ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳದೆ ನಿಂತಿದೆ ಹುಳುವಿನ ಕಾಲ

ಗಣೇಶ್‌ ಭಟ್‌ ನೆಲಮಾವ್‌
Published 8 ನವೆಂಬರ್ 2023, 0:18 IST
Last Updated 8 ನವೆಂಬರ್ 2023, 0:18 IST
ಅಕ್ಷರ ಗಾತ್ರ

ದೇವಾಸುರ ಕಾಳಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ. ದೇವತೆಗಳ ಪಕ್ಷಕ್ಕೆ ಸೇನಾಪತಿ ಇಲ್ಲದ ಕಾರಣ ಯುದ್ಧದಲ್ಲಿ ಅಸುರರ ಕೈ ಮೇಲಾಗತೊಡಗಿ, ದೇವತೆಗಳು ಮುಚುಕುಂದ ಎಂಬ ಪರಾಕ್ರಮಿ ರಾಜನ ಬಳಿ ಸಹಾಯ ಕೇಳಿದರು. ದೇವತೆಗಳಿಗೇ ‘ತಥಾಸ್ತು’ ಎಂದ ಮುಚುಕುಂದ ಅವರ ಪರವಾಗಿ ದೇವಲೋಕದಲ್ಲಿ ವರ್ಷಗಳ ಕಾಲ ದಣಿವರಿಯದೆ ಯುದ್ಧ ಮಾಡಿ, ದೇವತೆಗಳು ಸೋಲದಂತೆ ನೋಡಿಕೊಂಡ. ಮುಚುಕುಂದನ ಸಹಾಯಕ್ಕೆ ಪ್ರತಿಯಾಗಿ ವರ ಕೇಳುವಂತೆ ಇಂದ್ರ ಹೇಳಿದ. ಆದರೆ ದೇವಲೋಕದ ಒಂದು ವರ್ಷ ಭೂಲೋಕದ 360 ವರ್ಷಗಳಿಗೆ ಸಮನಾಗಿದ್ದ ಕಾರಣ, ಭೂಮಿಯಲ್ಲಿ ಮುಚುಕುಂದನ ಸಾಮ್ರಾಜ್ಯ, ಪರಿವಾರ, ಸ್ನೇಹಿತರು ಮುಂತಾಗಿ ಯಾರೂ ಉಳಿದಿರಲಿಲ್ಲ.

ಭೂಮಿಯಲ್ಲಿ ತನ್ನದು ಎಂಬುದು ಏನೂ ಉಳಿದಿರದಿದ್ದ, ಮತ್ತು ವರ್ಷಗಳ ಕಾಲ ಮಾಡಿದ ಯುದ್ಧದಿಂದ ಅತಿಯಾಗಿ ದಣಿದಿದ್ದ ಮುಚುಕುಂದ ತನಗೆ ಸುದೀರ್ಘವಾದ ನಿದ್ರೆ ಬರಲೆಂದೂ ತನ್ನ ನಿದ್ರೆಗೆ ಭಂಗ ತರುವವರು ಭಸ್ಮವಾಗಬೇಕೆಂದೂ ಕೇಳಿಕೊಂಡ. ಅದರಂತೆ ಗುಹೆಯೊಂದರಲ್ಲಿ ಹೋಗಿ ಮಲಗಿದ. ನೂರಾರು ಸಾವಿರಾರು ವರ್ಷಗಳು ಉರುಳಿ ತ್ರೇತಾಯುಗ ಕಳೆದು ದ್ವಾಪರ ಬರುವವರೆಗೂ ಮಲಗಿಯೇ ಮಲಗಿದ.

ಇದೇನಿದು? ವಿಜ್ಞಾನಲೇಖನದಲ್ಲಿ ಪುರಾಣದ ಕಥೆ ಎಂದುಕೊಂಡಿರೇ? ಕಾರಣ ಇದೆ. ಮುಚುಕುಂದನಂತೆಯೇ ನಿದ್ರಿಸಿದ್ದ – ಅದೂ ಒಂದೆರಡಲ್ಲ, ಬರೋಬ್ಬರಿ 45,000 ವರ್ಷಗಳ ಕಾಲ ಮಲಗಿದ್ದ – ಜೀವಿಗಳನ್ನು ವಿಜ್ಞಾನಿಗಳು ಎಚ್ಚರಗೊಳಿಸಿದ್ದಾರೆ!

ರಷ್ಯಾದ ಸೈಬೀರಿಯಾ ಜಗತ್ತಿನ ಅತ್ಯಂತ ಶೀತಲ ತಾಣಗಳಲ್ಲೊಂದು. ನಿಸರ್ಗದ ರೆಫ್ರಿಜಿರೇಟರ್‌ನಂತಿರುವ ಈ ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳ ಹಿಂದಿನ ಜೀವಿಗಳ ಪಳೆಯುಳಿಕೆಗಳು ದಪ್ಪನೆಯ ಹಿಮದ ಪದರಗಳ ಕೆಳಗೆ ಕೆಡದಂತೆ ಸಂರಕ್ಷಿಸಲ್ಪಟ್ಟಿವೆ. ಹೀಗಾಗಿ ವಿಜ್ಞಾನಿಗಳ ಪಾಲಿಗೆ ಇದೊಂದು ವಜ್ರದ ಗಣಿಯೇ ಸರಿ. ಈ ಪ್ರದೇಶದಿಂದ 2002ರಲ್ಲಿ ಸಂಗ್ರಹಿಸಿದ್ದ ಮಾದರಿಗಳಲ್ಲಿ ‘ನೆಮೆಟೋಡ’ ಎಂಬ ಗುಂಪಿಗೆ ಸೇರಿದ ಜೀವಿಗಳೂ ಇದ್ದವು. ಅವುಗಳಲ್ಲಿ ಒಂದು ಹುಳು 32,000 ವರ್ಷಗಳ ಹಿಂದಿನದು ಮತ್ತು ಇನ್ನೊಂದು 45,000 ವರ್ಷಗಳ ಹಿಂದಿನದು ಎಂದು ಕಾರ್ಬನ್ ಡೇಟಿಂಗ್ ಮುಖಾಂತರ ಪತ್ತೆ ಹಚ್ಚಿದ್ದರು. ಅದೇನೂ ವಿಜ್ಞಾನಿಗಳಿಗೆ ವಿಶೇಷವಾಗಿರಲಿಲ್ಲ. ಆದರೆ 2018ರಲ್ಲಿ ಈ ಹುಳುಗಳನ್ನು ನೀರಿನ ಸಂಪರ್ಕಕ್ಕೆ ತಂದಾಗ ಅವು ಎಚ್ಚರಗೊಂಡವು. ತಮ್ಮ ಸುತ್ತಮುತ್ತ ಇದ್ದ ಬ್ಯಾಕ್ಟೀರಿಯಾಗಳನ್ನು ಸೇವಿಸಲು ಶುರು ಮಾಡಿದವು.

ಸಂತಾನೋತ್ಪತ್ತಿಯನ್ನೂ ಮಾಡಿದವು. ಹಾಗಾದರೆ ಇಷ್ಟು ದೀರ್ಘಕಾಲದವರೆಗೆ ಇವು ಹೇಗೆ ಬದುಕಿದ್ದವು? ಬರಿಗಣ್ಣಿಗೂ ಕಾಣದ ಯಃಕಶ್ಚಿತ್ ಜಂತುವೊಂದು, ಎಂದಿಗೂ ಯಾರಿಗಾಗಿಯೂ ನಿಲ್ಲದ ಕಾಲನನ್ನು ಕೊರಳಪಟ್ಟಿ ಹಿಡಿದು ನಿಲ್ಲಿಸಿದ್ದಾದರೂ ಹೇಗೆ?

ಜೀವಸಾಮ್ರಾಜ್ಯದ ಕೆಳಹಂತದಲ್ಲಿರುವ ಕೆಲವು ಜೀವಿಗಳು ಪ್ರತಿಕೂಲ ವಾತಾವರಣಗಳಲ್ಲಿ ಬದುಕಲು ಒಂದಷ್ಟು ವಿಶೇಷ ಉಪಾಯಗಳನ್ನು ಕಂಡುಕೊಂಡಿವೆ. ಅಂತಹ ಉಪಾಯಗಳಿಗೆ ‘ಕ್ರಿಪ್ಟೋಬಯೋಸಿಸ್’ ಎಂದು ಹೆಸರು. ಕನ್ನಡದಲ್ಲಿ ‘ಸುಪ್ತಜೀವನ’ ಎನ್ನಬಹುದು. ನೀರಿನ ಕೊರತೆ, ಆಮ್ಲಜನಕದ ಕೊರತೆ, ಅತ್ಯಂತ ಶೀತಲ ವಾತಾವರಣ, ಮುಂತಾಗಿ ಬದುಕಲು ಅತ್ಯಂತ ಕಷ್ಟಕರವಾದ ವಾತಾವರಣಗಳಲ್ಲಿ ದೇಹದೊಳಗಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ, ಮುಂದೆ ಅನುಕೂಲಕರ ವಾತಾವರಣ ಬಂದಾಗ ಮತ್ತೆ ಸಹಜ ಸ್ಥಿತಿಗೆ ಮರಳುವ ಸಾಮರ್ಥ್ಯವನ್ನು ಈ ಜೀವಿಗಳು ಬೆಳೆಸಿಕೊಂಡಿವೆ. ಇದುವರೆಗೂ ಇಂತಹ ಜೀವಿಗಳು ಸುಪ್ತ ಸ್ಥಿತಿಯಲ್ಲಿ ಕೆಲವು ವರ್ಷಗಳ ಕಾಲ ಮಾತ್ರ ಬದುಕಿದ್ದ ಉದಾಹರಣೆಗಳಿದ್ದವು.

ಹೆಚ್ಚೆಂದರೆ 39 ವರ್ಷಗಳ ಕಾಲ ಇಂತಹ ಸ್ಥಿತಿಯಲ್ಲಿ ಇದ್ದದ್ದು ದಾಖಲಾಗಿತ್ತು. ಆದರೆ ಈ ಹುಳುಗಳು 45,000 ವರ್ಷಗಳ ಕಾಲ ಸುಪ್ತ ಸ್ಥಿತಿಯಲ್ಲಿ ಬದುಕಿ ಮತ್ತೆ ಎಚ್ಚರಗೊಂಡಿದ್ದು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ. ಜೊತೆಗೆ ಈ ಹುಳುಗಳ ಸಾಮರ್ಥ್ಯವನ್ನು ಮನುಷ್ಯನಿಗೆ ಸಿದ್ಧಿಸುವಂತೆ ಮಾಡಬಲ್ಲ ತಂತ್ರಜ್ಞಾನವನ್ನು ನಿರ್ಮಿಸಲು ಸಾಧ್ಯವಿರಬಹುದೇ ಎಂಬ ಪ್ರಶ್ನೆಯನ್ನೂ ಕೆಲವರಲ್ಲಿ ಹುಟ್ಟಿಸಿದೆ. ಸೈನ್ಸ್ ಫಿಕ್ಷನ್ ಸಿನಿಮಾ ಅಥವಾ ಸಾಹಿತ್ಯಗಳಲ್ಲಿ ನೀವು ‘ಕ್ರಯೋನಿಕ್ಸ್’ ಎಂಬ ತಂತ್ರವನ್ನು ನೋಡಿರಬಹುದು. ಮನುಷ್ಯರನ್ನು ಶೈತ್ಯದಲ್ಲಿ ಕಾಪಿಟ್ಟು ನೂರಾರು ವರ್ಷಗಳ ನಂತರ ಮತ್ತೆ ಎಚ್ಚರಗೊಳಿಸುವ ತಂತ್ರಜ್ಞಾನ. ಇಂತಹ ತಂತ್ರಜ್ಞಾನದ ರಹಸ್ಯ ಬಿಡಿಸುವ ಕೀಲಿಕೈ ಈ ಹುಳುಗಳಲ್ಲಿರಬಹುದೇ ಎಂಬ ಜಿಜ್ಞಾಸೆ ಕೆಲವು ವಿಜ್ಞಾನಿಗಳಲ್ಲಿ ಮೂಡಿದೆ.

ಈ ನಾಣ್ಯದ ಇನ್ನೊಂದು ಬದಿಯಲ್ಲಿ ಒಂದು ಭಯವೂ ಕಾದಿದೆ. ಭೂಮಿಯ ತಾಪ ಏರಿ ಧ್ರುವಪ್ರದೇಶಗಳಲ್ಲಿನ ಹಿಮ ಕರಗುತ್ತಿರುವುದು ಗೊತ್ತಿರುವಂಥ ವಿಷಯವೇ. ಈ ಪ್ರದೇಶಗಳಲ್ಲಿ ಸಾವಿರ ಸಾವಿರ ವರ್ಷಗಳ ಹಿಂದೆ ಬಂಧಿಯಾಗಿದ್ದ ವೈರಸ್, ಬ್ಯಾಕ್ಟೀರಿಯಾಗಳು ಮತ್ತೆ ಮೇಲೆದ್ದು ಬಂದು ರೋಗಗಳನ್ನು ಹರಡತೊಡಗಿದರೆ ಗತಿಯೇನು? ಈ ರೋಗಗಳಿಗೆ ಮಾನವ ಶರೀರದಲ್ಲಿ ಪ್ರತಿರೋಧಕಗಳೂ ಇಲ್ಲದ ಕಾರಣ ಇವು ತರಬಹುದಾದ ಅಪಾಯ ಎಷ್ಟು ಗಂಭೀರವಾಗಬಹುದು ಎಂಬ ಪ್ರಶ್ನೆಗಳೂ ಎದ್ದಿವೆ.

ಲೇಖನದ ಆರಂಭದಲ್ಲಿ ಮುಚುಕುಂದನ ಕಥೆಯನ್ನು ನೋಡಿದೆವಷ್ಟೇ. ಕೊನೆಗೆ ದ್ವಾಪರದಲ್ಲಿ ಮುಚುಕುಂದನ ನಿದ್ರಾಭಂಗವಾಗಿದ್ದು ಕಾಲಯವನ ಎಂಬ ದುಷ್ಟ ರಾಜನಿಂದ. ಕಾಲಯವನ ಮುಚುಕುಂದನ ನಿದ್ರಾಭಂಗ ಮಾಡಿ ಅವನ ಉರಿಗಣ್ಣಿಗೆ ಸಿಕ್ಕು ಭಸ್ಮವಾದ. ಈಗ ನಾವು ಮನುಷ್ಯರೂ ಕೂಡ, ದಪ್ಪನೆಯ ಹಿಮದ ಚಾದರದ ಅಡಿಯಲ್ಲಿ ‘ಬೆಚ್ಚಗೆ’ (ಅಥವಾ ತಣ್ಣಗೆ ಎನ್ನೋಣವೇ?) ಮಲಗಿರುವ ರೋಗಾಣುಗಳು ಮತ್ತೆ ಎದ್ದು ಬರುವಂತೆ ಮಾಡಿ ಕಾಲಯವನರಾಗುತ್ತಿದ್ದೇವೆಯೇ? ಕಾಲವೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT