ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದಿತ್ಯ ಹೃದಯ ದರ್ಶನ’

Last Updated 15 ಆಗಸ್ಟ್ 2018, 20:15 IST
ಅಕ್ಷರ ಗಾತ್ರ

ಅರವತ್ತು ವರ್ಷಗಳ ಹಿಂದೆಯೇ ಸೌರಬಿರುಗಾಳಿ ಕುರಿತು ಖಗೋಳ ತಜ್ಞ ಯೂಜಿನ್ ಪಾರ್ಕರ್ ಹೇಳಿದ್ದರು. ಒಂದೂವರೆ ದಶಕದ ಹಿಂದೆ ನಾಸಾ ಕಳುಹಿಸಿದ್ದ ಸೋಲಾರ್ ಅಂಡ್ ಹೆಲಿಸ್ಫೆರಿಕ್ ಅಬ್ಸರ್ವೇಟರಿ (SOHO) ನೌಕೆ ದೂರದಲ್ಲೇ ಇದ್ದು ಸೂರ್ಯನ ಮೇಲ್ಮೈ ಅರಿಯುವ ಕೆಲಸ ಮಾಡಿತ್ತು. ಇದೇ ಭವಿಷ್ಯದಲ್ಲಿ ಸೂರ್ಯನ ಆಳದ ಅಧ್ಯಯನಕ್ಕೆ ಮುನ್ನುಡಿಯಾಯಿತು. ಈಗ ಆಗಸ್ಟ್ 12ರಂದು ನಾಸಾ ಸಂಸ್ಥೆ ಇನ್ನೂ ಹತ್ತಿರದಿಂದ ಸೂರ್ಯನ ಮೇಲ್ಮೈ ಅಧ್ಯಯನ ಮಾಡಲು ಸೋಲಾರ್ ಪಾರ್ಕರ್ ನೌಕೆಯನ್ನು ಕಳುಹಿಸಿದೆ. 2019 ಡಿಸೆಂಬರ್‌ನಲ್ಲಿ ಭಾರತ ‘ಆದಿತ್ಯ –1’ ಯೋಜನೆಯಡಿ ಸೂರ್ಯನ ಅಧ್ಯಯನಕ್ಕೆ ನೌಕೆ ಕಳುಹಿಸಲು ಸಿದ್ಧತೆ ನಡೆಸಿದೆ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ SOHO ನೌಕೆ ನಡೆಸಿದ ಸೂರ್ಯನ ಅಧ್ಯಯನ ಕುರಿತು ಇಲ್ಲಿ ವಿವರಿಸಲಾಗಿದೆ:

ಧರೆಯ ಸಕಲ ಜೀವರಾಶಿಗಳಿಗೂ ಮಹಾಸ್ವಾಮಿ; ‘ಸೂರ್ಯದೇವ’. ಇದರ ಅರ್ಥ ಇಷ್ಟೇ, ಸೂರ್ಯನ ಬೆಳಕಿಲ್ಲದೆ ಒಂದು ಹುಲ್ಲು ಕಡ್ಡಿಯೂ ಬದುಕುಳಿಯುವುದು ಕಷ್ಟ. ಸೂರ್ಯನ ಬೆಳಕು ಭೂಮಿ ಮೇಲಿನ ಸಕಲ ಜೀವಿಗಳಿಗೆ ಅತ್ಯಗತ್ಯ.

ಸೂರ್ಯ ಎಂದರೆ....

ಕರಗಿದ ಚಿನ್ನದಂತೆ ಬೆಳಗುತ್ತಿರುವವನು, ಅಗ್ನಿ ಸ್ವರೂಪನೂ, ಕತ್ತಲೆ ನಾಶ ಮಾಡುವವನೂ, ವಿಶ್ವ ಸಾಕ್ಷಿಯಾದ ಜ್ಯೋತಿರ್ಮಯಿಯಾದ ಈತನ ವಿರಾಟ ರೂಪಗಳನ್ನು ಬರಿಗಣ್ಣಿನಿಂದ ಖಂಡಿತಾ ನೋಡಲು ಸಾಧ್ಯವಿಲ್ಲ ಬಿಡಿ. ಸೂರ್ಯೋದಯ ಹೊತ್ತಿನಲ್ಲಿ ಎಳೆಯ ಕಿರಣಗಳ ಪ್ರವಾಹದ ದೃಶ್ಯವನ್ನು ಕೆಲವು ಸೆಕೆಂಡುಗಳಷ್ಟು ಕಾಲ ನೋಡಬಹುದೇನೋ. ಆದರೆ, ಬಹಳ ಹೊತ್ತು ಅದನ್ನೂ ದಿಟ್ಟಿಸಲು ಸಾಧ್ಯವಿಲ್ಲ !

ಆದರೆ, ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಬಹಳ ಮುಂದುವರಿದಿದೆ. ಯಾವುದು ಅಸಾಧ್ಯವೆಂದು ಭಾವಿಸುತ್ತೇವೆಯೋ ಅದನ್ನು ವಿಜ್ಞಾನಿಗಳು ಸಾಧ್ಯವಾಗಿಸುತ್ತಾರೆ; ಸಾಕಾರಗೊಳಿಸುತ್ತಾರೆ. ಹಾಗೆಯೇ ಸೂರ್ಯನ ಮೇಲೆ ಕಣ್ಣಿಟ್ಟು ಆತನ ಹಲವು ಹತ್ತು ಅವತಾರಗಳನ್ನೂ ಅನಾವರಣಗೊಳಿಸಿದ್ದಾರೆ. ಭುವಿಯ ಮಾನವ ಚಕ್ಷುಗಳಿಗೆ ‘ಆದಿತ್ಯ ದರ್ಶನ’ವನ್ನು ಮಾಡಿಸಿದ್ದಾರೆ. ಇಲ್ಲಿಯ ತನಕ ಯಾರೂ ನೋಡಿರದ ಅದ್ಭುತ, ಕಲಾತ್ಮಕ ಎನ್ನಬಹುದಾದ ಸೂರ್ಯನ ವಿಭಿನ್ನ ಅಭಿವ್ಯಕ್ತಿಯ ಚಿತ್ರಗಳನ್ನು ಮುಂದಿಟ್ಟಿದ್ದಾರೆ ನಾಸಾ ವಿಜ್ಞಾನಿಗಳು.

ನಾಸಾ ಭಾನುವಾರ (ಅ.12) ರವಾನಿಸಿದ ‘ಪಾರ್ಕರ್‌’ ಬಾಹ್ಯಾಕಾಶ ನೌಕೆ ಸೂರ್ಯನ ಸಮೀಪ ಹೋಗಿ ಅಧ್ಯಯನ ನಡೆಸಲಿದೆ. ಆದರೆ, ಒಂದೂವರೆ ದಶಕದ ಹಿಂದೆ ನಾಸಾ ಕಳುಹಿಸಿದ್ದ ಸೋಲಾರ್ ಅಂಡ್ ಹೆಲಿಸ್ಫೆರಿಕ್ ಅಬ್ಸರ್ವೇಟರಿ (SOHO) (Solar & Heliospheric Observator) ನೌಕೆ ದೂರದಲ್ಲೇ ಇದ್ದು, ಸೂರ್ಯನ ಆಂತರ್ಯವನ್ನು ಅರಿಯುವ ಕೆಲಸ ಮಾಡಿತು. ಅದು ಕಳುಹಿಸಿದ ಚಿತ್ರಗಳು ಬಹಳ ಅಪರೂಪದ್ದು. ಸೂರ್ಯನ ಆಳವಾದ ಅಧ್ಯಯನಕ್ಕೆ ಮುನ್ನುಡಿ ಹಾಡಿತ್ತು. ಈಗ ಕಳುಹಿಸಿರುವ ಪಾರ್ಕರ್ ಅದಕ್ಕಿಂತ ಹೆಚ್ಚು ಹತ್ತಿರಕ್ಕೆ ಹೋಗಿ ಸೂರ್ಯನ ಮೇಲ್ಮೈ ಅಧ್ಯಯನ ಮಾಡಲಿದೆ.

ಸಾಮಾನ್ಯವಾಗಿ, ಮುಂಜಾನೆ ಕೆಂಪನೆ ಸೇಬಿನ ಹಣ್ಣಿನಂತೆಯೋ ಅಥವಾ ಕಿತ್ತಲೆ ಹಣ್ಣಿನಂತೆ ಕಾಣುವ ರವಿ ನಮ್ಮೆಲ್ಲ ಗ್ರಹಿಕೆಗೂ ಮೀರಿದ ‘ತಾರೆ’. ಸದಾ ಬೆಂಕಿಯ ದ್ರವ್ಯದಿಂದ ಕುದಿಯುತ್ತಲೇ ಇರುವ ಬಿಸಿಗೋಲವೇ ಇದರ ಸಹಜ ರೂಪ. ಸೂರ್ಯನ ಸಂಕೀರ್ಣ ಜಾಲ ಬರಿ ಕಣ್ಣಿಗೆ ಕಾಡುವುದಿಲ್ಲ.

ಸೂರ್ಯನನ್ನು ಸೌರ ತಟ್ಟೆಯು ಆವರಿಸಿರುತ್ತದೆ. ಇದರಲ್ಲಿ ಬಿಸಿಯ ಕೋಶಗಳು ಮತ್ತು ತಣ್ಣನೆಯ ಪ್ಲಾಸ್ಮಾ ಕೂಡಾ ಇರುತ್ತದೆ. ಇವೆರಡೂ ಸೇರಿ ಕೆಲವೇ ಗಂಟೆಗಳಲ್ಲಿ ಮಾಯವಾಗಿ ಬಿಡುವ ಚಮತ್ಕಾರವೂ ನಡೆಯುತ್ತದೆ. ಸದಾ ಚಲನಶೀಲವಾಗಿರುವ ಈ ಕೋಶಗಳ ಸರಹದ್ದುಗಳಂತೂ ಅತ್ಯಂತ ನಿಬಿಡ ಪ್ರದೇಶಗಳು. ಚಲನಶೀಲ ಕೋಶಗಳಲ್ಲಿ ಯಾವುದೇ ಬದಲಾವಣೆಗಳು ಉಂಟಾದರೂ ತಕ್ಷಣವೇ ಪ್ಲಾಸ್ಮಾದ ಶಕ್ತಿಶಾಲಿ ಬೃಹತ್ ಬುಗ್ಗೆ ಉಕ್ಕುತ್ತದೆ. ಇಲ್ಲಿ ಸಂಭವಿಸುವ ಅಯಸ್ಕಾಂತೀಯ ಪುನರ್‌ಸಂಪರ್ಕವನ್ನು ಅಯಸ್ಕಾಂತೀಯ ವಲಯ ಎನ್ನುತ್ತಾರೆ. ಇದರಿಂದಾಗಿಯೇ ಸೂರ್ಯನಲ್ಲಿ ಆಗಾಗ್ಗೆ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲವನ್ನು ಅಧ್ಯಯನ ಮಾಡಲೆಂದೇ ವಿಜ್ಞಾನಿಗಳು ವಿಭಿನ್ನ ತಂತ್ರಗಳನ್ನು ಬಳಸಿ ಸೂರ್ಯನ ವಿದ್ಯುದಯಸ್ಕಾಂತಿಯ ಅಲೆಯ ಮೇಲೆ ನಿರಂತರವಾಗಿ ಕಣ್ಣಿಟ್ಟು ಆ ದೃಶ್ಯಗಳನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಿದರು.

ಹಾಗೆ ಸೆರೆ ಹಿಡಿದ ಸೂರ್ಯನ ಕಲಾತ್ಮಕವೆನಿಸುವ ದೃಶ್ಯಗಳಿಗೆ ‘ದ ಸನ್ ಆ್ಯಸ್‌ ಆರ್ಟ್’ ಎಂಬ ಶೀರ್ಷಿಕೆ ನೀಡಲಾಯಿತು. ಸೂರ್ಯನಲ್ಲಿ ಉಂಟಾಗುವ ಈ ವಿದ್ಯಮಾನಗಳನ್ನು ವೀಕ್ಷಿಸಿ ಸೂಕ್ತ ಸಮಯದಲ್ಲಿ ಸೆರೆ ಹಿಡಿಯುವಲ್ಲಿ ಸೋಲಾರ್ ಅಂಡ್ ಹೆಲಿಸ್ಫೆರಿಕ್ ಅಬ್ಸರ್ವೇಟರಿ ಮಹತ್ವದ ಪಾತ್ರವಹಿಸಿತ್ತು. ಈ ದೃಶ್ಯಗಳನ್ನು ವಿವಿಧ ಕಾಲಘಟ್ಟಗಳಲ್ಲಿ ಸೆರೆ ಹಿಡಿಯಲಾಗಿದೆ. ಒಂದರಲ್ಲಿ ಸೂರ್ಯನ ಸುತ್ತ ಹೂವಿನ ಪಕಳೆಗಳಂತೆ ಪ್ರಭಾ ವಲಯ ಇದ್ದರೆ, ಮತ್ತೊಂದರಲ್ಲಿ ನೀಲಿ, ಹಸಿರು ಬಣ್ಣವನ್ನು ಕ್ಯಾನ್ವಾಸ್‌ನಲ್ಲಿ ಚಿತ್ತಾರ ಬಿಡಿಸಿದಂತೆ ಕಾಣುತ್ತದೆ. ಒಮ್ಮೆಯಂತೂ ಹಸಿರು ಚಿತ್ರ ಸೆರೆ ಹಿಡಿದು ಕೆಲವೇ ತಾಸುಗಳಲ್ಲಿ ಅದು ನೀಲಿ ಬಣ್ಣಕ್ಕೆ ತಿರುಗಿದ್ದನ್ನೂ ಸೆರೆ ಹಿಡಿಯಲಾಗಿತ್ತು.

ಈ ಪೈಕಿ ಒಂದು ಚಿತ್ರವಂತೂ ಅಮೂರ್ತ ಪೈಂಟಿಂಗ್‌ನಂತೆ ಇದೆ. ಇದರಲ್ಲಿ 60 ಫ್ರೇಮ್‌ಗಳಿವೆ. ಸುಮಾರು 10 ನಿಮಿಷಗಳವರೆಗೆ ಸೊಹೊದಲ್ಲಿರುವ ಸ್ಪೆಕ್ಟ್ರೊಮೀಟರ್ ಬಳಸಿ ಸೆರೆಹಿಡಿಯಲಾಯಿತು. ಪ್ರತಿ 10 ಸೆಕೆಂಡಿಗೆ ಒಂದು ಫ್ರೇಮ್‌ನಂತೆ ದೃಶ್ಯ ಸೆರೆ ಹಿಡಿಯಲಾಯಿತು. ಸೊಹೊ ತೆಗೆದ ಒಂದು ಚಿತ್ರವಂತೂ ಅತಿಯಾದ ಅಲ್ಟ್ರಾವಯಲೆಟ್‌ನಿಂದ ಕೂಡಿತ್ತು. ಆ ಚಿತ್ರಭೂಮಿಗೆ ರವಾನೆಗೊಂಡಾಗ ಕಪ್ಪು- ಬಿಳುಪಾಗಿತ್ತು. 1998 ರಲ್ಲಿ ತೆಗೆದ ಇನ್ನೊಂದು ಚಿತ್ರವಂತೂ ಅತ್ಯದ್ಭುತ; ಸೂರ್ಯನಿಂದ ಭಾರೀ ಪ್ರಮಾಣದ ಅನಿಲ ಹೊರ ಹೊಮ್ಮತ್ತಿರುವುದು. ಹಾಗೆ ಎದ್ದ ಅನಿಲ ಭೂಮಿಯತ್ತ ಮುಖ ಮಾಡಿ ಧಾವಿಸುತ್ತಿರುವುದು. ಇದನ್ನು ಕಂಡು ವಿಜ್ಞಾನಿಗಳು ಒಂದು ಕ್ಷಣ ವಿಸ್ಮಯಗೊಂಡಿದ್ದರು.

ಸೂರ್ಯನಿಂದ ಎದ್ದ ಕಣಗಳ ಬೃಹತ್ ಮೋಡ ಎಲ್ಲೆಡೆ ಚೆದುರಿ ಹೋಗುತ್ತಿರುವ ಅಲ್ಟ್ರಾವಯಲೆಟ್ ದೃಶ್ಯ ಕೂಡ ವಿಶಿಷ್ಟ. ಸೂರ್ಯ ನಕ್ಷತ್ರದಿಂದ ಹೊರಟ ಕಣಗಳ ಬೃಹತ್ ಮೋಡ ಎರಡು ದಿನಗಳ ಬಳಿಕ ಭೂಮಿಯ ಮೇಲೆ ಪರಿಣಾಮ ಬೀರಿತ್ತು. ಮತ್ತೊಂದು ಚಿತ್ರದಲ್ಲಿ ಸೂರ್ಯನಲ್ಲಿ ಭಾರೀ ಪ್ರಮಾಣದ ಸ್ಫೋಟದಿಂದ ಕೋಟ್ಯಂತರ ಟನ್‌ಗಳಷ್ಟು ಪದಾರ್ಥಗಳನ್ನು ಹೊರ ಚೆಲ್ಲುವುದರ ಜತೆಗೆ ಅದು ಗಂಟೆಗೆ ದಶಲಕ್ಷ ಕಿ.ಮೀ ವೇಗದಲ್ಲಿ ಸಾಗುವುದನ್ನೂ ಸೆರೆ ಹಿಡಿಯಲಾಗಿತ್ತು.

ಎರಡು ದಶಕಗಳ ಶ್ರಮ:ಸುಮಾರು 20 ವರ್ಷಗಳ ಅವಧಿಯಲ್ಲಿ ಸೂರ್ಯನ ಮೇಲೆ ಸಂಭವಿಸಿದ ವಿಭಿನ್ನ ವಿದ್ಯಮಾನಗಳ ವೇಳೆಯಲ್ಲಿ ಸೆರೆ ಹಿಡಿದ ಅಪೂರ್ವ ಚಿತ್ರಗಳಿವು. ಇವು ನೋಡಲು ಸೊಗಸಾಗಿವೆ. ಇವುಗಳ ಆಧಾರದಲ್ಲಿ ಭವಿಷ್ಯದಲ್ಲಿ ಸೂರ್ಯನಲ್ಲಿ ಏನೇನಾಗುತ್ತದೆ ಎಂಬುದನ್ನು ಅರ್ಥೈಸಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT