ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲಾಯುಧಗಳ ಕಾಲ-ಮೂಲ

Last Updated 16 ಮಾರ್ಚ್ 2019, 19:30 IST
ಅಕ್ಷರ ಗಾತ್ರ

‘ಶಿಲಾಯುಧ’- ಅದು ಮಾನವೇತಿಹಾಸದ ಅತ್ಯಂತ ಮಹತ್ವದ ಪಳೆಯುಳಿಕೆ. ವಾಸ್ತವವಾಗಿ ಮಾನವ ಜಗದಲ್ಲಿ ‘ತಂತ್ರಜ್ಞಾನ’ (ಟೆಕ್ನಾಲಜಿ) ಮೂಲತಃ ಆರಂಭಗೊಂಡದ್ದೇ ಶಿಲಾಯುಧಗಳಿಂದ. ನೈಸರ್ಗಿಕವಾಗಿ ಲಭ್ಯವಿರುವ ಕಲ್ಲು, ಮೂಳೆ, ಕೊಂಬೆ, ರೆಂಬೆ ಇತ್ಯಾದಿ ಕಚ್ಚಾ ವಸ್ತುಗಳನ್ನು ಅವಶ್ಯಕತೆಗೆ ತಕ್ಕಂತೆ ತಿವಿಯಲು, ಕೊಚ್ಚಲು, ಚುಚ್ಚಲು, ಕತ್ತರಿಸಲು, ಬೇಟೆಯಾಡಲು ಸೂಕ್ತವಾದ ಆಯುಧ ಮತ್ತು ಉಪಕರಣಗಳನ್ನಾಗಿ ರೂಪಿಸುವ ಪ್ರಯತ್ನಗಳ ಫಲಿತವೇ ನಾನಾ ವಿಧಗಳ ಶಿಲಾಯುಧಗಳು (ಚಿತ್ರ 1 ರಿಂದ 5 ಗಮನಿಸಿ ). ವಿಸ್ಮಯ ಏನೆಂದರೆ, ಈವರೆಗಿನ ಸುಮಾರು 26 ಲಕ್ಷ ವರ್ಷಗಳಷ್ಟು ದೀರ್ಘ ಮಾನವೇತಿಹಾಸದಲ್ಲಿ ಸಮೀಪ 5,300 ವರ್ಷ ಹಿಂದಿನವರೆಗೂ ಶಿಲಾಯುಧಗಳೇ ಮಾನವರ ಸಕಲ ಆಯುಧ, ಉಪಕರಣ, ಸಲಕರಣೆಗಳಾಗಿ ಬಳಕೆಯಲ್ಲಿದ್ದುವು. ಹಾಗಾದ್ದರಿಂದಲೇ ಈಗ್ಗೆ 26 ಲಕ್ಷ ವರ್ಷಗಳಿಂದ 5300 ವರ್ಷಗಳ ಹಿಂದಿನವರೆಗಿನ ಅವಧಿ ‘ಶಿಲಾ ಯುಗ’ ಎಂದೇ ಪ್ರಸಿದ್ಧ. ಹಾಗೆಂದರೆ, ಈವರೆಗಿನ ಇಡೀ ಮಾನವ ಇತಿಹಾಸದ ಶೇಕಡ 90ಕ್ಕೂ ಅಧಿಕ ಕಾಲ ಶಿಲಾಯುಗದ್ದೇ ಆಗಿದೆ ಎಂಬುದು ಸ್ಪಷ್ಟ ತಾನೇ?

ಶಿಲಾಯುಗದ ಭಿನ್ನ ಭಿನ್ನ ಕಾಲಗಳಲ್ಲಿದ್ದ ವಿಧ ವಿಧ ಪ್ರಾಚೀನ ಮಾನವ ಪ್ರಭೇದಗಳು ರೂಪಿಸಿ ಬಳಸುತ್ತಿದ್ದ ಶಿಲಾಯುಧಗಳನ್ನು ಗಮನಿಸಿದಾಗ
(ಚಿತ್ರ 11, 13, 14, 15 ) ಸಹಜವಾಗಿಯೇ ಯಾರಲ್ಲೇ ಆದರೂ ಬಹು ಕುತೂಹಲದ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ: ‘ಶಿಲಾಯುಧಗಳ ಮೂಲ ಕಾಲ ಯಾವುದು? ಮೂಲ ಶಿಲಾಯುಧಗಳನ್ನು ನಿರ್ಮಿಸಿದ ಮಾನವ ಪ್ರಭೇದ ಯಾವುದು?’

ವಾಸ್ತವ ಏನೆಂದರೆ ಶಿಲಾಯುಧಗಳ ಕಾಲ-ಮೂಲಗಳನ್ನು ಸ್ಪಷ್ಟವಾಗಿ ನಿರ್ಧರಿಸಲು ಈವರೆಗೂ ಸಾಧ್ಯವೇ ಆಗಿಲ್ಲ! ಏಕೆಂದರೆ ಶಿಲಾಯುಧಗಳ ಶೋಧ ನಡೆಸುತ್ತಿರುವ ಪುರಾತತ್ವ ಸಂಶೋಧಕರು ಹೆಚ್ಚು ಹೆಚ್ಚು ಪ್ರಾಚೀನ ಶಿಲಾಯುಧಗಳನ್ನು, ಅವುಗಳನ್ನು ಬಳಸಿ ತಯಾರಿಸಲಾದ ಪುರಾತನ ‘ಕಲಾಕೃತಿ’ಗಳನ್ನು (ಚಿತ್ರ 6, 7 ) ಹಾಗೂ ಪೂರ್ವ ಮಾನವ ಮತ್ತು ಮಾನವ ಪೂರ್ವ ಪ್ರಭೇದಗಳನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಹಾಗೆ ಈ ವರೆಗೆ ಕಂಡು ಹಿಡಿಯಲಾಗಿರುವ ಶಿಲಾಯುಧಗಳ ಕಾಲ- ಮೂಲಗಳ ಮಹತ್ವದ, ಬಹು ಸೋಜಿಗದ ಮೈಲಿಗಲ್ಲುಗಳನ್ನು ಗಮನಿಸಿ:

* 1964 ರಲ್ಲಿ ಕೀನ್ಯಾ ದೇಶದ ವಿಖ್ಯಾತ ಪುರಾತತ್ವ ವಿಜ್ಞಾನಿ ‘ಲೂಯಿಸ್ ಲೀಕೀ’ ಆಫ್ರಿಕದ ತಾಂಜಾನಿಯಾ ದೇಶದ ‘ಓಲ್ಡುವಾಯೀ ಕೊರಕಲು’ ಪ್ರದೇಶದಲ್ಲಿ (ಚಿತ್ರ-12 ರ ಭೂ ಪಟದಲ್ಲಿ ಬಾಣ ‘ಎ’ ಸೂಚಿಸುತ್ತಿರುವ ಸ್ಥಳ ) ಆ ವರೆಗಿನ ಅತ್ಯಂತ ಪ್ರಾಚೀನ ಶಿಲಾಯುಧಗಳನ್ನೂ, ಅವುಗಳ ಜೊತೆಗಿದ್ದ- ಎಂದರೆ ಅವುಗಳನ್ನು ನಿರ್ಮಿಸಿದ- ಪ್ರಾಚೀನ ಮಾನವರ ಅಸ್ಥಿಪಂಜರ ಅವಶೇಷಗಳನ್ನೂ ಪತ್ತೆ ಹಚ್ಚಿದರು. ‘ಹೋಮೋ ಹ್ಯಾಬಿಲಿಸ್’ ಎಂಬ ಆ ಮಾನವ ಪಿತಾಮಹರ ಮತ್ತು ಆ ಶಿಲಾಯುಧಗಳ ಕಾಲ 18 ಲಕ್ಷ ವರ್ಷ ಹಿಂದಿನದಾಗಿತ್ತು.

* 1970ರ ದಶಕದಲ್ಲಿ ಅತ್ಯಂತ ಆಶ್ಚರ್ಯಕರ ಮತ್ತು ಅನಿರೀಕ್ಷಿತ ಶೋಧವೊಂದು ಸಂಭವಿಸಿತು. ಆ ದಶಕದಲ್ಲಿ ಆಫ್ರಿಕದ ಇಥಿಯೋಪಿಯಾ ರಾಷ್ಟ್ರದ ‘ಗೋನಾ’ ಎಂಬ ಪ್ರದೇಶದಲ್ಲಿ 26 ಲಕ್ಷ ವರ್ಷ ಹಿಂದಿನ ಕಾಲದ ಕೆಲವು ಶಿಲಾಯುಧಗಳು ಲಭ್ಯವಾದುವು. ಆ ಪ್ರದೇಶದಲ್ಲಿ ಆ ಕಾಲದಲ್ಲಿ ‘ಹೋಮೋ’ ವಂಶಾವಳಿಗೆ (ಎಂದರೆ ಮಾನವ ಮೂಲ ವಂಶಕ್ಕೆ) ಸೇರಿಲ್ಲದ ‘ಅಸ್ಟ್ರಲೋಪಿತೀಕಸ್ ಗಾರ್ಹಿ’ (ಚಿತ್ರ-8) ಎಂಬ ಮಾನವ ಪೂರ್ವ ಪ್ರಭೇದ ನೆಲೆಸಿತ್ತು. ಹಾಗಾಗಿ ಶಿಲಾಯುಧಗಳ ಮೂಲ ಕಾಲ ಎಂಟು ಲಕ್ಷ ವರ್ಷಗಳಷ್ಟು ಹೆಚ್ಚು ಪ್ರಾಚೀನವಾದದ್ದರ ಜೊತೆಗೆ ಶಿಲಾಯುಧಗಳು ಹೋಮೋ ವಂಶಕ್ಕೂ ಹಿಂದಿನ, ಎಂದರೆ ಮಾನವ ಪೂರ್ವ ಪ್ರಭೇದವೊಂದರಿಂದ ಮೂಲತಃ ಸೃಷ್ಟಿಗೊಂಡುವು ಎಂಬುದು ನಿಚ್ಚಳವಾಯಿತು!

* 1990ರ ದಶಕದಲ್ಲಿ ಕೀನ್ಯಾ ದೇಶದ ‘ತುರ್ಕಾನಾ ಸರೋವರ’ದ ಪಶ್ಚಿಮಕ್ಕೆ 8 ಕಿಲೋಮೀಟರ್ ದೂರದ ‘ಲೋಕಲಾಲೈ’ ಎಂಬ ಸ್ಥಳದಲ್ಲಿ (ಭೂಪಟದಲ್ಲಿ ಬಾಣ ‘ಬಿ’ ತೋರುತ್ತಿರುವ ಸ್ಥಳ) ಸಂಶೋಧಕರಿಗೆ 23 ಲಕ್ಷ ವರ್ಷ ಹಿಂದಿನ ಶಿಲಾಯುಧಗಳು ದೊರಕಿದುವು. ಹಾಗಾಗಿ ಶಿಲಾಯುಧಗಳ ಮೂಲ ಕಾಲ 18 ಲಕ್ಷ ವರ್ಷಗಳಿಗೂ ಹೆಚ್ಚು ಪುರಾತನ ಎಂಬುದಕ್ಕೆ ಮತ್ತೊಂದು ಆಧಾರ ಲಭಿಸಿದಂತಾಯಿತು.

* 2010 ರಲ್ಲಿ ಇಥಿಯೋಪಿಯಾ ದೇಶದ ‘ಡಿಕಿಕಾ’ ಪ್ರದೇಶದಲ್ಲಿ ಇನ್ನೂ ಪ್ರಾಚೀನ ಶಿಲಾಯುಧಗಳ ಬಳಕೆಯ ಪರೋಕ್ಷ ಕುರುಹುಗಳು ಪತ್ತೆಯಾದುವು. ಹರಿತವಾದ ಶಿಲಾಯುಧಗಳಿಂದ ಕೊಚ್ಚಿದಂತಹ ಗುರುತುಗಳಿಂದ ಕೂಡಿದ ಪ್ರಾಣಿ ಮೂಳೆಗಳು ಅಲ್ಲಿ ಲಭಿಸಿದುವು. ಆ ಮೂಳೆಗಳ ಕಾಲ 34 ಲಕ್ಷ ವರ್ಷ! ಈ ಶೋಧದಿಂದ ಮೂಲ ಶಿಲಾಯುಧಗಳ ಕಾಲ ಹೋಮೋ ವಂಶದ ಉದಯಕ್ಕೂ ಲಕ್ಷಾಂತರ ವರ್ಷ ಹಿಂದಿನದು ಎಂಬ ನಂಬಲಾರದ ಅಂಶ ಬೆಳಕಿಗೆ ಬಂತು. (ಈ ಸಾಕ್ಷ್ಯಕ್ಕೆ ಪುರಾತತ್ವ ವಿದ್ವಾಂಸರ ಸಾರ್ವತ್ರಿಕ ಒಪ್ಪಿಗೆ ಇನ್ನೂ ಲಭಿಸಿಲ್ಲ)

* ಅದಕ್ಕಿಂತ ಈಚೆಗೆ, ವರ್ಷ 2015ರಲ್ಲಿ ಕೀನ್ಯಾದ ತುರ್ಕಾನಾ ಸರೋವರದ ಸನಿಹದಲ್ಲೇ ‘ಲೋಮೇಕ್ವೀ’ ಎಂಬ ಪ್ರದೇಶದಲ್ಲಿ 33 ಲಕ್ಷ ವರ್ಷ ಹಿಂದಿನ 19 ಶಿಲಾಯುಧಗಳು ದೊರಕಿದುವು. ಸ್ಪಷ್ಟವಾಗಿಯೇ ಆ ಶಿಲಾಯುಧಗಳು 26 ಲಕ್ಷ ವರ್ಷಗಳ ಹಿಂದಿನ ಗೋನಾ ಶಿಲಾಯುಧಗಳಿಗಿಂತ ಏಳು ಲಕ್ಷ ವರ್ಷ ಹೆಚ್ಚು ಪ್ರಾಚೀನವಾಗಿದ್ದುವು ಎಂಬುದು ಸ್ಪಷ್ಟ ತಾನೇ?

ವಿಪರ್ಯಾಸ ಏನೆಂದರೆ, ‘ಲೋಮೇಕ್ವೀ ಶಿಲಾಯುಧ’ಗಳ ಆಧಾರದಿಂದ ಶಿಲಾಯುಧಗಳ ಮೂಲ ಕಾಲ 33 ಲಕ್ಷ ವರ್ಷ ಪ್ರಾಚೀನ ಎಂಬುದು ನಿರ್ಧಾರವಾಗಿದೆಯಾದರೂ ಅವನ್ನು ನಿರ್ಮಿಸಿದ ಪೂರ್ವ ಮಾನವ ಪ್ರಭೇದ ಯಾವುದೆಂಬುದು ಇನ್ನೂ ಜಿಜ್ಞಾಸೆಯಲ್ಲೇ ಉಳಿದಿದೆ. ವಿದ್ವಾಂಸರ ಪ್ರಕಾರ ಅವನ್ನು ತಯಾರಿಸಿದ ಪೂರ್ವ ಮಾನವ ಪ್ರಭೇದ ಯಾವುದೆಂಬುದರಲ್ಲಿ ಮೂರು ಸಾಧ್ಯತೆಗಳಿವೆ: ‘ಕೀನ್ಯಾಂತ್ರೋಪಸ್ ಪ್ಲಾಟಿಯಾಪ್ಸ್, ಅಸ್ಟ್ರಲೋಪಿತೀಕಸ್ ಅಫರೆನ್ಸಿಸ್ (ಚಿತ್ರ-10 ) ಮತ್ತು ಅಸ್ಟ್ರಲೋಪಿತೀಕಸ್ ಡಿಯಿರೆಮೇಡಾ’.

ತೀರ್ಮಾನಕ್ಕೆ ಅಡ್ಡಿಯಾಗಿರುವ ತೊಡಕು ಏನೆಂದರೆ, ಈ ಮೊದಲೆರಡೂ ಪ್ರಭೇದಗಳದು ಚಿಂಪಾಂಜಿಗಳಿಗೆ ಇರುವಷ್ಟೇ ಗಾತ್ರದ ಪುಟ್ಟ ಮಿದುಳು; ಶಿಲಾಯುಧಗಳ ನಿರ್ಮಾಣಕ್ಕೆ ಬೇಕಾಗುವ ಮಟ್ಟದ ಬುದ್ಧಿ ಶಕ್ತಿಯನ್ನಾಗಲೀ ಕೌಶಲ- ಸಾಮರ್ಥ್ಯಗಳನ್ನಾಗಲೀ ಒದಗಿಸಲಾಗದಂತಹ ಮಿದುಳು. ಕೊನೆಯ ಪ್ರಭೇದದ ಮಿದುಳಿನ ಗಾತ್ರ ಇನ್ನೂ ತಿಳಿದಿಲ್ಲ. ಅದರ ಪೂರ್ಣ ತಲೆಬುರುಡೆ ಈವರೆಗೂ ಒಂದೂ ಸಿಕ್ಕಿಲ್ಲ!

ಆದರೇನು? ಶಿಲಾಯುಧಗಳ ನಿರ್ಮಾಣಕ್ಕೆ ಹೋಮೋ ಪ್ರಭೇದಗಳಲ್ಲಿರುವಂತಹ ಭಾರೀ ಮೆದುಳಾಗಲೀ, ಉನ್ನತ ಬುದ್ಧಿಮಟ್ಟವಾಗಲೀ ಅವಶ್ಯವೇನಲ್ಲ ಎಂಬುದನ್ನು ಅಲ್ಪ ಗಾತ್ರದ ಮಿದುಳಿನ ಮತ್ತು ಪೂರ್ವ ಮಾನವರಿಗಿಂತ ಕಡಿಮೆ ಬುದ್ಧಿ ಸಾಮರ್ಥ್ಯದ ಪುರಾತನ (ಚಿತ್ರ-9) ಮತ್ತು ಈಗಿನ ಕೆಲವಾರು ಪ್ರೈಮೇಟ್ ಗಳು ಪ್ರದರ್ಶಿಸುತ್ತಿವೆ. ಉದಾಹರಣೆಗೆ ತಮ್ಮ ನೈಸರ್ಗಿಕ ನೆಲೆಗಳಲ್ಲಿ ಈಗಲೂ ಚಿಂಪಾಂಜಿ ಮತ್ತು ಒರಾಂಗುಟಾನ್‌ಗಳಂಥ ವಾನರರು ಮತ್ತು ಕಪೂಚಿನ್ ಮಂಗಗಳು ಸೂಕ್ತ ಶಿಲೆಗಳನ್ನು ಆಯ್ದು, ಅವನ್ನು ಬಂಡೆಗಳಿಗೆ ಬಡಿದು, ಅಗತ್ಯ ಆಕಾರಕ್ಕೆ ತಂದು, ಅವುಗಳಿಂದ ಗಟ್ಟಿ ಕಾಯಿಗಳನ್ನು ಚೆಚ್ಚಿ ತೆರೆಯುತ್ತಿವೆ. ಅಷ್ಟೇ ಏಕೆ? ಕಲ್ಲುಗಳನ್ನು, ಕಡ್ಡಿ- ಕೋಲುಗಳನ್ನು ಬಳಸಿ ಆಹಾರ ಅನ್ವೇಷಿಸುವ ಮತ್ತು ಶತ್ರುಗಳನ್ನು ಬೆದರಿಸುವ ಹಲವಾರು ಮಾನವೇತರ ಪ್ರಾಣಿಗಳು ಧರೆಯಲ್ಲಿವೆ.

ತೊಡಕು- ಗೋಜಲುಗಳು ಏನೇ ಇರಲಿ, ಈವರೆಗಿನ ಶೋಧಗಳ ಪ್ರಕಾರ ಶಿಲಾಯುಧಗಳ ಮೂಲ ಕಾಲ ಈಗ್ಗೆ 33 ಲಕ್ಷ ವರ್ಷಗಳಷ್ಟು ಪ್ರಾಚೀನ ಎಂಬುದು ನಿರ್ಧಾರಗೊಂಡಿದೆ. ಆದರೆ, ಮೂಲ ಶಿಲಾಯುಧಗಳನ್ನು ನಿರ್ಮಿಸಿದ ಜೀವಿ ಪ್ರಭೇದ ಯಾವುದೆಂಬುದುದನ್ನು ಸ್ಪಷ್ಟವಾಗಿ ತೀರ್ಮಾನಿಸುವುದು ಇನ್ನೂ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT