ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಸ್‌ಟಿಂಗ್: ಇರಲಿ ಎಚ್ಚರ

Last Updated 23 ಜನವರಿ 2019, 3:39 IST
ಅಕ್ಷರ ಗಾತ್ರ

ಮೊಬೈಲ್‌ ಗೀಳಿನ ಅಮರ್‌ ವರ್ತನೆ ಆತನ ಪೋಷಕರನ್ನು ಆತಂಕಕ್ಕೀಡು ಮಾಡುತ್ತದೆ. ಅಪ್ಪ–ಅಮ್ಮನ ಕಂಡ ತಕ್ಷಣ ಆತ ತನ್ನ ಮೊಬೈಲ್‌ ಅನ್ನು ಮುಚ್ಚಿಡುತ್ತಾನೆ. ಓದು ಅಥವಾ ಮೊಬೈಲ್‌. ಇವೆರಡೇ ಆತನ ಆಯ್ಕೆಗಳು. ಗೆಳೆಯರೊಂದಿಗೆ ಆಟ, ಇತರರೊಂದಿಗೆ ಒಡನಾಟ ಅಷ್ಟಕ್ಕಷ್ಟೇ.

–ನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿರುವ ಅಮರ್ (ಹೆಸರು ಬದಲಾಯಿಸಲಾಗಿದೆ) ಸ್ಥಿತಿ ಇದು. ಈತ ಓದಿನಲ್ಲಿ ಜಾಣ. ಆದರೆ, ಇತ್ತೀಚಿನ ಆತನ ವರ್ತನೆಗಳು ಪೋಷಕರನ್ನು ಇನ್ನೂ ಆತಂಕಕ್ಕೀಡು ಮಾಡಿತ್ತು. ಇದನ್ನು ಗಮನಿಸಿದ ಪೋಷಕರು ನಿಮ್ಹಾನ್ಸ್‌ನ ಶಟ್ ಕ್ಲಿನಿಕ್‌ಗೆ (ಸರ್ವೀಸ್ ಫಾರ್ ಹೆಲ್ತಿ ಯೂಸ್ ಫಾರ್ ಟೆಕ್ನಾಲಜಿ) ಆತನ ಕರೆದೊಯ್ದಾಗ ಆತಂಕದ ವಿಷಯವೊಂದು ಹೊರಬಿತ್ತು. ಅದೇ ಸೆಕ್ಸ್‌ಟಿಂಗ್!

ಸೆಕ್ಸ್‌ಟಿಂಗ್...

9ನೇ ತರಗತಿಯ ಈ ಬಾಲಕ ಸೆಕ್ಸ್‌ಟಿಂಗ್ ಗೀಳಿಗೆ ಒಳಗಾಗಿದ್ದ. ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಸೆಕ್ಸ್ ಬಗ್ಗೆ ಚಾಟ್ ಮಾಡುತ್ತಿದ್ದ. ಪೋರ್ನ್ (ನೀಲಿ ಚಿತ್ರಗಳು) ವಿಡಿಯೊ ವೀಕ್ಷಿಸುವ ಚಟಕ್ಕೆ ಬಿದ್ದಿದ್ದ. ಈ ಬಗ್ಗೆ ಮಾನಸಿಕ ತಜ್ಞರು ಅಮರ್‌ನನ್ನು ಮಾತನಾಡಿಸಿದಾಗ ಆತ ನೀಡಿದ್ದ ಉತ್ತರ ಕ್ಷಣ ದಂಗು ಬಡಿಸುವಂಥದು. ‘ಸ್ನೇಹಿತರೂ ಇದೇ ರೀತಿಯ ಪೋರ್ನ್‌ ವಿಡಿಯೊ ನೋಡುತ್ತಾರೆ. ಅದರಿಂದ ಅವರಿಗೆ ಖುಷಿ ಸಿಗುತ್ತದಂತೆ. ಹಾಗಾಗಿ, ನಾನೂ ಇಂಥದ್ದನ್ನು ನೋಡುತ್ತೇನೆ. ಮನೆಯಲ್ಲಾಗಲಿ ಶಾಲೆಯಲ್ಲಾಗಲೀ ಈ ಬಗ್ಗೆ ಮುಂಚೆಯೇ ತಿಳುವಳಿಕೆ ನೀಡಿದ್ದರೆ ಇಂಥ ಚಟಕ್ಕೆ ನಾನು ಬೀಳುತ್ತಿರಲಿಲ್ಲ...’

ಆಧುನಿಕ ತಂತ್ರಜ್ಞಾನ ಮನುಷ್ಯರನ್ನು ವ್ಯವಹಾರಿಕವಾಗಿ ಹತ್ತಿರ ತಂದಷ್ಟು ಮಾನಸಿಕವಾಗಿ ಅಷ್ಟೇ ದೂರವಾಗಲು ಕೂಡಾ ಕಾರಣವಾಗುತ್ತಿರುವುದು ವಿಷಾದಕರ. ಇದರಲ್ಲಿ ನೇರವಾಗಿ ತಂತ್ರಜ್ಞಾನದ್ದೇ ತಪ್ಪು ಎಂದು ಹೇಳಲಾಗದು. ತಂತ್ರಜ್ಞಾನ ಅಸಮರ್ಪಕ ಬಳಕೆಯಿಂದ ಅನೇಕರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು ಎನ್ನುತ್ತದೆ ನಿಮ್ಹಾನ್ಸ್‌ನ ಅಧ್ಯಯನ.

‘ಸೆಕ್ಸ್‌ಟಿಂಗ್ ಮತ್ತು ಮಾನಸಿಕ ಆರೋಗ್ಯ: ಭಾರತ ಮತ್ತು ಆಸ್ಟ್ರೇಲಿಯಾದ ಯುವಜನರ ಅಧ್ಯಯನ’ ಕುರಿತು ನಿಮ್ಹಾನ್ಸ್ ಈಚೆಗೆ ನಡೆಸಿದ ಅಧ್ಯಯನ ಅನೇಕ ಅಂಶಗಳನ್ನು ಹೊರಗೆಡವಿದೆ. ಆಸ್ಟ್ರೇಲಿಯಾದ ಬುರ್ವುಡ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಜಂಟಿಯಾಗಿ ಈ ಅಧ್ಯಯನ ನಡೆಸಿದ್ದು, ಇದರಲ್ಲಿ ಭಾರತದ 18 ವರ್ಷದೊಳಗಿನ 300 ಯುವಜನರು ಮತ್ತು ಆಸ್ಟ್ರೇಲಿಯಾದ 298 ಯುವಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಭಾರತಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾದ ಯುವಕರು ಮತ್ತು ಯುವತಿಯರು ಹೆಚ್ಚು ಪ್ರಮಾಣದಲ್ಲಿ ಸೆಕ್ಸ್‌ಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಇದು ಅವರ ಜೀವನಶೈಲಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅಂತೆಯೇ ಭಾರತದಲ್ಲಿ ಯುವತಿಯರಿಗೆ ಹೋಲಿಸಿದರೆ ಯುವಕರು ಹೆಚ್ಚು ಸೆಕ್ಸ್‌ಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಯುವಕರು ಶೇ 16ರಷ್ಟು ಪ್ರಮಾಣದಲ್ಲಿ ಸೆಕ್ಸ್‌ಟಿಂಗ್ ಮೆಸೇಜ್ ಕಳಿಸಿದರೆ, ಯುವತಿಯರು ಶೇ 3ರ ಪ್ರಮಾಣದಲ್ಲಿ ಇಂಥ ಮೆಸೇಜ್ ಕಳಿಸಲು ಬಯಸುತ್ತಾರೆ. ಶೇ 64.9 ಯುವಕರು ಸೆಕ್ಸ್‌ಟಿಂಗ್ ಮೆಸೇಜ್‌ಗಳನ್ನು ಇತರರಿಂದ ಪಡೆಯತ್ತಿದ್ದರೆ, ಯುವತಿಯರು ಶೇ 13.6 ಇಂಥ ಮೆಸೇಜ್‌ಗಳನ್ನು ಪಡೆಯುತ್ತಿದ್ದಾರೆ. ಒಟ್ಟಾರೆ ಸೆಕ್ಸ್‌ಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಯುವಜನರ ಮನಸಿನ ಮೇಲೆ ಒತ್ತಡ, ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂಬ ಅಂಶಗಳನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಹೆಣ್ಣು–ಗಂಡಿನ ನಡುವೆ ಪರಸ್ಪರ ಅರಿವಿನ ಕೊರತೆ, ಸಾಂಸ್ಕೃತಿಕ ಭಿನ್ನತೆ, ಸಂಪ್ರದಾಯಿಕ ಕಟ್ಟುಪಾಡುಗಳು ಹದಿಹರೆಯದವರನ್ನು ಸೆಕ್ಸ್‌ಟಿಂಗ್ ಕಡೆಗೆ ಪ್ರೇರೇಪಿಸಲು ಮುಖ್ಯ ಕಾರಣ. ಭಾರತದಂಥ ದೇಶದಲ್ಲಿ ಲೈಂಗಿಕ ಶಿಕ್ಷಣದ ಕೊರತೆ ಚಿಕ್ಕವಯಸ್ಸಿನಲ್ಲೇ ಮಕ್ಕಳು ಸೆಕ್ಸ್‌ಟಿಂಗ್ ಕಡೆಗೆ ತೆರೆದುಕೊಳ್ಳಲು ಕಾರಣವಾಗುತ್ತಿದೆ. ವಿವಾಹಿತರಿಗಿಂತ ಒಂಟಿಯಾಗಿರುವವರು, ಹದಿಹರೆಯದವರು ಹೆಚ್ಚು ಸೆಕ್ಸ್‌ಟಿಂಗ್‌ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸುತ್ತಾರೆ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗದ ಡಾ.ಮನೋಜ್‌ಕುಮಾರ್ ಶರ್ಮ.

ಸಮೀಕ್ಷೆಯಲ್ಲಿ ಬೆಂಗಳೂರಿನ ಯುವಜನರನ್ನು ಆನ್‌ಲೈನ್‌ನ ಮೂಲಕ ಪ್ರಶ್ನೆಗಳನ್ನು ಕೇಳಿದಾಗ, ‘ಸ್ನೇಹಿತರು ಸೆಕ್ಸ್‌ಟಿಂಗ್‌ನಲ್ಲಿ ಪಾಲ್ಗೊಂಡ ಕಾರಣಕ್ಕೆ ಹಲವರು ತಾವೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದಿದ್ದರೆ, ಮತ್ತೆ ಕೆಲವರು ಕುತೂಹಲಕ್ಕಾಗಿ ಸ್ನೇಹಿತರಿಗೆ ಪೋರ್ನ್ ವಿಡಿಯೊ ಕಳಿಸುತ್ತೇವೆ’ ಎಂದು ಉತ್ತರಿಸಿದ್ದಾರೆ.

ನಗರದ ಅನೇಕ ಶಾಲಾ–ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಲೈಂಗಿಕ ತಿಳಿವಳಿಕೆ ನೀಡಲು ಆಸಕ್ತಿ ತೋರುತ್ತಿದ್ದು, ನಿಮ್ಹಾನ್ಸ್‌ನಿಂದ ಅನೇಕ ಸಂವಾದಗಳನ್ನು ನಡೆಸುತ್ತಿವೆ. ಈಗತಾನೇ ಹದಿಹರೆಯಕ್ಕೆ ಕಾಲಿಡುತ್ತಿರುವವರಲ್ಲಿ ಲೈಂಗಿಕ ವಿಷಯ ಕುರಿತು ಅನೇಕ ಪ್ರಶ್ನೆಗಳಿರುತ್ತವೆ. ಯಾವುದು ಸರಿ? ಯಾವುದು ತಪ್ಪು? ಯಾವ ವಯಸ್ಸಿನಲ್ಲಿ ಲೈಂಗಿಕತೆಗೆ ತೆರೆದುಕೊಳ್ಳಬೇಕು? ಸೆಕ್ಸ್‌ಟಿಂಗ್‌ನಿಂದ ಭವಿಷ್ಯ ಮತ್ತು ಮನಸಿನ ಮೇಲಾಗುವ ಪರಿಣಾಮಗಳ ಬಗ್ಗೆ ಅರಿಯಲು ಶಾಲಾ–ಕಾಲೇಜು ವಿದ್ಯಾರ್ಥಿಗಳು ಮುಕ್ತವಾಗಿ ಪ್ರಶ್ನೆ ಕೇಳುತ್ತಾರೆ. ಸಂವಾದಲ್ಲಿ ನಿಮ್ಹಾನ್ಸ್‌ನ ಸಿಬ್ಬಂದಿ ವೈಜ್ಞಾನಿಕ ಹಿನ್ನಲೆ, ಜೈವಿಕ ವ್ಯತ್ಯಾಸ, ಆರೋಗ್ಯಕರ ಲೈಂಗಿಕ ಜೀವನದ ಕುರಿತು ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಮನೋಜ್ ಕುಮಾರ್.

ಸೆಕ್ಸ್‌ಟಿಂಗ್ ಪರಿಣಾಮ: ಸೆಕ್ಸ್‌ಟಿಂಗ್ ತಮ್ಮ ಲೈಂಗಿಕ ಕಾಮನೆಗಳನ್ನು ಸುಲಭವಾಗಿ ತಿಳಿಸುವ ಮಾಧ್ಯಮವೆಂದು ಅನೇಕರು ಭಾವಿಸಿದ್ದಾರೆ. ವಯಸ್ಕ ಮತ್ತು ಒಪ್ಪಿತ ಸಂಬಂಧಗಳ ನಡುವೆ ಇದು ಅಷ್ಟಾಗಿ ತೊಡಕಾಗದಿದ್ದರೂ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮೆಸೇಜ್‌ಗೆ ಪ್ರತಿಕ್ರಿಯೆ ಬರದಿದ್ದಾಗ ಅಥವಾ ಸ್ಪಂದನೆ ಸಿಗದಿದ್ದಾಗ ಚಡಪಡಿಕೆ ಉಂಟಾಗುತ್ತದೆ. ನಿತ್ಯದ ಜೀವನಶೈಲಿ ಮೇಲೆ ಪರಿಣಾಮವಾಗುತ್ತದೆ. ರಾತ್ರಿ ಹೊತ್ತು ಸೆಕ್ಸ್‌ಟಿಂಗ್ ಮೊರೆ ಹೋಗುವವರ ಜೈವಿಕ ಗಡಿಯಾರದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಸಿಟ್ಟು, ಅಸಹನೆ, ಚಡಪಡಿಕೆಯಂಥ ಲಕ್ಷಣಗಳು ಗೋಚರಿಸುತ್ತವೆ.

ಪರಿಹಾರವೇನು?: ಸೆಕ್ಸ್‌ಟಿಂಗ್ ಮೆಸೇಜ್ ಕಳಿಸುವುದು ಅಥವಾ ಸ್ವೀಕರಿಸುವುದರಿಂದ ವಿಮುಖವಾಗುವುದು. ಸುರಕ್ಷಿತ ಆನ್‌ಲೈನ್ ಕಾರ್ಯಾಚರಣೆಗೆ ಒತ್ತು ನೀಡುವುದು. ಸೆಕ್ಸ್‌ಟಿಂಗ್‌ನಿಂದ ಆಗುವ ಪರಿಣಾಮಗಳ ಬಗ್ಗೆ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸುವುದು. ಅಂಥ ಮೆಸೇಜ್ ಮಾಡುವವರ ಫೋನ್ ನಂಬರ್ ಅನ್ನು ಬ್ಲಾಕ್ ಮಾಡುವುದೇ ಸೆಕ್ಸ್‌ಟಿಂಗ್‌ಗೆ ಇರುವ ಪರಿಹಾರ ಎಂದು ನಿಮ್ಹಾನ್ಸ್ ಅಧ್ಯಯನ ಹೇಳಿದೆ.

ಸಂಪರ್ಕಕ್ಕೆ: shutclinic@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT