ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಸೌರ ಮಾರುತಗಳು: ಲಡಾಖ್‌ನಲ್ಲಿ ಉತ್ತರ ಧ್ರುವ ಪ್ರಭೆ ವಿಸ್ಮಯ

ಭೂಮಿಯತ್ತ ಬೀಸಿಬಂದ ಪ್ರಬಲ ಸೌರ ಮಾರುತಗಳು
Published 11 ಮೇ 2024, 15:24 IST
Last Updated 11 ಮೇ 2024, 15:24 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸೂರ್ಯನ ಮೇಲ್ಮೈಯಿಂದ ಹೊರಬಿದ್ದಿರುವ ಪ್ರಬಲ ಸೌರ ಮಾರುತಗಳಿಂದ ಕಂಡು ಬಂದ ಅಪರೂಪದ ಖಗೋಳ ವಿಸ್ಮಯಕ್ಕೆ ಲಡಾಖ್‌ ಸಾಕ್ಷಿಯಾಗಿತ್ತು.

ಲಡಾಖ್‌ನ ಹಾನ್ಲೆ ಗ್ರಾಮದಲ್ಲಿರುವ ‘ಡಾರ್ಕ್‌ ಸ್ಕೈ ರಿಸರ್ವ್’ನ ಖಗೋಳವಿಜ್ಞಾನಿಗಳು, ಶನಿವಾರ ತಡರಾತ್ರಿ 1 ಗಂಟೆಯಿಂದ ನಸುಕಿನ 3.30ರ ವರೆಗೆ ಕ್ಷಿತಿಜದ ವಾಯವ್ಯ ದಿಕ್ಕಿನಲ್ಲಿ ಮೂಡಿದ ಉತ್ತರ ಧ್ರುವ ಪ್ರಭೆಯನ್ನು ವೀಕ್ಷಿಸಿದ್ದಾರೆ.

‘ಸೂರ್ಯನ ‘ಎಆರ್‌13664’ ಭಾಗದಿಂದ ಚಿಮ್ಮಿರುವ ಈ ಶಕ್ತಿಶಾಲಿ ಸೌರ ಮಾರುತಗಳು, ಭೂಮಿಯತ್ತ ಬೀಸಿಬಂದಿವೆ. ಈ ಮಾರುತಗಳು ಸೆಕೆಂಡಿಗೆ 800 ಕಿ.ಮೀ. ವೇಗದಿಂದ ಚಲಿಸುತ್ತವೆ’ ಎಂದು ಕೋಲ್ಕತ್ತದಲ್ಲಿರುವ ಸೆಂಟರ್‌ ಫಾರ್ ಎಕ್ಸಲೆನ್ಸ್‌ ಇನ್ ಸ್ಪೇಸ್‌ ಸೈನ್ಸಸ್‌ನ ವಿಜ್ಞಾನಿಗಳು ಹೇಳಿದ್ದಾರೆ.

‘ನಿಯಮಿತವಾಗಿ ಇಲ್ಲಿ ನಡೆಯುವ ಆಕಾಶ ವೀಕ್ಷಣೆ ವೇಳೆಯೇ ಸೌರ ಮಾರುತಗಳಿಂದ ಮೂಡಿದ ಉತ್ತರ ಧ್ರುವ ಪ್ರಭೆಯನ್ನು ವೀಕ್ಷಿಸಿರುವುದು ನಮ್ಮ ಅದೃಷ್ಟ’ ಎಂದು ಹಾನ್ಲೆ ಡಾರ್ಕ್‌ ಸ್ಕೈ ರಿಸರ್ವ್‌ನ ಎಂಜಿನಿಯರ್ ಸ್ಟಾಂಜಿನ್ ನೋರ್ಲಾ ಹೇಳಿದ್ದಾರೆ.

‘ಕ್ಷಿತಿಜದಗುಂಟ ಮೊದಲು ತಿಳಿಗೆಂಪಿನ ಪ್ರಭೆ ಕಂಡುಬಂತು. ನಂತರ ಇಡೀ ಆಗಸವೇ ಕೆಂಪಾಯಿತಲ್ಲದೇ ನಿಧಾನವಾಗಿ ಗುಲಾಬಿ ರಂಗು ಆವರಿಸಿತು’ ಎಂದೂ ಸ್ಟಾಂಜಿನ್‌ ಹೇಳಿದ್ದಾರೆ.

ಆಕಾಶಕಾಯಗಳ ವೀಕ್ಷಣೆಗಾಗಿ ಗಾಢ ಕತ್ತಲು ಇರುವಂತಹ ಹಾಗೂ  ದೀರ್ಘಾವಧಿಯಲ್ಲಿ ಮೋಡಗಳು ಬಾರದಂತಹ ತಾಣಗಳನ್ನು ಗುರುತಿಸಲಾಗುತ್ತದೆ. ಇಂತಹ ತಾಣಗಳನ್ನು ಡಾರ್ಕ್‌ ಸ್ಕೈ ಪಾರ್ಕ್ ಎನ್ನಲಾಗುತ್ತದೆ. ಭಾರತದಲ್ಲಿ ಲಡಾಖ್‌ನ ‘ಹಾನ್ಲೆ’ ಎಂಬಲ್ಲಿ ಇಂತಹ ತಾಣವನ್ನು ಗುರುತಿಸಿ, ಅಭಿವೃದ್ಧಿಪಡಿಸಲಾಗಿದ್ದು, ‘ಡಾರ್ಕ್‌ ಸ್ಕೈ ರಿಸರ್ವ್’ ಎಂದು ಕರೆಯಲಾಗುತ್ತದೆ.

ಬೆಂಗಳೂರಿನ ಭಾರತೀಯ ಖಭೌತವಿಜ್ಞಾನ ಸಂಸ್ಥೆಯ ತಜ್ಞರ ನೆರವಿನಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  ಈ ಸ್ಕೈ ರಿಸರ್ವ್ ಅಭಿವೃದ್ಧಿಪಡಿಸಿದೆ.

ಉತ್ತರ ಗೋಳಾರ್ಧದ ಅನೇಕ ರಾಷ್ಟ್ರಗಳಲ್ಲಿನ ಖಗೋಳಾಸಕ್ತರು ಈ ವಿದ್ಯಮಾನ ವೀಕ್ಷಿಸಿದ್ದಾರೆ. ಆಸ್ಟ್ರಿಯಾ, ಜರ್ಮನಿ, ಸ್ಲೊವಾಕಿಯಾ, ಸ್ವಿಜರ್ಲೆಂಡ್, ಡೆನ್ಮಾರ್ಕ್ ಹಾಗೂ ಪೋಲೆಂಡ್‌ನ ಆಕಾಶವೀಕ್ಷಕರು, ಸೌರಮಾರುತಗಳಿಂದ ಮೂಡಿದ ಪ್ರಭಾವಲಯದ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಈ ರೀತಿಯ ಪ್ರಭಾವಲಯಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ಬದಲಾವಣೆ ಕಾಣಬಹುದು. ಲಡಾಖ್‌ನಲ್ಲಿ ಕಾಣಿಸಿದ ಉತ್ತರ ಧ್ರುವ ಪ್ರಭೆ ಸ್ಥಿರವಾಗಿತ್ತು –ದೋರ್ಜೆ ಆಂಗ್‌ಚುಕ್‌ ಎಂಜಿನಿಯರ್ ಭಾರತೀಯ ಖಗೋಳವಿಜ್ಞಾನ ವೀಕ್ಷಣಾಲಯ ಹಾನ್ಲೆ ಲಡಾಖ್‌ನ ದಕ್ಷಿಣ ಭಾಗದಲ್ಲಿ ಡಾರ್ಕ್‌ ಸ್ಕೈ ರಿಸರ್ವ್‌ ಇದೆ. ಹೀಗಾಗಿ ಹಾನ್ಲೆಯಲ್ಲಿ ಈ ರೀತಿ ಖಗೋಳ ವಿದ್ಯಮಾನ ಕಾಣಸಿಗುವುದು ಅಪರೂಪ. ಸೌರ ಮಾರುತಗಳ ಪ್ರಕ್ಷುಬ್ಧತೆ ತೀವ್ರಗೊಂಡ ಸಂದರ್ಭಗಳಲ್ಲಿ ಮಾತ್ರ ಹಾನ್ಲೆಯಂತಹ ಸ್ಥಳಗಳಲ್ಲಿ ಇಂತಹ ವಿಸ್ಮಯ ನೋಡಬಹುದು ದಿವ್ಯೇಂದು ನಂದಿ ಸಿಇಎಸ್‌ಎಸ್‌ಐ ಮುಖ್ಯಸ್ಥ ಐಐಎಸ್‌ಇಆರ್‌ ಕೋಲ್ಕತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT