ಗುರುವಾರ , ಸೆಪ್ಟೆಂಬರ್ 16, 2021
29 °C
ಐಐಎಸ್‌ಸಿ ವಿಜ್ಞಾನಿಗಳಿಂದ ಸಾಧನ ಅಭಿವೃದ್ಧಿ

ಅನ್ಯಗ್ರಹಕ್ಕೆ ಸೂಕ್ಷ್ಮ ಜೀವಿ ಒಯ್ಯುವ ‘ಚಿಪ್‌’: ಐಐಎಸ್‌ಸಿ ಸಂಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭೂಮಿಯಿಂದ ಲಕ್ಷಾಂತರ ಕಿ.ಮೀ ದೂರದಲ್ಲಿರುವ ಮಂಗಳಗ್ರಹಕ್ಕೆ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳನ್ನು ಒಯ್ದು ಅಲ್ಲಿ ಅವುಗಳನ್ನು ಬಿಟ್ಟು ಅಧ್ಯಯನ ಮಾಡಲು ಸಾಧ್ಯವಾಗುವ ‘ಲ್ಯಾಬ್‌ ಆನ್‌ ಚಿಪ್‌’ ಎಂಬ ಪುಟ್ಟ ಉಪಕರಣವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಿದ್ಧಪಡಿಸಿದೆ.

ಇಸ್ರೊ ಕೈಗೊಳ್ಳಲಿರುವ ಎರಡನೇ ಮಂಗಳಯಾನದಲ್ಲಿ ಈ ರೀತಿಯ ಸೂಕ್ಷ್ಮಜೀವಿಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. 

‘ಬಾಹ್ಯಾಕಾಶ ಯಾನದ ವೇಳೆ ನೌಕೆಯಲ್ಲೇ ಬ್ಯಾಕ್ಟೀರಿಯಾಗಳನ್ನು ‘ಲ್ಯಾಬ್‌ ಆನ್‌ ಚಿಪ್‌’ನಲ್ಲಿ ಬೆಳೆಸಲಾಗುತ್ತದೆ. ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಭೂಮಿಯಿಂದಲೇ ನಿಯಂತ್ರಿಸಲಾಗುತ್ತದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಕೌಶಿಕ್‌ ವಿಶ್ವನಾಥನ್‌ ತಿಳಿಸಿದ್ದಾರೆ.

‘ಬ್ಯಾಕ್ಟೀರಿಯಾಗಳನ್ನು ಬೆಳೆಸಲು ಬೆಚ್ಚಗಿನ ವಾತಾವರಣ ಇರಬೇಕಾಗುತ್ತ
ದೆ. ಬಾಹ್ಯಾಕಾಶ ಯಾನದಲ್ಲಿ ಪುಟ್ಟ
ಗಾತ್ರದ ಲ್ಯಾಬ್‌ ಆನ್‌ ಚಿಪ್‌ ಈ ಅಗತ್ಯ
ವನ್ನು ಪೂರೈಸಬಲ್ಲದು’ ಎಂದಿದ್ದಾರೆ.

ಈ ಉಪಕರಣದಲ್ಲಿ (ಲ್ಯಾಬ್‌ ಆನ್‌ ಚಿಪ್‌) ಒಮ್ಮೆಗೇ 12 ವಿಭಿನ್ನ ರೀತಿಯ ಬ್ಯಾಕ್ಟೀರಿಯಾಗಳನ್ನು ಬೆಳೆಸಬಹುದಾಗಿದೆ. ಇದಕ್ಕೆ ಒಂದು ವಾಟ್‌ ವಿದ್ಯುತ್‌ ಸಾಕಾಗುತ್ತದೆ.

ಪುಟ್ಟ, ಪುಟ್ಟ ಕೆಲವೇ ಮಿಲಿ ಮೀಟರ್‌ ಅಗಲದ ಪ್ಲಾಸ್ಟಿಕ್‌ ಕೋಣೆಗಳನ್ನು ಲ್ಯಾಬ್‌ ಆನ್ ಚಿಪ್‌ ಒಳಗೊಂಡಿರುತ್ತದೆ. ಇದರ ತಳದಲ್ಲಿ ಎಲ್‌ಇಡಿ ದೀಪವನ್ನೂ, ಮೇಲ್ಭಾಗದಲ್ಲಿ ಬೆಳಕು ತಗುಲಿದಾಗ ಅದರ ಪ್ರಖರತೆಗೆ ತಕ್ಕಂತೆ ವಿದ್ಯುತ್‌ ಉತ್ಪಾದಿಸಬಲ್ಲ ಫೋಟೋಡಯೋಡ್‌ ಸಂವೇದಕವನ್ನೂ ಜೋಡಿಸಲಾಗಿದೆ. ಇವೆರಡರ ನಡುವೆ ಇರುವ ಕೋಣೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಬೇಕಾದ ಸಕ್ಕರೆ ದ್ರಾವಣವನ್ನು ಇಡಬಹುದು. ಈ ದ್ರಾವಣಕ್ಕೆ ಬೇಕಾದ ಬ್ಯಾಕ್ಟೀರಿಯಾಗಳನ್ನು ಸೇರಿಸುವ ವ್ಯವಸ್ಥೆಯೂ ಇದೆ.

ಬ್ಯಾಕ್ಟೀರಿಯಾಗಳು ಬೆಳೆದಂತೆ ಎಲ್‌ಇಡಿ ದೀಪದಿಂದ ಹರಿಯುವ ಬೆಳಕಿನ ಪ್ರಖರತೆ ಕುಂದುತ್ತದೆ. ಇದನ್ನು ವಿಶ್ಲೇಷಿಸುವ ಮೂಲಕ ಅವುಗಳ ಬೆಳವಣಿಗೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಹೀಗೆ ದೂರನಿಯಂತ್ರಕದಿಂದಲೇ ಬೇಕೆಂದ ಬ್ಯಾಕ್ಟೀರಿಯಾವನ್ನು ಅಗತ್ಯ ಪೋಷಕಾಂಶಗಳನ್ನು ನೀಡಿ ಬೆಳೆಸಿ, ಪರೀಕ್ಷಿಸುವ ವ್ಯವಸ್ಥೆ ಈ ಸಾಧನದಲ್ಲಿದೆ.

ಕೋಣೆಗಳಲ್ಲಿಟ್ಟ ಬ್ಯಾಕ್ಟೀರಿಯಾ ಸೋರದಂತೆ ಭದ್ರವಾಗಿಯೂ, ಎಲ್‌ಇಡಿ ದೀಪದ ಪ್ರಮಖರತೆಯಿಂದಾಗಿ ಹೆಚ್ಚು ಬಿಸಿಯಾಗದಂತೆಯೂ, ಇದರಿಂದಾಗಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಲಾಗಿದೆ. ಈ ಸಾಧನದಲ್ಲಿ ಸ್ಪೋರೋಸಾರ್ಸಿನಾ ಪ್ಯಾಶ್ಚುರೈ ಎನ್ನುವ ಬ್ಯಾಕ್ಟೀರಿಯಾ ಬೆಳೆಸಿ ಪರೀಕ್ಷಿಸಿ ನೋಡಲಾಗಿದೆ ಎಂದು ಕೌಶಿಕ್‌ ವಿಶ್ವನಾಥನ್‌ ತಿಳಿಸಿದ್ದಾರೆ.

ವ್ಯೋಮದಲ್ಲಿರುವ ಒತ್ತಡಗಳ ವ್ಯತ್ಯಾಸ, ವ್ಯೋಮನೌಕೆಯ ಅಲುಗಾಟ ಸಹಿಸಿಕೊಳ್ಳುವಂತೆ ಮಾಡಿದರೆ ಮುಂದಿನ ಮಂಗಳಯಾನ ಅಥವಾ ಇತರ ಬಾಹ್ಯಾಕಾಶ ಯಾನದಲ್ಲಿ ಈ ಜೀವಿಗಳ ಪರೀಕ್ಷೆ ನಡೆಸಬಹುದು. ಅಲ್ಲದೆ, ಬೇರೆ ಜಂತುಗಳನ್ನೂ ಬೆಳೆಸಲು ಸಹಾಯಕವಾಗುತ್ತದೆ ಎನ್ನುತ್ತಾರೆ.

‘ಲ್ಯಾಬ್‌ ಆನ್‌ ಚಿಪ್‌’ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಕೌಶಿಕ್‌ ವಿಶ್ವನಾಥನ್‌ ಮತ್ತು ಅಲೋಕ್‌ ಕುಮಾರ್‌ ಅಭಿವೃದ್ಧಿಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು