ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೂಟ್ಯೂಬ್‌ ಚಾನೆಲ್‌ ಬಂದ್‌ ಮಾಡಬೇಕೆಂಬ ಷರತ್ತು ಅನಪೇಕ್ಷಿತ: ಸುಪ್ರೀಂ ಕೋರ್ಟ್‌

ತಮಿಳುನಾಡು ಯೂಟ್ಯೂಬರ್ ಜೆರಾಲ್ಡ್‌ ಅವರಿಗೆ ಜಾಮೀನು
Published : 27 ಸೆಪ್ಟೆಂಬರ್ 2024, 14:25 IST
Last Updated : 27 ಸೆಪ್ಟೆಂಬರ್ 2024, 14:25 IST
ಫಾಲೋ ಮಾಡಿ
Comments

ನವದೆಹಲಿ: ಯೂಟ್ಯೂಬರ್‌ ಫೆಲಿಕ್ಸ್‌ ಜೆರಾಲ್ಡ್‌ ಅವರಿಗೆ ಜಾಮೀನು ನೀಡುವ ವೇಳೆ, ಯೂಟ್ಯೂಬ್‌ ಚಾನೆಲ್‌ ಬಂದ್‌ ಮಾಡಬೇಕು ಎಂಬ ಷರತ್ತನ್ನೂ ವಿಧಿಸಿರುವ ಮದ್ರಾಸ್‌ ಹೈಕೋರ್ಟ್‌ನ ನಿರ್ದೇಶನ ‘ಅನಪೇಕ್ಷಿತ’ ಹಾಗೂ ‘ಅಸಂಬದ್ಧ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಜೆರಾಲ್ಡ್‌ ಅವರಿಗೆ ಸೆಪ್ಟೆಂಬರ್‌ 6ರಂದು ಜಾಮೀನು ನೀಡಿರುವುದನ್ನು ದೃಢೀಕರಿಸಿದ ಸುಪ್ರೀಂ ಕೋರ್ಟ್‌, ಅವರ ಯೂಟ್ಯೂಬ್‌ ಚಾನೆಲ್‌ ‘ರೆಡ್‌ಪಿಕ್ಸ್‌24X7’ ಬಂದ್‌ ಮಾಡಬೇಕಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. 

ಈ ಹಿಂದಿನ ತನ್ನ ಆದೇಶದಂತೆ, ಜೆರಾಲ್ಡ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂಬ ವಿಚಾರವನ್ನು ಗಣನೆಗೆ ತೆಗೆದುಕೊಂಡಿತು. ಜೆರಾಲ್ಡ್‌ ಪರ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ವಾದ ಮಂಡಿಸಿದರು.

ಮತ್ತೊಬ್ಬ ಯೂಟ್ಯೂಬರ್‌ ಸವುಕ್ಕು ಶಂಕರ್‌ ಅವರ ‘ಆಕ್ಷೇಪಾರ್ಹ’ ಸಂದರ್ಶನವನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ ಆರೋಪದಡಿ ಜೆರಾಲ್ಡ್‌ ಅವರನ್ನು ಬಂಧಿಸಲಾಗಿತ್ತು.  

ಈ ಸಂದರ್ಶನದಲ್ಲಿ, ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳು ಹಾಗೂ ಕೆಲ ಮಹಿಳಾ ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಂಕರ್‌ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಇಬ್ಬರೂ ಯೂಟ್ಯೂಬರ್‌ಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಯೂಟ್ಯೂಬ್‌ ಚಾನೆಲ್ ಬಂದ್‌ ಮಾಡಬೇಕು ಎಂಬುದು ಜೆರಾಲ್ಡ್‌ ಅವರಿಗೆ ವಿಧಿಸಿದ್ದ ಷರತ್ತುಗಳಲ್ಲೊಂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT