ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಾಲಿಸುವ ಜಾಹೀರಾತು ತಪ್ಪಿಸಿಕೊಳ್ಳೊದು ಹೇಗೆ

Last Updated 28 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಈಗ ಅಂಗಡಿ, ಇಲ್ಲವೇ ಮಾಲ್‌ಗಳಿಗೆ ಹೋಗಿ ಶಾ‍ಪಿಂಗ್ ಮಾಡುವುದಕ್ಕಿಂತ ಆನ್‌ಲೈನ್‌ನಲ್ಲಿ ಖರೀದಿ ಮಾಡುವುದೇ ತುಂಬಾ ಸುಲಭ. ಬೇಕಾದ ವಸ್ತು, ವಿವಿಧ ಬ್ರ್ಯಾಂಡ್‌, ಬಣ್ಣ, ದರ ಹೀಗೆ ಎಲ್ಲದರಲ್ಲೂ ವಿಭಿನ್ನವಾಗಿ ಕಾಣುವ ಇವುಗಳು ಕೊಳ್ಳುವವರನ್ನು ಆನ್‌ಲೈನ್‌ನಲ್ಲೇ ಬೆರಗುಗೊಳಿಸುತ್ತವೆ. ಅನೇಕ ಬಾರಿ ಸ್ಕ್ರೀನ್‌ನಲ್ಲಿ ಕಾಣುವುದೇ ಬೇರೆ, ಖರೀದಿ ಮಾಡಿದಾಗ ಬಂದ ಉತ್ಪನ್ನವೇ ಬೇರೆ ಎಂಬುದು ಅನುಭವಿಗಳಿಗೆ ಗೊತ್ತು.

ಹೀಗೆ ಆನ್‌ಲೈನ್‌ ವಹಿವಾಟು ಮಾಡುವ ಮೋಡಿ ಹಲವು ಸಂದರ್ಭದಲ್ಲಿ ನಮ್ಮನ್ನು ಹಿಂಬಾಲಿಸುತ್ತದೆ. ನೀವು ವಾಚ್‌ ಅನ್ನು ಖರೀದಿ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಮೆಚ್ಚಿನ ಕೈ ಗಡಿಯಾರ ಕಟ್ಟಿಕೊಂಡು ಸಂಭ್ರಮಿಸುವ ವೇಳೆಯಲ್ಲೇ ನಿಮಗೆ ಗೊತ್ತಿಲ್ಲದಂತೆ ಬೇರೆ ಬೇರೆ ಕಂಪನಿಯ, ಬ್ರ್ಯಾಂಡ್‌ನ ವಾಚುಗಳು ನಿಮ್ಮನ್ನು ಹಿಂಬಾಲಿಸುತ್ತವೆ.

ಮೊಬೈಲ್‌ನ ಡೇಟಾ ಆನ್‌ ಮಾಡಿದರೆ, ಲ್ಯಾಪ್‌ಟಾಪ್‌ನ ಇಂಟರ್‌ನೆಟ್‌ ಚಾಲೂ ಆದರೆ, ಡೆಸ್ಕ್‌ಟಾಪ್ ಕಂಪ್ಯೂಟರ್‌ ತೆರೆದುಕೊಂಡರೆ ಅಲ್ಲಿ ಬೇರೆ ಬೇರೆ ರೀತಿಯ ವಾಚುಗಳು ಸ್ಕ್ರೀನ್‌ ಮೇಲೆ ರಾರಾಜಿಸುತ್ತಾ ಇರುತ್ತವೆ. ಫೇಸ್‌ಬುಕ್‌, ವಾಟ್ಸ್ ಆ್ಯಪ್‌, ಇನ್‌ಸ್ಟಾಗ್ರಾಂ, ಲಿಂಕ್ಡಇನ್‌ ಹೀಗೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ಖಾತೆಗಳ ಗೋಡೆಗಳ ಮೇಲೆ ಜಾಹೀರಾತುಗಳು ಪದೇ ಪದೇ ಲಾಗ ಹಾಕುತ್ತವೆ.

ಮೊಬೈಲ್‌ಗಳಿಗಂತೂ ಕಿರಿಕಿರಿಯಾಗುವಷ್ಟು ಸಂದೇಶಗಳು ಬರುತ್ತವೆ. ನೀವು ನೋಡುವ ಸುದ್ದಿ ವೆಬ್‌ಸೈಟ್‌ಗಳ ಮೂಲೆಗಳಲ್ಲಿ ಪಾಪ್‌ ಅಪ್‌ ಆಗುತ್ತವೆ. ಅರೇ ಈಗಾಗಲೇ ವಾಚು ಖರೀದಿ ಮಾಡಿಯಾಗಿದೆ. ಮತ್ತೆ ಯಾಕೆ ಈ ಎಲ್ಲ ಜಾಹೀರಾತುಗಳು ಎಂದು ತಲೆಕೆಡಿಸಿಕೊಳ್ಳುವ ಸರದಿ ನಿಮ್ಮದು. ನೀವು ಖರೀದಿ ಮಾಡಿದರೆ ಏನಂತೆ. ನಿಮ್ಮ ಪ್ರೀತಿಪಾತ್ರರಾದವರಿಗೂ ಖರೀದಿ ಮಾಡಿ ಎಂಬ ಭಾವವನ್ನು ಈ ಹಿಂಬಾಲಿಸುವ ಜಾಹೀರಾತುಗಳು ಉದ್ದೇಶ ಹೊಂದಿರುತ್ತವೆ.

ಹಿಂದೆಂದಿಗಿಂತ ಈಗ ಈ ರೀತಿ ಹಿಂಬಾಲಿಸುವ ಜಾಹೀರಾತುಗಳ ಹಾವಳಿ ಹೆಚ್ಚಾಗಿದೆ. ಇದು ಆನ್‌ಲೈನ್‌ ಖರೀದಿಯ ಪ್ರಭಾವ. ಟ್ರ್ಯಾಕ್‌ ಮಾಡುವ ತಂತ್ರಜ್ಞಾನಗಳಾದ ವೆಬ್‌ಕುಕೀಸ್‌ಗಳು ನಮ್ಮ ಬ್ರೌಸಿಂಗ್ ಇತಿಹಾಸದ ಮಾಹಿತಿಯನ್ನು ಸಂಗ್ರಹ ಮಾಡುತ್ತಾ ಇರುತ್ತವೆ. ತಂತ್ರಜ್ಞಾನ ಕಂಪನಿಗಳು ಇಂತಹ ದತ್ತಾಂಶಗಳನ್ನು ನಮಗೆ ಗೊತ್ತಿಲ್ಲದಂತೆಯೇ ಹಂಚಿಕೊಳ್ಳುತ್ತಾ ಇರುತ್ತವೆ. ನಮ್ಮ ತಲೆಗೆ ಹೊಳೆಯದಂತಹ ಖರೀದಿ ಹವ್ಯಾಸವನ್ನು ಇವು ಪ್ರೆರೇಪಿಸುತ್ತಾ ಇರುತ್ತವೆ. ಜಾಹೀರಾತು ಲೋಕ ಅದರಲ್ಲೂ ಆನ್‌ಲೈನ್‌ ಜಾಹೀರಾತು ಇಂದು ಸಾಕಷ್ಟು ವಿಶಾಲವಾಗಿರುವುದೇ ಇದಕ್ಕೆ ಕಾರಣ.

ಈ ರೀತಿ ಹಿಂಬಾಲಿಸುವ ಜಾಹೀರಾತುಗಳ ಮಾಹಿತಿಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡುವುದು ಹೇಗೆ. ಇವುಗಳು ಖಾಸಗಿತನಕ್ಕೂ ಧಕ್ಕೆ ಮಾಡುತ್ತವೆ. ಬ್ರೌಸಿಂಗ್ ಇತಿಹಾಸ ನಿಮ್ಮ ಸಾಕಷ್ಟು ಮಾಹಿತಿಯನ್ನು ಬಯಲು ಮಾಡುತ್ತವೆ. ಅದು ಆರೋಗ್ಯ, ರಾಜಕೀಯ ನಂಟು ಮತ್ತು ಲೈಂಗಿಕ ವಾಂಛೆಯಾಗಿರಬಹುದು.

ಜಾಹೀರಾತುಗಳು ಯಾಕೆ ಹಿಂಬಾಲಿಸುತ್ತವೆ?

ನೀವೊಂದು ಮೊಬೈಲ್ ಖರೀದಿ ಮಾಡಬೇಕು ಎಂದು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ಆಗ ಬೇರೆ, ಬೇರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಯಾವ ಬೆಲೆ, ಕಾನ್‌ಫಿಗರ್‌, ಬ್ರ್ಯಾಂಡ್‌, ವಾರಂಟಿ, ಸರ್ವಿಸ್‌, ವಿಮೆ ಇತ್ಯಾದಿ ಬಗ್ಗೆ ವಿಭಿನ್ನ ಮಾರುಕಟ್ಟೆಯಲ್ಲಿನ ವಿವರಗಳನ್ನು ಪರಿಶೀಲನೆ ಮಾಡುತ್ತೀರಿ. ನಂತರ ಒಂದರಲ್ಲಿ ಖರೀದಿ ಮಾಡಲು ಮುಂದಾಗುತ್ತೀರಿ.

ಈ ವೇಳೆ ಅವುಗಳು ನಿಮ್ಮ ಫೇಸ್‌ಬುಕ್‌ ಖಾತೆ ಇಲ್ಲವೇ ಮೊಬೈಲ್‌ ಸಂಖ್ಯೆ ಮೂಲಕ ಲಾಗಿನ್‌ ಮಾಡಲು ತಿಳಿಸುತ್ತವೆ. ಅಲ್ಲಿಗೆ ನಿಮ್ಮ ಮೊಬೈಲ್‌ ನಂಬರ್ ಮತ್ತು ಫೇಸ್‌ಬುಕ್‌ ಖಾತೆ ವಿಳಾಸ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಆಗಿಬಿಡುತ್ತದೆ. ಇಲ್ಲಿಯೇ ಎಲ್ಲರೂ ಸಮಸ್ಯೆಗೆ ಸಿಲುಕುವುದಕ್ಕೆ ಚಾಲನೆ ಸಿಗುತ್ತದೆ. ಏಕೆಂದರೆ, ನೀವು ಲಾಗಿನ್‌ ಆಗಲು ಬೇರೆ ಯಾವ ವಿಧಾನವನ್ನೂ ಅವು ಅನುಸರಿಸುವುದಿಲ್ಲ. ಅನಿವಾರ್ಯವಾಗಿ ನೀವು ನಿಮ್ಮ ಖಾಸಗಿಯಾಗಿಟ್ಟುಕೊಂಡಿದ್ದ ಮಾಹಿತಿಯನ್ನು ಹಿಂದೆ ಮುಂದೆ ನೋಡದೆ ಜಗಜ್ಜಾಹೀರು ಮಾಡುತ್ತೀರಿ. ಕೆಲವು ಆನ್‌ಲೈನ್‌ ಪೋರ್ಟಲ್‌ಗಳು ಷರತ್ತುಗಳನ್ನು ವಿಧಿಸಿಯೇ ಲಾಗಿನ್‌ ಮಾಡಿಸುತ್ತವೆ.

**

ಉಪಾಯಗಳೇನು?

ಹಿಂಬಾಲಿಸುವ ಜಾಹೀರಾತುಗಳಿಂದ ತಪ್ಪಿಸಿಕೊಳ್ಳುವ ತಂತ್ರಗಳನ್ನು ಕಲಿತುಕೊಂಡರೆ ಇವುಗಳಿಂದಾಗುವ ಕಿರಿಕಿರಿಯನ್ನು ದೂರ ಮಾಡಬಹುದು. ಇಲ್ಲಿವೆ ಅಂತಹ ಕೆಲವು ಉಪಾಯಗಳು.

* ಆಗಾಗ ಕುಕೀಸ್‌ಗಳನ್ನು ಕ್ಲಿಯರ್‌ ಮಾಡುತ್ತಿರಬೇಕು. ನಿಮ್ಮ ಗ್ಯಾಜೆಟ್‌ಗಳಲ್ಲಿನ ಕುಕೀಸ್‌ಗಳನ್ನು ಡಿಲೀಟ್ ಮಾಡಿದರೆ ಜಾಹೀರಾತು ಟ್ರ್ಯಾಕರ್‌ಗಳಿಗೆ ಕಷ್ಟವಾಗುತ್ತದೆ.

* ಆ್ಯಪಲ್‌, ಗೂಗಲ್‌ ಮತ್ತು ಮೈಕ್ರೊಸಾಫ್ಟ್ ಕಂಪನಿಗಳು ಬ್ರೌಸರ್‌ ಸಫಾರಿಗಳಿಂದ ಡಾಟಾ ಕ್ಲಿಯರ್‌ ಮಾಡುವುದು ಹೇಗೆ ಎಂಬುದನ್ನು ವಿವರಿಸಿ ಕೈಪಿಡಿ ಪ್ರಕಟಿಸಿವೆ

* ನಿಮ್ಮ ಜಾಹೀರಾತು ಐ.ಡಿಯನ್ನು ರಿಸೆಟ್‌ ಮಾಡಿಕೊಳ್ಳಿ. ಕುಕೀಸ್‌ಗಳಲ್ಲದೆ ಆಂಡ್ರಾಯ್ಡ್‌ ಮತ್ತು ಆ್ಯಪಲ್‌ ಫೋನ್‌ಗಳು ಸುಧಾರಿತ ಜಾಹೀರಾತು ಐ.ಡಿ ಗಳನ್ನು ಬಳಸುತ್ತವೆ. ಇದರಿಂದ ಆನ್‌ಲೈನ್‌ ಮಾರುಕಟ್ಟೆ ಕಂಪನಿಗಳಿಗೆ ಅನುಕೂಲವಾಗಲಿದೆ.

* ಆಂಡ್ರಾಯ್ಡ್‌ ಸಾಧನಗಳಲ್ಲಿ ನೀವು ರಿಸೆಟ್‌ ಬಟನ್ ಅನ್ನು ಗೂಗಲ್ ಸೆಟ್ಟಿಂಗ್‌ ಆ್ಯಪ್‌ನ ಆ್ಯಡ್‌ ಮೆನುವಿನ ಒಳಗೆ ಕಾಣಬಹುದು.

*ಐ ಫೋನ್‌ಗಳಲ್ಲಿ ರಿಸೆಟ್‌ ಬಟನ್‌ ಪ್ರೈವೆಸಿ ಮೆನುವಿನ ಸೆಟಿಂಗ್ ಆ್ಯಪ್‌ನ ಒಳಗೆ ಕಾಣಬಹುದು.

* ಕಾಲಕಾಲಕ್ಕೆ ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್‌ ಮಾಡುತ್ತಾ ಇರಬೇಕು. ಇದಕ್ಕಾಗಿ ಗೂಗಲ್‌ನಲ್ಲಿ My Activity tool,myactivity.google.com ಇವೆ

* ಜಾಹೀರಾತು ಬ್ಲಾಕರ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ. ವೆಬ್‌ಬ್ರೌಸರ್‌ಗಳಿಗೆ ಆ್ಯಡ್‌ ಅನ್‌ ಅಳವಡಿಸಿಕೊಳ್ಳಬಹುದು. ಕಂಪ್ಯೂಟರ್ ಬ್ರೌಸರ್‌ಗಳಿಗೆ uBlock Origin ಮತ್ತು ಐಫೋನ್‌ಗಳಿಗೆ 1Blocker X ಸೂಕ್ತ

* ಮೊಬೈಲ್‌ಗಳಿಗೆ private browser ಅನ್ನು ಬಳಸಬಹುದು

* ಇನ್ನು ಟ್ರ್ಯಾಕರ್‌ ಬ್ಲಾಕರ್‌ ಅನ್ನೂ ಅಳವಡಿಸಿಕೊಳ್ಳಬಹುದು. ಡೆಸ್ಕ್‌ಟಾಪ್‌ ಮತ್ತು ಮೊಬೈಲ್‌ಗಳಿಗೆDisconnect.me ಸೂಕ್ತವಾಗಿದೆ.

(ನ್ಯೂಯಾರ್ಕ್ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT