ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Chandrayaan-4 |ಚಂದ್ರನ ಅಂಗಳದಿಂದ ಮಾದರಿ ತರುವ ಗುರಿ: ಎಸ್‌.ಸೋಮನಾಥ್‌

ಚಂದ್ರಯಾನ–4: ವರ್ಷಾಂತ್ಯದೊಳಗೆ ಮೊದಲ ಪ್ರಯೋಗಕ್ಕೆ ಇಸ್ರೊ ಸಿದ್ಧತೆ
Published 27 ಜೂನ್ 2024, 0:20 IST
Last Updated 27 ಜೂನ್ 2024, 0:20 IST
ಅಕ್ಷರ ಗಾತ್ರ

ನವದೆಹಲಿ: ಚಂದಿರನ ದಕ್ಷಿಣ ಧ್ರುವದಲ್ಲಿ ಗಗನನೌಕೆಯನ್ನು ಇಳಿಸುವಲ್ಲಿ ಯಶಸ್ಸು ಕಂಡಿರುವ ಇಸ್ರೊ, ಈಗ ಚಂದ್ರನ ಅಂಗಳಕ್ಕೆ ಮತ್ತೊಮ್ಮೆ ತೆರಳಿ, ಅಲ್ಲಿನ ಮಾದರಿಗಳನ್ನು ಮರಳಿ ಭೂಮಿಗೆ ತರುವ ಬಾಹ್ಯಾಕಾಶ ಕಾರ್ಯಕ್ರಮ ‘ಚಂದ್ರಯಾನ–4’ಕ್ಕೆ ಸಿದ್ಧತೆ ನಡೆಸಿದೆ.

ಈ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ, ಅಂತರಿಕ್ಷದಲ್ಲಿ ಗಗನನೌಕೆಗಳು ಪರಸ್ಪರ ಸಂಧಿಸುವ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ವರ್ಷಾಂತ್ಯಕ್ಕೆ ನಡೆಸಲು ಉದ್ದೇಶಿಸಲಾಗಿದೆ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಬುಧವಾರ ಹೇಳಿದ್ದಾರೆ.

ಇಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸ್ಪೇಡ್‌ಎಕ್ಸ್‌’ (ಸ್ಪೇಸ್‌ ಡಾಕಿಂಗ್‌ ಎಕ್ಸ್‌ಪರಿಮೆಂಟ್) ಹೆಸರಿನ ಈ ಕಾರ್ಯಕ್ರಮವನ್ನು ನವೆಂಬರ್‌–ಡಿಸೆಂಬರ್‌ ವೇಳೆಗೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. 2027ರ ವೇಳೆಗೆ ‘ಚಂದ್ರಯಾನ–4’ ಗಗನನೌಕೆಯನ್ನು ಉಡ್ಡಯನ ಮಾಡುವುದಕ್ಕೆ ಪೂರ್ವಭಾವಿಯಾಗಿ ಈ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

‘2047ರ ವೇಳೆಗೆ ತಮ್ಮದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದು ಬಾಹ್ಯಾಕಾಶ ಕಾರ್ಯಕ್ರಮದ ಆದ್ಯತೆಯಾಗಿದೆ. ಇಂತಹ ನಿಲ್ದಾಣ ಸ್ಥಾಪನೆಯಿಂದ ಚಂದ್ರನೆಡೆಗೆ ತೆರಳುವುದು ಮತ್ತಷ್ಟು ಸುಲಭವಾಗಲಿದೆ. ಶುಕ್ರ ಮತ್ತು ಮಂಗಳ ಗ್ರಹಗಳತ್ತ ಗಗನನೌಕೆಯನ್ನು ಕಳುಹಿಸುವುದು ಈಗಿನ ಆದ್ಯತೆಯಲ್ಲ’ ಎಂದೂ ಹೇಳಿದ್ದಾರೆ. 

‘ಚಂದ್ರಯಾನ–4’ಕ್ಕೆ ಅಗತ್ಯವಿರುವ ಬಹು ಉಡ್ಡಯನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆಯನ್ನು ಐದು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ.

ಚಂದ್ರನ ಅಂಗಳದಲ್ಲಿ ಗಗನನೌಕೆಯ ‘ಸಾಫ್ಟ್‌ ಲ್ಯಾಂಡಿಂಗ್‘, ಅಲ್ಲಿನ ಮಾದರಿಗಳ ಸಂಗ್ರಹ, ಅವುಗಳನ್ನು ಚಂದ್ರನ ಕಕ್ಷೆಗೆ ತರುವುದು, ಭೂಮಿಯತ್ತ ಗಗನನೌಕೆಯ ಪಯಣ ನಂತರ, ಸುರಕ್ಷಿತವಾಗಿ ಲ್ಯಾಂಡಿಂಗ್‌ ಆಗುವುದು ಈ ಐದು ಹಂತಗಳಾಗಿವೆ.

ಮಾನವಸಹಿತ ಗಗನಯಾನಕ್ಕೆ ಸಂಬಂಧಿಸಿದ ಮೊದಲ ಮೂರು ನಿರ್ಣಾಯಕ ಪರೀಕ್ಷೆಗಳನ್ನು ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲಾಗುವುದು

-ಎಸ್‌.ಸೋಮನಾಥ್ ಇಸ್ರೊ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT