ಸೋಮವಾರ, ಆಗಸ್ಟ್ 15, 2022
24 °C

PV Web Exclusive | ನ್ಯೂಬರ್ಗ್‌ ಡಯಾಗ್ನಸ್ಟಿಕ್ಸ್‌ನ ಜೈವಿಕ ಸುರಕ್ಷತಾ ಬೂತ್‌

ಕೇಶವ ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರೋಗ್ಯ ತಪಾಸಣಾ ಕ್ಷೇತ್ರದಲ್ಲಿನ ದೇಶದ ನಾಲ್ಕನೇ ಅತಿದೊಡ್ಡ ವೈದ್ಯಕೀಯ ಸಂಸ್ಥೆಯಾಗಿರುವ ನ್ಯೂಬರ್ಗ್‌ ಡಯಾಗ್ನೊಸ್ಟಿಕ್ಸ್‌ನ ಶಿವಾಜಿನಗರ ಕೇಂದ್ರದಲ್ಲಿ ಆರಂಭಿಸಿರುವ ಅತ್ಯಾಧುನಿಕ ಜೈವಿಕ ಸುರಕ್ಷತಾ ಬೂತ್‌, ಕೋವಿಡ್‌ನ ಸುರಕ್ಷಿತ ತಪಾಸಣೆಗೆ ನೆರವಾಗುತ್ತಿದೆ.

ಕೋವಿಡ್‌ ಪಿಡುಗು ನಿಯಂತ್ರಣದಲ್ಲಿ ಸುರಕ್ಷಿತ ಪರೀಕ್ಷೆಯೂ ಮಹತ್ವ ಪಾತ್ರನಿರ್ವಹಿಸುತ್ತಿದ್ದು, ವೈದ್ಯಕೀಯ ತಪಾಸಣಾ ಸಿಬ್ಬಂದಿಯು ಸೋಂಕಿನ ಸಂಪರ್ಕಕ್ಕೆ ಬರದಂತೆ ಈ ಬೂತ್‌ನಲ್ಲಿ ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಲಾಗಿದೆ.

ಸೋಂಕಿತರಿಗೆ ಪ್ರತ್ಯೇಕ ಕಾಯುವಿಕೆ ಸ್ಥಳ, ಪ್ರತ್ಯೇಕ ಪ್ರವೇಶ ದ್ವಾರ, ಕಾಯಿಲೆಪೀಡಿತರು ಮತ್ತು ತಪಾಸಣಾ ಸಿಬ್ಬಂದಿ ಮಧ್ಯೆ ಸಂಪರ್ಕವೇ ಏರ್ಪಡದ ರೀತಿಯಲ್ಲಿನ ಸುಭದ್ರ ಗಾಜಿನ ಕೋಣೆ ನಿರ್ಮಿಸಲಾಗಿದೆ. ಗಾಜಿನ ಇನ್ನೊಂದು ಭಾಗದಲ್ಲಿದ್ದ ಸಿಬ್ಬಂದಿ ಕಾಯಿಲೆಪೀಡಿತರ ನೇರ ಸಂಪರ್ಕಕ್ಕೆ ಬರದೆ ಸುರಕ್ಷಿತ ರೀತಿಯಲ್ಲಿ ಗಂಟಲು ಮತ್ತು ಮೂಗಿನ ದ್ರವಗಳ ಮಾದರಿ ಪಡೆಯಲು ಸಾಧ್ಯವಾಗುತ್ತದೆ.

‘ಕೋಣೆಯಿಂದ ಕೋಣೆಗೆ ಸೋಂಕು ಪಸರಿಸದಂತಹ ನೆಗೆಟಿವ್‌ ಪ್ರೆಷರ್‌, ಕಾಯಿಲೆ ಪೀಡಿತರು ದ್ರವದ ಮಾದರಿ ಕೊಟ್ಟು ಹೊರನಡೆಯುತ್ತಿದ್ದಂತೆ ಕೋಣೆ ಒಳಗಿನ ಗಾಳಿ ಹೀರಿಕೊಳ್ಳುವ ಹೆಪಾ ಫಿಲ್ಟರ್‌ನಲ್ಲಿ ಸಂಗ್ರಹಗೊಂಡಿರುವ, ಕೊರೊನಾ ವೈರಾಣುಗಳನ್ನು ಯುವಿಸಿ ಕಿರಣಗಳನ್ನು ಬಳಸಿ ನಾಶಪಡಿಸುವುದು. ಪ್ರತಿಯೊಬ್ಬ ರೋಗಿಯ ತಪಾಸಣೆ ಕೊನೆಗೊಂಡ ನಂತರ ಇಡೀ ಕೋಣೆಯ ಗೋಡೆಗಳನ್ನು ಸ್ವಚ್ಛಗೊಳಿಸುವುದು ಈ ಬೂತ್‌ನ ವೈಶಿಷ್ಟ್ಯತೆಗಳಾಗಿವೆ’ ಎಂದು ನ್ಯೂಬರ್ಗ್‌ ಡಯಾಗ್ನೊಸ್ಟಿಕ್ಸ್‌ನ ವೈದ್ಯಕೀಯ ನಿರ್ದೇಶಕ ಡಾ. ಸುಜಯ್‌ ಪ್ರಸಾದ್‌ ಹೇಳುತ್ತಾರೆ.

‘ಇದೊಂದು ಜಾಗತಿಕ ಗುಣಮಟ್ಟದ ಜ್ವರ ತಪಾಸಣಾ ಕ್ಲಿನಿಕ್‌ ಆಗಿದೆ. ಈ ಪರಿಕಲ್ಪನೆಯನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿಯೇ ಇಲ್ಲಿ ಕಾರ್ಯಗತಗೊಳಿಸಲಾಗಿದೆ. ರಾಜ್ಯ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ತಪಾಸಣೆ ನಡೆಸಲಾಗುವುದು. ಕ್ಷಯ, ಮಲೇರಿಯಾ, ಎಚ್1ಎನ್‌1 ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಬಗೆಯ ಕಾಯಿಲೆಗಳ ತಪಾಸಣೆಗೆ ಈ ಬೂತ್‌ನ ಪ್ರಯೋಜನ ಪಡೆಯಬಹುದಾಗಿದೆ. ಬೆಂಗಳೂರಿನಲ್ಲಿನ ಯಶಸ್ಸು ಆಧರಿಸಿ ಹಾಸನ ಮತ್ತಿತರ ಜಿಲ್ಲಾ ಕೇಂದ್ರಗಳಿಗೂ ಈ  ಬೂತ್‌ ಪರಿಕಲ್ಪನೆ ವಿಸ್ತರಿಸಲಾಗುವುದು‘ ಎಂದು ಅವರು ಹೇಳುತ್ತಾರೆ.


ಸುರಕ್ಷಿತ ತಪಾಸಣೆಯ ನೋಟ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು