ನವದೆಹಲಿ: ಬಳಕೆದಾರರ ನಡುವೆ ನಡೆಯುವ ಖಾಸಗಿ ಮಾತುಕತೆಗಳ ಗೋಪ್ಯತೆಯನ್ನು ಕಾಯಲು ತಾನು ಬದ್ಧ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿರುವುದಾಗಿ ವಾಟ್ಸ್‌ಆ್ಯಪ್ ಹೇಳಿದೆ. ವಿವಾದಿತ ಖಾಸಗಿತನ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ ಕೆಲವೇ ತಾಸುಗಳಲ್ಲಿ ಕಂಪನಿ ಈ ಮಾತು ಹೇಳಿದೆ.
ಬಳಕೆದಾರರ ಸೀಮಿತ ಮಾಹಿತಿಯನ್ನು ಫೇಸ್‌ಬುಕ್ ಮತ್ತು ಆ ಸಮೂಹಕ್ಕೆ ಸೇರಿದ ಇತರ ಕಂಪನಿಗಳ ಜೊತೆ ಹಂಚಿಕೊಳ್ಳಲು ಅವಕಾಶ ಆಗುವಂತೆ ಖಾಸಗಿತನದ ನೀತಿಯಲ್ಲಿ ಬದಲಾವಣೆ ತರುವುದಾಗಿ ವಾಟ್ಸ್‌ಆ್ಯಪ್ ಹಿಂದಿನ ತಿಂಗಳು ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವಾಟ್ಸ್‌ಆ್ಯಪ್‌ಗೆ ಹಲವು ಪ್ರಶ್ನೆಗಳನ್ನು ಕೇಳಿತ್ತು.
ನೀತಿಯಲ್ಲಿನ ಪ್ರಸ್ತಾವಿತ ಬದಲಾವಣೆಗೆ ಎದುರಾದ ಪ್ರತಿರೋಧ ಹಾಗೂ ಬಳಕೆದಾರರು ಟೆಲಿಗ್ರಾಂ, ಸಿಗ್ನಲ್‌ನಂತಹ ಆ್ಯಪ್‌ಗಳತ್ತ ಮುಖ ಮಾಡಿದ ಕಾರಣ ವಾಟ್ಸ್‌ಆ್ಯಪ್ ಹೊಸ ನೀತಿಯ ಜಾರಿಯನ್ನು ಮೇ ತಿಂಗಳಿಗೆ ಮುಂದೂಡಿತ್ತು. ನೀತಿಯಲ್ಲಿನ ಪರಿಷ್ಕರಣೆಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸಲಾಗುವುದು ಎಂದು ವಾಟ್ಸ್‌ಆ್ಯಪ್ ಹೇಳಿದೆ.
‘ತಪ್ಪು ಮಾಹಿತಿ ಹರಡಿದ್ದರಿಂದ ಹಾಗೂ ಗ್ರಾಹಕರಿಂದ ನಮಗೆ ಬಂದ ಪ್ರತಿಕ್ರಿಯೆಯ ಕಾರಣದಿಂದಾಗಿ ನಾವು ನಮ್ಮ ಹೊಸ ನೀತಿಯನ್ನು ಒಪ್ಪಿಕೊಳ್ಳುವುದಕ್ಕೆ ಗಡುವನ್ನು ಮೇ 15ಕ್ಕೆ ವಿಸ್ತರಿಸಿದ್ದೇವೆ’ ಎಂದು ವಾಟ್ಸ್‌ಆ್ಯಪ್ ಹೇಳಿದೆ. ‘ನೀತಿಯಲ್ಲಿನ ಪರಿಷ್ಕರಣೆಯನ್ನು ಗಮನಿಸಿ, ಅದನ್ನು ಒಪ್ಪಿಕೊಳ್ಳುವಂತೆ ಗ್ರಾಹಕರಿಗೆ ನೆನಪಿಸುವ ಕೆಲಸ ಮಾಡುತ್ತೇವೆ’ ಎಂದು ಕಂಪನಿ ತಿಳಿಸಿದೆ.
ಪರಿಷ್ಕೃತ ನೀತಿಯನ್ನು ಒಪ್ಪಿಕೊಳ್ಳದ ಗ್ರಾಹಕರು ಮೇ 15ರ ನಂತರವೂ ಸಂದೇಶಗಳನ್ನು ಹಾಗೂ ಕರೆಗಳನ್ನು ಸ್ವೀಕರಿಸಬಹುದು. ಆದರೆ, ತಮ್ಮಿಂದ ಸಂದೇಶ ಕಳುಹಿಸಬೇಕಾದಲ್ಲಿ, ಹೊಸ ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೊಸ ನೀತಿಯನ್ನು ಒಪ್ಪಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಅವರ ಖಾತೆಗಳನ್ನು ಚಾಲ್ತಿಯಲ್ಲಿ ಇರಿಸಲಾಗುತ್ತದೆ.
ವಾಟ್ಸ್‌ಆ್ಯಪ್ ಭಾರತದಲ್ಲಿ 40 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.