗಳು ಮತ್ತು ಎರಡನೇ ಹಂತದ ರಾಕೆಟ್‌ಗಳು ಕರಾರುವಕ್ಕಾಗಿ ಕಾರ್ಯನಿರ್ವಹಿಸಿದವು. ನೌಕೆಯು ನಭಕ್ಕೆ ಜಿಗಿದ ನಂತರದ 4.56 ನಿಮಿಷದಲ್ಲಿ ಮೂರನೇ ಹಂತವು ಚಾಲೂ ಆಗಬೇಕಿತ್ತು. ಆದರೆ ಮೂರನೇ ಹಂತದ ಕ್ರಯೋಜೆನಿಕ್ ಹಂತವು ಕಾರ್ಯನಿರ್ವಹಿಸುವಲ್ಲಿ ವಿಫಲವಾಯಿತು. ತಾಂತ್ರಿಕ ಸಮಸ್ಯೆಯಿಂದ ಕಾರ್ಯಾಚರಣೆ ವಿಫಲವಾಯಿತು’ ಎಂದು ಇಸ್ರೊ ಘೋಷಿಸಿತು.

2,268 ಕೆ.ಜಿ. ತೂಕದ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ-ಎಫ್‌10 ಅನ್ನು ಈ ಮೊದಲು 2020ರ ಮಾರ್ಚ್ 5ರಂದು ಉಡ್ಡಯನ ಮಾಡಬೇಕಿತ್ತು. ತಾಂತ್ರಿಕ ತೊಂದರೆಯ ಕಾರಣ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು. ನಂತರ 2021ರ ಮಾರ್ಚ್ 28ರಂದು ಉಡ್ಡಯನವನ್ನು ನಿಗದಿ ಮಾಡಲಾಗಿತ್ತು.ಮತ್ತೆ ತಾಂತ್ರಿಕ ಕಾರಣದಿಂದ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು. ಮೂರನೇ ಬಾರಿ ನಿಗದಿ ಮಾಡಿದ ಉಡ್ಡಯನವೂ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿದೆ.

ವೈಫಲ್ಯದ ಹಿಂದೆ ವೈಫಲ್ಯ

ಚಂದ್ರನ ದಕ್ಷಿಣ ತುದಿಯಲ್ಲಿ ಲ್ಯಾಂಡರ್ ನೌಕೆಯನ್ನು ಇಳಿಸುವ ಚಂದ್ರಯಾನ-2 ಯೋಜನೆಯು ವಿಫಲವಾಗಿತ್ತು. 2019ರ ಜುಲೈ 22ರಂದು ಚಂದ್ರಯಾನ-2 ಯೋಜನೆಯ ಭಾಗವಾಗಿ ಚಂದ್ರನ ಪರಿಭ್ರಮಣ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ ಲ್ಯಾಂಡರ್‌ ಚಂದ್ರನ ನೆಲವನ್ನು ಮುಟ್ಟುವ ಬದಲು, ಅಪ್ಪಳಿಸಿತ್ತು.

ಲ್ಯಾಂಡರ್ ಇಳಿಸುವ ಕಾರ್ಯಾಚರಣೆ ಯಶಸ್ವಿಯಾಗಿದ್ದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ನೌಕೆ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗುತ್ತಿತ್ತು.

ಚಂದ್ರಯಾನ-2 ಭಾಗಶಃ ವಿಫಲವಾದ ನಂತರ, ಈಗ ಭೂ ಸರ್ವೇಕ್ಷಣೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯಾಚರಣೆಯೂ ವಿಫಲವಾಗಿದೆ.

‘ಆಘಾತವಾಗಿದೆ, ಧೃತಿಗೆಡಬೇಕಿಲ್ಲ’

‘ಜಿಎಸ್‌ಎಲ್‌ವಿ-ಎಫ್‌10 ಕಾರ್ಯಾಚರಣೆಯ ವೈಫಲ್ಯದಿಂದ ಆಘಾತವಾಗಿದೆ. ಆದರೆ ಇದರಿಂದ ಧೃತಿಗೆಡಬೇಕಿಲ್ಲ. ಇಸ್ರೊ ಮರಳಿ ಯಶಸ್ಸು ಗಳಿಸಲಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಹೇಳಿದ್ದಾರೆ.

‘ಕ್ರಯೋಜೆನಿಕ್ ತಂತ್ರಜ್ಞಾನವು ಅತ್ಯಂತ ಸಂಕೀರ್ಣವಾದುದು. ಭಾರತವು ಈ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸಿದೆ. ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆಗಿಂತ ಹೆಚ್ಚು ಪರಿಣತಿ ಸಾಧಿಸಿದೆ. ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ರಷ್ಯಾದ ವೈಫಲ್ಯದ ಪ್ರಮಾಣ ಶೇ 20ಕ್ಕಿಂತಲೂ ಹೆಚ್ಚು. ಭಾರತದ ವೈಫಲ್ಯದ ಪ್ರಮಾಣ ಅದಕ್ಕಿಂತಲೂ ಕಡಿಮೆ ಇದೆ’ ಎಂದು ಮಾಧವನ್ ಹೇಳಿದ್ದಾರೆ.

ಏಟು-ಎದಿರೇಟು

ಈ ವೈಫಲ್ಯದಿಂದ ಧೃತಿಗೆಡದೇ ಇರುವ ಶಕ್ತಿ ಇಸ್ರೊಗೆ ಇದೆ. ಇಸ್ರೊ ಮತ್ತೆ ಯಶಸ್ಸು ಗಳಿಸಲಿದೆ. ಆದರೆ, ವಿಕ್ರಂ ಸಾರಾಬಾಯ್ ಮತ್ತು ಸತೀಶ ಧವನ್ ಅವರು ರೂಪಿಸಿದ್ದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಂತೆ ಕೆಲಸ ಮಾಡಲು ಇಸ್ರೊಗೆ ಅವಕಾಶ ಮಾಡಿಕೊಡಬೇಕು. ಆದರೆ ಈಗ ಆ ಸಂಸ್ಥೆಯಲ್ಲಿ ರಾಜಕೀಯ ಮೇಲಾಟವೇ ಹೆಚ್ಚಾಗುತ್ತಿದೆ

ಜೈರಾಂ ರಮೇಶ್,ಕಾಂಗ್ರೆಸ್ ನಾಯಕ ಮತ್ತು ವಿಜ್ಞಾನ-ತಂತ್ರಜ್ಞಾನ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ

ಜೈರಾಂಜೀ, ಬಾಹ್ಯಾಕಾಶ ಸಂಶೋಧನೆಯ ಬಹುತೇಕ ಎಲ್ಲಾ ವೈಫಲ್ಯಗಳು, ವಿಕ್ರಂ ಸಾರಾಬಾಯ್ ಅವರ ಅನುಮಾನಾಸ್ಪದ ಸಾವು ಕಾಂಗ್ರೆಸ್ ಆಳ್ವಿಕೆಯಲ್ಲಿಯೇ ಸಂಭವಿಸಿತ್ತು ಎಂಬುದನ್ನು ಮರೆಯಬೇಡಿ. ಇವನ್ನೆಲ್ಲಾ ಪರಿಗಣಿಸಿ ಹೇಳುವುದಾದರೆ, ಕಾಂಗ್ರೆಸ್ ರಾಜಕಾರಣ ಮಾಡದೇ ಇದ್ದರೆ ವಿಕ್ರಂ ಸಾರಾಬಾಯ್ ಅವರು ಮತ್ತಷ್ಟು ಕೊಡುಗೆ ನೀಡುತ್ತಿದ್ದರು

ಜಿತೇಂದ್ರ ಸಿಂಗ್,ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT