ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ವಂಚನೆ: ಭಾರತಕ್ಕೆ 3ನೇ ಸ್ಥಾನ

ಕೆನಡ, ಅಮೆರಿಕ ಪ್ರಜೆಗಳ ನಂತರ ಭಾರತೀಯರೇ ಹೆಚ್ಚು ಗುರಿ
Last Updated 25 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದಲ್ಲಿ ನಡೆಯುವ ಆನ್‌ಲೈನ್ ವಂಚನೆಗಳಲ್ಲಿ, ಇ–ಮೇಲ್‌ ಮೂಲಕ ವಂಚಿಸಿ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ‘ಫಿಶಿಂಗ್’ ಮತ್ತು ಕುತಂತ್ರಾಂಶ ದಾಳಿಗಳ ಪ್ರಮಾಣವೇ ಹೆಚ್ಚಿದೆ. ಈ ಎರಡೂ ರೀತಿಯ ದಾಳಿಗೆ ಹೆಚ್ಚು ತುತ್ತಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಮೊದಲ ಸ್ಥಾನದಲ್ಲಿ ಕೆನಡ ಇದ್ದರೆ, ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಸೈಬರ್ ಭದ್ರತಾ ಕಂಪನಿ ಆರ್‌ಎಸ್‌ಎ ನಡೆಸಿದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ. 2018ರ ಜನವರಿ 1ರಿಂದ ಮಾರ್ಚ್‌ 31ರ ಅವಧಿಯಲ್ಲಿ ನಡೆದ ಸೈಬರ್ ಅಪರಾಧ ಪ್ರಕರಣ ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಫಿಶಿಂಗ್ ದಾಳಿಗೆ ಗುರಿಯಾಗುತ್ತಿರುವವರಲ್ಲಿ ಮೊಬೈಲ್‌ ಬಳಕೆದಾರರ ಪ್ರಮಾಣ ಏರಿಕೆಯಾಗುತ್ತಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ದತ್ತಾಂಶ ನಿರ್ವಹಣೆ ವ್ಯವಸ್ಥೆಗೆ ಆಗ್ರಹ: ಭಾರತದಲ್ಲಿ ದತ್ತಾಂಶ ಸಂರಕ್ಷಣೆ ಮತ್ತು ನಿರ್ವಹಣೆಗೆ ಸ್ವತಂತ್ರ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

‘ಡಿಜಿಟಲ್ ತಂತ್ರಜ್ಞಾನಗಳು ಮತ್ತು ಸಮಾಜದ ಮೇಲೆ ಅವುಗಳ ಪರಿಣಾಮ’ಗಳ ಕುರಿತು ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ತಜ್ಞರು ದತ್ತಾಂಶ ನಿರ್ವಹಣೆ ವ್ಯವಸ್ಥೆ ಬೇಕು ಎಂದು ಹೇಳಿದ್ದಾರೆ. ನೀತಿ ಆಯೋಗವು ಸರ್ಕಾರದ ಇತರ ಸಂಸ್ಥೆಗಳ ಸಹಯೋಗದಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.

‘ಆನ್‌ಲೈನ್‌ ದತ್ತಾಂಶ ಕ್ಷೇತ್ರದಲ್ಲಿ ಐದಾರು ವರ್ಷ ಹಿಂದಿನ ಬೆಳವಣಿಗೆಗಳನ್ನು ಗಮನಿಸಿ. ಗೂಗಲ್, ಅಮೆಜಾನ್, ಫೇಸ್‌ಬುಕ್, ಮೈಕ್ರೊಸಾಫ್ಟ್ ಮತ್ತು ಆಪಲ್‌ಗಳು ಬಳಕೆದಾರರ ಮಾಹಿತಿ ಮತ್ತು ದತ್ತಾಂಶಗಳನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿವೆ. ಶಿಕ್ಷಣ, ಆರೋಗ್ಯಸೇವೆ, ಕೃಷಿ, ಸಾರಿಗೆಗಳಂತಹ ಬಹುಮುಖ್ಯವಾದ ಕ್ಷೇತ್ರಗಳಿಗೆ ಸಂಬಂಧಿಸಿದ ಭಾರಿ ಪ್ರಮಾಣದ ಈ ದತ್ತಾಂಶಗಳ ಮೇಲೆ ಯಾವುದೋ ಒಂದು ಕಂಪನಿ ಹಿಡಿತ ಸಾಧಿಸಿದರೆ ಏನು ಗತಿ’ ಎಂದು ಕಾರ್ನೆಗಿ ಇಂಡಿಯಾದ ಫೆಲೊ ಅನಂತ ಪದ್ಮನಾಭನ್ ಕಳವಳ ವ್ಯಕ್ತಪಡಿಸಿದ್ದಾರೆ.

‘ದತ್ತಾಂಶ ಸಂರಕ್ಷಣೆಗೆ ನಮ್ಮಲ್ಲಿ ಯಾವುದೇ ಕಾನೂನುಗಳಿಲ್ಲ. ಹೀಗಾಗಿ ದತ್ತಾಂಶ ಸುರಕ್ಷತೆ ಅತ್ಯಂತ ದೊಡ್ಡ ಸವಾಲಾಗಿದೆ. ಈ ಕ್ಷೇತ್ರದಲ್ಲಿ ಸರ್ಕಾರ ಮತ್ತು ಜನರ ಹಕ್ಕು ಹಾಗೂ ಕರ್ತವ್ಯಗಳೇನು ಎಂಬುದನ್ನು ಸ್ಪಷ್ಟಪಡಿಸುವ ಕೆಲಸ ಅತ್ಯಂತ ತುರ್ತಾಗಿ ಆಗಬೇಕಿದೆ. ‘ನಮಗೆ ಅರಿವಿಲ್ಲದೇ ನಮ್ಮ ಮಾಹಿತಿಯನ್ನು ಫೇಸ್‌ಬುಕ್ ಹೇಗೆ ಬಳಸಿಕೊಳ್ಳುತ್ತಿದೆ’ ಎಂದು ಕೇಂಬ್ರಿಜ್ ಅನಲಿಟಿಕಾ ಹಗರಣದ ನಂತರ ಜನರು ಪ್ರಶ್ನಿಸಲು ಆರಂಭಿಸಿದ್ದಾರೆ.

ಹೀಗಾಗಿ ಮಾಹಿತಿ ದುರ್ಬಳಕೆ ಪ್ರಕರಣಗಳಲ್ಲಿ ಮಾಹಿತಿ ಸಂಗ್ರಹಿಸಿದವರನ್ನೇ ತಪ್ಪಿತಸ್ಥರನ್ನಾಗಿಸುವ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಸುಪ್ರೀಂ ಕೋರ್ಟ್‌ನ ವಕೀಲೆ ವೃಂದಾ ಭಂಡಾರಿ ಒತ್ತಾಯಿಸಿದ್ದಾರೆ.

**

‘ಡಿಜಿಟಲ್ ಹೆಜ್ಜೆಗುರುತು ಒಳಿತೇ?...’

‘ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ನಾವು ಅಂತರ್ಜಾಲವನ್ನು ಬಳಸಿದಂತೆಲ್ಲಾ ನಮ್ಮ ‘ಡಿಜಿಟಲ್ ಹೆಜ್ಜೆಗುರುತು’ ರೂಪುಗೊಳ್ಳುತ್ತಾ ಹೋಗುತ್ತದೆ. ನಮ್ಮ ಅಭಿರುಚಿ, ಸಿದ್ಧಾಂತಗಳೆಲ್ಲವೂ ಡಿಜಿಟಲ್ ಹೆಜ್ಜೆಗುರುತಿನಲ್ಲಿ ದಾಖಲಾಗುತ್ತಾ ಹೋಗುತ್ತವೆ. ನಿಮ್ಮ ವ್ಯಕ್ತಿತ್ವ, ವ್ಯವಹಾರಗಳೆಲ್ಲವನ್ನೂ ಅದು ಬಹಿರಂಗಪಡಿಸುತ್ತದೆ. ಅದರಿಂದ ಒಳಿತೆಷ್ಟು, ಕೆಡುಕೆಷ್ಟು ಎಂಬುದು ಈಗ ಚರ್ಚೆಯಾಗಬೇಕಿದೆ’ ಎಂದು ದತ್ತಾಂಶ ಸಂರಕ್ಷಣಾ ನಿಯಮಾವಳಿ ರಚನಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಹೇಳಿದ್ದಾರೆ.

**

ದತ್ತಾಂಶಗಳ ಒಡೆತನ ಯಾರದ್ದು, ಅವುಗಳನ್ನು ನಿರ್ವಹಿಸಬೇಕಾದವರು ಯಾರು ಎಂಬುದನ್ನು ಸ್ಪಷ್ಟಪಡಿಸಿಕೊಂಡು ನಿರ್ವಹಣಾ ವ್ಯವಸ್ಥೆ ರೂಪಿಸಬೇಕು.

ವೃಂದಾ ಭಂಡಾರಿ, ಸುಪ್ರೀಂ ಕೋರ್ಟ್ ವಕೀಲೆ

**

55% ಅಧ್ಯಯನ ನಡೆದ ಅವಧಿಯಲ್ಲಿ ದಾಖಲಾದ ಸೈಬರ್ ಅಪರಾಧಗಳಲ್ಲಿ ಫಿಶಿಂಗ್ ಪ್ರಕರಣಗಳ ಪ್ರಮಾಣ

66% ಫಿಶಿಂಗ್ ದಾಳಿಗಳು ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳ ಮೂಲಕವೇ ನಡೆದಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT